ವಾರಾಂತ್ಯದಲ್ಲಿ ಚಿಕ್ಕಮಗಳೂರು ಪ್ರವಾಸಕ್ಕೆ ಮುನ್ನ ತಿಳಿಯಿರಿ
ಚಿಕ್ಕಮಗಳೂರು, ನವೆಂಬರ್ 06: ವಾರಾಂತ್ಯದಲ್ಲಿ ಚಿಕ್ಕಮಗಳೂರು ಪ್ರವಾಸ ಕೈಗೊಳ್ಳುವ ಮುನ್ನ ಪ್ರಮುಖವಾದ ಮಾಹಿತಿಯೊಂದಿದೆ. ನವೆಂಬರ್ 9 ರಿಂದ 11ರ ತನಕ ಚಿಕ್ಕಮಗಳೂರು ಪ್ರವಾಸವನ್ನು ಮುಂದೂಡಿಕೆ ಮಾಡುವುದು ಉತ್ತಮ. ಜಿಲ್ಲೆಯ ಕೆಲವು ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಿ ಜಿಲ್ಲಾಡಳಿತ ಆದೇಶವನ್ನು ಹೊರಡಿಸಿದೆ. ದತ್ತಮಾಲಾ ಅಭಿಯಾನದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಈ ಕ್ರಮವನ್ನು ಕೈಗೊಂಡಿದೆ.
ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಈ ಕುರಿತು ಆದೇಶವನ್ನು ಹೊರಡಿಸಿದ್ದಾರೆ. ಶ್ರೀರಾಮ ಸೇನೆಯು ದತ್ತಮಾಲಾ ಅಭಿಯಾನವನ್ನು ನಡೆಸುವ ಹಿನ್ನಲೆಯಲ್ಲಿ ನವೆಂಬರ್ 9 ರ ಬೆಳಗ್ಗೆ 6 ಗಂಟೆಯಿಂದ, ನವೆಂಬರ್ 11ರ ಬೆಳಗ್ಗೆ 6 ಗಂಟೆಯ ತನಕ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಭೇಟಿಯನ್ನು ನಿರ್ಬಂಧಿಸಲಾಗಿದೆ.

ಪ್ರವಾಸಿಗರ ಭೇಟಿಗೆ ನಿರ್ಬಂಧ: ಚಿಕ್ಕಮಗಳೂರು ಜಿಲ್ಲೆಯ ಪ್ರಮುಈ ಪ್ರವಾಸಿ ತಾಣವಾದ ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿಗೆ ಪ್ರವಾಸಿಗರ ಭೇಟಿಯನ್ನು ನವೆಂಬರ್ 9 ರಿಂದ 11ರ ತನಕ ನಿರ್ಬಂಧಿಸಲಾಗಿದೆ. ನವೆಂಬರ್ 10 ರಿಂದ ಚಿಕ್ಕಮಗಳೂರು ಮತ್ತು ಹೊರ ಜಿಲ್ಲೆಗಳಿಂದ ಸಾವಿರಾರು ಭಕ್ತರು ಜಿಲ್ಲೆಗೆ ಆಗಮಿಸಲಿದ್ದಾರೆ.
ದತ್ತಮಾಲಾ ಅಭಿಯಾನದ ಹಿನ್ನಲೆಯಲ್ಲಿ ವಾಹನಗಳ ಮೂಲಕ ಭಕ್ತರು ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ಭೇಟಿ ನೀಡಲಿದ್ದಾರೆ. ಬೆಟ್ಟದಲ್ಲಿ ರಸ್ತೆ ಕಿರಿದಾಗಿದ್ದು, ವಾಹನ ದಟ್ಟಣೆ, ಜನರ ದಟ್ಟಣೆ ಹೆಚ್ಚಾಗಲಿದೆ. ಆದ್ದರಿಂದ ಪ್ರವಾಸಿಗರ ಭೇಟಿಯನ್ನು ನಿರ್ಬಂಧಿಸಲಾಗಿದೆ.
ಜಿಲ್ಲಾಡಳಿತ ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿಗೆ ಮಾತ್ರ ಪ್ರವಾಸಿಗರ ಭೇಟಿ ನಿರ್ಬಂಧಿಸಿಲ್ಲ. ಸೀತಾಳಯ್ಯನಗಿರಿ, ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ, ಗಾಳಿಕೆರೆ ಮತ್ತು ಮಾಣಿಕ್ಯಧಾರಾ ತಾಣಗಳಿಗೆ ಸಹ ಪ್ರವೇಶ ಇರುವುದಿಲ್ಲ ಎಂದು ತಿಳಿಸಿದೆ.
ಆದರೆ ಶ್ರೀರಾಮ ಸೇನೆ ಮುಖಂಡರು, ಕಾರ್ಯಕರ್ತರು, ಸ್ಥಳೀಯ ಜನರು, ಈಗಾಗಲೇ ಹೋಮ್ ಸ್ಟೇ, ರೆಸಾರ್ಟ್ ಬುಕ್ ಮಾಡಿದವ ಪ್ರವೇಶಕ್ಕೆ ಅವಕಾಶವಿದೆ ಎಂದು ಜಿಲ್ಲಾಡಳಿತ ಹೇಳಿದೆ. ಸಾವಿರಾರು ಭಕ್ತರು ಆಗಮಿಸುವುದರಿಂದ ಜಿಲ್ಲೆಯ ಪ್ರವಾಸವನ್ನು ವಾರಾಂತ್ಯದಲ್ಲಿ ಮುಂದೂಡಿಕೆ ಮಾಡುವುದು ಉತ್ತಮ ಎಂದು ಸಲಹೆ ನೀಡಲಾಗಿದೆ.
