ಪ್ರಯಾಣಿಕರೇ ಗಮನಿಸಿ; ಬೆಂಗಳೂರು-ಮುರುಡೇಶ್ವರ ರೈಲು ವೇಳಾಪಟ್ಟಿ ಬದಲು
ಬೆಂಗಳೂರು, ಸೆಪ್ಟೆಂಬರ್ 24; ರಾಜಧಾನಿ ಬೆಂಗಳೂರು ಮತ್ತು ಕರ್ನಾಟಕದ ಕರಾವಳಿ ಸಂಪರ್ಕಿಸುವ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಮುರುಡೇಶ್ವರ ರೈಲಿನ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ. ಸೆಪ್ಟೆಂಬರ್ 24ರಿಂದ ಜಾರಿಗೆ ಬರುವಂತೆ 35 ನಿಮಿಷ ಮುಂಚಿತವಾಗಿ ರೈಲು ಮುರುಡೇಶ್ವರ ತಲುಪಲಿದೆ.
ನೈಋತ್ಯ ರೈಲ್ವೆ ಈ ಕುರಿತು ಆದೇಶ ಹೊರಡಿಸಿದೆ. ಕೆಲವು ದಿನಗಳ ಹಿಂದೆ ರೈಲ್ವೆ ಇಲಾಖೆ ಬೆಂಗಳೂರು-ಮೈಸೂರು- ಮಂಗಳೂರು ರೈಲನ್ನು ಮುರುಡೇಶ್ವರ ತನಕ ವಿಸ್ತರಣೆ ಮಾಡಿತ್ತು. ಈ ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಪ್ರಯಾಣಿಕರು ರೈಲಿನ ವೇಳಾಪಟ್ಟಿ ಅವೈಜ್ಞಾನಿಕವಾಗಿದೆ ಎಂದು ಹೇಳಿದ್ದರು.

ಈ ಹಿನ್ನಲೆಯಲ್ಲಿ ನೈಋತ್ಯ ರೈಲ್ವೆ ಬೆಂಗಳೂರು-ಮುರುಡೇಶ್ವರ ನಡುವೆ ಸಂಚಾರ ನಡೆಸುವ ರೈಲು ನಂಬರ್ 16585 ವೇಳಾಪಟ್ಟಿಯನ್ನು ಬದಲಾವಣೆ ಮಾಡಿದೆ. ಬದಲಾದ ವೇಳಾಪಟ್ಟಿ ಸೆಪ್ಟೆಂಬರ್ 24ರಿಂದಲೇ ಜಾರಿಗೆ ಬರಲಿದೆ. ರೈಲು ಮಂಗಳೂರು ತಲುಪಿದ ಬಳಿಕ ನಿಧಾನವಾಗಿ ಸಾಗುತ್ತದೆ ಎಂಬುದು ಪ್ರಯಾಣಿಕರ ಆರೋಪವಾಗಿತ್ತು.
ಹೊಸ ವೇಳಾಪಟ್ಟಿ; ನೈಋತ್ಯ ರೈಲ್ವೆಯ ಮಾಹಿತಿ ಪ್ರಕಾರ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಮಂಗಳೂರು ನಡುವಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಸುರತ್ಕಲ್ ಮತ್ತು ಮುರುಡೇಶ್ವರ ನಡುವಿನ ವೇಳಾಪಟ್ಟಿಯನ್ನು ಮಾತ್ರ ಪರಿಷ್ಕರಣೆ ಮಾಡಲಾಗಿದೆ.
ರೈಲು ನಂಬರ್ 16585 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು-ಮುರುಡೇಶ್ವರ ಡೈಲಿ ಎಕ್ಸ್‌ಪ್ರೆಸ್ ರೈಲಿನ ವೇಗವನ್ನು 35 ನಿಮಿಷಗಳಷ್ಟು ಕಾಲ ಹೆಚ್ಚಿಸುವ ಸಲುವಾಗಿ ಸಮಯ ಪರಿಷ್ಕರಣೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪರಿಷ್ಕೃತ ವೇಳಾಪಟ್ಟಿಯಂತೆ ರೈಲು ಸುರತ್ಕಲ್‌ಗೆ 10.32ರ ಬದಲಾಗಿ 9.48ಕ್ಕೆ ಆಗಮಿಸಲಿದ್ದು, 9.50ಕ್ಕೆ ನಿರ್ಗಮಿಸಲಿದೆ. ಮುಲ್ಕಿಗೆ 10.44ರ ಬದಲು 10.06ಕ್ಕೆ ಆಗಮನ, 10.08ಕ್ಕೆ ನಿರ್ಗಮನ, ಉಡುಪಿಗೆ 11.18ರ ಬದಲು 10.40ಕ್ಕೆ ಆಗಮನ, 10.42ಕ್ಕೆ ನಿರ್ಗಮನ, ಬಾರ್ಕೂರ 11.38ರ ಬದಲು 10.56ಕ್ಕೆ ಆಗಮನ, 10.58ಕ್ಕೆ ನಿರ್ಗಮನ.
