Vande Bharat; ಉದ್ಯೋಗಿಗಳನ್ನು ಸೆಳೆದ ಧಾರವಾಡ-ಬೆಂಗಳೂರು ರೈಲು
ಬೆಂಗಳೂರು, ಅಕ್ಟೋಬರ್ 26: ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗಿ ಸುಮಾರು 5 ತಿಂಗಳು ಕಳೆದಿದೆ. ಈ ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೈಲಿನಲ್ಲಿ ಹೆಚ್ಚಾಗಿ ಪ್ರಯಾಣಿಸುವ ವಯೋಮಾನದವರು ಯಾರು? ಎಂದು ಸಮೀಕ್ಷೆ ಮಾಡಲಾಗಿದೆ.
ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕ ಸಂಪರ್ಕಿರುವ ವಂದೇ ಭಾರತ್ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಜೂನ್ 27ರಂದು ಚಾಲನೆ ನೀಡಿದ್ದರು. ನೈಋತ್ಯ ರೈಲ್ವೆ ಈಗ ರೈಲು ಪ್ರಯಾಣಿಕರ ಕುರಿತು ಸಮೀಕ್ಷೆಯೊಂದನ್ನು ಮಾಡಿದೆ. ಯಾರು ಈ ರೈಲು ಸೇವೆಯನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ? ಎಂದು ಅಂಕಿ-ಸಂಖ್ಯೆಗಳನ್ನು ಸಂಗ್ರಹ ಮಾಡಲಾಗಿದೆ.

ವಂದೇ ಭಾರತ್ ರೈಲು ಸೇವೆಗೆ ಚಾಲನೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, 'ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಕರ್ನಾಟಕದಾದ್ಯಂತ ಸಂಪರ್ಕವನ್ನು ಸುಧಾರಿಸುತ್ತದೆ. ಇದು ರಾಜ್ಯದಲ್ಲಿ ವಾಣಿಜ್ಯ ಮತ್ತು ಪ್ರವಾಸೋದ್ಯಮವನ್ನು ಸುಧಾರಿಸುತ್ತದೆ' ಎಂದು ಹೇಳಿದ್ದರು.
ರೈಲು ಬಳಕೆದಾರರು ಯಾರು?; ರೈಲು ನಂಬರ್ 20662 ಧಾರವಾಡ-ಕೆಎಸ್ಆರ್ ಬೆಂಗಳೂರು ವಂದೇ ಭಾರತ್ ರೈಲಿನಲ್ಲಿ ಕೆಲಸಕ್ಕೆ ಹೋಗುವ ಶೇ 62ರಷ್ಟು ಪ್ರಯಾಣಿಸುತ್ತಾರೆ. 25 ರಿಂದ 59 ವರ್ಷದ ವಯೋಮಾನದವರು ಹೆಚ್ಚಾಗಿ ಸಂಚಾರ ನಡೆಸುತ್ತಾರೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ಹೇಳಿದೆ.
ಉತ್ತರ ಕರ್ನಾಟಕವನ್ನು ಐಟಿ ಹಬ್ ಬೆಂಗಳೂರು ಜೊತೆಗೆ ಈ ರೈಲು ಸಂಪರ್ಕಿಸುತ್ತದೆ. ಧಾರವಾಡದಿಂದ ಮಧ್ಯಾಹ್ನ 1.15ಕ್ಕೆ ಹೊರಡುವ ರೈಲು 7.45ಕ್ಕೆ ಬೆಂಗಳೂರು ನಗರವನ್ನು ತಲುಪುತ್ತದೆ. ಎಸ್‌ಎಸ್‌ಎಸ್ ಹುಬ್ಬಳ್ಳಿ, ದಾವಣಗೆರೆ ಮತ್ತು ಯಶವಂತಪುರದಲ್ಲಿ ಈ ರೈಲು ನಿಲುಗಡೆ ಹೊಂದಿದೆ.
ಈ ಮಾರ್ಗದಲ್ಲಿ ಸಂಚಾರ ನಡೆಸುವ ಇತರ ರೈಲುಗಳಿಗೆ ಹೋಲಿಕೆ ಮಾಡಿದರೆ ಈ ರೈಲು ಒಂದು ಗಂಟೆ ಮುಂಚೆ ಸಂಚಾರ ನಡೆಸುತ್ತದೆ. ಆದ್ದರಿಂದ ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೈಲಿನಲ್ಲಿ ಶೇ 20ರಷ್ಟು ಪ್ರಯಾಣಿಕರು 18-24ರ ವಯೋಮಾನದವರು, ಶೇ 20ರಷ್ಟು ಪ್ರಯಾಣಿಕರು 25-34ರ ವಯೋಮಾನದವರು, ಶೇ 30ರಷ್ಟು ಪ್ರಯಾಣಿಕರು 35-49ರ ವಯೋಮಾನದವರು. ಯುವಕರು ರೈಲು ಸೇವೆಯನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ.
