ಕಾವೇರಿ ನದಿ ನೀರು ಕಲುಷಿತಗೊಳ್ಳುತ್ತಿರುವುದು ಹೇಗೆ ಗೊತ್ತಾ?

ಮಡಿಕೇರಿ, ಜನವರಿ 11: ತಲಕಾವೇರಿಯಲ್ಲಿ ಹುಟ್ಟಿ ಹರಿಯುವ ಕಾವೇರಿ ನದಿ ಕೊಡಗಿನ ಗಡಿ ದಾಟಿ ಹರಿಯುವ ಮುನ್ನವೇ ಅಪವಿತ್ರಳಾಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಇದಕ್ಕೆ ಕಾರಣಗಳು ಅನೇಕ ಇದ್ದರೂ ಅಭಿವೃದ್ಧಿ ಹೊಂದುತ್ತಿರುವ ನದಿ ತಟದ ಪಟ್ಟಣಗಳ ತ್ಯಾಜ್ಯ ನೀರು ಯಾವುದೇ ಅಡೆ ತಡೆಯಿಲ್ಲದೆ ಕಾವೇರಿಯನ್ನು ಸೇರುತ್ತಿರುವುದು ಬಹುಮುಖ್ಯ ಕಾರಣ ಎನ್ನುವುದನ್ನು ತಳ್ಳಿಹಾಕಲಾಗದು.

ಕಾವೇರಿನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದಾಗ ಎಲ್ಲವನ್ನೂ ಒಡಲಲ್ಲಿ ಸೇರಿಸಿಕೊಂಡು ಹರಿಯುವಾಗ ಯಾವುದೂ ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಬೇಸಿಗೆ ಬರುತ್ತಿದ್ದಂತೆಯೇ ನೀರಿನ ಪ್ರಮಾಣ ಕಡಿಮೆಯಾದಾಗ ನದಿ ನೀರು ಕಲುಷಿತವಾಗುತ್ತಿರುವುದು ಅರಿವಿಗೆ ಬರುತ್ತದೆ. ಆದರೆ ಅನ್ಯ ಮಾರ್ಗವಿಲ್ಲದೆ ಅದನ್ನೇ ಬಳಸ ಬೇಕಾಗುತ್ತದೆ. ಆ ಮೂಲಕ ಸಂಕಷ್ಟವನ್ನು ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ. ಕಾವೇರಿ ನದಿಯ ಶುಚಿತ್ವ ಕಾಪಾಡಬೇಕಾದರೆ ಮೊದಲಿಗೆ ನದಿತಟದಲ್ಲಿರುವ ಪಟ್ಟಣಗಳ ಕೊಳಚೆ ನೀರು ನದಿಗೆ ಹರಿಯುವುದನ್ನು ತಡೆಯಬೇಕಾಗಿದೆ.

Cauvery River Water Contamination Issues in Karnataka A Growing Concern

ಹಾಗೆನೋಡಿದರೆ ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ಹರಿಯುವ ಕಾವೇರಿ ನದಿ ಜಿಲ್ಲೆಯ ಹಲವು ಪಟ್ಟಣಗಳನ್ನು ಹಾದು ಬರುತ್ತದೆ. ಹೀಗೆ ಬರುವಾಗ ನದಿ ತಟದಲ್ಲಿ ಹಲವು ಪಟ್ಟಣಗಳನ್ನು ದಾಟಿ ಬರುವಾಗ ಅಲ್ಲಿನ ಕಲ್ಮಶಗಳನ್ನು ತನ್ನೊಂದಿಗೆ ಹೊತ್ತು ಹರಿಯಬೇಕಾಗುತ್ತದೆ. ಮೊದಲೆಲ್ಲ ನದಿತಟದ ಪ್ರದೇಶಗಳು ಅಷ್ಟೊಂದು ಅಭಿವೃದ್ಧಿ ಹೊಂದಿರಲಿಲ್ಲ. ಜನವಸತಿ ಪ್ರದೇಶಗಳು ಕಡಿಮೆಯಿದ್ದವು ಹೀಗಾಗಿ ಕಾವೇರಿ ಶುದ್ಧಳಾಗಿದ್ದಳು. ಆದರೆ ಕಳೆದೊಂದು ದಶಕದಿಂದ ಕೊಡಗು ನಾಗಾಲೋಟದಲ್ಲಿ ಬೆಳೆಯುತ್ತಿದೆ. ಅದರ ಪರಿಣಾಮಗಳು ಇದೀಗ ಗೋಚರಿಸುತ್ತಿವೆ.

