ಮಡಿಕೇರಿ ದಸರಾದಲ್ಲಿ ರಾಮನಿಗೆ ಸ್ಥಾನ ನೀಡಲು ಕಾರಣವೇನು? ಮಂಜಿನ ನಗರಿಯಲ್ಲಿ ಶ್ರೀರಾಮನ ಮಹಿಮೆ ಹೇಗಿದೆ ಗೊತ್ತಾ?
ಮಡಿಕೇರಿ, ಜನವರಿ 23: ವಿಷ್ಣುವಿನ ಅವತಾರಿ ಸರ್ವ ಪೂಜಕ ಶ್ರೀರಾಮ ತನ್ನ ಮಹಿಮೆಯನ್ನು ಒಂದಲ್ಲ ಒಂದು ರೀತಿಯಲ್ಲಿ ತೋರ್ಪಡಿಸುತ್ತಲೇ ಬಂದಿದ್ದಾನೆ ಆತ ಬಹುತೇಕ ಪೂಜಾ ಕಾರ್ಯಕ್ರಮ ಉತ್ಸವದಲ್ಲಿ ತನ್ನ ಇರುವಿಕೆಯನ್ನು ದೃಢಪಡಿಸುತ್ತಾ ಬಂದಿದ್ದಾನೆ ಮಡಿಕೇರಿ ನಗರದಲ್ಲಿ ಬೇರೆ ಬೇರೆ ಅವತಾರದಲ್ಲಿ ನೆಲೆ ನಿಂತ ರಾಮ ಬೆಳಕಿನ ದಸರಾದಲ್ಲಿಯೂ ಅಗ್ರಗಣ್ಯ ಸ್ಥಾನಪಡೆದು ಮಹಿಮೆ ಸಾರುತ್ತಿರುವುದು ಎದ್ದು ಕಾಣಿಸುತ್ತಿದೆ.
ಮಡಿಕೇರಿ ದಸರಾಕ್ಕೆ ತನ್ನದೇ ಆದ ಪೌರಾಣಿಕ ಮತ್ತು ಐತಿಹಾಸಿಕ ಇತಿಹಾಸವಿದೆ. ಇಂತಹ ದಸರಾದಲ್ಲಿ ರಾಮನಿಗೂ ಸ್ಥಾನ ನೀಡಲಾಗಿರುವುದನ್ನು ನಾವು ಗಮನಿಸಬಹುದಾಗಿದೆ. ಅದು ಹೇಗೆಂದರೆ? ಸುಮಾರು ಎರಡು ಶತಮಾನಗಳ ಹಿಂದೆ ಮಡಿಕೇರಿ ನಗರದಲ್ಲಿ ಸಾಂಕ್ರಾಮಿಕ ರೋಗ ಹರಡಿತ್ತಂತೆ. ಆ ಸಂದರ್ಭ ರೋಗ ಹರಡಲು ಕಾರಣ ಹುಡುಕಿಕೊಂಡು ಧಾರ್ಮಿಕ ಮುಖಂಡರು ದೇವರ ಮೊರೆ ಹೋದರು. ಆಗ ಮಹಾಮಾರಿ ರೋಗಕ್ಕೆ ದುಷ್ಟ ಶಕ್ತಿಗಳು ಕಾರಣವಾಗಿದ್ದು, ಅದಕ್ಕೆ ಊರ ಹೊರಗಿರುವ ನಾಲ್ಕು ಶಕ್ತಿದೇವತೆಗಳನ್ನು ಒಳಕರೆದು ನವರಾತ್ರಿಯ ಸಂದರ್ಭ ಕರಗ ಹೊರಡಿಸುವ ಮೂಲಕ ನಗರ ಪ್ರದಕ್ಷಿಣೆ ಮಾಡಿಸಿದರೆ ನಗರದಲ್ಲಿ ತಲೆದೋರಿರುವ ಸಾಂಕ್ರಾಮಿಕ ರೋಗ ನಿವಾರಣೆಯಾವುದಾಗಿ ತಿಳಿದು ಬಂತು.

