ಚಾಮರಾಜನಗರ ಜಿಲ್ಲೆಯಲ್ಲಿವೆ ಚಳಿಗಾಲಕ್ಕೆ ಸೂಕ್ತ ಪ್ರವಾಸಿ ತಾಣಗಳು, ತಲುಪುವ ಮಾರ್ಗಗಳ ವಿವರ ಇಲ್ಲಿದೆ
ಚಾಮರಾಜನಗರ, ಡಿಸೆಂಬರ್, 05: ಈ ಸಮಯದಲ್ಲಿ ಪ್ರವಾಸಿಗರಿಗೆ ಹೇಳಿ ಮಾಡಿಸಿದ ತಾಣಗಳು ಚಾಮರಾಜನಗರ ಜಿಲ್ಲೆಯಲ್ಲಿವೆ. ಚಳಿಗಾಲ ಬಂತೆಂದರೆ ಸಾಕು ಚಾಮರಾಜನಗರದಲ್ಲಿನ ಪ್ರವಾಸಿ ತಾಣಗಳು ಅಚ್ಚಹಸಿನಿಂದ ಕಂಗೊಳಿಸುತ್ತಿರುತ್ತವೆ. ಅದರಲ್ಲೂ ಡಿಸೆಂಬರ್‌ನಿಂದ ಫೆಬ್ರವರಿವರೆಗೂ ಹೆಚ್ಚು ಚಳಿ ಇರುವುದರಿಂದ, ಈ ಸಮಯದಲ್ಲಿ ಇಲ್ಲಿನ ಕೆಲವು ಪ್ರವಾಸಿ ತಾಣಗಳು ಪ್ರವಾಸಿಗರಿಗೆ ಅಚ್ಚುಮೆಚ್ಚಾಗಿಬಿಡುತ್ತವೆ.
ಚಳಿ ಅಂದರೆ ಸಾಕು ಸಾಮಾನ್ಯವಾಗಿ ಜನರು ಮನೆಗಳಲ್ಲಿಯೇ ಸಮಯ ಕಳೆಯುವುದನ್ನು ನಾನು ನೋಡಿದ್ದೇವೆ. ಆದರೆ ಇನ್ನು ಕೆಲವರು ಈ ಸಮಯವೇ ಸೂಕ್ತ ಎಂದು ಹೆಚ್ಚು ಮಂಜು ಬೀಳುವ ಪ್ರದೇಶಗಳಿಗೆ ಪ್ರವಾಸ ಕೈಗೊಳ್ಳುತ್ತಾರೆ. ಪ್ರಮುಖವಾಗಿ ಮಂಜು ಕವಿದ ವಾತಾವರಣವಿರುವ ಪ್ರವಾಸಿ ತಾಣಗಳಲ್ಲಿ ಪ್ರವಾಸ ಮಾಡಿದರೆ ಮನಸ್ಸಿಗೆ ಏನೋ ಒಂಥರಾ ನೆಮ್ಮದಿ. ಹಾಗೆಯೇ ಡಿಸೆಂಬರ್‌ನಿಂದ ಫೆಬ್ರವರಿವರೆಗೂ ಚಾಮರಾಜನಗರದಲ್ಲಿನ ಈ ಪ್ರವಾಸಿ ತಾಣಗಳು ಪ್ರವಾಸಿಗರಿಗೆ ಹಾಟ್‌ಸ್ಪಾಟ್ ಆಗಿವೆ. ಜಿಲ್ಲೆಯಲ್ಲಿ ಪ್ರಮುಖ ಪ್ರವಾಸಿ ತಾಣಗಳ ಸೊಬಗನ್ನು ಸವಿಯಲು ಪ್ರತಿನಿತ್ಯ ಸಾವಿರಾರು ಜನ ಆಗಮಿಸುತ್ತಲೇ ಇರುತ್ತಾರೆ. ಮಂಜು ಮುಚ್ಚಿದ ವಾತಾವರಣ ಇದ್ದರೂ ಕೂಡ ವಾಹನಗಳಲ್ಲಿ ಬಂದು ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿದು ಹೋಗುತ್ತಲೇ ಇರುತ್ತಾರೆ.
ಅಚ್ಚಹಸಿರಿನಿಂದ ಕಂಗೊಳಿಸುವ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಇದೀಗ ಎಲ್ಲಿ ನೋಡಿದರೂ ಮಂಜಿನ ಮಯವಾಗಿದೆ. ವಾಹನ ಸವಾರರಿಗೆ ಸ್ವಲ್ಪ ಮಟ್ಟಿಗೆ ತೊಂದರೆ ಆದರೂ ಕೂಡ ಈ ಮಂಜಿನ ದೃಶ್ಯವನ್ನು ನೋಡಲು ಮನಮೋಹಕವಾಗಿರುತ್ತದೆ. ಜಿಲ್ಲಾದ್ಯಂತ ಚುಮುಚುಮು ಚಳಿ ಹೆಚ್ಚಾಗಿದ್ದು, ಬೆಳಗ್ಗೆ 8ರಿಂದ 9 ಆದರೂ ಮಂಜು ಮುಸುಕಿದ ವಾತಾವರಣ ಇದ್ದೇ ಇರುತ್ತದೆ.

