ಮಡಿಕೇರಿ: ಮುಂಗಾರು ವೇಳೆ ಈ ಫಾಲ್ಸ್‌ನ ರಮಣೀಯ ದೃಶ್ಯ ಸವಿಯುವುದೇ ಒಂಥರಾ ಮಜಾ, ತಲುಪುವ ಮಾರ್ಗ ತಿಳಿಯಿರಿ
ಮಡಿಕೇರಿ, ಜುಲೈ, 10: ಮಂಜಿನ ನಗರಿ ಮಡಿಕೇರಿಯಲ್ಲಿ ಭಾರೀ ಮಳೆ ಸುರಿದು ಹಳ್ಳಕೊಳ್ಳಗಳು ತುಂಬಿ ಹರಿದಾಗ ಸಮೀಪದ ಜಲಬೆಡಗಿ ಅಬ್ಬಿಯಲ್ಲಿ ರುದ್ರನರ್ತನ ಶುರುವಾಗಿ ಬಿಡುತ್ತದೆ. ಅಷ್ಟೇ ಅಲ್ಲದೆ ಈ ಜಲ ನರ್ತನ ನೋಡಲು ಪ್ರವಾಸಿಗರ ದಂಡೇ ನೆರೆಯುತ್ತದೆ. ಇದು ಪ್ರತಿ ವರ್ಷದ ಮಳೆಗಾಲದಲ್ಲಿಯೂ ನಡೆಯುವ ಪ್ರಕ್ರಿಯೆಯಾಗಿದೆ.
ಕೊಡಗಿನಲ್ಲಿ ಹಲವಾರು ಜಲಪಾತಗಳಿವೆ. ಅದರಲ್ಲೂ ಪಟ್ಟಣಕ್ಕೆ ಸಮೀಪದಲ್ಲಿ ಮತ್ತು ರಸ್ತೆ ಸೌಲಭ್ಯವೂ ಇರುವುದರಿಂದಾಗಿ ಯಾರು ಬೇಕಾದರೂ ಅಬ್ಬಿ ಜಲಪಾತಕ್ಕೆ ಭೇಟಿ ನೀಡಬಹುದಾಗಿದೆ. ಹಾಗೆಯೇ ಮಳೆ ಚುರುಕಾದ ತಕ್ಷಣ ಜಲಧಾರೆಗಳು ಧುಮ್ಮಿಕ್ಕಲು ಆರಂಭಿಸುತ್ತವೆ. ಈ ಸಮಯದಲ್ಲಿ ಪ್ರವಾಸಿಗರು ಮೊದಲಿಗೆ ಅಬ್ಬಿ ಜಲಪಾತದತ್ತ ಹೆಜ್ಜೆ ಹಾಕುವುದು ಮಾಮೂಲಿಯಾಗಿದೆ.

ಇನ್ನು ಮುಂಗಾರು ಮಳೆಯಲ್ಲಿ ಕೊಡಗನ್ನು ಸುತ್ತು ಹೊಡೆದರೆ ನಿಸರ್ಗ ಹಸಿರ ಹೊದಿಕೆಯೇ ಥಳಥಳಿಸುತ್ತಿರುತ್ತದೆ. ಬೆಟ್ಟದ ಮೇಲಿನ ಹಾಗೂ ಹೆಬ್ಬಂಡೆಗಳ ಮೇಲೆ ಜಲಪಾತಗಳು ಮೈಕೈ ತುಂಬಿಕೊಂಡ ಬೆಡಗಿಯರಂತೆ ವಯ್ಯಾರದಿಂದ ಬಳುಕುತ್ತವೆ. ಈ ಶ್ವೇತಧಾರೆಯ ಸಿಂಚನ ಮನಸಿಗೆ ಮುದನೀಡುತ್ತದೆ. ಆದರೆ ಅಬ್ಬಿ ಜಲಪಾತವನ್ನು ಹೊರತುಪಡಿಸಿ ಬಹುತೇಕ ಜಲಪಾತಗಳತ್ತ ಸುಲಭವಾಗಿ ಹೋಗಲಾಗುವುದಿಲ್ಲ. ಹೀಗಾಗಿಯೇ ಅಬ್ಬಿ ಜಲಪಾತದತ್ತ ಸದಾ ಪ್ರವಾಸಿಗರ ದಂಡು ನೆರೆಯುತ್ತದೆ.
