Get Updates
Get notified of breaking news, exclusive insights, and must-see stories!

ಭೃಗು ಮಹರ್ಷಿಗಳ ತಪೋಭೂಮಿ: ನಿಸರ್ಗದ ಸ್ವರ್ಗ ಹೇಮಗಿರಿ ಪ್ರವಾಸಿಗರ ಮೆಚ್ಚಿನ ತಾಣ ಯಾಕೆ?

ಮಂಡ್ಯ, ಮಾರ್ಚ್ 26: ನಗರಗಳ ಗೌಜು ಗದ್ದಲದ ನಡುವೆ ಬಿಡುವಿಲ್ಲದ ದುಡಿಮೆಯಲ್ಲಿ ತೊಡಗಿರುವ ಜನ ರಜೆ ಸಿಕ್ಕರೆ ಸಾಕು ನಗರದಿಂದ ದೂರ ಹೋಗಿ ಪ್ರಶಾಂತ ಸ್ಥಳದಲ್ಲಿ ಒಂದಷ್ಟು ಹೊತ್ತು ಇದ್ದು ಬರೋಣ ಎಂದು ಆಲೋಚನೆ ಮಾಡುವುದು ಈಗೀಗ ಸಾಮಾನ್ಯವಾಗಿದೆ. ಪ್ರತಿದಿನವೂ ಒತ್ತಡದಲ್ಲಿಯೇ ಬದುಕುವವರಿಗೆ ಅದರಾಚೆಗೆ ನಿಸರ್ಗ ಸುಂದರ ತಾಣಗಳು ಆಕರ್ಷಿಸುತ್ತವೆ. ಅಷ್ಟೇ ಅಲ್ಲದೆ ಅಲ್ಲಿನ ವಾತಾವರಣವೂ ಮೈಮನವನ್ನು ಹಗುರವಾಗಿಸುತ್ತವೆ. ಮತ್ತು ಅಂತಹ ತಾಣಗಳನ್ನು ಹುಡುಕಿಕೊಂಡು ಹೋಗುವ ಅಭ್ಯಾಸವೂ ಶುರುವಾಗಿದೆ.

ಒತ್ತಡದ ದುಡಿಮೆ ಮತ್ತು ನಗರದ ಬದುಕು ಇದೆರಡನ್ನು ಅನುಭವಿಸಿದವರನ್ನು ಬೆಟ್ಟದ ಮೇಲೊಂದು ದೇಗುಲ, ಅದರಾಚೆಗೆ ತನ್ನಪಾಡಿಗೆ ತಾನು ಎಂಬಂತೆ ಹರಿಯುವ ನದಿ, ಆ ನದಿಯಾಚೆಗೆ ತಲೆದೂಗುವ ತೆಂಗು, ಹಸಿರು ಚೆಲ್ಲಿದ ಭೂಮಿ..ಇಂತಹದೊಂದು ಪ್ರಕೃತಿ ಚೆಲುವಿನ ತಾಣಕ್ಕೆ ಕರೆದೊಯ್ದು ಬಿಟ್ಟರೆ ಅವರಿಗೆ ಅದೊಂದು ಸ್ವರ್ಗದಂತೆ ಭಾಸವಾದರೆ ಅಚ್ಚರಿಯಿಲ್ಲ. ಪ್ರಶಾಂತವಾಗಿ ಹರಡಿ ಹರಡಿ ಹರಿಯುವ ನದಿ, ಬೀಸಿ ಬರುವ ತಂಗಾಳಿ, ಅದೆಲ್ಲವನ್ನೂ ಮೀರಿ ಅಲೆಅಲೆಯಾಗಿ ತೇಲಿ ಬಂದು ಕಿವಿಗೆ ಮುತ್ತಿಕ್ಕುವ ಗಂಟೆ ಸದ್ದು, ಕಣ್ಣು ಹಾಯಿಸಿದುದ್ದಕ್ಕೂ ಕಾಣಸಿಗುವ ಹಸಿರ ರಾಶಿ..ಒಂದಾ.. ಎರಡಾ? ಒಬ್ಬ ಮನುಷ್ಯ ಮನಸಾರೆ ಖುಷಿಪಡಲು ಇದಕ್ಕಿಂತ ಇನ್ನೇನು ಬೇಕು?

