Vande Bharat Train; ಮಂಗಳೂರು-ಮಡಗಾಂವ್ ರೈಲು ಭಟ್ಕಳದಲ್ಲಿ ನಿಲ್ಲಲಿ
ಉತ್ತರ ಕನ್ನಡ, ಜನವರಿ 02: ಕರ್ನಾಟಕ ಮತ್ತು ಗೋವಾ ಸಂಪರ್ಕಿಸುವ ವಂದೇ ಭಾರತ್ ರೈಲು ಸಂಚಾರ ಆರಂಭವಾಗಿದೆ. ಮಂಗಳೂರು-ಮಡಗಾಂವ್ ನಡುವಿನ ರೈಲು ಸಂಚಾರಕ್ಕೆ ಡಿಸೆಂಬರ್ 30ರಂದು ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿಸಿದ್ದಾರೆ.
ಮಂಗಳೂರು ಮತ್ತು ಗೋವಾದ ಮಡಗಾಂವ್ ನಡುವೆ ಸಂಚರಿಸುವ ವಂದೇ ಭಾರತ್ ರೈಲಿನ ವೇಳಾಪಟ್ಟಿ ನಿಲ್ದಾಣಗಳ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಡುವ ಈ ರೈಲು ಉಡುಪಿ ಮತ್ತು ಕಾರವಾರದಲ್ಲಿ ನಿಲುಗಡೆ ಹೊಂದಿದೆ.

ವಂದೇ ಭಾರತ್ ರೈಲು ಮಂಗಳವಾರ ಹೊರತುಪಡಿಸಿ ಉಳಿದ ದಿನ ಮಂಗಳೂರು-ಮಡಗಾಂವ್ ನಡುವೆ ಸಂಚಾರ ನಡೆಸುತ್ತದೆ. 4.45 ನಿಮಿಷದಲ್ಲಿ ರೈಲು ಉಭಯ ನಗರಗಳನ್ನು ಸಂಪರ್ಕಿಸುತ್ತದೆ. ಈ ರೈಲಿನಲ್ಲಿ ಎಸಿ ಚೇರ್ ಕಾರ್ ದರ 1,330 ರೂ. ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರ್ ದರ 2,350 ರೂ.ಗಳು.
ಮಂಗಳೂರು ಮತ್ತು ಗೋವಾದ ಮಡಗಾಂವ್ ನಡುವೆ ರೈಲಿಗೆ ಸುರತ್ಕಲ್, ಉಡುಪಿ, ಕುಂದಾಪುರ, ಭಟ್ಕಳ, ಕುಮುಟ, ಕಾರವಾರ ಹೀಗೆ ವಿವಿಧ ನಿಲ್ದಾಣವಿದೆ. ಆದರೆ ರೈಲು ಉಡುಪಿ, ಕಾರವಾರದಲ್ಲಿ ಮಾತ್ರ ನಿಲುಗಡೆ ಹೊಂದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಹೆಚ್ಚಿನ ನಿಲ್ದಾಣಗಳನ್ನು ನೀಡಿ; ಮಂಗಳೂರು-ಮಡಗಾಂವ್ ನಡುವಿನ ವಂದೇ ಭಾರತ್ ರೈಲಿಗೆ ಭಟ್ಕಳದಲ್ಲಿ ನಿಲುಗಡೆ ನೀಡಿ ಎಂದು ಬೇಡಿಕೆ ಇಡಲಾಗಿದೆ. ಭಟ್ಕಳ ತಾಲೂಕಿನಲ್ಲಿರುವ ಮುರುಡೇಶ್ವರ ಪ್ರಸಿದ್ಧ ಪ್ರವಾಸಿ ತಾಣ. ದೇಶ, ವಿದೇಶದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ರೈಲು ಭಟ್ಕಳದಲ್ಲಿ ನಿಲುಗಡೆ ನೀಡಿದರೆ ಅವರಿಗೆ ಅನುಕೂಲವಾಗಲಿದೆ ಎಂದು ರೈಲ್ವೆ ಇಲಾಖೆಗೆ ಮನವಿ ಮಾಡಲಾಗಿದೆ.
ಮಂಗಳೂರು ಮತ್ತು ಉಡುಪಿ ನಡುವಿನ ಅಂತರ 60 ಕಿ. ಮೀ. ಆಗಿದೆ. ಕಾರವಾರ-ಮಡಗಾಂವ್ ನಡುವಿನ ಅಂತರ 65 ಕಿ. ಮೀ. ಆಗಿದೆ. ಉಡುಪಿ-ಕಾರವಾರ ನಡುವೆ 213 ಕಿ. ಮೀ. ಅಂತರವಿದೆ. ಆದ್ದರಿಂದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ವಂದೇ ಭಾರತ್ ರೈಲು ನಿಲುಗಡೆಗೊಳಿಸಬೇಕು ಎಂಬುದು ಬೇಡಿಕೆ.
