Kokrebellur: ಕೊಕ್ಕರೆಗಳು ಸೃಷ್ಟಿಸಿದ ಮಂಡ್ಯದ ಸ್ಟಾರ್ ವಿಲೇಜ್ ಯಾವುದು ಗೊತ್ತಾ?
ಮಂಡ್ಯ, ಜನವರಿ 24: ಮಂಡ್ಯ ಹಲವು ವಿಶೇಷತೆಗಳನ್ನು ಹೊಂದಿರುವ ಜಿಲ್ಲೆಯಾಗಿ ಎಲ್ಲರ ಗಮನಸೆಳೆಯುತ್ತದೆ. ಇಲ್ಲಿ ಕಬ್ಬಿನ ಸಿಹಿ, ಬೆಲ್ಲದ ಘಮಲು ದೇಶ ವಿದೇಶಗಳಿಗೆ ಹರಡಿದೆ ಅಷ್ಟೇ ಅಲ್ಲದೆ, ಕೆಆರ್ ಎಸ್ ಜಲಾಶಯ ಮತ್ತು ಬೃಂದಾವನ ಪ್ರವಾಸಿಗರ ಆಕರ್ಷಣಾ ಕೇಂದ್ರವಾಗಿದೆ. ಶ್ರೀರಂಗಪಟ್ಟಣ ಮತ್ತು ಮೇಲುಕೋಟೆ ಭಕ್ತಿಯ ತಾಣವಾಗಿದೆ. ಇದರಾಚೆಗೆ ದೇಶ ವಿದೇಶಗಳ ಪಕ್ಷಿಗಳಿಗೆ ನೆಲೆ ನೀಡಿದ ರಂಗನತಿಟ್ಟು ಹಾಗೂ ಕೊಕ್ಕರೆಗಳ ಆವಾಸ ಸ್ಥಾನವಾದ ಕೊಕ್ಕರೆ ಬೆಳ್ಳೂರು ಪ್ರಕೃತಿ ಪ್ರಿಯರಿಗೆ, ಪಕ್ಷಿಪ್ರೇಮಿಗಳಿಗೆ ಉಲ್ಲಾಸ ತುಂಬುತ್ತಿವೆ.
ರಂಗನತಿಟ್ಟಿನಲ್ಲಿ ಎಲ್ಲ ರೀತಿಯ ಪಕ್ಷಿಗಳು ಇವೆಯಾದರೂ ಕೊಕ್ಕರೆ ಬೆಳ್ಳೂರು ಮಾತ್ರ ಬೇರೆ ಬೇರೆ ಪ್ರಬೇಧದ ಕೊಕ್ಕರೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬದುಕು ಕಟ್ಟಿಕೊಂಡಿರುವ ತಾಣವಾಗಿದೆ. ಕೊಕ್ಕರೆಗಳು ನೆಲೆ ನಿಂತ ಕಾರಣದಿಂದ ಕೊಕ್ಕರೆ ಬೆಳ್ಳೂರು ಆಗಿ ಇವತ್ತು ಖ್ಯಾತಿ ಪಡೆದಿರುವುದು ಮಂಡ್ಯಕ್ಕೊಂದು ಹೆಮ್ಮೆ ಎಂದರೆ ತಪ್ಪಾಗಲಾರದು. ಕೊಕ್ಕರೆಗಳಿಂದಲೇ ಬೆಳ್ಳೂರು ಇವತ್ತು ಒಂದು ಪಕ್ಷಿಧಾಮವಾಗಿ ಮಂಡ್ಯದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಗುರುತಿಸಿಕೊಳ್ಳುವಂತಾಗಿದೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಕೊಕ್ಕರೆ ಬೆಳ್ಳೂರು ಪಕ್ಷಿಧಾಮವಿದ್ದು, ಬೆಂಗಳೂರಿನಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿಗೆ ದೇಶ ವಿದೇಶಗಳಿಂದ ಪೆಲಿಕಾನ್, ಹೆಜ್ಜಾರ್ಲೆ ಸೇರಿದಂತೆ ಹಲವು ಜಾತಿಯ ಕೊಕ್ಕರೆಗಳು ಸುಮಾರು 614 ಎಕರೆ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಕಾರಣದಿಂದ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪರಿಸರ ಸಂಸ್ಥೆ ಅರ್ಥ್ ಡೇ ನೆಟ್ ವರ್ಕ್ ಸಂಸ್ಥೆಯು 'ಸ್ಟಾರ್ ವಿಲೇಜ್'ಎಂಬ ಬಿರುದು ನೀಡಿ ಗೌರವಿಸಿರುವುದು ಈ ತಾಣದ ವೈಶಿಷ್ಟ್ಯತೆಗೆ ಹಿಡಿದ ಕನ್ನಡಿಯಾಗಿದೆ.
