ವಿನಾಯಕ ಚೌತಿ ವಿಶೇಷ: ಸುಲ್ಲಮಲೆ ಅರಣ್ಯದಲ್ಲೊಂದು ವಿಶಿಷ್ಟ ಗುಹಾಲಯ

By: ಕಿರಣ್ ಸಿರ್ಸೀಕರ್
Subscribe to Oneindia Kannada

ಅಲ್ಲೊಂದು ದಟ್ಟವಾದ ಕಾಡು, ಕಾಡಿನ ನಡುವೆ ಬೃಹತ್ತಾದ ಎರಡು ಬೆಟ್ಟಗಳು, ಆ ಬೆಟ್ಟಗಳ ನಡುವೆ ಕತ್ತಲೆ ಆವರಿಸಿದ ಗುಹೆ. -ಇದು ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸುಲ್ಲಮಲೆ ಎನ್ನುವ ಅರಣ್ಯದ ಮಧ್ಯಭಾಗದಲ್ಲಿ ಇರುವಂತಹ ಪವಿತ್ರ ಸ್ಥಳ.

ಕಗ್ಗತ್ತಲೆ ಆವರಿಸಿದ ಆ ಗುಹೆಯ ಒಳಗೆ ಜಲಪಾತದಂತಿರುವ ನೀರಿನ ಹರಿವಿದ್ದು, ಈ ನೀರಿನಲ್ಲಿ ಸ್ನಾನ ಮಾಡಿದರೆ ಕಷ್ಟವೆಲ್ಲಾ ಕರಗಿ ಪುಣ್ಯದ ಬೆಳಕು ಕಾಣುತ್ತದೆ ಎನ್ನುವ ನಂಬಿಕೆ. ಅಂದಹಾಗೆ ಈ ನಂಬಿಕೆಯ ಗುಹಾಲಯ ಯಾವುದು, ಈ ಗುಹಾಲಯದಲ್ಲಿ ಯಾರಿದ್ದರು ಎನ್ನುವುದನ್ನು ತಿಳಿಯಲು ಕಾತರವೇ? ಹಾಗಾದರೆ ಈ ಲೇಖನ ಓದಿ.

ಮಾಯಾನಗರಿ 'ನ್ಯೂಯಾರ್ಕ್'ನಲ್ಲೊಂದು ವಾರಾಂತ್ಯ

ವರ್ಷದಲ್ಲಿ ನಾಲ್ಕು ದಿನ ಮಾತ್ರ ಈ ಗುಹಾಲಯವಿರುವ ಪ್ರದೇಶಕ್ಕೆ ಪ್ರವೇಶ ಅವಕಾಶ. ದಟ್ಟ ಕಾಡಿನಲ್ಲಿ ಪ್ರಕೃತಿಯೊಳಗಿನ ವೈಶಿಷ್ಟ್ಯಪೂರ್ಣ ಈ ಗುಹಾಲಯದ ಒಳಭಾಗದಲ್ಲಿ ಹರಿಯುವಂತಹ ಜಲಪಾತದಲ್ಲಿ ಶ್ರಾವಣ ಅಮಾವಾಸ್ಯೆಯಿಂದ ಭಾದ್ರಪದ ಚೌತಿಯವರೆಗೆ ತೀರ್ಥಸ್ನಾನ ಮಾಡಿದರೆ ಜೀವನ ಪಾವನವಾಗುವುದು ಎನ್ನುವ ನಂಬಿಕೆ ಜನರದ್ದಾಗಿದೆ.

ಬಂಟ್ವಾಳ ತಾಲೂಕಿನ ಅನಂತಾಡಿಯ ಸನಿಹದಲ್ಲಿರುವ ಅಚ್ಚ ಹಸಿರಿನ ದಟ್ಟ ಕಾನನವಾದ ಸುಳ್ಳಮಲೆ. ಈ ಬೆಟ್ಟ ಪ್ರದೇಶದಲ್ಲಿ ಗುಹಾಲಯವಿದೆ. ಎರಡು ಬೃಹದಾಕಾರದ ಬಂಡೆಗಳು ಒಟ್ಟಿಗೆ ತಾಗಿಕೊಂಡಿದ್ದು, ಆ ಬಂಡೆಗಳ ನಡುವೆ ಈ ಗುಹೆ ಕಾಣಸಿಗುತ್ತದೆ. ಗುಹೆಯೊಳಗೆ ಸುಮಾರು 50 ಮೀಟರ್ ಇಳಿಯಬೇಕಾಗಿದ್ದು, ಜಲಪಾತದಲ್ಲಿ ತೀರ್ಥಸ್ನಾನ ಮಾಡಬೇಕಾದಲ್ಲಿ ಬಹಳಷ್ಟು ಕಷ್ಟವನ್ನೂ ಪಡಬೇಕಿದೆ.

