Sigandur Bridge: ಸಿಗಂದೂರು ಸೇತುವೆ ಉದ್ಘಾಟನೆಗೆ ದಿನಾಂಕ ಫಿಕ್ಸ್, ಯಾವಾಗ?
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿರುವ ಪ್ರಸಿದ್ಧ ಸಿಗಂದೂರು ಕ್ಷೇತ್ರಕ್ಕೆ ತೆರಳುವ ಭಕ್ತಾದಿಗಳು ಹಾಗೂ ಪ್ರವಾಸಿಗರ ಬಹುವರ್ಷಗಳ ಕನಸು ಕೊನೆಗೂ ನನಸಾಗುತ್ತಿದೆ. ಇಲ್ಲಿನ ಪ್ರಮುಖ ಆಕರ್ಷಣೆ ಸಿಗಂದೂರು ಚೌಡೇಶ್ವರಿ (ಸಿಗಂದೂರೇಶ್ವರಿ) ದೇವಾಲಯಕ್ಕೆ ಪ್ರತಿನಿತ್ಯವೂ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡುತ್ತಾರೆ. ಆದರೆ ಈ ಸ್ಥಳಕ್ಕೆ ಹೋಗಲು ಸೂಕ್ತ ರಸ್ತೆ ಸಂಪರ್ಕವಿರಲಿಲ್ಲ. ಹಾಗಾಗಿ ಈ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸಲು ಬೃಹತ್ ಸೇತುವೆ ನಿರ್ಮಾಣ ಮಾಡಲಾಗಿದೆ. ಇದರ ಉದ್ಘಾಟನೆಗೂ ದಿನಾಂಕ ನಿಗದಿಯಾಗಿದೆ.
ಈ ಬಗ್ಗೆ ಸ್ಥಳೀಯ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಮಾಹಿತಿ ನೀಡಿದ್ದಾರೆ. ಸಿಗಂದೂರು ಸೇತುವೆ ದೇಶದ ಎರಡನೇ ಅತಿ ಉದ್ದದ ಸೇತುವೆ ಎನಿಸಿಕೊಳ್ಳಲಿದೆ ಎಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಪ್ರಯತ್ನದಿಂದಾಗಿ 473 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ದೇಶದ 2ನೇ ಅತಿದೊಡ್ಡ ಸಾಗರ ತಾಲ್ಲೂಕಿನ ಹೊಳೆಬಾಗಿಲು-ಕಳಸವಳ್ಳಿ ಸೇತುವೆ ಲೋಕಾರ್ಪಣೆ ಸಮಾರಂಭವು ಇದೇ ಜುಲೈ 14ರಂದು ಕೇಂದ್ರ ಭೂಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರ ಉಪಸ್ಥಿತಿಯಲ್ಲಿ ನೆರವೇರಲಿದೆ ಎಂದು ಸಿಹಿಸುದ್ದಿ ನೀಡಿದ್ದಾರೆ.

ಸೇತುವೆಗೆ ಶ್ರೀಸಿಗಂದೂರು ಚೌಡೇಶ್ವರಿ ಹೆಸರು
ವಿಶ್ವಮಟ್ಟದಲ್ಲಿ ಗಮನ ಸೆಳೆಯುವ ಈ ಸೇತುವೆಗೆ ಶ್ರೀಸಿಗಂಧೂರು ಚೌಡೇಶ್ವರಿ ಸೇತುವೆ ಎಂದು ನಾಮಕರಣ ಮಾಡಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸುವ ಜೊತೆಗೆ ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನಕ್ಕೆ ರಾಜ್ಯ ಮತ್ತು ಹೊರರಾಜ್ಯದಿಂದ ಬರುವ ಭಕ್ತಾದಿಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಅಭಿವೃದ್ಧಿ ಸಾಧಿಸುತ್ತಿರುವ ಬೆನ್ನಲ್ಲೇ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 20 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ, ಸೇತುವೆ ನಿರ್ಮಾಣ ಸೇರಿದಂತೆ ಇನ್ನೂ ಅನೇಕ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿದ್ದು, ಇದು ಕ್ಷೇತ್ರದ ವಿಶೇಷ ಸಾಧನೆ ಎಂದು ತಿಳಿಸಲು ಹೆಮ್ಮೆಯಾಗುತ್ತದೆ. ಸಿಗಂದೂರು ಸೇತುವೆ ನಿರ್ಮಾಣದಿಂದ ನನಗೆ ಸಾರ್ಥಕತೆಯ ಭಾವನೆ ಮೂಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಸುಮಾರು 300 ವರ್ಷಗಳ ಐತಿಹ್ಯವಿದೆ. ದೇವಿಯ ವಿಗ್ರಹವು ಶರಾವತಿ ನದಿಯ ದಡದಲ್ಲಿ ಕಂಡುಬಂದಿದ್ದು, ಬಳಿಕ ಇಲ್ಲಿಗೆ ದೇವಸ್ಥಾನ ನಿರ್ಮಿಸಲಾಗಿದೆ. ದೇವಾಲಯದ ಸ್ಥಾಪನೆಯ ಹಿಂದೆ ಶೇಷಪ್ಪ ನಾಯಕ್ ಎಂಬವರ ಕಥೆಯೂ ಇದೆ. ಅವರು ಕಾಡಿನಲ್ಲಿ ದಾರಿ ತಪ್ಪಿ ಭಯಗೊಂಡಾಗ ದೇವಿಯ ದಿವ್ಯ ದರ್ಶನ ಪಡೆದು, ದೇವಿಯ ಆದೇಶದಂತೆ ದೇವಸ್ಥಾನ ನಿರ್ಮಿಸಿದರು ಎಂದು ಐತಿಹ್ಯವಿದೆ. ಈ ಕ್ಷೇತ್ರವನ್ನು ಶಕ್ತಿಪೀಠವೆಂದು ಭಕ್ತರು ನಂಬುತ್ತಾರೆ, ವರ್ಷವಿಡೀ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಮಕರ ಸಂಕ್ರಾಂತಿ ಸಂದರ್ಭದಲ್ಲಿ ಇಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ.












Click it and Unblock the Notifications