ಮಡಿಕೇರಿಗೆ ಸಮೀಪದಲ್ಲಿರುವ ಜಲಪಾತ
ಈ ಬಾರಿ ಬೇಸಿಗೆಯಲ್ಲಿ ಸಮರ್ಪಕವಾಗಿ ಮಳೆಯಾಗಿರಲಿಲ್ಲ. ಹೀಗಾಗಿ ಜೂನ್ ತಿಂಗಳ ತನಕವೂ ಅಬ್ಬಿ ಜಲಪಾತ ಸೊರಗಿ ಹೋಗಿತ್ತು. ಆದರೆ ಜುಲೈ ತಿಂಗಳ ಆರಂಭದಲ್ಲಿಯೇ ಮುಂಗಾರು ಚೇತರಿಕೆಯಾಗಿ ಮಡಿಕೇರಿ ವ್ಯಾಪ್ತಿಯಲ್ಲಿ ಕುಂಭದ್ರೋಣ ಮಳೆ ಸುರಿಯಿತೋ ಇದ್ದಕ್ಕಿದ್ದಂತೆ ಅಬ್ಬಿ ಜಲಪಾತದಲ್ಲಿ ಜಲನರ್ತನ ಆರಂಭವಾಗಿದೆ. ಈ ಸುಂದರ ದೃಶ್ಯವನ್ನು ನೋಡಲೆಂದೇ ಪ್ರವಾಸಿಗರು ಇತ್ತ ಹೆಜ್ಜೆಹಾಕುತ್ತಿರುವುದು ಈಗ ಕಂಡುಬರುತ್ತಿದೆ.
ಜಲಪಾತವನ್ನು ಇತರೆ ದಿನಗಳಲ್ಲಿ ವೀಕ್ಷಿಸುವುದಕ್ಕಿಂತಲೂ ಸುರಿಯುವ ಮಳೆಯಲ್ಲಿ ವೀಕ್ಷಿಸುವ ಮಜಾನೇ ಬೇರೆಯಾಗಿರುತ್ತದೆ. ಅದೊಂದು ರೀತಿಯ ರೋಮಾಂಚನಕಾರಿ ಅನುಭವ. ಹಾಗಾಗಿಯೇ ಬಹಳಷ್ಟು ಮಂದಿ ಸುರಿಯುವ ಮಳೆಯಲ್ಲಿಯೇ ಅಬ್ಬಿ ಜಲಪಾತದ ಸೊಬಗನ್ನು ಸವಿಯಲಿ ಇಷ್ಟಪಡುತ್ತಾರೆ. ಅಷ್ಟೇ ಅಲ್ಲದೆ ಆ ಸುಂದರ ಕ್ಷಣಗಳನ್ನು ಕಣ್ತುಂಬಿಕೊಳ್ಳುತ್ತಾರೆ.
ಈ ಅಬ್ಬಿ ಜಲಪಾತವು ಮಡಿಕೇರಿಯಿಂದ ಸುಮಾರು 8 ಕಿ.ಮೀ. ದೂರದಲ್ಲಿದೆ. ಇದನ್ನು ನೋಡಲು ತೆರಳುವವರಿಗೆ ಮಡಿಕೇರಿಯಿಂದ ಜಲಪಾತದವರೆಗೆ ಯಾವುದೇ ಬಸ್ ಸೌಕರ್ಯ ಇಲ್ಲ. ಹಾಗಾಗಿ ಮಡಿಕೇರಿಯಿಂದ ಬಾಡಿಗೆಗೆ ಆಟೋ, ಜೀಪು ಅಥವಾ ಸ್ವಂತ ವಾಹನಗಳಲ್ಲಿ ತೆರಳಬಹುದಾಗಿದೆ.
ನಡೆದು ನೋಡು ನಿಸರ್ಗದ ಸೊಬಗು
ಇದೆಲ್ಲದರ ನಡುವೆ ಅಬ್ಬಿ ಜಲಪಾತಕ್ಕೆ ನಡೆದೇ ಹೋಗುವುದಾದರೆ ಅದೊಂದು ರೋಮಾಂಚನಕಾರಿ ಅನುಭವವಾಗಿದೆ. ಅಂಕುಡೊಂಕಾದ ರಸ್ತೆಯಲ್ಲಿ ಕಾಡು, ಕಾಫಿ, ಏಲಕ್ಕಿ ತೋಟದ ನಡುವೆ ಹೆಜ್ಜೆ ಹಾಕುತ್ತಾ ಮುನ್ನಡೆಯುತ್ತಿದ್ದರೆ ದಾರಿ ಸಾಗುವುದೇ ಗೊತ್ತಾಗುವುದಿಲ್ಲ. ಇನ್ನೇನು ಕೆಲವೇ ಕಿ.ಮೀ. ಅಂತರಗಳಲ್ಲಿ ಜಲಪಾತ ಇದೆ ಎನ್ನುವುದು ಭೋರ್ಗರೆಯುವ ಸದ್ದಿಗೆ ಗೊತ್ತಾಗಿ ಬಿಡುತ್ತದೆ.