ಕರ್ನಾಟಕದಲ್ಲಿ ಒಟ್ಟು 3 ವಂದೇ ಭಾರತ್ ರೈಲುಗಳು ಸಂಚಾರ ನಡೆಸುತ್ತಿವೆ. ಮೈಸೂರು-ಬೆಂಗಳೂರು-ಚೆನ್ನೈ ನಡುವೆ ಮೊದಲ ರೈಲು ಸಂಚಾರ 2022ರ ನವೆಂಬರ್‌ನಲ್ಲಿ ಆರಂಭವಾಯಿತು. ಧಾರವಾಡ-ಕೆಎಸ್ಆರ್ ಬೆಂಗಳೂರು ವಂದೇ ಭಾರತ್ ರೈಲು 2ನೇ ವಂದೇ ಭಾರತ್ ರೈಲಾಗಿದೆ. ಯಶವಂತಪುರ-ಕಾಚಿಗುಡ ನಡುವೆ 3ನೇ ರೈಲು ಆರಂಭವಾಗಿದೆ.
ದೇಶದಲ್ಲಿ ಸದ್ಯ ಸಂಚಾರ ನಡೆಸುತ್ತಿರುವ ವಂದೇ ಭಾರತ್ ರೈಲು ಬೋಗಿಗಳನ್ನು ಚೆನ್ನೈನ ಪೆರಂಬೂರ್‌ನ ಸಮಗ್ರ ಕೋಚ್ ಫ್ಯಾಕ್ಟರಿಯಲ್ಲಿ ತಯಾರು ಮಾಡಲಾಗುತ್ತಿದೆ. ಮೇಕ್ ಇನ್ ಇಂಡಿಯಾ ಪ್ರಧಾನಮಂತ್ರಿಯವರ ಕರೆಗೆ ಪೂರಕವಾಗಿದೆ. ಐಷಾರಾಮಿ ವ್ಯವಸ್ಥೆಗಳನ್ನು ರೈಲು ಬೋಗಿ ಒಳಗೊಂಡಿದ್ದು, ಉದ್ಯೋಗಿಗಳು ಆರಾಮದಾಯಕ ಪ್ರಯಾಣದ ಅನುಭವವನ್ನು ಪಡೆಯುತ್ತಿದ್ದಾರೆ.
ಧಾರವಾಡ-ಕೆಎಸ್ಆರ್ ಬೆಂಗಳೂರು ವಂದೇ ಭಾರತ್ ರೈಲಿನ ಸೀಟುಗಳು 360 ಡಿಗ್ರಿ ತಿರುಗುತ್ತವೆ. ಪ್ರತಿ ಸೀಟಿನಲ್ಲಿಯೂ ಮೊಬೈಲ್ ಚಾರ್ಜಿಂಗ್ ಸಾಕೆಟ್‌ಗಳನ್ನು ಒಳಗೊಂಡಿದೆ. ಜಿಪಿಎಸ್ ಆಧಾರಿತ ಪ್ರಯಾಣಿಕರ ಮಾಹಿತಿ ಸೌಕರ್ಯವನ್ನು ಹೊಂದಿದೆ. ಆನ್‌ಬೋರ್ಡ್ ವೈ-ಫೈ ಸೌಲಭ್ಯವಿದೆ ಇಂತಹ ಹಲವು ಸೌಲಭ್ಯಗಳು ಇರುವ ಕಾರಣ ಉದ್ಯೋಗಿಗಳು ರೈಲು ಪ್ರಯಾಣವನ್ನು ಇಷ್ಟಪಡುತ್ತಿದ್ದಾರೆ.
ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ರೈಲಿನ ವೇಳಾಪಟ್ಟಿ ಪರಿಷ್ಕರಣೆ ಮಾಡಬೇಕು, ಹೆಚ್ಚಿನ ನಿಲುಗಡೆ ನೀಡಬೇಕು ಎಂಬ ಬೇಡಿಕೆಯನ್ನು ರೈಲು ಪ್ರಯಾಣಿಕರು ಇಟ್ಟಿದ್ದಾರೆ. ಆದರೆ ಇದುವರೆಗೆ ಈ ಕುರಿತು ರೈಲ್ವೆ ಇಲಾಖೆ ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ.












Click it and Unblock the Notifications