ಪ್ರತಿನಿತ್ಯ ನೆರೆಯುವ ಪ್ರವಾಸಿಗರ ದಂಡು
ಮಂಜಿನ ದೃಶ್ಯವನ್ನು ಸವಿಯಲು ಬೆಳಗಿನ ಜಾವ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಪ್ರವಾಸಿಗರು ಆಗಮಿಸುವುದನ್ನೂ ನೋಡಬಹುದಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಮುಂಜಾನೆ ಮಂಜಿನ ಸೊಬಗು ಮೇಳೈಸಿದೆ. ಬೆಳಗ್ಗೆ 9 ಗಂಟೆಯಾದರೂ ದಟ್ಟನೆಯ ಮಂಜು ಆವರಿಸಿರುತ್ತದೆ. ಈ ಸಂದರ್ಭದಲ್ಲಿ ಚಳಿಯ ಕಚಗುಳಿ ವಾತಾವರಣ ನಿರ್ಮಾಣವಾಗುತ್ತದೆ. ಎಲ್ಲಾ ಕಡೆ ಆವರಿಸಿದ ಮಂಜು ಜಿಲ್ಲೆಯ ಪುರಾಣ ಪ್ರಸಿದ್ಧ ಕ್ಷೇತ್ರವಾದ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟ ಹಾಗೂ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಸ್ವಾಮಿ ಬೆಟ್ಟದಲ್ಲಂತೂ ಹಸಿರಿಗೆ ಮಂಜಿನ ಹೊದಿಕೆ ಹೊದ್ದಂತೆ ಭಾಸವಾಗುತ್ತದೆ. ಬೆಳಗ್ಗೆ 9 ಗಂಟೆ ಆದರೂ ಮಂಜು ಮುಸುಕಿದ ವಾತಾವರಣ ಹಾಗೆಯೇ ಇರುತ್ತದೆ. ವಾಹನ ಸವಾರರು ಲೈಟ್‌ಗಳನ್ನು ಹಾಕಿಕೊಂಡೇ ವಾಹನಗಳನ್ನು ಚಲಾಯಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಮನಸಿಗೆ ಮಂಜು ಹಾಗೂ ಹಸಿರು ಮತ್ತಷ್ಟು ಇಂಪು ನೀಡುತ್ತಲೇ ಇರುತ್ತದೆ.

ಶ್ರೀ ಕೃಷ್ಣನನ್ನು ನೆನಪಿಸುವ ಕೆತ್ತನೆಗಳು
ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಬಂಡೀಪುರ ರಾಷ್ಟ್ರೀಯ ಉದ್ಯಾನದ ಅತಿ ಎತ್ತರದ ಶಿಖರವಾಗಿದೆ. ಮೈಸೂರು ಜಿಲ್ಲೆಯ ಗುಂಡ್ಲುಪೇಟೆ ಬಳಿ ಇರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟವು ವೇಣುಗೋಪಾಲಸ್ವಾಮಿ ದೇವಾಲಯ ಮತ್ತು ಹಚ್ಚ ಹಸಿರಿನಿಂದ ಕೂಡಿದ ನೈಸರ್ಗಿಕ ಪರಿಸರದಿಂದಾಗಿ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಲೇ ಇದೆ. 14ನೇ ಶತಮಾನದಲ್ಲಿ ಅಗಸ್ತ್ಯ ಋಷಿ ನಿರ್ಮಿಸಿದ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಭಗವಾನ್ ಕೃಷ್ಣ ನೃತ್ಯದ ಭಂಗಿಯಲ್ಲಿ ನಿಂತು ತನ್ನ ಕೈಯಲ್ಲಿ ಕೊಳಲು ನುಡಿಸುವ ವಿಗ್ರಹ ಇದೆ. ವಿಗ್ರಹದ ಹಿಂದಿನ ಫಲಕವು ಕೃಷ್ಣನ ಪತ್ನಿಯರಾದ ಸತ್ಯಭಾಮ, ರುಕ್ಮಿಣಿ ಮತ್ತು ನೆಚ್ಚಿನ ಪ್ರಾಣಿಯಾದ ಹಸು ಮತ್ತು ಗೋಪಾಲಕರ ಕೆತ್ತನೆಗಳನ್ನು ಒಳಗೊಂಡಿದೆ.