Hemagiri Kshetra A Pilgrimage and Tourist Destination in Mandya

ಇಷ್ಟಕ್ಕೂ ಇಂತಹದೊಂದು ಸುಂದರ ತಾಣ ಯಾವುದು? ಇದು ಎಲ್ಲಿದೆ? ಎಂಬಿತ್ಯಾದಿ ಪ್ರಶ್ನೆಗಳು ಓದುಗರ ಮನದಲ್ಲಿ ಗಿರಕಿ ಹೊಡೆಯದಿರದು. ಹೀಗಾಗಿ ಈ ತಾಣದ ಬಗ್ಗೆ ಹೇಳಿದರೆ ಮುಂದೆ ಇನ್ನಷ್ಟು ವಿವರಗಳನ್ನು ತಿಳಿಸಲು ಸಾಧ್ಯವಾಗುತ್ತದೆ. ಇದು ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ(ಕೆ.ಆರ್.ಪೇಟೆ) ತಾಲ್ಲೂಕಿನ ಪುರಾಣ ಪ್ರಸಿದ್ಧ ಭೃಗು ಮಹರ್ಷಿಗಳ ತಪೋಭೂಮಿ ಎಂದೇ ಕರೆಯಲ್ಪಡುವ ಹೇಮಗಿರಿ ಕ್ಷೇತ್ರ. ಇದು ಪರಮ ಪವಿತ್ರ ತೀರ್ಥ ಕ್ಷೇತ್ರ ಮಾತ್ರವಲ್ಲದೆ, ಒಂದು ಸುಂದರ ಪ್ರವಾಸಿ ತಾಣ ಎಂದರೂ ತಪ್ಪಾಗಲಾರದು.

Take a Poll

ವೈಕುಂಠವಾಸಿ ನೆಲೆಸಿದ್ದ ಪವಿತ್ರ ಕ್ಷೇತ್ರ

ಪುರಾಣದ ಕಥೆಯನ್ನು ಮೆಲುಕು ಹಾಕಿದರೆ ವೈಕುಂಠದಲ್ಲಿದ್ದ ಶ್ರೀ ಹರಿಯು ಮಹಾಲಕ್ಷ್ಮೀ ದೇವಿಯ ಜತೆಗೆ ಜಗಳವಾಡಿಕೊಂಡು ಭೂಲೋಕಕ್ಕೆ ಬಂದು ನೆಲೆ ನಿಂತ ಕ್ಷೇತ್ರವೇ ಹೇಮಗಿರಿ ಬೆಟ್ಟವೆಂದು ಹೇಳಲಾಗುತ್ತಿದೆ. ಆ ನಂತರ ಶ್ರೀಹರಿಯ ಶಾಪ ವಿಮೋಚನೆಯಾಗಿ ಶ್ರೀರಂಗನಾಥ ಸ್ವಾಮಿಯು ಶ್ರೀಮಹಾಲಕ್ಷ್ಮಿ ಹಾಗೂ ಪದ್ಮಾವತಿ ದೇವಿಯನ್ನು ವಿವಾಹವಾಗಿ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿಯಾಗಿ ನೆಲೆನಿಂತಿದ್ದು, ಬೇಡಿ ಬಂದ ಭಕ್ತರ ಹರಕೆಗಳು ಹಾಗೂ ಅಭೀಷ್ಠೆಗಳನ್ನು ಈಡೇರಿಸಿ ಹರಸಿ ಆಶೀರ್ವದಿಸುತ್ತಾ ಬರುತ್ತಿರುವುದು ಇಲ್ಲಿನ ವಿಶೇಷವಾಗಿದೆ.