ಅಜ್ಜ, ಅಜ್ಜಿ, ಮೊಮ್ಮಗಳ ಮುಂಬೈ ಟು ಲಂಡನ್ ರೋಚಕ ಕಾರು ಪ್ರಯಾಣ

ಎರಡು ಬೃಹತ್ ಬಂಡೆಗಳು ಪರಸ್ಪರ ತಾಗಿಕೊಂಡಿದ್ದು, ಕೇವಲ ಒಬ್ಬ ವ್ಯಕ್ತಿ ಮಾತ್ರ ಸಾಗಬಹುದಂತಹ ದಾರಿಯಿದೆ. ಅತ್ಯಂತ ಕಿರಿದಾದ ಬಂಡೆಯ ನಡುವಿನ ಈ ದಾರಿಯಲ್ಲಿ ಹೋಗುವಾಗ ಕೈಯನ್ನು ಮೇಲೆತ್ತಿ ಗೋವಿಂದ ಎನ್ನುವ ಘೋಷಣೆ ಮಾಡಿದರೆ ಮಾತ್ರ ಹೋಗಲು ಸಾಧ್ಯ ಎಂದು ಹೇಳಲಾಗುತ್ತಿದೆ.

ದಾರಿಯೇನೇ ಕಿರಿದಾಗಿದ್ದರೂ ಎಷ್ಟೇ ದಪ್ಪಗಿರುವ ವ್ಯಕ್ತಿ ಕೂಡಾ ಗೋವಿಂದ ಘೋಷಣೆ ಹಾಕಿದಲ್ಲಿ ಬಂಡೆಯೇ ಸರಿದು ಆ ವ್ಯಕ್ತಿಗೆ ದಾರಿ ಮಾಡಿಕೊಡುತ್ತದೆ ಎನ್ನುವ ನಂಬಿಕೆಯೂ ಇಲ್ಲಿದೆ. ಬಂಡೆಗಳ ಮಧ್ಯೆ 50 ಮೀಟರ್ ನಷ್ಟು ಸಾಗಿದ ಬಳಿಕ ಸಿಗುವುದೇ ಈ ಜಲಪಾತ.

ಕಟ್ಟುಪಾಡುಗಳನ್ನು ಪಾಳಿಸಬೇಕು

ಕಟ್ಟುಪಾಡುಗಳನ್ನು ಪಾಳಿಸಬೇಕು

ಸುಮಾರು 15 ಜನರು ನಿಂತುಕೊಳ್ಳುವಷ್ಟು ಸ್ಥಳಾವಕಾಶವಿರುವ ಬಂಡೆಯ ಒಳಗೆ ಈ ಜಲಪಾತವು ಹರಿಯುತ್ತಿದ್ದು, ಗುಹೆಯೊಳಗೆ ತಲುಪಲು ಪಟ್ಟ ಎಲ್ಲ ಕಷ್ಟಗಳೂ ಆ ಜಲಪಾತದ ನೀರು ಸೋಕಿದಾಗ ದೂರವಾಗುತ್ತದೆ. ಈ ಗುಹಾಲಯದೊಳಗೆ ಪ್ರವೇಶಿಸಬೇಕಾದರೆ ಕೆಲವು ಕಟ್ಟುಪಾಡುಗಳನ್ನೂ ಪಾಲಿಸಬೇಕಾಗುತ್ತದೆ.

ಗುಹೆಯ ಪ್ರವೇಶಕ್ಕೆ ಎರಡು ದಿನಗಳ ಮೊದಲೇ ಮದ್ಯ-ಮಾಂಸ ಸೇವಿಸುವಂತಿಲ್ಲ. ಶುದ್ಧತೆಯನ್ನು ಕಾಪಾಡಿಕೊಳ್ಳಬೇಕಿದೆ. ಒಂದು ವೇಳೆ ನಿಯಮ ಮೀರಿ ಇಳಿದಲ್ಲಿ ಗುಹೆಯೊಳಗೆ ಅಪಾಯಕ್ಕೆ ಸಿಲುಕಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನೂ ಇಲ್ಲಿನ ಜನ ನೀಡುತ್ತಾರೆ.