ಆದೇಶದ ವಿವರ: ಸಾರ್ವಜನಿಕ ಪ್ರಕಟಣೆ. ಶ್ರೀರಾಮಸೇನೆ ಸಂಘಟನೆ ಚಿಕ್ಕಮಗಳೂರು ಇವರು ದಿನಾಂಕ 04/11/2024 ರಿಂದ 10/11/2024 ರವರೆಗೆ ದತ್ತಮಾಲಾ ಅಭಿಯಾನ ಹಮ್ಮಿಕೊಂಡಿದ್ದು, ಈ ಹಿನ್ನಲೆಯಲ್ಲಿ ದಿನಾಂಕ 10/11/2024 ರಂದು ಈ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ವಾಹನಗಳ ಮುಖಾಂತರ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆಗೆ ಆಗಮಿಸುವುದರಿಂದ ಸಂಸ್ಥೆಗೆ ತೆರಳುವ ರಸ್ತೆಯು ತುಂಬಾ ಕಿರಿದಾಗಿದ್ದು ಪ್ರಸಕ್ತ ವರ್ಷದಲ್ಲಿ ಸುರಿದ ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದು, ಭೂಕುಸಿತ ಉಂಟಾಗಿರುತ್ತದೆ.
ಇದರಿಂದ ವಾಹನ ದಟ್ಟಣೆ ಹಾಗೂ ಹೆಚ್ಚಿನ ಜನ ಸಂದಣಿಯಾಗಿ ಅನಾನುಕೂಲವಾಗುವ ಸಂಭವವಿರುತ್ತದೆ. ಆದ್ದರಿಂದ ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆ, ಗಾಳಿಕೆರೆ ಮತ್ತು ಮಾಣಿಕ್ಯಧಾರಾ ತಾಣಗಳಿಗೆ ಮತ್ತು ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆಗೆ ದತ್ತಮಾಲಾಧಾರಿಗಳು ಶ್ರೀರಾಮಸೇನಾ ಮುಖಂಡರು/ ಕಾರ್ಯಕರ್ತರು ಸುತ್ತ ಮುತ್ತಲಿನ ವ್ಯಾಪ್ತಿಯಲ್ಲಿ ಬರುವ ಸ್ಥಳೀಯರು ಹಾಗೂ ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡುವವರು ಮತ್ತು ಮೇಲ್ಕಂಡ ಸ್ಥಳಗಳಲ್ಲಿ ಈಗಾಗಲೇ ಹೋಮ್ ಸ್ಟೇ/ ರೆಸಾರ್ಟ್‌ಗಳನ್ನು ಬುಕಿಂಗ್ ಮಾಡಿಕೊಂಡವರುಗಳನ್ನು ಹೊರತು ಪಡಿಸಿ ಇತರೆ ಯಾವುದೇ ಪ್ರವಾಸಿಗರು/ ಯಾತ್ರಾರ್ಥಿಗಳು ಬರುವುದನ್ನು/ ಭೇಟಿ ನೀಡುವುದನ್ನು ದಿನಾಂಕ 09/11/2024ರ ಬೆಳಗ್ಗೆ 6 ರಿಂದ ದಿನಾಂಕ 11/11/2024ರ ಬೆಳಗ್ಗೆ 6 ಗಂಟೆ ವರೆಗೆ ನಿರ್ಭಂದಿಸಿದೆ.
ಲೋಕೋಪಯೋಗಿ ಇಲಾಖೆ ಚಿಕ್ಕಮಗಳೂರು ಇವರ ವರದಿ ಮೇರೆಗೆ ಅತ್ತಿಗುಂಡಿ ಭಾಗದಲ್ಲಿ ಅತಿಯಾದ ಮಳೆಯಿಂದ ಕವಿಕಲ್‌ಗಂಡಿ ಭಾಗದಲ್ಲಿ ರಸ್ತೆಯ ಭಾಗ ಕುಸಿದಿದ್ದು, ಬಾದಿತ ಸ್ಥಳದಲ್ಲಿ ರಸ್ತೆಯ ಅಗಲ ಕಡಿಮೆಯಿರುತ್ತದೆ. ಒಂದು ಬಾರಿಗೆ ಕೇವಲ ಒಂದೇ ವಾಹನ ಚಲಿಸಲು ಮಾತ್ರವೇ ಅವಕಾಶವಿರುವುದರಿಂದ ಉದ್ದ ಚಾಸ್ಸಿ ಇರುವ ವಾಹನಗಳ ಸಂಚಾರವು ಅಪಾಯಕಾರಿ ಆಗಿರುವ ಕಾರಣ ಕೈಮರ ಚೆಕ್‌ಪೋಸ್ಟ್‌ನಿಂದ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆಗೆ ತೆರಳುವ ರಸ್ತೆಯಲ್ಲಿ ಉದ್ದ ಚಾಸಿ ವಾಹನಗಳ ಸಂಚಾರವನ್ನು (ಎರಡು ಆಕ್ಸೆಲ್‌ಗಿಂತ ಹೆಚ್ಚಿನ ಆಕ್ಸೆಲ್‌ಗಳನ್ನು ಹೊಂದಿರುವ ಲಾರಿ ಮತ್ತು ಬಸ್ಸುಗಳು) ನಿರ್ಭಂದಿಸಲಾಗಿದೆ. ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ.












Click it and Unblock the Notifications