ಪ್ರವಾಸಿಗರಿಗೆ ತಂಗಲು ಇರುವ ಸೂಕ್ತ ವ್ಯವಸ್ಥೆ
ಈ ಮನಮೋಹಕ ದೃಶ್ಯವನ್ನು ಸವಿಯಲು ಪ್ರತಿನಿತ್ಯ ಪ್ರವಾಸಿಗರು ಕಿಕ್ಕಿರಿದು ಬರುತ್ತಲೇ ಇರುತ್ತಾರೆ. ಇಲ್ಲಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಬೆಂಗಳೂರಿನಿಂದ 220 ಕಿಲೋ ಮೀಟರ್ ಮತ್ತು ಮೈಸೂರಿನಿಂದ 76 ಕಿಲೋ ಮೀಟರ್ ದೂರದಲ್ಲಿದೆ. ಬೆಟ್ಟದಿಂದ 20 ಕಿಲೋ ಮೀಟರ್ ದೂರದಲ್ಲಿರುವ ಗುಂಡ್ಲುಪೆಟೆ ಪಟ್ಟಣದಲ್ಲಿ ಉಳಿಯಲು ವಸತಿ ಗೃಹಗಳಿವೆ. ಹಾಗೆಯೇ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ ನಡೆಸುವ ಬಂಡೀಪುರ ಸಫಾರಿ ಲಾಡ್ಜ್ ಗೋಪಾಲಸ್ವಾಮಿ ಬೆಟ್ಟದಿಂದ 16 ಕಿಲೋ ಮೀಟರ್ ದೂರದಲ್ಲಿದೆ. ಈ ಪ್ರದೇಶದಲ್ಲಿ ಹಲವು ಹೋಂ ಸ್ಟೇಗಳು ಮತ್ತು ರೆಸಾರ್ಟ್‌ಗಳು ಲಭ್ಯವಿದೆ. ಮೈಸೂರು ನಗರದಲ್ಲಿ ಹೆಚ್ಚಿನ ವಾಸ್ತವ್ಯದ ಆಯ್ಕೆಗಳು ಲಭ್ಯವಿದೆ ಎನ್ನುವ ಮಾಹಿತಿಯನ್ನು ಪ್ರವಾಸಿಗರಿಗೆ ನೀಡಲಾಗಿದೆ.

ಪ್ರವಾಸಿಗರಿಗೆ ಸಫಾರಿ ಮಾಡಲು ವಿವರ
ಇನ್ನು ಬಂಡೀಪುರ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಮೀಸಲು ಭಾರತದಲ್ಲಿ ಎರಡನೇ ಅತಿ ದೊಡ್ಡ ಹುಲಿ ಸಂರಕ್ಷಣಾ ಪ್ರದೇಶವಾಗಿದೆ. ಬಂಡೀಪುರದಲ್ಲಿ ಸಾಮಾನ್ಯವಾಗಿ ಹುಲಿಗಳು, ಕಾಡು ನಾಯಿ, ಕಾಡುಹಂದಿ, ಆನೆಗಳು, ಕರಡಿಗಳು, ಚಿರತೆ, ಜಿಂಕೆಗಳು, ಕಾಡೆಮ್ಮೆಗಳು ಸೇರಿದಂತೆ ವಿವಿಧ ರೀತಿಯ ಪ್ರಾಣಿಗಳ ದೃಶ್ಯವನ್ನು ಸವಿಯಬಹುದಾಗಿದೆ. ಅರಣ್ಯ ಇಲಾಖೆಯು ಪ್ರತಿದಿನ ಎರಡು ಬಾರಿ ಸಫಾರಿಯನ್ನು ನಡೆಸುತ್ತದೆ. ಗುಂಪುಗಳಲ್ಲಿ ಆಗಮಿಸುವ ಪ್ರವಾಸಿಗರು ಬಸ್ ಸಫಾರಿಯನ್ನು ಆಯ್ದುಕೊಳ್ಳಬಹುದಾಗಿದೆ. ಬೆಳಗ್ಗೆ 6 ರಿಂದ 9 ರವರೆಗೆ ಮತ್ತು ಮಧ್ಯಾಹ್ನ 3 ರಿಂದ 6 ಗಂಟೆಯ ವರೆಗೆ ಸಫಾರಿ ಮಾಡಬಹುದಾಗಿದೆ.

