Vande Bharat Train; ಕಲಬುರಗಿಗೆ ವಂದೇ ಭಾರತ್ ರೈಲು, ದಿನಾಂಕ ನಿಗದಿ
ಬೆಂಗಳೂರು, ಮಾರ್ಚ್ 07: ಲೋಕಸಭೆ ಚುನಾವಣೆ ಹತ್ತಿರವಿರುವಾಗಲೇ ಕರ್ನಾಟಕಕ್ಕೆ ವಂದೇ ಭಾರತ್ ರೈಲನ್ನು ಕೊಡುಗೆಯಾಗಿ ನೀಡಲಾಗಿದೆ. ಮಾರ್ಚ್ 9ರಂದು ಕರ್ನಾಟಕದ ಹೊಸ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.
ಬೆಂಗಳೂರು-ಕಲಬುರಗಿಗೆ ನಡುವೆ ವಂದೇ ಭಾರತ್ ರೈಲು ಸಂಪರ್ಕ ಬೇಕು ಎನ್ನುವ ಬೇಡಿಕೆಯನ್ನು ಇಡಲಾಗಿತ್ತು. ಕಲಬುರಗಿ ಸಂಸದ ಡಾ ಉಮೇಶ್ ಜಾಧವ್ ಲೋಕಸಭೆ ಕಲಾಪದಲ್ಲಿ ಸಭಾಪತಿಗಳ ಮೂಲಕ ಈ ಕುರಿತು ರೈಲ್ವೆ ಸಚಿವರ ಗಮನವನ್ನು ಸೆಳೆದಿದ್ದರು.

ಈಗ ಬೆಂಗಳೂರು-ಕಲಬುರಗಿ ಸಂಪರ್ಕಿಸುವ ವಂದೇ ಭಾರತ್ ರೈಲು ಸಂಚಾರಕ್ಕೆ ಒಪ್ಪಿಗೆ ನೀಡಲಾಗಿದೆ. ಸದ್ಯದ ಮಾಹಿತಿ ಪ್ರಕಾರ ಮಾರ್ಚ್ 9ರಂದು ಈ ಹೊಸ ರೈಲು ಸೇವೆಗೆ ಚಾಲನೆ ಸಿಗಲಿದೆ. ಬೆಂಗಳೂರಿನಿಂದ ಹೊರಡುವ ರೈಲು ಮಹಾರಾಷ್ಟ್ರದ ಮೂಲಕ ಕಲಬುರಗಿ ತಲುಪಲಿದೆ.
ಮಾಹಿತಿ, ವಿವರ: Kalyana-Karnataka Railway Development ಎಂಬ ಟ್ವೀಟ್ ಖಾತೆಯಲ್ಲಿ ಗುರುವಾರ ಈ ಕುರಿತು ಮಾಹಿತಿ ನೀಡಲಾಗಿದೆ. ಕರ್ನಾಟಕದ ಹೊಸ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 9ರಂದು ಚಾಲನೆ ನೀಡಲಿದ್ದಾರೆ ಎಂದು ತಿಳಿಸಲಾಗಿದೆ. ಮಾರ್ಚ್ 12ರಿಂದ ರೈಲು ಸೇವೆ ಆರಂಭವಾಗಲಿದೆ.
ಬೆಂಗಳೂರು-ಕಲಬುರಗಿ ನಡುವಿನ ವಂದೇ ಭಾರತ್ ರೈಲಿಗೆ ಮಾರ್ಚ್ 9ರಂದು ಹಸಿರು ನಿಶಾನೆ ತೋರಿಸಲಾಗುತ್ತದೆ ಎಂದು ಮಾತ್ರ ಮಾಹಿತಿ ನೀಡಲಾಗಿದೆ. ಆದರೆ ಸಮಯ, ನಿಲ್ದಾಣಗಳ ಮಾಹಿತಿಯನ್ನು ನೀಡಿಲ್ಲ.
Many Congratulations to #Karnataka & #Kalaburagi.
— Kalyana-Karnataka Railway Development (@rlyhydka) March 7, 2024
New #VandeBharatExpress b/w #Bengaluru-#Kalaburagi will be flagged off on 12th March by @narendramodi Ji
Thank you @UmeshJadhav_BJP for your continuous follow up
Thank You @AshwiniVaishnaw @RailMinIndia @blsanthosh pic.twitter.com/BAJmToJVhv
ಕರ್ನಾಟಕ, ಮಹಾರಾಷ್ಟ್ರ ನಡುವೆ ಈ ರೈಲು ಸಂಚಾರ ನಡೆಸಲಿದೆ. ಆದರೆ ಈ ರೈಲು ಕರ್ನಾಟಕಕ್ಕಿಂತ ಮಹಾರಾಷ್ಟ್ರಕ್ಕೆ ಹೆಚ್ಚು ಉಪಯೋಗವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ನಿಲ್ದಾಣ, ವೇಳಾಪಟ್ಟಿ ಕುರಿತು ಅಂತಿಮ ಆದೇಶ ಪ್ರಕಟವಾದ ಬಳಿಕ ಹೆಚ್ಚಿನ ವಿವರ ತಿಳಿಯಲಿದೆ.
