ಕೊಪ್ಪಳದ ಅಂಜನಾದ್ರಿ, ಅಯೋಧ್ಯೆ ನಡುವೆ ನೇರ ರೈಲು
ಕೊಪ್ಪಳ, ಡಿಸೆಂಬರ್ 05; ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯವಾದ ಶ್ರೀ ರಾಮ ಮಂದಿರ 2024ರಲ್ಲಿ ಉದ್ಘಾಟನೆಯಾಗಲಿದೆ. ಅಯೋಧ್ಯೆಗೂ ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿರುವ ಅಂಜನಾದ್ರಿಗೂ ಐತಿಹಾಸಿಕ ನಂಟಿದೆ. ಅಂಜನಾದ್ರಿ ಮತ್ತು ಅಯೋಧ್ಯೆ ನಡುವೆ ನೇರ ರೈಲು ಬೇಕು ಎಂಬ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದೆ.
ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿಯೇ ಕರ್ನಾಟಕ ಮತ್ತು ಅಯೋಧ್ಯೆ ಸಂಪರ್ಕಿಸುವ ಮೊದಲ ರೈಲು ಸಂಚಾರ ಆರಂಭವಾಗಲಿದೆ. ಕೊಪ್ಪಳದ ಬಿಜೆಪಿ ಸಂಸದ ಕರಡಿ ಸಂಗಣ್ಣ ರೈಲ್ವೆ ಇಲಾಖೆಗೆ ಅಂಜನಾದ್ರಿ ಮತ್ತು ಅಯೋಧ್ಯೆ ನಡುವಿನ ರೈಲಿಗಾಗಿ ಬೇಡಿಕೆ ಇಟ್ಟು ಪತ್ರವನ್ನು ಬರೆದಿದ್ದಾರೆ.

ರೈಲ್ವೆ ಇಲಾಖೆ ಈ ಪತ್ರಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದೆ. ಹನುಮ ಹುಟ್ಟಿದ ಸ್ಥಳವಾದ ಅಂಜನಾದ್ರಿ ಮತ್ತು ಶ್ರೀ ರಾಮನ ಕ್ಷೇತ್ರವಾದ ಅಯೋಧ್ಯೆಗೆ ಭೇಟಿ ನೀಡಲು ಅನುಕೂಲವಾಗುವಂತೆ ನೇರ ರೈಲು ಆರಂಭಿಸಲಾಗುತ್ತದೆ. ಆದರೆ ದಿನಾಂಕ ಮಾತ್ರ ಅಂತಿಮವಾಗಬೇಕಿದೆ.
ಸಾವಿರಾರು ಪ್ರವಾಸಿಗರ ಭೇಟಿ; ಉತ್ತರ ಪ್ರದೇಶದಲ್ಲಿರುವ ಅಯೋಧ್ಯೆ ಮತ್ತು ಕೊಪ್ಪಳ ಜಿಲ್ಲೆಯಲ್ಲಿರುವ ಅಂಜನಾದ್ರಿಗೆ ಪ್ರತಿವರ್ಷ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಈಗ ನೇರ ರೈಲು ಸೇವೆ ಆರಂಭವಾದರೆ ಪ್ರವಾಸಿಗರಿಗೆ ಅನುಕೂಲವಾಗಲಿದೆ.
ರೈಲು ಸೇವೆ ಆರಂಭದ ಕುರಿತು ಸಂಸದ ಕರಡಿ ಸಂಗಣ್ಣ ಮಾತನಾಡಿದ್ದು, "ಈಗಾಗಲೇ ಅಂಜನಾದ್ರಿ ಮತ್ತು ಅಯೋಧ್ಯೆ ನಡುವಿನ ನೇರ ರೈಲಿನ ಬಗ್ಗೆ ರೈಲ್ವೆ ಇಲಾಖೆಗೆ ಪತ್ರ ಬರೆದಿದ್ದೇನೆ. ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಈ ವಿಚಾರದ ಕುರಿತು ಮತ್ತೆ ಪ್ರಸ್ತಾಪಿಸುತ್ತೇನೆ" ಎಂದು ಹೇಳಿದ್ದಾರೆ.