ಸದ್ಯದ ವೇಳಾಪಟ್ಟಿಯಿಂತೆ ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಪ್ರತಿದಿನ (ಮಂಗಳವಾರ ಹೊರತುಪಡಿಸಿ) ಬೆಳಗ್ಗೆ 8.30ಕ್ಕೆ ವಂದೇ ಭಾರತ್ ರೈಲು ಹೊರಡುತ್ತದೆ. ಮಧ್ಯಾಹ್ನ 1.15ಕ್ಕೆ ಮಡಗಾಂವ್ ತಲುಪುತ್ತದೆ. ಸಂಜೆ ಮಡಗಾಂವ್‌ನಿಂದ 6.10ಕ್ಕೆ ಹೊರಟು 10.45ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣವನ್ನು ತಲುಪುತ್ತದೆ.
ಕರಾವಳಿಗೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಿದ್ದಕ್ಕೆ ಪ್ರಯಾಣಿಕರು ಮತ್ತು ರೈಲ್ವೆ ಹೋರಾಟಗಾರರು ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಕೆ ಮಾಡಿದ್ದರು. ಅಲ್ಲದೇ ವಂದೇ ಭಾರತ್ ರೈಲುಗಳಿಗೆ ಕನಿಷ್ಠ ತಾಲೂಕು ಮುಖ್ಯ ಕೇಂದ್ರಗಳಲ್ಲಿ ನಿಲುಗಡೆ ಇಲ್ಲದಿರುವುದು ಬೇಸರದ ಸಂಗತಿ ಎಂದು ಹೇಳಿದ್ದರು.
ಕರಾವಳಿಯಲ್ಲಿ ಕುಂದಾಪುರ (ಉಪ ವಿಭಾಗ ), ಗೋಕರ್ಣ, ಕುಮಟಾದಲ್ಲಿ ರೈಲನ್ನು ನಿಲುಗಡೆ ಮಾಡಿದರೆ ಪ್ರಯಾಣಿಕರ ಸಂಖ್ಯೆಯೂ ಅಧಿಕವಾಗಲಿದೆ. ರೈಲ್ವೆ ಇಲಾಖೆ ಅಧಿಕಾರಿಗಳು ವೇಗ ತಗ್ಗಲಿದೆ ಎಂಬ ನೆಪವನ್ನು ಹೇಳದೇ ರೈಲು ನಿಲುಗಡೆಗೆ ಮಾಡುವ ಕುರಿತು ತೀರ್ಮಾನವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.
ಭಾರತೀಯ ರೈಲ್ವೆ ಸೀಮಿತ ನಿಲುಗಡೆಯೊಂದಿಗೆ ವಂದೇ ಭಾರತ್ ರೈಲುಗಳನ್ನು ಓಡಿಸುತ್ತಿದೆ. ಮಂಗಳೂರು-ಮಡಗಾಂವ್ ರೈಲು ಸಂಚಾರ ಡಿಸೆಂಬರ್ 30ರಂದು ಆರಂಭವಾಗಿದೆ. ಸದ್ಯ ಉಡುಪಿ, ಕಾರವಾರದಲ್ಲಿ ನಿಲುಗಡೆ ಇದೆ. ಮುಂದಿನ ದಿನಗಳಲ್ಲಿ ಬೇರೆ ನಿಲ್ದಾಣಗಳನ್ನು ಒದಗಿಸುವ ಕುರಿತು ರೈಲ್ವೆ ಇಲಾಖೆ ತೀರ್ಮಾನ ಕೈಗೊಳ್ಳಲಿದೆಯೇ? ಕಾದು ನೋಡಬೇಕಿದೆ.
ಕರ್ನಾಟಕದಲ್ಲಿ ಸದ್ಯ ಮೈಸೂರು-ಚೆನ್ನೈ, ಬೆಂಗಳೂರು-ಧಾರವಾಡ, ಯಶವಂತಪುರ-ಕಾಚಿಗುಡ, ಮಂಗಳೂರು-ಮಡಗಾಂವ್ ಮತ್ತು ಬೆಂಗಳೂರು-ಕೊಯಮತ್ತೂರು ನಡುವೆ ವಂದೇ ಭಾರತ್ ರೈಲುಗಳು ಸಂಚಾರ ನಡೆಸುತ್ತಿವೆ. ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲು ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಆದರೆ ದಿನಾಂಕ ನಿಗದಿಯಾಗಿಲ್ಲ.












Click it and Unblock the Notifications