ಇದು ಪಕ್ಷಿ ವೀಕ್ಷಣೆಗೆ ಸೂಕ್ತ ಕಾಲ
ಈ ಕಾಲವು ಪಕ್ಷಿ ವೀಕ್ಷಣೆಗೆ ಅತ್ಯುತ್ತಮ ಕಾಲವಾಗಿರುವ ಕಾರಣದಿಂದ ನಿಸರ್ಗವನ್ನು ಪ್ರೀತಿಸುವವರು ಪಕ್ಷಿಗಳ ಬಗ್ಗೆ ಆಸಕ್ತಿ ಹೊಂದಿರುವವರು ಇಲ್ಲಿಗೆ ಆಗಮಿಸಿ ಇಲ್ಲಿನ ಹುಣಸೆ, ಮಾವು ಸೇರಿದಂತೆ ಹಲವು ಹೆಮ್ಮರ, ಗಿಡಗಳ ಮೇಲೆ ಬೀಡು ಬಿಟ್ಟು ತಮ್ಮದೇ ಲೋಕದಲ್ಲಿ ವಿಹರಿಸುವ ಪಕ್ಷಿಗಳನ್ನು ವೀಕ್ಷಿಸಬಹುದಾಗಿದೆ.. ವೀಕೆಂಡ್ ಟ್ರಿಪ್ ಹೋಗಲು ಸಿದ್ಧತೆಯಲ್ಲಿ ಇರುವವರು ಇತ್ತ ತೆರಳುವ ಬಗ್ಗೆ ತೀರ್ಮಾನ ಮಾಡಬಹುದಾಗಿದೆ.

ಕೊಕ್ಕರೆ ಬೆಳ್ಳೂರು ಪಕ್ಷಿಧಾಮದ ಬಗ್ಗೆ ಹೇಳಬೇಕೆಂದರೆ, ಸ್ವದೇಶ ಮತ್ತು ವಿದೇಶದಿಂದ ಬರುವ ಕೊಕ್ಕರೆ ಜಾತಿಯ ವಿವಿಧ ಪಕ್ಷಿಗಳಿಗೆ ಸ್ವಚ್ಛಂಧವಾಗಿ ಹಾರಾಡುತ್ತಾ ಸುತ್ತಮುತ್ತಲಿನ ಜಮೀನುಗಳಿಗೆ ತೆರಳಿ ಹುಳ ಹುಪ್ಪಟೆಗಳನ್ನು ತಿನ್ನುತ್ತಾ ಗೂಡು ಕಟ್ಟಿ ಸಂತಾನ ಅಭಿವೃದ್ಧಿ ಮಾಡಿಕೊಂಡು ತಮ್ಮ ಸ್ವಸ್ಥಾನಗಳಿಗೆ ತೆರಳಲು ಅವಕಾಶವಿರುವ ಸುಂದರ ಸ್ಥಳ ಎಂದರೂ ತಪ್ಪಾಗಲಾರದು. ಹೀಗಾಗಿಯೇ ಈ ಗ್ರಾಮವನ್ನು ಪಕ್ಷಿಗಳ ಸಂರಕ್ಷಣೆಗೆ ಮೀಸಲಾಗಿರುವ ಗ್ರಾಮ ಮತ್ತು ತೆರೆದ ಪಕ್ಷಿಧಾಮ ಎಂದು ಘೋಷಿಸಲಾಗಿದೆ.
ಮುಖ್ಯ ಆಕರ್ಷಣೆಯಾಗಿರುವ ಫೆಲಿಕಾನ್
ಇಲ್ಲಿಗೆ ಆಗಮಿಸುವ ಪಕ್ಷಿ ಪ್ರೇಮಿಗಳನ್ನು ವಲಸೆ ಬಂದಿರುವ ಕೊಕ್ಕರೆ ಪ್ರಬೇಧದ ಫೆಲಿಕಾನ್ಗಳು, ಐಬಿಸ್, ಹೆರಾನ್ಗಳು, ಕಾರ್ಮೊರಂಟ್ಗಳು, ಪೇಂಟೆಡ್ ಸ್ಟ್ರೋಕ್, ಹಾಗೂ ನೀರು ಕಾಗೆ(ಡಾರ್ಟರ್) ಸೇರಿದಂತೆ 200 ಇತರ ಪಕ್ಷಿ ಪ್ರಭೇದಗಳು ಇಲ್ಲಿ ಗೂಡು ಕಟ್ಟಿಕೊಂಡು ನೆಲೆಯೂರುತ್ತವೆ. ಇದರ ಜತೆಗೆ ಹಲವಾರು ಜಾತಿಯ ಸಸ್ತನಿಗಳು, ಸರೀಸೃಪಗಳು ಮತ್ತು ಉಭಯಚರಗಳಿಗೆ ನೆಲೆಯಾಗಿದೆ. ಇಲ್ಲಿ ಕಂಡುಬರುವ ಕೆಲವು ಸಾಮಾನ್ಯ ಸಸ್ತನಿಗಳಲ್ಲಿ ಕಾಡು ಹಂದಿಗಳು ಮತ್ತು ನರಿಗಳು ಸೇರಿವೆ, ಹಾವುಗಳು ಮತ್ತು ಆಮೆಗಳಂತಹ ಸರೀಸೃಪಗಳು ಇಲ್ಲಿದ್ದು ಆಕರ್ಷಿಸುತ್ತವೆ.