ಶಕ್ತಿ ದೇವತೆಗಳ ಕರಗ ಹೊರಡಿಸುವ ಸಂದರ್ಭ ಪೌರಾಣಿಕ ಹಿನ್ನಲೆಯಲ್ಲಿ ಧಾರ್ಮಿಕ ಸಂಪ್ರದಾಯವನ್ನು ಕೂಡ ಆಚರಣೆಗೆ ತರಲಾಯಿತು. ಅದೇನೆಂದರೆ ಪೌರಾಣಿಕ ಯುಗದಲ್ಲಿ ಪಾರ್ವತಿಯು ದುಷ್ಟ ರಾಕ್ಷಸರ ಸಂಹಾರಕ್ಕೆ ಹೊರಡುವ ಮುನ್ನ ಅಣ್ಣ ಮಹಾವಿಷ್ಣುವಿನ ಬಳಿಗೆ ತೆರಳಿದಳಂತೆ ಆಗ ವಿಷ್ಣು ತನ್ನ ಅಸ್ತ್ರಗಳಾದ ಶಂಕ, ಚಕ್ರ, ಗಧೆ, ಪದ್ಮ ಸೇರಿದಂತೆ ಆಯುಧಗಳನ್ನು ಆಕೆಗೆ ದಯಪಾಲಿಸಿದನಂತೆ. ಆ ನಂತರ ಪಾರ್ವತಿ ವಿವಿಧ ದೇವಿಯರ ಅವತಾರಗಳಲ್ಲಿ ತೆರಳಿ ದುಷ್ಟ ರಾಕ್ಷಸರನ್ನು ಸಂಹರಿಸಿದಳಂತೆ.
ದಸರಾದಲ್ಲಿ ರಾಮನಪಟವಿರಿಸಿ ಪೂಜೆ
ಈ ಪೌರಾಣಿಕ ಕಥೆಯ ಪ್ರಕಾರ ಮಡಿಕೇರಿಯಲ್ಲಿ ಪಾರ್ವತಿ ಅವತಾರದ ನಾಲ್ಕು ಶಕ್ತಿದೇವತೆಗಳಾದ ಶ್ರೀ ಕಂಚಿ ಕಾಮಾಕ್ಷಿಯಮ್ಮ, ಶ್ರೀ ಕೋಟೆ ಮಾರಿಯಮ್ಮ, ಶ್ರೀ ದಂಡಿನಮಾರಿಯಮ್ಮ ಹಾಗೂ ಶ್ರೀ ಕುಂದುರುಮೊಟ್ಟೆ ಮಾರಿಯಮ್ಮ ಕರಗಗಳು ಊರೊಳಗೆ ಅಂದರೆ ಮಹಾವಿಷ್ಣುವಿನ ಸ್ಥಾನಕ್ಕೆ ಬರುವ ಸಂಪ್ರದಾಯ ಜಾರಿಗೆ ತರಲಾಯಿತು.