ಶೇಷನ ಆವಾಸ ಸ್ಥಾನ

ಶೇಷನ ಆವಾಸ ಸ್ಥಾನ

ಗುಹೆಯಲ್ಲಿ ಶೇಷನ ಆವಾಸವಿದೆಯೆಂಬ ಐತಿಹ್ಯವಿದ್ದು, ಶ್ರಾವಣ ಮಾಸದ ಅಮಾವಾಸ್ಯೆಯಂದು ಸ್ಥಳೀಯ ಮನೆತನದವರು ಇರಿಸಿದ ಕೇರ್ಪಿನಲ್ಲಿ ಮೊದಲು ತಂತ್ರಿಗಳು ಇಳಿದು, ಗುಹೆಯಿಂದ ನೀರು ತಂದು ಎರಡು ದೈವಗಳ ಕಟ್ಟೆಯನ್ನು ಶುದ್ಧಿಗೊಳಿಸಿ ತಂಬಿಲ ಸೇವೆ ನಡೆಸುತ್ತಾರೆ. ಆ ಬಳಿಕವೇ ಭಕ್ತರು ತೀರ್ಥ ಸ್ನಾನಕ್ಕೆ ಇಳಿಯಬೇಕೆಂಬ ನಂಬಿಕೆ ಇದೆ. ವರ್ಷದಲ್ಲಿ ಕೇವಲ 4 ದಿನ ಮಾತ್ರ ಇಲ್ಲಿ ತೀರ್ಥ ಸ್ನಾನ ಮಾಡಬಹುದಾಗಿದ್ದು, ಉಳಿದ ಸಮಯದಲ್ಲಿ ಇಲ್ಲಿಗೆ ಪ್ರವೇಶವಿರುವುದಿಲ್ಲ.

ಪಾಂಡವರಿದ್ದರು ಎಂಬ ಐತಿಹ್ಯ

ಪಾಂಡವರಿದ್ದರು ಎಂಬ ಐತಿಹ್ಯ

ಈ ಗುಹೆಯಲ್ಲಿ ಪಾಂಡವರು ವನವಾಸವನ್ನು ಕಳೆದಿದ್ದರು ಎನ್ನುವ ನಂಬಿಕೆಯಿದೆ. ಗುಹೆಯೊಳಗೆ ಎರಡು ಕವಲುಗಳಿದ್ದು, ಒಂದು ಕವಲನ್ನು ಭೀಮ ಮುಚ್ಚಿದ್ದಾನೆ ಎನ್ನುವ ಕಥೆಯೂ ಇದೆ. ಪಾಂಡವರು ಈ ಪ್ರದೇಶದಲ್ಲಿ ಇದ್ದರು ಎನ್ನುವುದಕ್ಕೆ ಈ ಅರಣ್ಯದ ಸುತ್ತಲೂ 7 ಕೆರೆಗಳಿವೆ. ಪಾಂಡವರು ವನವಾಸದಲ್ಲಿದ್ದಾಗ ಈ ಕೆರೆಯನ್ನು ನಿರ್ಮಿಸಿದ್ದರು ಎನ್ನುವುದು ಇಲ್ಲಿನ ಜನರ ನಂಬಿಕೆಯಾಗಿದೆ.