ಮಹದೇಶ್ವರ ಬೆಟ್ಟಕ್ಕಿರುವ ಮತ್ತೊಂದು ಹೆಸರೇನು?
ಮಲೆ ಮಹದೇಶ್ವರ ಬೆಟ್ಟ ಸಂತ ಮಹದೇಶ್ವರನ ವಾಸಸ್ಥಾನ ಮತ್ತು ಪ್ರಮುಖ ಪೂಜಾ ಕೇಂದ್ರವಾಗಿದ್ದು, ಇದು ಶಿವನಿಗೆ ಅರ್ಪಿತವಾಗಿದೆ ಎನ್ನುವ ಉಲ್ಲೇಖವಿದೆ. ಮಲೆ ಮಹದೇಶ್ವರ ಬೆಟ್ಟವನ್ನು "ಏಳು ಮಲೆ" ಅಂತಲೂ ಕರೆಯುತ್ತಾರೆ. ಮಲೆ ಮಹದೇಶ್ವರ ಬೆಟ್ಟದ ಶ್ರೇಣಿಯು ಕೊಂಗುಮಲೆ, ಜೇನುಮಲೆ, ಪ್ಯಾಚೆಮಲೆ, ಅನುಮಲೆ, ಕಾನುಮಲೆ, ಪೊನ್ನಾಚಿಮಲೆ ಮತ್ತು ಪಾವಲ ಮಲೆಗಳನ್ನು ಒಳಗೊಂಡಿದೆ. ಬೆಟ್ಟಗಳ ಮೇಲಿರುವ ಮಹದೇಶ್ವರ ದೇವಸ್ಥಾನವನ್ನು ಸ್ಥಳೀಯ ಕುರುಬ ಜಮೀನ್ದಾರ ಜುಂಜೆಗೌಡ ಎನ್ನುವವರು ನಿರ್ಮಿಸಿದ್ದಾರೆ ಎನ್ನುವ ಉಲ್ಲೇಖಗಳು ಇವೆ. ಬೆಟ್ಟದಲ್ಲಿರುವ ಶಿವಲಿಂಗವು ಸ್ವಯಂ ಉದ್ಭವವಾಗಿದೆ ಎಂಬುದು ಭಕ್ತರ ನಂಬಿಕೆ ಆಗಿದೆ.

ಬಿಳಿಗಿರಿ ರಂಗನ ಬೆಟ್ಟಕ್ಕೆ ತಲುಪುವುದು ಹೇಗೆ?
ಬಿಳಿಗಿರಿ ರಂಗನ ಬೆಟ್ಟ ಕರ್ನಾಟಕದ ಪ್ರಮುಖ ಗಿರಿಧಾಮಗಳಲ್ಲಿ ಒಂದಾಗಿದ್ದು, ಬೆಂಗಳೂರಿನಿಂದ ಇಲ್ಲಿಗೆ 175 ಕಿಲೋ ಮೀಟರ್ ಆಗುತ್ತದೆ. ಬಿಳಿಗಿರಿ ರಂಗನ ಬೆಟ್ಟ ಹುಲಿ ಸಂರಕ್ಷಣಾ ಮೀಸಲು ಪ್ರದೇಶ ಮತ್ತು ವನ್ಯಜೀವಿ ಅಭಯಾರಣ್ಯವಾಗಿದೆ. ಇನ್ನು ಹೊಗೆನಕಲ್ಲು ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಜಲಪಾತವಾಗಿದೆ. ಹಾಗೆಯೇ ಚಾಮರಾಜನಗರದಿಂದ 60 ಕಿಲೋ ಮೀಟರ್ ದೂರದಲ್ಲಿಯೇ ಭರಚುಕ್ಕಿ ಜಲಪಾತವಿದೆ. ಇದು ಕರ್ನಾಟಕದ ಅತ್ಯಂತ ಸುಂದರವಾದ ಜಲಪಾತಗಳಲ್ಲಿ ಒಂದಾಗಿದೆ ಎನ್ನುವ ಹೆಗ್ಗಳಿಕೆಯನ್ನೂ ಪಡೆದುಕೊಂಡಿದೆ. ಹೀಗೆ ಚಾಮರಾಜ ನಗರ ಜಿಲ್ಲೆಯಲ್ಲಿ ಪ್ರಮುಖ ಪ್ರವಾಸಿ ತಾಣಗಳನ್ನು ನೋಡಬಹುದಾಗಿದೆ. ಮತ್ತೇಕೆ ತಡ ಚಳಿಗಾಲಕ್ಕೆ ಸೂಕ್ತವಾಗಿರುವ ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ, ಪ್ರಕೃತಿಯ ಸೊಬಗನ್ನು ಸವಿಯಿರಿ.












Click it and Unblock the Notifications