ಅವತ್ತಿನ ಕಾಲದಲ್ಲಿ ಮಡಿಕೇರಿ ನಗರದಲ್ಲಿ ಮಹಾವಿಷ್ಣುವಿನ ದೇವಾಲಯ ಇಲ್ಲದೆ ಇದ್ದುದರಿಂದಾಗಿ ನಗರದ ದೊಡ್ಡಪೇಟೆಯಲ್ಲಿ ಪೂಜಾ ಮಂದಿರವನ್ನು ನಿರ್ಮಿಸಿ ಅಲ್ಲಿ ರಾಮನ ಚಿತ್ರಪಟವನ್ನಿರಿಸಿ ಪೂಜಿಸಲಾಯಿತು. ಹಾಗೂ ನವರಾತ್ರಿ ಮೊದಲ ದಿನ ಮಡಿಕೇರಿಯ ಪಂಪಿನಕೆರೆ ಬಳಿ ಸಾಂಪ್ರದಾಯಿಕ ಪೂಜೆಯೊಂದಿಗೆ ಹೊರಟ ಕರಗಗಳು ದೊಡ್ಡಪೇಟೆಯ ಶ್ರೀರಾಮಮಂದಿರಕ್ಕೆ ತೆರಳಿ ಅಲ್ಲಿ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿದ ನಂತರ ನಗರ ಪ್ರದಕ್ಷಿಣೆ ಹೊರಡುವ ಧಾರ್ಮಿಕ ಸಂಪ್ರದಾಯವನ್ನು ರೂಢಿಗೆ ತರಲಾಯಿತು. ಅಂದಿನಿಂದ ಇಂದಿನವರೆಗೂ ಅದೇ ಸಂಪ್ರದಾಯ ನಡೆದುಕೊಂಡು ಬರುತ್ತಿದೆ.
ಎರಡು ಶತಮಾನಗಳ ಹಿಂದಿನ ದೇಗುಲ
ಇನ್ನು ಮಡಿಕೇರಿ ದಸರಾದ ಶೋಭಯಾತ್ರೆಯಲ್ಲಿ ಪಾಲ್ಗೊಳ್ಳುವ ದಶಮಂಟಪಗಳ ಪೈಕಿ ಮೂರು ಮಂಟಪಗಳು ರಾಮನ ಹೆಸರಿನವು ಎಂದರೆ ಅಚ್ಚರಿಯಾಗುತ್ತದೆ. ಮಡಿಕೇರಿಯಲ್ಲಿರುವ ಪೇಟೆರಾಮಮಂದಿರ, ದೇಚೂರು ರಾಮಮಂದಿರ ಹಾಗೂ ಕೋದಂಡ ರಾಮಮಂದಿರ ಹೀಗೆ ಮೂರು ರಾಮಮಂದಿರಗಳ ಮಂಟಪಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಗಮನಸೆಳೆಯುತ್ತವೆ.
ಈ ಮೂರು ರಾಮಮಂದಿರ ಮತ್ತು ಮಂಟಪಗಳ ಬಗ್ಗೆ ಹೇಳಬೇಕೆಂದರೆ ಮೊದಲನೆಯದಾದ ಪೇಟೆ ಶ್ರೀರಾಮಮಂದಿರವು ಮಡಿಕೇರಿ ನಗರದ ಕಾಲೇಜು ರಸ್ತೆಯಿಂದ ಹಿಲ್ ರಸ್ತೆಗೆ ಹೊಂದಿಕೊಂಡಂತೆ ಇದೆ. ಸುಮಾರು 200 ವರ್ಷಗಳ ಹಿಂದೆ ಅಂದರೆ, 1824ರಲ್ಲಿ ನವರಾತ್ರಿ ಸಂದರ್ಭ ಕರಗವನ್ನು ಹೊರಡಿಸಲು ವಿಷ್ಣು ದೇವಾಲಯವಿಲ್ಲದ ಸಂದರ್ಭ ಪೂಜಾ ಕೈಂಕರ್ಯಗಳನ್ನು ನೆರವೇರಿಸಲು ಪೂಜಾಮಂದಿರವನ್ನು ಕಟ್ಟಲಾಗಿದೆ. ದಸರಾ ಆಚರಣೆಗೆಂದು ನಿರ್ಮಾಣಗೊಂಡ ಪೂಜಾ ಮಂದಿರ 1930ರವರೆಗೂ ಭಜನಾಮಂದಿರವಾಗಿಯೇ ಮುಂದುವರೆದಿತ್ತು.