ನದಿಯನ್ನು ಸೇರುವ ತ್ಯಾಜ್ಯ ನೀರು

ಭಾಗಮಂಡಲ, ನಾಪೋಕ್ಲು, ಬೇತ್ರಿ, ಕೊಂಡಂಗೇರಿ, ನೆಲ್ಯಹುದಿಕೇರಿ, ಕುಶಾಲನಗರ ಹೀಗೆ ಹಲವು ಊರುಗಳನ್ನು ದಾಟಿ ಕಾವೇರಿ ಹರಿದು ಬರಬೇಕು. ಈ ಊರುಗಳು ಈಗ ನಗರಕ್ಕೆ ಕಡಿಮೆ ಇಲ್ಲದಂತೆ ಬೆಳೆಯುತ್ತಿವೆ. ಜನವಸತಿ ಹೆಚ್ಚಾಗಿವೆ. ಪರಿಣಾಮ ಪಟ್ಟಣದ ಬಹುತೇಕ ಕೊಳಚೆ ನೇರವಾಗಿ ನದಿಯತ್ತ ಹರಿಯುತ್ತಿದೆ. ಇದನ್ನು ಆಯಾ ಗ್ರಾಮಪಂಚಾಯಿತಿ, ಪಟ್ಟಣಪಂಚಾಯಿತಿಗಳು ತಡೆಯಬೇಕಾಗಿದೆ. ಆದರೆ ಅದು ಆದಂತೆ ಕಾಣಿಸುತ್ತಿಲ್ಲ. ಹೀಗಾಗಿಯೇ ಕಾವೇರಿ ನದಿ ಕಲುಷಿತವಾಗುತ್ತಿದೆ ಎನ್ನುವುದು ಪರಿಸರ ಪ್ರೇಮಿಗಳ ಆರೋಪವಾಗಿದೆ.

Cauvery River Water Contamination Issues in Karnataka A Growing Concern

ಇದೆಲ್ಲದರ ನಡುವೆ ನಾಪೋಕ್ಲು, ನೆಲ್ಯಹುದಿಕೇರಿ ಮತ್ತು ಕುಶಾಲನಗರ ಪಟ್ಟಣವು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಇಲ್ಲಿ ಜನವಸತಿ ಮಾತ್ರವಲ್ಲದೆ, ಹೋಟೆಲ್, ಮಾಂಸ ಮಾರಾಟ ಮಳಿಗೆಗಳು ಹೀಗೆ ಹತ್ತಾರು ವಹಿವಾಟುಗಳು ನಡೆಯುತ್ತಿದ್ದು, ಬಹುತೇಕ ಕಡೆಗಳಲ್ಲಿ ತ್ಯಾಜ್ಯವನ್ನೆಲ್ಲ ನದಿಗೆ ಸುರಿದು ಕೈತೊಳೆದು ಕೊಳ್ಳುವವರು ಇಲ್ಲದಿಲ್ಲ. ಅದರಲ್ಲೂ ನೆಲ್ಯಹುದಿಕೇರಿಯ ಮೀನು ಮಾರುಕಟ್ಟೆಯಿಂದ ತ್ಯಾಜ್ಯ ನೀರು ನೇರವಾಗಿ ನದಿಯನ್ನು ತಲುಪುತ್ತಿದೆ ಎಂಬ ಆರೋಪವೂ ಇಲ್ಲದಿಲ್ಲ.

ಕೊಡಗಿನಿಂದಲೇ ಸ್ವಚ್ಛತೆಗೆ ಆದ್ಯತೆ ನೀಡಲಿ

ಕೊಡಗಿನ ಹೆಬ್ಬಾಗಿಲು ಎಂದೇ ಕರೆಯುವ ಕುಶಾಲನಗರ ಪಟ್ಟಣ ದಿನದಿಂದ ಬೆಳೆಯುತ್ತಿದೆ. ಒಂದೆಡೆ ಹೊಸ ಬಡಾವಣೆಗಳು ಹುಟ್ಟಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಹೋಟೆಲ್, ಲಾಡ್ಜ್ ಸೇರಿದಂತೆ ಹಲವು ರೀತಿಯ ವಸತಿ ನಿಲಯಗಳು ನಿರ್ಮಾಣವಾಗುತ್ತಿವೆ. ಇಲ್ಲಿಂದ ಹೊರಬರುವ ಕೆಲವು ತ್ಯಾಜ್ಯ ಪ್ರತ್ಯಕ್ಷ, ಪರೋಕ್ಷವಾಗಿ ನದಿಯನ್ನೇ ಸೇರಬೇಕಾಗುತ್ತದೆ. ಅಷ್ಟೇ ಅಲ್ಲದೆ ಮಳೆ ಬಂದಾಗ ನೀರು ಎಲ್ಲ ತಾಜ್ಯವನ್ನು ತಂದು ನದಿಗೆ ಸೇರಿಸುತ್ತಿದೆ.

ನದಿ ಸ್ವಚ್ಚತೆ ಕುರಿತಂತೆ ಮಾತನಾಡುವವರು ಕೊಡಗಿನಿಂದಲೇ ಸ್ವಚ್ಛತೆಗೆ ಆದ್ಯತೆ ನೀಡಬೇಕಾಗಿದೆ. ಇಲ್ಲಿ ಕಲುಷಿತ, ತ್ಯಾಜ್ಯ ನೀರು ನದಿಯನ್ನು ಸೇರದಂತೆ ತಡೆಯುವ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಅಷ್ಟೇ ಅಲ್ಲದೆ ನದಿ ದಡದ ಪಟ್ಟಣಗಳ ಕಲುಷಿತ ನೀರು ನೇರವಾಗಿ ನದಿಗೆ ಸೇರುವುದನ್ನು ತಪ್ಪಿಸಲು ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಿದೆ. ಅದಕ್ಕಿಂತ ಹೆಚ್ಚಾಗಿ ಸಿಕ್ಕ ಸಿಕ್ಕ ತ್ಯಾಜ್ಯಗಳನ್ನು ನದಿಗೆ ತಂದು ಸುರಿಯುವವರ ವಿರುದ್ಧ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ಇನ್ನಾದರೂ ನದಿ ಸ್ವಚ್ಛತೆ ಕಾಪಾಡುತ್ತಾರಾ?

