ಬೆಂಗಳೂರು-ಮಂಗಳೂರು ರೈಲು ಕೊಯಿಕ್ಕೋಡ್‌ಗೆ: ತಾತ್ಕಾಲಿಕ ತಡೆ
ಮಂಗಳೂರು, ಮಾರ್ಚ್ 01: ಕರ್ನಾಟಕದ ಕರಾವಳಿ ಭಾಗದ ಜನರು, ಜನಪ್ರತಿನಿಧಿಗಳ ವಿರೋಧಕ್ಕೆ ಮಣಿದಿರುವ ರೈಲ್ವೆ ಇಲಾಖೆ ತನ್ನ ಪ್ರಸ್ತಾವನೆಗೆ ತಾತ್ಕಾಲಿಕ ತಡೆಯನ್ನು ನೀಡಿದೆ. ಕೆಎಸ್ಆರ್ ಬೆಂಗಳೂರು-ಮಂಗಳೂರು ರೈಲನ್ನು ಕೊಯಿಕ್ಕೋಡ್ ತನಕ ವಿಸ್ತರಣೆ ಮಾಡುವ ಪ್ರಸ್ತಾವನೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.
ರೈಲ್ವೆ ಸಚಿವಾಲಯ ಕೆಎಸ್ಆರ್ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ (16511/ 16512) ರೈಲನ್ನು ಕೊಯಿಕ್ಕೋಡ್ ತನಕ ವಿಸ್ತರಣೆ ಮಾಡಲು ಜನವರಿ 23ರಂದು ಒಪ್ಪಿಗೆ ನೀಡಿದೆ. ಬಳಿಕ ಈ ಪ್ರಸ್ತಾವನೆಗೆ ವಿರೋಧ ವ್ಯಕ್ತವಾದ ಕಾರಣ ಸದ್ಯಕ್ಕೆ ಇದಕ್ಕೆ ತಡೆ ನೀಡಲಾಗಿದೆ.

ಯಾವುದೇ ತಾಂತ್ರಿಕ ಅಡಚಣೆಗಳು ಇಲ್ಲದಿದ್ದರೂ, ರೈಲ್ವೆ ಇಲಾಖೆ ಒಪ್ಪಿಗೆ ಸಿಕ್ಕಿದ್ದರೂ ಸಹ ಕೆಎಸ್ಆರ್ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ (16511/ 16512) ರೈಲನ್ನು ಕೊಯಿಕ್ಕೋಡ್ ತನಕ ವಿಸ್ತರಣೆಯಾಗಿಲ್ಲ. ಆದ್ದರಿಂದ ಈ ಪ್ರಸ್ತಾವನೆ ಕಾಗದದಲ್ಲಿಯೇ ಉಳಿಯಲಿದೆ ಎಂಬುದು ಬಹುತೇಕ ಖಾತ್ರಿಯಾಗಿದೆ.
ಭಾರೀ ವಿರೋಧ: ಕರ್ನಾಟಕದ ಕರಾವಳಿ ಭಾಗದ ಜನರು ವಿರೋಧದ ನಡುವೆಯೂ ರೈಲ್ವೆ ಇಲಾಖೆ ರೈಲು ಸೇವೆ ವಿಸ್ತರಣೆಗೆ ಒಪ್ಪಿಗೆ ನೀಡಿತ್ತು. ದಕ್ಷಿಣ ರೈಲ್ವೆ ಬೆಂಗಳೂರು-ಮಂಗಳೂರು-ಕಣ್ಣೂರು ರೈಲನ್ನು ಕೊಯಿಕ್ಕೋಡ್ ತನಕ ವಿಸ್ತರಣೆ ಮಾಡುವ ಪ್ರಸ್ತಾಪವನ್ನು ಸಲ್ಲಿಕೆ ಮಾಡಿ ಒಪ್ಪಿಯನ್ನು ಪಡೆದಿತ್ತು.
ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಅನೇಕರು ರೈಲನ್ನು ವಿಸ್ತರಣೆ ಮಾಡುವ ಪ್ರಸ್ತಾಪವನ್ನು ಮರು ಪರಿಶೀಲನೆ ಮಾಡಿ ಎಂದು ಒತ್ತಾಯಿಸಿದ್ದರು. ಪ್ರಯಾಣಿಕರು ಸಹ ವಿರೋಧಿಸಿದ್ದರು.