ಗುಡ್ಡದಲ್ಲಿ ತೋಟದ ನಡುವೆ ರಭಸದಿಂದ ಭೋರ್ಗರೆಯುತ್ತಾ ಹರಿಯುವ ನದಿ ನಮಗೆ ರಸ್ತೆಯಿಂದಲೇ ಕಾಣಸಿಗುತ್ತದೆ. ಅಲ್ಲಿಂದ ಮುಂದೆ ಇಳಿಜಾರು ರಸ್ತೆಯಲ್ಲಿ ಸಾಗಿದರೆ ಸಮತಟ್ಟಾದ ವಾಹನ ನಿಲುಗಡೆಯ ಸ್ಥಳ ಕಾಣಸಿಗುತ್ತದೆ. ಅಲ್ಲಿಂದ ಎಡಕ್ಕೆ ಕಾಫಿ ತೋಟದ ಮಧ್ಯೆ ನಡೆದುಕೊಂಡು ಹೋದರೆ ಜಲಪಾತದ ಭೋರ್ಗರೆತದ ಸದ್ದು ಕಿವಿಗೆ ಬಡಿಯುತ್ತದೆ. ಆ ನಂತರ ಕೆಳಕ್ಕೆ ಮೆಟ್ಟಿಲುಗಳನ್ನು ಇಳಿಯುತ್ತಾ ಹೋದರೆ ಶ್ವೇತಧಾರೆಯಾಗಿ ಧುಮ್ಮಿಕ್ಕುವ ಅಬ್ಬಿ ಜಲಪಾತ ಕಣ್ಣೆದುರು ಬಂದು ನಿಲ್ಲುತ್ತದೆ.
80ಅಡಿಯಷ್ಟು ಎತ್ತರದಿಂದ ಧುಮುಕುವ ಜಲಪಾತ
ವಿಶಾಲ ಬಂಡೆಗಳ ನಡುವೆ ಸುಮಾರು 80 ಅಡಿಯಷ್ಟು ಎತ್ತರದಿಂದ ಧುಮುಕುತ್ತಾ ತನ್ನ ವೈಭವವನ್ನು ಪ್ರದರ್ಶಿಸುವ ಜಲಪಾತವನ್ನು ನೋಡುವುದೇ ಕಣ್ಣಿಗೆ ಹಬ್ಬಚಾಗಿದೆ. ಜಲಪಾತದ ಸೊಬಗನ್ನು ಹತ್ತಿರದಿಂದ ಸವಿಯಲೆಂದೇ ಅಡ್ಡಲಾಗಿ ತೂಗು ಸೇತುವೆಯನ್ನು ನಿರ್ಮಿಸಲಾಗಿದೆ. ಇದರಲ್ಲಿ ನಿಂತು ಜಲಪಾತದ ಸೌಂದರ್ಯವನ್ನು ಸವಿಯಬಹುದಾಗಿದೆ.
ಈ ಜಲಪಾತ ನೆರವಂಡ ನಾಣಯ್ಯ ಎಂಬುವವರ ಕಾಫಿ, ಏಲಕ್ಕಿ ತೋಟಗಳ ನಡುವೆ ನಿರ್ಮಿತಗೊಂಡಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಇಲ್ಲಿಗೆ ಭೇಟಿ ನೀಡಿದ ಬ್ರಿಟೀಷರು ಇದರ ಸೌಂದರ್ಯವನ್ನು ನೋಡಿ ಆನಂದಪಟ್ಟು ಕೊಡಗಿನ ಪ್ರಥಮ ಧರ್ಮಗುರುಗಳ ಮಗಳು ಜೆಸ್ಸಿಯ ಹೆಸರನ್ನು ಈ ಫಾಲ್ಸ್‌ಗೆ ಇಟ್ಟರು. ಆಗಿನಿಂದ ಇದನ್ನು ಜೆಸ್ಸಿ ಫಾಲ್ಸ್ ಅಂತಳು ಕರೆಯುತ್ತಿದ್ದಾರೆ.
ಇಲ್ಲಿನವರು ಹಿಂದಿನಿಂದಲೂ ತಮ್ಮದೇ ಹೆಸರಿನಿಂದ ಈ ಜಲಪಾತವನ್ನು ಕರೆಯುತ್ತಾ ಬಂದಿದ್ದಾರೆ. ಕೆಲವರು ಮಡಿಕೇರಿ ತೊರೆ, ಮುತ್ತಾರ್ಮುಟ್ಟು ತೊರೆ ಎಂದು ಕರೆಯುತ್ತಿದ್ದರು ಎನ್ನಲಾಗಿದೆ. ಇನ್ನು ಕೊಡವ ಭಾಷೆಯಲ್ಲಿ "ಅಬ್ಬಿ" ಎಂದರೆ ತೊರೆ ಎಂದರ್ಥ. ಕೊಡವ ಭಾಷೆಯ ಅಬ್ಬಿ ಇಂದು ಅಬ್ಬಿ ಫಾಲ್ಸ್ ಆಗಿ ಪ್ರಸಿದ್ದಿ ಹೊಂದಿದ್ದು, ಈಗ ಎಲ್ಲರೂ ಅಬ್ಬಿಫಾಲ್ಸ್ ಎಂದೇ ಕರೆಯುತ್ತಿದ್ದಾರೆ.