ಇನ್ನು ಕೊಕ್ಕರೆಗಳಿಂದಾಗಿಯೇ ಇವತ್ತು ಬೆಳ್ಳೂರು ಗ್ರಾಮ ದೇಶ ವಿದೇಶಗಳಲ್ಲಿ ಹೆಸರು ಮಾಡುವಂತಾಗಿದೆ. ಕೊಕ್ಕರೆಗಳು ಸೇರಿದಂತೆ ಇತರೆ ಪಕ್ಷಿಗಳು ಸುತ್ತಮುತ್ತಲಿನ ಹೊಲಗದ್ದೆಗಳಿಗೆ ಹೋಗಿ ಹುಳ ಹುಪ್ಪಟೆಗಳನ್ನು ತಿನ್ನುವುದಲ್ಲದೆ, ಇವು ಹಾಕುವ ಹಿಕ್ಕೆಗಳು ಕೂಡ ಜಮೀನುಗಳಿಗೆ ಗೊಬ್ಬರವಾಗುತ್ತವೆ. ಹೀಗಾಗಿ ಸುತ್ತಮುತ್ತಲಿನ ರೈತರು ಕೂಡ ಅವುಗಳಿಗೆ ಯಾವುದೇ ರೀತಿಯ ತೊಂದರೆ ನೀಡದೆ ಅವುಗಳತ್ತ ಕಾಳಜಿ ತೋರುತ್ತಿದ್ದಾರೆ. ಇದರಿಂದಾಗಿಯೇ ಇವತ್ತು ಇಷ್ಟೊಂದು ಪಕ್ಷಿಗಳು ಇಲ್ಲಿ ನೆಲೆಯೂರಲು ಸಾಧ್ಯವಾಗಿದೆ.
ಎಂದೆಂದಿಗೂ ಕೊಕ್ಕರೆ ಬೆಳ್ಳೂರು ಸ್ಟಾರ್ ವಿಲೇಜ್
ಪ್ರತಿವರ್ಷವೂ ನವೆಂಬರ್ ನಿಂದ ಮಾರ್ಚ್ ವರೆಗೆ ಇಲ್ಲಿ ಪಕ್ಷಿಗಳು ಚಟುವಟಿಕೆಯಿಂದ ಕೂಡಿರುತ್ತವೆ. ಈ ಸಮಯ ಸಂತನೋತ್ಪತ್ತಿಯ ಸಮಯವಾಗಿರುವ ಕಾರಣದಿಂದ ಎಲ್ಲೆಡೆಯೂ ಪಕ್ಷಿಗಳ ಕಲರವವೇ ಕಿವಿಗೆ ಬಡಿಯುತ್ತಿರುತ್ತವೆ. ಜತೆಗೆ ಕಡ್ಡಿ, ಹುಲ್ಲು ತಂದು ಗೂಡು ಕಟ್ಟುವ, ಮೊಟ್ಟೆಯಿಟ್ಟು ಕಾವು ಕೊಡುವ, ಮರಿಗಳಿಗೆ ಗುಟುಕು ನೀಡುವುದರಲ್ಲಿ ಬಿಜ್ಹಿಯಾಗಿರುವ ದೃಶ್ಯಗಳು ಕಣ್ಣಿಗೆ ರಾಚುತ್ತಿರುತ್ತವೆ.
ಇನ್ನು ದೂರದಿಂದ ಬರುವ ಪಕ್ಷಿಗಳು ಜಮೀನಿನಲ್ಲಿ ನೆಟ್ಟು ಬೆಳೆಸಿರುವ ಮಾವು, ಹುಣಸೆ ಮರಗಳಲ್ಲಿಯೂ ನೆಲೆಯೂರಿ ಸಂತಾನೋತ್ಪತ್ತಿ ಮಾಡುತ್ತವೆ. ಇದಕ್ಕೆ ರೈತರು ಸಹಕರಿಸುತ್ತಿರುವುದು ವಿಶೇಷವಾಗಿದೆ. ಈಗಾಗಲೇ ಬೆಳ್ಳೂರು ಗ್ರಾಮ, ಅಲ್ಲಿನ ಜನಜೀವನ, ರೈತರ ಮತ್ತು ಪಕ್ಷಿಗಳ ಒಡನಾಟ ಎಲ್ಲವೂ ಜಾಗತಿಕ ಪ್ರಶಂಸೆಗೆ ಒಳಗಾಗಿದೆ. ಪಕ್ಷಿಗಳ ಸಂರಕ್ಷಣಾ ಕಾರ್ಯದಲ್ಲಿ ಸ್ಥಳೀಯರು ಕೈಜೋಡಿಸಿರುವ ಕಾರಣದಿಂದಲೇ ಇವತ್ತು ಕೊಕ್ಕರೆ ಬೆಳ್ಳೂರು ಸ್ಟಾರ್ ವಿಲೇಜ್ ಎಂಬ ಹೆಸರು ಪಡೆಯಲು ಸಾಧ್ಯವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video












Click it and Unblock the Notifications