ಹೇಮಗಿರಿ ಬೆಟ್ಟದ ಸುತ್ತಲೂ ಹೇಮಾವತಿ ನದಿ ಹರಿಯುತ್ತಿರುವುದು ಮಾತ್ರವಲ್ಲದೆ, ಬೆಟ್ಟವನ್ನು ಆವರಿಸಿ ಬಳಿಕ ಪಶ್ಚಿಮವಾಹಿನಿಯಾಗಿ ಹರಿದು ಕೆಆರ್ ಎಸ್ ಜಲಾಶಯದ ಹಿನ್ನೀರಿಗೆ ಹೊಂದಿಕೊಂಡಂತೆ ಕಾವೇರಿ ನದಿಯೊಂದಿಗೆ ಸಂಗಮವಾಗುವುದು ಇಲ್ಲಿನ ವಿಶೇಷವಾಗಿದೆ. ಇವತ್ತು ಹೇಮಾವತಿ ನದಿ ಹರಿಯುವುದರಿಂದ ಬರಡಾಗಿದ್ದ ಭೂಮಿ ಭತ್ತ, ಕಬ್ಬು, ತೆಂಗು, ಅಡಿಕೆ ಸೇರಿದಂತೆ ವಿವಿಧ ಬೆಳೆಗಳಿಂದ ಸಮೃದ್ಧವಾಗಿರುವುದು ನೋಡುಗರ ಕಣ್ಣನ್ನು ತಂಪಾಗಿಸಿ, ರೈತರ ಹೊಟ್ಟೆಯನ್ನು ತುಂಬಿಸುತ್ತಿದೆ.

Hemagiri Kshetra A Pilgrimage and Tourist Destination in Mandya

ಇಲ್ಲಿ ಸದಾ ಕೇಳಿಸುವ ನೀರ ಹಾಡು

ಇನ್ನು ಹೇಮಗಿರಿ ಕ್ಷೇತ್ರದ ಬಗ್ಗೆ ಹೇಳಬೇಕೆಂದರೆ ಇದೊಂದು ನಿಸರ್ಗ ಸುಂದರ ತಾಣವಾಗಿದ್ದು, ಇಲ್ಲಿನ ಬೆಟ್ಟ ಸಾಲುಗಳು ಅದರಾಚೆಗೆ ಬೆಟ್ಟಗಳನ್ನು ಸುತ್ತುವರಿದು ವಿಶಾಲವಾಗಿ ಹರಿಯುವ ಹೇಮಾವತಿ ನದಿ ಎಲ್ಲವೂ ಆಕರ್ಷಕವಾಗಿದೆ. ಇಲ್ಲಿಯ ಗುಡ್ಡದ ಮೇಲಿರುವ ವೆಂಕಟರಮಣ ಸ್ವಾಮಿ ಗುಡಿಯು ಆಧುನಿಕ ಕಾಲದಾಗಿದ್ದು, ವೈಕುಂಠವಾಸಿ ವಿಷ್ಣುವು ಇಲ್ಲಿಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದ ಪುಣ್ಯಕ್ಷೇತ್ರವಾಗಿರುವುದರಿಂದ ಇಲ್ಲಿಗೆ ಬರುವವರಿಗೆ ವೈಕುಂಠವಾಸಿಯ ದರ್ಶನವಾಗುವುದಲ್ಲದೆ ಇಲ್ಲಿನ ಬೆಟ್ಟಗುಡ್ಡಗಳು, ದೇಗುಲ, ನದಿ ಮಾತ್ರವಲ್ಲದೆ ನದಿಯಿಂದ ಸೃಷ್ಟಿಯಾಗಿರುವ ನೀರಿನ ಝರಿ ಎಲ್ಲವೂ ಒಂದೊಳ್ಳೆಯ ಪರಿಸರದಲ್ಲಿ ನಮ್ಮನ್ನು ತೇಲಿಸಿದ ಅನುಭವ ನೀಡುತ್ತದೆ.

