ಸರಕು ಸಾಗಣೆಯಲ್ಲಿ 4,610 ಕೋಟಿ ರೂಪಾಯಿ ಆದಾಯ ಸಂಗ್ರಹಿಸಿದ ನೈರುತ್ಯ ರೈಲ್ವೆ
ಹುಬ್ಬಳ್ಳಿ, ಏಪ್ರಿಲ್, 14: ಭಾರತೀಯ ರೈಲ್ವೆಯ ವಿಭಾಗವಾದ ನೈರುತ್ಯ ರೈಲ್ವೆಯು ಆಟೋಮೊಬೈಲ್ ತಯಾರಕರ ಆಯ್ಕೆಯ ಸಾರಿಗೆಯಾಗಿ ಹೊರಹೊಮ್ಮಿದೆ. ಸುರಕ್ಷಿತ, ವಿಶ್ವಾಸಾರ್ಹ, ವಾಹನಗಳಿಗೆ ಸಮಯೋಚಿತ ಸಾರಿಗೆಯಾಗಿದ್ದು, ನೈರುತ್ಯ ರೈಲ್ವೆಯು ಸರಕು ಸಾಗಣೆಯಿಂದ 4,600 ಕೋಟಿ ರೂಪಾಯಿ ಆದಾಯ ಗಳಿಸಿದೆ.
46.7 ಮಿಲಿಯನ್ ಟನ್ ಸರಕು ಸಾಗಾಟ
ನೈರುತ್ಯ ರೈಲ್ವೆಯು 2022-23ರ ಆರ್ಥಿಕ ವರ್ಷದಲ್ಲಿ 46.7 ಮಿಲಿಯನ್ ಟನ್ ಮೂಲ ಸರಕು ಸಾಗಿಸಿದೆ. ಈ ಮೂಲಕ ಕಳೆದ 15 ವರ್ಷಗಳಲ್ಲಿನ 46 ಮಿಲಿಯನ್ ಟನ್‌ಗಳ ಸರಕು ಸಾಗಣೆ ಸಾಗಿಸಿದ್ದ ಹಳೆಯ ದಾಖಲೆ ಮೀರಿಸಿದೆ. 2007-08ರಲ್ಲಿ 46.24 ಮಿಲಿಯನ್ ಟನ್ ಸರಕು ಸಾಗಿಸಲಾಗಿತ್ತು.

ಅಗತ್ಯ ವಸ್ತುಗಳನ್ನು ಪೂರೈಸುವಲ್ಲಿ ರೈಲ್ವೆ ಇಲಾಖೆ ಪ್ರಮುಖ ಪಾತ್ರ ವಹಿಸುತ್ತಿದೆ. ರೈಲ್ವೆಯು ತ್ವರಿತ, ಸುರಕ್ಷಿತ, ಆರ್ಥಿಕ ಸಾಗಣೆ, ಬೃಹತ್ ಸರಕು, ಕೈಗಾರಿಕೆಗಳಿಗೆ ಕಚ್ಚಾ ಸಾಮಗ್ರಿಗಳ ಪೂರೈಕೆ ಹಾಗೂ ಉದ್ಯಮದಿಂದ ಸಿದ್ಧಪಡಿಸಿದ ಸರಕುಗಳನ್ನು ರಫ್ತು ಮತ್ತು ಬಳಕೆಯ ವಸ್ತುಗಳನ್ನು ಸಾಗಿಸುತ್ತಿದೆ.
2022-23ರ ಆರ್ಥಿಕ ವರ್ಷದಲ್ಲಿ ನೈರುತ್ಯ ರೈಲ್ವೆ 2.05 ಮಿಲಿಯನ್ ಟನ್ ಖನಿಜ ತೈಲ, 1.07 ಮಿಲಿಯನ್ ಟನ್ ಸಿಮೆಂಟ್, 1.45 ಮಿಲಿಯನ್ ಟನ್ ಸಕ್ಕರೆ ಮತ್ತು 509 ರೇಕ್‌ಗಳ ಆಟೋಮೊಬೈಲ್‌ಗಳನ್ನು ಸಾಗಿಸುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ.
ವಿವಿಧ ಮೂಲಗಳಿಂದ ಆದಾಯ ಸಂಗ್ರಹ
ನೈರುತ್ಯ ರೈಲ್ವೆಯ ಪ್ರಮುಖ ಗ್ರಾಹಕರಾಗಿರುವ ಟೊಯೊಟಾ, ಕಿಯಾ, ಸುಜುಕಿ, ಅಶೋಕ್ ಲಿಯೋಲ್ಯಾಂಡ್, ಟಿವಿಎಸ್ ಸೇರಿದಂತೆ ಇನ್ನಿತರ ಕಂಪನಿಗಳು ಹೊಸದಾಗಿ ತಯಾರಿಸಿದ ವಾಹನಗಳಿಗೆ, ಪರಿಸರ ಸ್ನೇಹಿ, ಅಪಘಾತ-ಮುಕ್ತ ಹಾಗೂ ಸರಿಯಾದ ಸಮಯಕ್ಕೆ ಸಾಗಿಸುವ ಮೂಲಕ ರೈಲ್ವೆಯು ಆಟೋಮೊಬೈಲ್ ತಯಾರಿಕರ ಪ್ರಮುಖ ಆಯ್ಕೆಯ ಸಾರಿಗೆ ಆಗಿ ಹೊರಹೊಮ್ಮಿದೆ.