ಅಯೋಧ್ಯೆ ಮತ್ತು ಅಂಜನಾದ್ರಿ ಎರಡೂ ಸಹ ಪ್ರಮುಖ ಧಾರ್ಮಿಕ ಕೇಂದ್ರಗಳಾಗಿವೆ. ನೇರ ರೈಲು ಸಂಚಾರ ಆರಂಭವಾದರೆ ಭಕ್ತರಿಗೆ ಮತ್ತು ಅಕ್ಕಪಕ್ಕದ ಜಿಲ್ಲೆಗಳ ಜನರಿಗೆ ಸಹ ಅನುಕೂಲವಾಗಲಿದೆ. ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ ಎಂಬುದು ಲೆಕ್ಕಾಚಾರವಾಗಿದೆ.
ರೈಲ್ವೆ ಕ್ರಿಯಾ ಸಮಿತಿಯ ಅಧ್ಯಕ್ಷ ಕೆ. ಎಂ. ಮಹೇಶ್ವರ ಸ್ವಾಮಿ ಸಹ ಅಂಜನಾದ್ರಿ ಮತ್ತು ಅಯೋಧ್ಯೆ ನೇರ ರೈಲು ಸೇವೆ ಬಗ್ಗೆ ಮಾತನಾಡಿದ್ದು, ಈ ರೈಲು ಹಲವಾರು ವರ್ಷಗಳ ಬೇಡಿಕೆಯಾಗಿದೆ ಎಂದು ಹೇಳಿದ್ದಾರೆ. ರೈಲು ಸೇವೆ ಆರಂಭಿಸಿದರೆ ನಾವು ಸಹ ಬೆಂಬಲ ನೀಡುತ್ತೇವೆ. ಹುಬ್ಬಳ್ಳಿ ಅಥವ ಗುಂತಕಲ್ ಮೂಲಕ ಈ ರೈಲು ಆರಂಭವಾಗುವಂತೆ ವೇಳಾಪಟ್ಟಿ ತಯಾರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಅಂಜನಾದ್ರಿ ದೇವಾಲಯದ ಆಡಳಿತ ಮಂಡಳಿ ಸಹ ಅಯೋಧ್ಯೆ ಮತ್ತು ಅಂಜನಾದ್ರಿ ನೇರ ರೈಲು ಆರಂಭ ಪ್ರಸ್ತಾವನೆಯನ್ನು ಸ್ವಾಗತಿಸಿದೆ. ಈ ರೈಲು ಸೇವೆ ಕುರಿತು ಹಿಂದಿನಿಂಲೂ ಮನವಿ ಮಾಡುತ್ತಾ ಬರಲಾಗಿದೆ ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ಕೊಪ್ಪಳಕ್ಕೆ ಆಗಮಿಸಿದಾಗ ಅಂಜನಾದ್ರಿ ಮತ್ತು ಅಯೋಧ್ಯೆ ನೇರ ರೈಲು ಸೇವೆಗಾಗಿ ಮನವಿಯನ್ನು ಸಲ್ಲಿಕೆ ಮಾಡಲಾಗಿತ್ತು.
ಪ್ರತಿವರ್ಷ ಸಾವಿರಾರು ಭಕ್ತರು ಭೇಟಿ ನೀಡುವ ಕೊಪ್ಪಳದ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಕರ್ನಾಟಕ ಸರ್ಕಾರ ಸಹ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡಿದೆ. ಒಟ್ಟು ಎರಡು ಹಂತದಲ್ಲಿ ಅಂಜನಾದ್ರಿ ಬೆಟ್ಟದಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಲು ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ.












Click it and Unblock the Notifications