ಮುಂದಾಳತ್ವ ವಹಿಸುವ ಪೇಟೆ ರಾಮಮಂದಿರ
ಆ ದಿನಗಳಲ್ಲಿ ಇದನ್ನು ಶ್ರೀರಾಮ ಭಜನಾ ಮಂದಿರ ಎಂದೇ ಕರೆಯಲಾಗುತ್ತಿತ್ತು. ನಂತರದ ದಿನಗಳಲ್ಲಿ ಪೇಟೆಯ ಮಧ್ಯದಲ್ಲಿದ್ದುದರಿಂದಲೋ ಏನೋ ಪೇಟೆ ರಾಮಮಂದಿರ ಎಂದೇ ಹೆಸರಾಯಿತು. ಕ್ರಮೇಣ ಅಭಿವೃದ್ಧಿಯಾಗುತ್ತಾ ಸಾಗಿದೆ. 1967ರಲ್ಲಿ ದೇವಾಲಯಕ್ಕೆ ಭವ್ಯವಾದ ಗೋಪುರವನ್ನು ನಿರ್ಮಿಸಲಾಯಿತು. ಮಂದಿರದ ದೇಖಾರೇಖಿಯ ಜವಾಬ್ದಾರಿಯನ್ನು ನಾಯ್ಡು ಮತ್ತು ಮೊದಲಿಯಾರ್ ಕುಟುಂಬಸ್ಥರು ನಿರ್ವಹಿಸುತ್ತಾ ಬಂದಿದ್ದಾರೆ.
ದಸರಾ ದಿನದಂದು ಇಲ್ಲಿನ ದೇವಾಲಯದಲ್ಲಿ ಪೂಜಿಸಲ್ಪಟ್ಟ ಕಳಶ ಮೆರವಣಿಗೆ ಹೊರಡುವುದರೊಂದಿಗೆ ದಸರಾ ಶೋಭಾಯಾತ್ರೆಗೆ ಚಾಲನೆ ದೊರೆಯುತ್ತದೆ. ಅಲ್ಲಿಂದ ಹೊರಡುವ ಪೇಟೆ ಶ್ರೀ ರಾಮಮಂದಿರದ ಮಂಟಪ ನಾಲ್ಕು ಕರಗಗಳ ದೇವಾಲಯಗಳಿಗೆ ಸಾಗಿ ಪೂಜೆ ಸ್ವೀಕರಿಸಿ ಕರಗಗಳೊಂದಿಗೆ ಬನ್ನಿಮಂಟಪಕ್ಕೆ ತೆರಳಿ ಬನ್ನಿಕಡಿಯುವ ಮುಂದಾಳತ್ವ ವಹಿಸುತ್ತಾ ಬರುತ್ತಿದೆ.
ದೇಚೂರು ಮತ್ತು ಕೋದಂಡ ರಾಮಮಂದಿರ
ಇನ್ನೊಂದು ರಾಮಮಂದಿರವಾದ ದೇಚೂರು ಶ್ರೀ ರಾಮಮಂದಿರಕ್ಕೂ ಶತಮಾನಗಳ ಇತಿಹಾಸವಿದೆ. ರಾಮಾಂಜನೇಯ ಸೇರಿದಂತೆ ಹಲವು ದೇವರ ಪಟಗಳೊಂದಿಗೆ ಭಜನಾ ಮಂದಿರವಾಗಿದ್ದುದನ್ನು ಅಭಿವೃದ್ಧಿಗೊಳಿಸಲಾಗಿದೆ. ಪ್ರಸ್ತುತ ಶ್ರೀ ರಾಮ ವಿದ್ಯಾಗಣಪತಿ ದೇವಸ್ಥಾನ ಎಂದು ಕರೆಯಲಾಗುತ್ತಿದೆ. ಮೊದಲ ಬಾರಿಗೆ 12 ಅಥವಾ 16 ಕಂಬಗಳ ಮಣಿಮಂಟಪಗಳೊಂದಿಗೆ ದಸರಾ ಮಂಟಪವನ್ನು ಹೊರಡಿಸಲು ಆರಂಭಿಸಲಾಯಿತು. ಈಗ ಈ ದೇವಾಲಯದಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಮಂಟಪವನ್ನು ತಯಾರು ಮಾಡಲಾಗುತ್ತಿದೆ. ದೇಗುಲವೂ ಅಭಿವೃದ್ಧಿ ಹೊಂದಿದೆ.