ಈಗಾಗಲೇ ಹಲವು ಬಾರಿ ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿಯಲ್ಲಿ ಸಂಗ್ರಹಗೊಂಡಿದ್ದ ಹಳೆ ಬಟ್ಟೆ ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ಹೊರತೆಗೆದು ಶುಚಿಗೊಳಿಸುವ ಕೆಲಸವನ್ನು ಪರಿಸರ ಪ್ರೇಮಿಗಳು ಮಾಡಿದ್ದಾರೆ. ಆದರೆ ನದಿಗೆ ತ್ಯಾಜ್ಯ ಸುರಿದು ಕೈತೊಳೆದುಕೊಳ್ಳುವವರು ಇರುವ ತನಕ ನದಿಯನ್ನು ಎಷ್ಟೇ ಶುಚಿಗೊಳಿಸಿದರೂ ಕಲುಷಿತವಾಗುತ್ತಲೇ ಇರುತ್ತದೆ ಎನ್ನುವುದನ್ನು ನಾವು ಒಪ್ಪಿಕೊಳ್ಳಬೇಕಾಗಿದೆ.

ಜನ ಹಿಂದಿನಿಂದಲೂ ಕಾವೇರಿ ನದಿಯನ್ನು ಪವಿತ್ರ ಎಂದು ನಂಬಿದ್ದಾರೆ. ಅದರಲ್ಲಿ ಸ್ನಾನ ಮಾಡಿದರೆ ಪಾಪಗಳು ಪರಿಹಾರವಾಗುತ್ತವೆ ಎಂದುಕೊಂಡಿದ್ದಾರೆ. ಆದರೆ ಕಾವೇರಿ ನದಿ ಮಳೆಗಾಲದಲ್ಲಿ ಎಲ್ಲ ಕೊಳೆಯನ್ನು ಪ್ರವಾಹದ ಮೂಲಕ ತೊಳೆದರೂ ಬೇಸಿಗೆ ಬರುತ್ತಿದ್ದಂತೆಯೇ ತಾನಾಗಿಯೇ ಅಪವಿತ್ರವಾಗುತ್ತಿದೆ ಎನ್ನುವುದನ್ನು ತಳ್ಳಿಹಾಕಲಾಗದು.

ಕಾವೇರಿ ನದಿ ನೀರಿನ ಶುದ್ಧತೆ ಕಾಪಾಡಿಕೊಳ್ಳುವುದು ನಮ್ಮ ಕೈನಲ್ಲಿದೆ. ಎಲ್ಲರೂ ತಮ್ಮ ವ್ಯಾಪ್ತಿಯಲ್ಲಿ ಶುಚಿತ್ವ ಕಾಪಾಡಿಕೊಂಡು ತ್ಯಾಜ್ಯ ನೀರು ನದಿಗೆ ಸೇರದಂತೆ ನೋಡಿಕೊಂಡರೆ ಅದು ನಾವು ಮಾಡುವ ಪುಣ್ಯದ ಕಾರ್ಯದಲ್ಲಿ ಒಂದಾಗುತ್ತದೆ. ಇವತ್ತು ಕಾವೇರಿ ನದಿ ನೀರನ್ನು ಕುಡಿಯಲು, ಸ್ನಾನಮಾಡಲು ಇನ್ನಿತರ ಕಾರ್ಯಗಳಿಗೆ ಬಳಸಿಕೊಳ್ಳುತ್ತಾರೆ.

ಹೀಗಿರುವಾಗ ನದಿ ನೀರೇ ಕಲುಷಿತವಾದರೆ ಇದರ ಬಳಕೆ ಮಾಡುವವರ ಗತಿ ಏನಾಗಬೇಕು? ಸಾಂಕ್ರಾಮಿಕ ಮತ್ತು ಚರ್ಮರೋಗಗಳು ಮನುಷ್ಯರನ್ನು ಕಾಡುತ್ತಿರುವ ಸಂದರ್ಭದಲ್ಲಿ ನಾವು ಬಳಸುವ ನೀರು ಕೂಡ ಕಲುಷಿತವಾದರೆ ಬದುಕುವುದಾದರೂ ಹೇಗೆ? ಈ ಬಗ್ಗೆ ಸಂಬಂಧಿಸಿದವರು ಎಚ್ಚೆತ್ತುಕೊಂಡು ಜನರಲ್ಲಿ ಅರಿವು ಮೂಡಿಸುವುದಲ್ಲದೆ, ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಇದು ಸಾಧ್ಯವಾಗುತ್ತಾ? ಕಾದು ನೋಡೋಣ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+