ಇದೆಲ್ಲದರ ನಡುವೆ ಜಲಪಾತದ ಬಗ್ಗೆ ಒಂದಿಷ್ಟು ಹೇಳಲೇಬೇಕಾಗಿದೆ. ಅದು ಏನೆಂದರೆ ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ಕಾವಲುಗಾರರನ್ನು ನೇಮಿಸಲಾಗಿದೆ. ಜೊತೆಗೆ ನದಿಗೆ ಇಳಿಯಲು ಬಿಡದೆ, ತೂಗುಸೇತುವೆಯಲ್ಲಿ ನಿಂತು ಜಲಪಾತದ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.
ಜಲಪಾತವನ್ನು ದೂರದಿಂದಲೇ ವೀಕ್ಷಿಸಿ ಹಿಂತಿರುಗಿ
ಮೊದಲು ಜಲಪಾತ ವೀಕ್ಷಣೆಗೆ ಬಂದವರು ಜಲಪಾತ ಧುಮ್ಮಿಕ್ಕುವ ಸ್ಥಳಕ್ಕೆ ಹೋಗುತ್ತಿದ್ದುದಲ್ಲದೆ, ಅಲ್ಲಿ ಈಜುವ ಸಾಹಸವನ್ನೂ ಮಾಡುತ್ತಿದ್ದರು. ಹೀಗೆ ಜಲಪಾತದ ಸನಿಹಕ್ಕೆ ತೆರಳಿದವರು ಇಲ್ಲಿರುವ ಸುಳಿಗೆ ಸಿಲುಕಿ ಸಾವನ್ನಪ್ಪುತ್ತಿದ್ದರು. ಇದೇ ರೀತಿ ಸಾವನ್ನಪ್ಪಿದವರ ಸಂಖ್ಯೆ ಸುಮಾರು 52 ಎಂದರೆ ಅಚ್ಚರಿಯಾಗಬಹುದು. ಆದರೆ ಇದು ನಿಜ. ಆದರೆ ಕಳೆದ ಕೆಲವು ವರ್ಷಗಳಿಂದ ಇಲ್ಲಿ ಕಠಿಣ ನಿಯಮ ಜಾರಿ ಮಾಡಿರುವ ಕಾರಣದಿಂದಾಗಿ ದುರಂತಗಳು ಸಂಭವಿಸುತ್ತಿಲ್ಲ ಎನ್ನುವುದು ನೆಮ್ಮದಿ ತರುವ ವಿಚಾರವಾಗಿದೆ.
ಅದು ಏನೇ ಇರಲಿ ಅಬ್ಬಿ ಜಲಪಾತ ಕೊಡಗಿನಲ್ಲಿರುವ ಪ್ರವಾಸಿ ತಾಣಗಳ ಪೈಕಿ ಅತಿಹೆಚ್ಚು ಪ್ರವಾಸಿಗರನ್ನು ಸೆಳೆಯುವ ತಾಣವಾಗಿದೆ. ಈ ಜಲಪಾತದ ಸೌಂದರ್ಯವನ್ನು ಸವಿಯಲು ತೆರಳುವವರು ದೂರದಿಂದಲೇ ಜಲಪಾತವನ್ನು ವೀಕ್ಷಿಸಿ ಹಿಂತಿರುಗುವುದು ಕ್ಷೇಮ. ಜಲಪಾತದ ಸನಿಹ ತೆರಳಬೇಕಾದರೆ ತೋಟದ ನಡುವಿನ ಹಾದಿಯಲ್ಲಿ ಸಾಗಬೇಕಾಗುತ್ತದೆ. ಈ ವೇಳೆ ರಕ್ತ ಹೀರುವ ಜಿಗಣೆಗಳು ದಾಳಿ ಮಾಡಬಹುದು. ಏನೇ ಆದರೂ ಭಾರೀ ಮಳೆ ಸುರಿಯುವ ಸಮಯದಲ್ಲಿ ಇತ್ತ ಹೋಗುವ ಹುಚ್ಚು ಪ್ರಯತ್ನವನ್ನು ಮಾಡಲೇ ಬೇಡಿ ಎನ್ನುವುದು ನಮ್ಮ ಆಶಯವಾಗಿದೆ.












Click it and Unblock the Notifications