ಹೇಮಾವತಿ ನದಿಗೆ 1880ರಲ್ಲಿ 415 ಮೀ. ಉದ್ದದ ಅಣೆಕಟ್ಟನ್ನು ನಿರ್ಮಿಸಲಾಗಿದ್ದು, ಇದರಿಂದ ಸುಮಾರು 310 ಎಕರೆಯಷ್ಟು ವಿಶಾಲವಾದ ದ್ವೀಪ (ಹೊಸಪಟ್ಟಣ) ವನ್ನು ಸೃಷ್ಟಿ ಮಾಡಲಾಗಿದೆ. ಇಲ್ಲಿ ಪ್ರಾಚೀನ ಕಾಲದ ಕೋಟೆಯ ಅವಶೇಷಗಳಿದ್ದು, ಮರಗಿಡಗಳಿಂದ ಆವೃತ್ತವಾಗಿರುವ ಇಲ್ಲಿ ಹಲವು ಬಗೆಯ ಪಕ್ಷಿಗಳು ನೆಲೆನಿಂತಿವೆ. ಪ್ರಕೃತಿಯೇ ಎಲ್ಲವನ್ನೂ ನೀಡಿರುವ ಈ ಸುಂದರ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದರೆ ಇನ್ನೆಷ್ಟು ಚೆಂದಗಾಣಿಸಬಹುದೇನೋ? ಮಂಡ್ಯದ ರಾಜಕೀಯ ನಾಯಕರಾಗಲೀ, ಅಧಿಕಾರಿಗಳಾಗಲೀ ಈ ಕ್ಷೇತ್ರದ ಬಗ್ಗೆ ಆಸಕ್ತಿ ವಹಿಸಿದಂತೆ ಕಾಣಿಸುತ್ತಿಲ್ಲ.

ಅಭಿವೃದ್ಧಿಯಿಂದ ವಂಚಿತಗೊಂಡಿರುವ ಕ್ಷೇತ್ರ

ಹೀಗಾಗಿ ಇಲ್ಲಿ ಸಮಸ್ಯೆಗಳೇ ತಾಂಡವವಾಡುತ್ತಿವೆ. ಭಕ್ತರು ಬರುತ್ತಾರೆ ದೇವರಿಗೆ ಕೈಮುಗಿದು ಹೊರಟು ಹೋಗುತ್ತಾರೆ. ಪ್ರವಾಸಿಗರು ಬಂದರೆ ಒಂದಷ್ಟು ಹೊತ್ತು ಕಳೆದು ಇಷ್ಟೊಂದು ಸುಂದರ ತಾಣದ ಬಗ್ಗೆ ಆಸಕ್ತಿ ವಹಿಸದ ಜನನಾಯಕರಿಗೆ ಹಿಡಿ ಶಾಪ ಹಾಕಿಕೊಂಡು ಹೋಗುತ್ತಾರೆ. ದೇವಾಲಯದ ಸುತ್ತಲೂ ಕಾಂಕ್ರೀಟ್ ವ್ಯವಸ್ಥೆ, ಶುದ್ಧವಾದ ಕುಡಿಯುವ ನೀರಿನ ಸೌಲಭ್ಯ, ಯಾತ್ರಿನಿವಾಸ ಕಟ್ಟಡ, ಹೇಮಗಿರಿ ಅಣೆಕಟ್ಟೆಯ ಬಳಿ ಫಾಲ್ಸ್ ವೀಕ್ಷಿಸಲು ಬೆಳಕಿನ ವ್ಯವಸ್ಥೆ ಹೀಗೆ ಹಲವು ರೀತಿಯ ಅಭಿವೃದ್ಧಿ ಕೆಲಸವನ್ನು ಇಲ್ಲಿ ಮಾಡಿದ್ದೇ ಆದರೆ ಈ ಕ್ಷೇತ್ರ ಒಂದೊಳ್ಳೆಯ ಪ್ರವಾಸಿ ಕ್ಷೇತ್ರವಾಗಿ ಗಮನಸೆಳೆಯುವುದರಲ್ಲಿ ಅಚ್ಚರಿಯಿಲ್ಲ.