ಕುಂದಾಪುರಕ್ಕೆ 11.54ರ ಬದಲು 11.14ಕ್ಕೆ ಆಗಮನ, 11.16ಕ್ಕೆ ನಿರ್ಗಮನ. ಮೂಕಾಂಬಿಕಾ ರೋಡ್ ಬೈಂದೂರು 12.40ರ ಬದಲು 11.40ಕ್ಕೆ ಆಗಮನ, 11.42ಕ್ಕೆ ನಿರ್ಗಮನ, ಭಟ್ಕಳ 12.56ರ ಬದಲು 12 ಗಂಟೆಗೆ ಆಗಮನ, 12.02ಕ್ಕೆ ನಿರ್ಗಮನ. ಮುರುಡೇಶ್ವರ 1.35ರ ಬದಲು 12.55ಕ್ಕೆ ಆಗಮನ.
ಪ್ರತಿದಿನದ ಈ ಎಕ್ಸ್‌ಪ್ರೆಸ್ ರೈಲು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಹೊರಟು ಮಂಗಳೂರಿಗೆ 8.15ಕ್ಕೆ ಆಗಮಿಸುತ್ತದೆ. ಅಲ್ಲಿಂದ ಸುರತ್ಕಲ್‌ಗೆ ಬರುವಾಗ 11 ಗಂಟೆ ಆಗುತ್ತಿತ್ತು. ಈ ಮೂರು ಗಂಟೆಯ ವಿಳಂಬ ತಪ್ಪಿಸಿ, ಅವೈಜ್ಞಾನಿಕವಾಗಿರುವ ವೇಳಾಪಟ್ಟಿ ಬದಲಾಯಿಸಿ ಎಂದು ಪ್ರಯಾಣಿಕರು ಆಗ್ರಹಿಸಿದ್ದರು.
ಮಂಗಳೂರು ಸುರತ್ಕಲ್ ನಡುವಿನ ಅಂತರ ಸುಮಾರು 20 ಕಿ. ಮೀ. ಇದನ್ನು ಕ್ರಮಿಸಲು 3.30 ಗಂಟೆ ತೆಗೆದುಕೊಳ್ಳುವುದು ಏಕೆ?. ಈ ಅವೈಜ್ಞಾನಿಕ ವೇಳಾಪಟ್ಟಿಗೆ ಕಾರಣ ಏನು?. ವೇಳಾಪಟ್ಟಿ ಸರಿಪಡಿಸಿದರೆ ರೈಲನ್ನು ಗೋಕರ್ಣ, ಕಾರವಾರ ತನಕವೂ ವಿಸ್ತರಣೆ ಮಾಡಬಹುದು ಎಂದು ಪ್ರಯಾಣಿಕರು ಸಲಹೆ ನೀಡಿದ್ದರು.
ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲು ಮಂಗಳೂರು-ಕುಂದಾಪುರ ನಡುವೆ 2 ಗಂಟೆಯಲ್ಲಿ ಸಂಚಾರ ನಡೆಸುತ್ತಿದೆ. ಅಷ್ಟೇ ನಿಲುಗಡೆ ಇರುವ ಬೆಂಗಳೂರು-ಮುರುಡೇಶ್ವರ ರೈಲು 3 ಗಂಟೆ ಸಂಚಾರ ನಡೆಸುತ್ತದೆ. ವೇಳಾಪಟ್ಟಿ ಬದಲಿಸಿ ಪ್ರಯಾಣಿಕರು ಕಾಯುವುದನ್ನು ತಪ್ಪಿಸಿ ಎಂದು ರೈಲ್ವೆ ಇಲಾಖೆ ಮುಂದೆ ಬೇಡಿಕೆ ಇಡಲಾಗಿತ್ತು.
ಬೆಂಗಳೂರಿನಿಂದ ಹೊರಡುವ ಈ ರೈಲು ಮೈಸೂರು ಮೂಲಕ ಮಂಗಳೂರಿಗೆ ಸಾಗಿ ಅಲ್ಲಿಂದ ಮುರುಡೇಶ್ವರಕ್ಕೆ ಸಂಚಾರ ನಡೆಸುತ್ತದೆ. ರೈಲಿನ ಮೂಲಕ ಮೈಸೂರು, ಉಡುಪಿ, ಆನೆಗುಡ್ಡೆ, ಹಟ್ಟಿಯಂಗಡಿ, ಕೊಲ್ಲೂರು, ಈಡಗುಂಜಿ, ಗೋಕರ್ಣಕ್ಕೆ ಹಲವಾರು ಪ್ರಯಾಣಿಕರು ಸಂಚಾರ ನಡೆಸುತ್ತಾರೆ.












Click it and Unblock the Notifications