ಪ್ರಸ್ತುತ ಯಶವಂತಪುರ-ಕಣ್ಣೂರು ಎಕ್ಸ್‌ಪ್ರೆಸ್ ರೈಲು ಮಾತ್ರ ಕೊಯಿಕ್ಕೋಡ್ ತನಕ ಇದೆ. ಈ ರೈಲಿಗೆ ಸಹ ಭಾರೀ ಪ್ರಯಾಣಿಕರ ದಟ್ಟಣೆ ಇದೆ. ಸೀಟು ಸಿಗದ ಜನರು ಬಸ್ ಮೂಲಕ ಪ್ರಯಾಣ ಮಾಡುವುದು ಅನಿವಾರ್ಯವಾಗಿದೆ.
ಆದ್ದರಿಂದ ದಕ್ಷಿಣ ರೈಲ್ವೆ ಬೆಂಗಳೂರು-ಮಂಗಳೂರು-ಕಣ್ಣೂರು ರೈಲನ್ನು ಕೊಯಿಕ್ಕೋಡ್ ತನಕ ವಿಸ್ತರಣೆ ಮಾಡುವ ಪ್ರಸ್ತಾಪವನ್ನು ಮುಂದಿಟ್ಟಿತ್ತು. ಕರಾವಳಿ ಭಾಗದ ಜನರ ವಿರೋಧದ ಹೊರತಾಗಿಯೂ ರೈಲ್ವೆ ಇಲಾಖೆ ಇದಕ್ಕೆ ಒಪ್ಪಿಗೆ ನೀಡಿತ್ತು.
ಈಗಾಗಲೇ ಕೆಎಸ್ಆರ್ ಬೆಂಗಳೂರು-ಮಂಗಳೂರು-ಕಣ್ಣೂರು ರೈಲಿನಲ್ಲಿ ಟಿಕೆಟ್ ಸಿಗುತ್ತಿಲ್ಲ. ವಾರಾಂತ್ಯ, ರಜೆ ದಿನಗಳಲ್ಲಿ ಜನಸಂದಣಿ ಹೆಚ್ಚಿರುತ್ತದೆ. ರೈಲನ್ನು ಕೋಯಿಕ್ಕೋಡ್ ತನಕ ವಿಸ್ತರಣೆ ಮಾಡಿದರೆ ಕರ್ನಾಟಕದ ಬದಲು ಕೇರಳ ಭಾಗದ ಜನರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂಬುದು ಪ್ರಯಾಣಿರ ವಾದ ವಾಗಿತ್ತು.
ಸಂಸದ ನಳಿನ್ ಕುಮಾರ್ ಕಟೀಲ್ ಸಹ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರವನ್ನು ಬರೆದು ಬೆಂಗಳೂರು-ಮಂಗಳೂರು-ಕಣ್ಣೂರು ರೈಲನ್ನು ಕೊಯಿಕ್ಕೋಡ್ ತನಕ ವಿಸ್ತರಣೆ ಮಾಡುವ ಪ್ರಸ್ತಾಪ ವಾಪಸ್ ಪಡೆಯಲು ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಮನವಿ ಮಾಡಿದ್ದರು.
ಸಾಮಾಜಿಕ ಜಾಲತಾಣದಲ್ಲಿಯೂ ರೈಲು ಸೇವೆ ವಿಸ್ತರಣೆ ವಿರೋಧಿಸಿ ಪೋಸ್ಟ್‌ಗಳನ್ನು ಹಾಕಿ ರೈಲ್ವೆ ಇಲಾಖೆಯನ್ನು ಟ್ಯಾಗ್ ಮಾಡಲಾಗಿತ್ತು. ಅಂತಿಮವಾಗಿ ಜನವರಿ 23ರ ಪ್ರಸ್ತಾಪಕ್ಕೆ ತಾತ್ಕಾಲಿಕ ತಡೆ ಬಿದ್ದಿದೆ. ಸದ್ಯಕ್ಕೆ ರೈಲು ಸೇವೆ ವಿಸ್ತರಣೆ ಆಗುವುದು ಅನುಮಾನವಾಗಿದೆ.
ಬೆಂಗಳೂರು-ಮಂಗಳೂರು ನಡುವೆ ಇನ್ನೂ ಒಂದು ಹೊಸ ರೈಲು ಬೇಕು ಎನ್ನುವ ಬೇಡಿಕೆ ಇದೆ.ಇಂತಹ ಸಮಯದಲ್ಲಿ ಇರುವ ರೈಲನ್ನು ಕೊಯಿಕ್ಕೋಡ್ ತನಕ ವಿಸ್ತರಣೆ ಮಾಡಿದರೆ ಕೇರಳಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂಬುದು ಪ್ರಯಾಣಿಕರ ಆರೋಪವಾಗಿತ್ತು. ಆದ್ದರಿಂದ ರೈಲುಸೇವೆ ವಿಸ್ತರಣೆಗೆ ವಿರೋಧ ವ್ಯಕ್ತವಾಗಿತ್ತು.











Click it and Unblock the Notifications