ಕೊನೆಗೂ ಹುಬ್ಬಳ್ಳಿ-ಧಾರವಾಡ ಬೈಪಾಸ್‌ ರಸ್ತೆ ಅಗಲೀಕರಣ ಆರಂಭ

ಹುಬ್ಬಳ್ಳಿ, ಏಪ್ರಿಲ್ 10; ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನರಿಗೆ ಸಿಹಿಸುದ್ದಿ ಸಿಕ್ಕಿದೆ. ಅಪಘಾತಗಳಿಂದಲೇ ಖ್ಯಾತಿ ಪಡೆದಿರುವ, ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿರುವ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ಅಗಲೀಕರಣಕ್ಕೆ ಚಾಲನೆ ಸಿಕ್ಕಿದೆ. ಇದೊಂದು ಬಹುನಿರೀಕ್ಷಿತ ಯೋಜನೆಯಾಗಿದ್ದು 2 ಪಥ ಇರುವ ಮಾರ್ಗವನ್ನು 6 ಪಥವಾಗಿ ವಿಸ್ತರಣೆ ಮಾಡಲಾಗುತ್ತದೆ.

ಕೇಂದ್ರ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಈ ಕುರಿತು ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದ್ದಾರೆ. 'ಸಾರ್ವಜನಿಕರಿಗೆ ಅತ್ಯಂತ ಅವಶ್ಯಕವಾಗಿದ್ದ ಹುಬ್ಬಳ್ಳಿ- ಧಾರವಾಡ ಬೈ ಪಾಸ್ ರಸ್ತೆ ಅಗಲೀಕರಣದ ಕಾಮಗಾರಿ ಪ್ರಾರಂಭಗೊಂಡಿದೆ. ಪ್ರಸಕ್ತ ದ್ವಿಪಥ ರಸ್ತೆಯಾಗಿರುವ ಬೈ ಪಾಸ್ ರಸ್ತೆ ಷಟ್ಪಥ ರಸ್ತೆಯಾಗಿ ರೂಪುಗೊಳ್ಳಲಿದೆ' ಎಂದು ಹೇಳಿದ್ದಾರೆ. ಬೈಪಾಸ್ ರಸ್ತೆ ಅಗಲೀಕರಣ ಕಾಮಗಾರಿ ಆರಂಭವ ಚಿತ್ರವನ್ನು ಹಂಚಿಕೊಂಡಿದ್ದಾರೆ.

Finally Hubballi Dharwad Bypass Road Widening Work Started

"ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಹಾಗೂ ಕೇಂದ್ರ ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿ ಅವರ ಮುಂದಾಳತ್ವದಲ್ಲಿ ಈ ಕಾಮಗಾರಿ ಆರಂಭವಾಗಿದ್ದು ಈ ಯೋಜನೆಯ ಕಾರ್ಯ ತ್ವರಿತ ಗತಿಯಲ್ಲಿ ಸಾಗುತ್ತಿದೆ. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಹಾಗೂ ಕೇಂದ್ರ ಹೆದ್ದಾರಿ ಸಚಿವರಿಗೆ ಧನ್ಯವಾದಗಳು' ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.

2022ರ ಫೆಬ್ರವರಿ 28ರಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ (31.6 ಕಿ. ಮೀ) ಅಗಲೀಕರಣ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದರು. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಈಗ ಕಾಮಗಾರಿ ಆರಂಭವಾಗಿದೆ.

Finally Hubballi Dharwad Bypass Road Widening Work Started

ಪುಣೆ-ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಇದಾಗಿದೆ. ಯೋಜನೆಯ ವಿವರದಂತೆ ಸದ್ಯ ಈ ಎರಡು ಪಥದ ಬೈಪಾಸ್ ರಸ್ತೆಯಲ್ಲಿರುವ ಎಲ್ಲಾ ಟೋಲ್ ತೆರವುಗೊಳಿಸಲಾಗುತ್ತದೆ. ಕೇವಲ ಒಂದೇ ಒಂದು ಟೋಲ್ ಉಳಿಯಲಿದೆ. ಅಲ್ಲದೇ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನಡುವೆ ಸಂಚಾರ ನಡೆಸುವ ಜನರಿಗೆ ಟೋಲ್‌ನಿಂದ ವಿನಾಯಿತಿ ಸಿಗಲಿದೆ.

ಈ ಬೈಪಾಸ್ ರಸ್ತೆ ಅಗಲೀಕರಣ ಯೋಜನೆಯನ್ನು ಇಪಿಸಿ (ಎಂಜಿನಿಯರಿಂಗ್, ಪ್ರೊಕ್ಯುರ್‌ಮೆಂಟ್ ಆ್ಯಂಡ್ ಕನ್‌ಸ್ಟ್ರಕ್ಷನ್) ಮಾದರಿಯಲ್ಲಿ ಕೈಗೊಳ್ಳಲಾಗಿದೆ. ಸುಮಾರು 1200 ಕೋಟಿ ರೂ.ಗಳ ಯೋಜನೆಯನ್ನು 2.5 ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಬೀದಿದೀಪ ಅಳವಡಿಕೆ, ಗಿಡಗಳನ್ನು ನೆಡುವುದು, ಬಸ್ ನಿಲ್ದಾಣ ನಿರ್ಮಾಣವು ಈ ಯೋಜನೆಯಲ್ಲಿ ಒಳಗೊಂಡಿದೆ.

ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ಸಾವಿನ ದಾರಿ ಎಂದೇ ಕುಖ್ಯಾತಿ ಪಡೆದಿದೆ. ಎರಡು ಪಥದ ರಸ್ತೆಯಲ್ಲಿ ಸದಾ ಸಂಚಾರ ದಟ್ಟಣೆ ಉಂಟಾಗುತ್ತದೆ. ಓವರ್‌ ಟೇಕ್ ಮಾಡುವ ಅವಸರದಲ್ಲಿ ಅಪಘಾತಗಳು ನಡೆದು, ಜನರು ಸಾವನ್ನಪ್ಪುತ್ತಾರೆ. 2009 ರಿಂದ 2022ರ ತನಕ ನಡೆದ ಅಪಘಾತದಲ್ಲಿ 390 ಜನರು ಸಾವನ್ನಪ್ಪಿದ್ದಾರೆ. 1600ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಬೈಪಾಸ್ ರಸ್ತೆ ಅಗಲೀಕರಣ; 1998ರಲ್ಲಿ ನಂದಿ ಹೈವೆ ಡೆವಲಪರ್ಸ್‌ ಲಿಮಿಡೆಡ್ ಈ ರಸ್ತೆಯನ್ನು ನಿರ್ಮಾಣ ಮಾಡಿತು ಮತ್ತು ಉಸ್ತುವಾರಿ ನೋಡಿಕೊಳ್ಳುತ್ತಿದೆ. 2000ದಲ್ಲಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಎರಡು ಪಥದ ಈ ರಸ್ತೆಯಲ್ಲಿ 5 ಟೋಲ್‌ಗಳಿವೆ. ಈಗ ಕೈಗೊಂಡಿರುವ ಯೋಜನೆ ಪೂರ್ಣಗೊಂಡ ಬಳಿಕ ಟೋಲ್‌ಗಳ ಸಂಖ್ಯೆ 1ಕ್ಕೆ ಇಳಿಮುಖವಾಗಲಿದೆ. ಸದ್ಯ ಆಟೋ, ಟ್ರಾಕ್ಟರ್ ಮತ್ತು ಎತ್ತಿನಗಾಡಿಗಳಿಗೆ ಈ ರಸ್ತೆಯಲ್ಲಿ ಪ್ರವೇಶವಿಲ್ಲ. ಆದರೆ ರಸ್ತೆ ಪಕ್ಕದ ಐದಾರು ಹಳ್ಳಿಗಳ ಜನರಿಗೆ ಪರ್ಯಾಯ ರಸ್ತೆ ಇಲ್ಲದ ಕಾರಣ ಇದೇ ರಸ್ತೆಯನ್ನು ಬಳಕೆ ಮಾಡುತ್ತಾರೆ.

ರಸ್ತೆ ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ 14 ವರ್ಷದ ಬಾಲಕನೊಬ್ಬ ಇಲ್ಲಿ ಮೃತಪಟ್ಟಿದ್ದ. ಇದು ಈ ರಸ್ತೆಯಲ್ಲಿ ನಡೆದ ಅಪಘಾತಕ್ಕೆ ಮೊದಲ ಬಲಿ. 2016ರಲ್ಲಿ ದ. ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ಡಿ. ಎಂ. ಹಿರೇಮಠ ಪುತ್ರ ಮತ್ತು ಸೊಸೆ ಈ ರಸ್ತೆಯಲ್ಲಿ ಸಾವನ್ನಪ್ಪಿದ್ದರು. 2020ರಲ್ಲಿ ಕುಂದಗೋಳದ ಶಿವಾನಂದ ಮಠದ ಬಸವೇಶ್ವರ ಸ್ವಾಮೀಜಿ ಅಪಘಾತದಲ್ಲಿ ಮೃತಪಟ್ಟಿದ್ದರು.

2019ರಲ್ಲಿ ನಡೆದ ಅಪಘಾತದಲ್ಲಿ ದಾವಣಗೆರೆಯ 11 ಜನರು ಸಾವನ್ನಪ್ಪಿದ್ದರು. ಆಗ ಈ ರಸ್ತೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯಿತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸ್ವಾಂತ್ವನ ಹೇಳಿದ್ದರು. ಈ ಅಪಘಾತದ ನಂತರ ಬೈಪಾಸ್ ರಸ್ತೆಯನ್ನು ಅಗಲೀಕರಣ ಮಾಡಬೇಕು ಎಂಬ ಒತ್ತಾಯ ಜೋರಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+