ಇದು ನಡೆಯುತ್ತಿರುವ ಜೋಡಿ ಮಾರ್ಗ, ವಿದ್ಯುದೀಕರಣಕ್ಕೆ ಟ್ರಾಫಿಕ್ ಬ್ಲಾಕ್‌ಗಳ ಅಗತ್ಯಗಳನ್ನು ಪೂರೈಸುವ ಹೊರತಾಗಿ ಸರಕು ಸಾಗಣೆಯಲ್ಲಿ ಸಾರ್ವಜನಿಕ ಮತ್ತು ರೈಲ್ವೆ ಗ್ರಾಹಕರ ಹಿತಾಸಕ್ತಿಗೆ ಅನುಗುಣವಾಗಿ ಯೋಜನೆ ರೂಪಿಸಿ ದಾಖಲೆ ನಿರ್ಮಿಸಿದೆ. ದೇಶದ ಆರ್ಥಿಕತೆಯ ಬೆಳವಣಿಗೆಯ ಅಗತ್ಯಗಳ ಅನುಗುಣವಾಗಿ ರೈಲ್ವೆಯ ಶ್ರಮಿಸುತ್ತಿದೆ ಎಂದು ನೈರುತ್ಯ ರೈಲ್ವೆ ಪ್ರಧಾನ ಮುಖ್ಯ ಪರಿಚಾಲನಾ ವ್ಯವಸ್ಥಾಪಕ ಹರಿ ಶಂಕರ್ ವರ್ಮಾ ಅವರು ಹೇಳಿದ್ದಾರೆ.
ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಅವರು ಈ ದಾಖಲೆ ನಿರ್ಮಿಸಲು ಶ್ರಮಿಸಿದ ನೈರುತ್ಯ ರೈಲ್ವೆಯ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗವನ್ನು ಶ್ಲಾಘಿಸಿದ್ದಾರೆ. ಮತ್ತು ಹೆಚ್ಚಿನ ಸರಕು ಆದಾಯ ಸಂಗ್ರಹಿಸಲು ಬೆಂಬಲ ನೀಡಿದ ಗ್ರಾಹಕರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ ಎಂದು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ಮಾಹಿತಿ ನೀಡಿದ್ದಾರೆ.
ದಂಡ ಸಂಗ್ರಹದಲ್ಲಿ ದಾಖಲೆ
ಹಾಗೆಯೇ ಪಶ್ಚಿಮ ರೈಲ್ವೆಯು ಟಿಕೆಟ್ ತಪಾಸಣೆಯ ವಿಭಾಗದಲ್ಲಿ ದಂಡ ಸಂಗ್ರಹದಲ್ಲಿ ದಾಖಲೆ ಬರೆದಿದೆ. 2022-2023ರ ಹಣಕಾಸು ವರ್ಷದಲ್ಲಿ ಪಶ್ಚಿಮ ರೈಲ್ವೆಯು ₹170.35 ಕೋಟಿ ರೂಪಾಯಿ ಮೊತ್ತವನ್ನು ದಂಡವಾಗಿ ಸಂಗ್ರಹಿಸಿದೆ ಎಂದು ಇಲಾಖೆಯು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಪಶ್ಚಿಮ ರೈಲ್ವೆಯಲ್ಲಿನ ಎಲ್ಲಾ ಪ್ರಯಾಣಿಕರಿಗೆ ತೊಂದರೆ ಮುಕ್ತ, ಆರಾಮದಾಯಕ ಪ್ರಯಾಣ ಮತ್ತು ಉತ್ತಮ ಸೇವೆಗಳನ್ನು ಖಚಿತಪಡಿಸಿಕೊಳ್ಳಲು, ಮುಂಬೈ ಉಪನಗರ ಸ್ಥಳೀಯ ಸೇವೆಗಳು, ಎಕ್ಸ್‌ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳು ಮತ್ತು ರಜಾದಿನದ ವಿಶೇಷ ರೈಲುಗಳಲ್ಲಿ ಟಿಕೆಟ್ ತಪಾಸಣೆಯನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಟಿಕೆಟ್‌ರಹಿತವಾಗಿ ಪ್ರಯಾಣ ಮಾಡುವವರಿಗೆ ಬ್ರೇಕ್ ಹಾಕುವ ಮೂಲಕ ಇನ್ನಿತರ ಪ್ರಯಾಣಿಕರಿಗೆ ಅನುವು ಮಾಡಿಕೊಡಲು ಭಾರತೀಯ ರೈಲ್ವೆಯು ಈ ನಿರ್ಧಾರವನ್ನು ಕೈಗೊಂಡಿದೆ.












Click it and Unblock the Notifications