ಮೂರನೆಯ ಶ್ರೀ ಕೋದಂಡರಾಮವು ನಗರದ ಮಲ್ಲಿಕಾರ್ಜುನ ನಗರದಲ್ಲಿದ್ದು, ಶ್ರೀ ಕೋದಂಡರಾಮ ಮಂದಿರವು ಶ್ರೀ ಕೆ.ಎನ್.ಬೋಪಯ್ಯನವರ ಮಾರ್ಗದರ್ಶನದಲ್ಲಿ ನಿಂಗಪ್ಪ, ದೊಡ್ಡಯ್ಯ, ಕದರಯ್ಯ, ನಿಂಗಯ್ಯ, ನಾಗಯ್ಯ ಮುಂತಾದ ಹಿರಿಯರು ಒಂದೆಡೆ ಸೇರಿ ಇಲ್ಲಿನ ಜನತೆಗೆ ಪೂಜೆ ಪುರಸ್ಕಾರವನ್ನು ನೆರವೇರಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ನಿರ್ಮಿಸಿದ ದೇವಾಲಯವಾಗಿದೆ.
1977ರಲ್ಲಿ ಈ ದೇವಾಲಯ ನಿರ್ಮಾಣವಾದಾಗ ಚಿತ್ರಪಟವನ್ನಿಟ್ಟುಕೊಂಡು ಪೂಜೆ ನೆರವೇರಿಸಲಾಗುತ್ತಿತ್ತು. ಬಳಿಕ ಮೈಸೂರಿನ ಆಲನಹಳ್ಳಿಯ ಶಿಲ್ಪಿಗಳಿಂದ ಸುಂದರವಾದ ಕೋದಂಡಧಾರಿ ರಾಮ ಜೊತೆಗೆ ಸೀತಾ, ಲಕ್ಷ್ಮಣ ಆಂಜನೇಯ ಅಲ್ಲದೆ ವಿನಾಯಕನ ವಿಗ್ರಹವನ್ನು ಕಪ್ಪು ಕಲ್ಲಿನಿಂದ ನಿರ್ಮಿಸಿ ಪ್ರತಿಷ್ಠಾಪಿಸಲಾಯಿತು. ಈ ಮಂದಿರದ ವತಿಯಿಂದ ದಸರಾ ಶೋಭಯಾತ್ರೆಯಲ್ಲಿ ಮಂಟಪ ಪಾಲ್ಗೊಳ್ಳುವುದು ವಿಶೇಷವಾಗಿದೆ.
ಕೊಡಗಿನಲ್ಲಿ ಮನೆ ಮಾಡಿದ ಸಂಭ್ರಮ
ವನವಾಸದ ಕಾಲದಲ್ಲಿ ಶ್ರೀರಾಮ ಕೊಡಗಿಗೆ ಬಂದಿದ್ದರಿಂದ ಶ್ರೀರಾಮನ ಪ್ರಭಾವ ಕೊಡಗಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಹೀಗಾಗಿ ಜಿಲ್ಲೆಯಲ್ಲಿ ರಾಮದೇಗುಲಗಳು ಕಂಡು ಬರುತ್ತಿವೆ. ಅದು ಏನೇ ಇರಲಿ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೊಂಡ ಈ ಸಂದರ್ಭದಲ್ಲಿ ಇಡೀ ಕೊಡಗು ಸಡಗರ ಸಂಭ್ರಮದಲ್ಲಿ ತೇಲಾಡುತ್ತಿದೆ.












Click it and Unblock the Notifications