Hemagiri Kshetra A Pilgrimage and Tourist Destination in Mandya

ದುರಂತದ ಸಂಗತಿ ಏನೆಂದರೆ, ಈ ಹಿಂದೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯಕ್ಕೆ ಬಂದ ವೇಳೆ ಸಮುದಾಯಭವನ ನಿರ್ಮಾಣ ಮಾಡುವ ಸಲುವಾಗಿ ಶಿಲಾನ್ಯಾಸ ನೆರವೇರಿಸಿ ಹೋಗಿದ್ದರು. ಆದರೆ ಕಾಮಗಾರಿ ಆರಂಭವಾಯಿತಾದರೂ ನಂತರ ಸರ್ಕಾರ ಬದಲಾಗಿ ಅರ್ಧಕ್ಕ ನಿಂತು ಹೋಗಿದೆ. ಆ ಬಗ್ಗೆ ಯಾರೂ ಗಮನಹರಿಸದ ಕಾರಣದಿಂದಾಗಿ ಹಣ ಪೋಲಾಗಿದೆ.

ಭವನದ ಕಾಮಗಾರಿಯನ್ನು ಪೂರ್ಣಗೊಳಿಸುವ ಮನಸ್ಸನ್ನು ಯಾರೂ ಮಾಡಿದಂತೆ ಕಾಣಿಸುತ್ತಿಲ್ಲ. ಸದ್ಯ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯದ ಸಂಸರದಾಗಿದ್ದಾರೆ. ಅವರ ಗಮನಕ್ಕೆ ಈ ವಿಚಾರ ತಂದು ಪೂರ್ಣಗೊಳಿಸುವ ಕಾರ್ಯ ಮಾಡಬೇಕಾಗಿದೆ. ವರ್ಷಪೂರ್ತಿ ಹೇಮಾವತಿ ನದಿಯಲ್ಲಿ ನೀರು ಸಾಕಷ್ಟು ಪ್ರಮಾಣದಲ್ಲಿ ಇರುವುದರಿಂದ ಪ್ರವಾಸಿಗರನ್ನು ಆಕರ್ಷಿಸಲು ಬೋಟಿಂಗ್ ಸೌಲಭ್ಯ ಸೇರಿದಂತೆ ಜಲಸಾಹಸ ಚಟುವಟಿಕೆಗಳನ್ನು ಆರಂಭಿಸಿ ಪ್ರವಾಸಿಗರನ್ನು ಸೆಳೆಯಲು ಕ್ರಮ ಕೈಗೊಳ್ಳಬಹುದು ಆದರೆ ಇಚ್ಛಾಸಕ್ತಿಯ ಕೊರತೆ ಎದ್ದು ಕಾಣಿಸುತ್ತಿದೆ.

ಹೇಮಗಿರಿ ಸುಕ್ಷೇತ್ರವು ಸಮಗ್ರವಾಗಿ ಅಭಿವೃದ್ಧಿಯಾಗಬೇಕು ಎನ್ನುವುದು ಈ ಭಾಗದ ಭಕ್ತರ ಬಹು ವರ್ಷಗಳ ಬೇಡಿಕೆಯಾಗಿದೆ. ಆದರೆ ಅದನ್ನು ಯಾರೂ ಪರಿಗಣಿಸದಂತೆ ಕಾಣುತ್ತಿಲ್ಲ. ಇನ್ನಾದರೂ ಸಂಬಂಧಿಸಿದವರು ಗಮನಹರಿಸಲಿ. ಇನ್ನು ಹೇಮಗಿರಿ ಕ್ಷೇತ್ರವು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಿಂದ 10 ಕಿ.ಮೀ ದೂರದಲ್ಲಿದ್ದು, ಮೈಸೂರಿಗೆ 65 ಕಿ.ಮೀ ಹಾಗೂ ಮಂಡ್ಯಕ್ಕೆ 70 ಕಿ.ಮೀ ದೂರದಲ್ಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+