ಭೂಮಿ ಮೇಲೆ ಹರಿಯುವುದಿಲ್ಲ

ಭೂಮಿ ಮೇಲೆ ಹರಿಯುವುದಿಲ್ಲ

ಗುಹೆಯೊಳಗೆ ರಭಸದಿಂದ ಹರಿಯುವ ಜಲಪಾತದ ನೀರು ಭೂಮಿಯ ಮೇಲೆ ಎಲ್ಲೂ ಹರಿಯುವುದಿಲ್ಲ. ಬದಲಿಗೆ ಈ ಗುಹಾಲಯದಿಂದ ಸುಮಾರು 3 ಕಿಲೋಮೀಟರ್ ದೂರದಲ್ಲಿರುವ ಎ ತುಂಬೆಕೋಡಿ ಜಲದುರ್ಗೆ ದೇವಾಲಯದ ಸಮೀಪದಲ್ಲಿ ಇದು ಭೂಮಿಯಡಿಯಿಂದ ಮೇಲೆ ಬಂದು ಹರಿಯುತ್ತದೆ. ಆಸುಪಾಸಿನಲ್ಲೆಲ್ಲೂ ಕಾಣದ ಈ ನೀರಿನ ಮೂಲ ಭೂಮಿಯೊಳಗಿನ ವೈಶಿಷ್ಯವನ್ನು ತೋರಿಸುತ್ತಿದೆ. ಈ ತೀರ್ಥ ಜಲವು ಉತ್ತರದ ಕಾಶಿಯಿಂದ ಇಳಿದು ಬರುತ್ತದೆ ಎನ್ನುವ ನಂಬಿಕೆ ಕೂಡಾ ಇದೆ.

ವೀಳ್ಯದೆಲೆ-ಅಡಕೆ ನೀರಿಗೆ ಬಿಡ್ತಾರೆ

ವೀಳ್ಯದೆಲೆ-ಅಡಕೆ ನೀರಿಗೆ ಬಿಡ್ತಾರೆ

ಗುಹೆಯೊಳಗೆ ಭಯಗೊಳ್ಳಬಾರದೆಂಬ ಕಾರಣಕ್ಕೆ ತೀರ್ಥ ಸ್ನಾನ ಮಾಡುವ ಭಕ್ತರು ಗೋವಿಂದಾ, ಗೋವಿಂದಾ ಎಂಬ ಘೋಷಣೆ ಜೋರಾಗಿ ಹಾಕಿಕೊಳ್ಳುತ್ತಾರೆ. ಇದರಿಂದ ಶೇಷನಾಗ ತಲೆಯೆತ್ತಿ ನೀರಿನ ಹರಿವು ಹೆಚ್ಚಿಸುತ್ತಾನೆಂಬ ನಂಬಿಕೆ. ಮಾತ್ರವಲ್ಲ ಇಲ್ಲಿ ಸ್ನಾನದ ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ವೀಳ್ಯದೆಲೆ ಹಾಗೂ ಅಡಕೆಯನ್ನು ಜಲಪಾತದ ಬಳಿ ನೀರಿನಲ್ಲಿ ಬಿಡುತ್ತಾರೆ. ಗುಹೆಯೊಳಗೆ ಇಳಿಯಲು ಏಣಿಯ ಅಗತ್ಯವಿದ್ದು, ಅದನ್ನು ಮಾಣಿ ಗ್ರಾಮದ ಗಂಗೆಪಾಲು ಮನೆತನದರೇ ಇರಿಸಬೇಕೆಂಬ ಸಂಪ್ರದಾಯವಿದೆ.

ಹದಿನಾರು ಗಂಟಿನ ಏಣಿ

ಹದಿನಾರು ಗಂಟಿನ ಏಣಿ

ಏಣಿಯನ್ನು ತುಳುವಿನಲ್ಲಿ ಕೇರ್ಪು ಎಂದು ಕರೆಯಲಾಗುತ್ತದೆ. ಇಲ್ಲಿ ಇರಿಸುವ ಕೇರ್ಪಿಗೂ ಲೆಕ್ಕಾಚಾರವಿದ್ದು, 16 ಗಂಟುಗಳನ್ನು ಮಾತ್ರ ಹೊಂದಿರಬೇಕೆಂಬ ನಂಬಿಕೆ ಹಿಂದಿನಿಂದಲೂ ಇದೆ. ಒಮ್ಮೆ ತೀರ್ಥ ಸ್ನಾನಕ್ಕೆ ಹೋಗುವಾಗ ಕೇವಲ 15 ಮಂದಿಗೆ ಮಾತ್ರ ಒಳ ಹೋಗಲಾಗುವುದು ಎಂಬುದು ಇನ್ನೊಂದು ಪವಾಡ ಎಂಬಂತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A visit to this valley will forgive all your sins. Sullamale Valley at Bantwal is open only for 4 days due to Ganesh Chaturthi. People throng to have a Holy bath on the occasion of Ganesh Chaturthi. People have to walk down the valley for about 50 meters to take the holy bath. A valley surrounded by full of mountains and water is a place to enjoy the scenic beauty of God.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