ಈ ಕುರಿತು ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ. "ನಮ್ಮ ಬೇಡಿಕೆಗೆ ಸ್ಪಂದಿಸಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ವಂದೇ ಭಾರತ್ ರೈಲಿಗೆ ಅನುಮೋದನೆ ನೀಡಿದ್ದು, ಪ್ರಧಾನಿಗಳು ಉದ್ಘಾಟಿಸುವ ವಿವಿಧ ಕಾರ್ಯಕ್ರಮಗಳ ಪಟ್ಟಿಯಲ್ಲಿ ವಂದೇ ಭಾರತ್ ರೈಲು ಸಹ ಸೇರಿದೆ. ಇತ್ತೀಚೆಗೆ ಕಲಬುರಗಿ-ಬೆಂಗಳೂರು ವಂದೇ ಭಾರತ್ ರೈಲು ಘೋಷಣೆಯಾಗಿತ್ತು" ಎಂದು ಹೇಳಿದ್ದಾರೆ.
ಡಿಸೆಂಬರ್‌ನಲ್ಲಿ ಲೋಕಸಭೆಯಲ್ಲಿ ಮಾತನಾಡಿದ್ದ ಸಂಸದ ಡಾ. ಉಮೇಶ್ ಜಾಧವ್ ಮುಂಬೈ-ಸೋಲಾಪುರ ನಡುವೆ ಸಂಚಾರ ನಡೆಸುವ ವಂದೇ ಭಾರತ್ ರೈಲನ್ನು ಕಲಬುರಗಿ ತನಕ ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸಿದ್ದರು. ಈ ವರ್ಷದ ಫೆಬ್ರವರಿಯಲ್ಲಿ ನರೇಂದ್ರ ಈ ರೈಲು ಸೇವೆಗೆ ಚಾಲನೆ ನೀಡಿದ್ದರು.
ಕಲಬುರಗಿ ಕಲ್ಯಾಣ ಕರ್ನಾಟಕ ಭಾಗದ 6 ಜಿಲ್ಲೆಗಳ ಕೇಂದ್ರ ಸ್ಥಾನವಾಗಿದೆ. ಮಹಾರಾಷ್ಟ್ರದಲ್ಲಿ ಸಂಚಾರ ನಡೆಸುವ ಮುಂಬೈ-ಸೋಲಾಪುರ ನಡುವಿನ ವಂದೇ ಭಾರತ್ ರೈಲನ್ನು ಕಲಬುರಗಿ ತನಕ ವಿಸ್ತರಣೆ ಮಾಡಿದರೆ ಈ ಭಾಗದ ಜನರ ಸಂಚಾರಕ್ಕೆ ಅನುಕೂಲವಾಗಲಿದೆ. ಅಲ್ಲದೇ ವ್ಯಾಪಾರ ಅಭಿವೃದ್ಧಿಗೆ ಮತ್ತು ಆರ್ಥಿಕ ಸುಧಾರಣೆಗೆ ಸಹಕಾರಿಯಾಗಲಿದೆ ಎಂದು ಸಂಸದರು ವಿವರಣೆ ನೀಡಿದ್ದರು.
ಸದ್ಯ ಕರ್ನಾಟಕದಲ್ಲಿ ಮೈಸೂರು-ಬೆಂಗಳೂರು-ಚೆನ್ನೈ, ಕೆಎಸ್ಆರ್ ಬೆಂಗಳೂರು-ಧಾರವಾಡ-ಹುಬ್ಬಳ್ಳಿ, ಬೆಂಗಳೂರು-ಕೊಯಮತ್ತೂರು, ಮಂಗಳೂರು-ಮಡಗಾಂವ್ ಮತ್ತು ಬೆಂಗಳೂರು-ಕಾಚಿಗುಡ ನಡುವೆ ವಂದೇ ಭಾರತ್ ರೈಲುಗಳು ಸಂಚಾರ ನಡೆಸುತ್ತಿವೆ. ಕರ್ನಾಟಕದಲ್ಲಿ ಹೊಸ ವಂದೇ ಭಾರತ್ ರೈಲುಗಳಿಗೆ ಬೇಡಿಕೆ ಇರುವ ಮಾರ್ಗದಲ್ಲಿ ಬೆಂಗಳೂರು-ಕಲಬುರಗಿ ಮಾರ್ಗ ಸಹ ಸೇರಿತ್ತು.












Click it and Unblock the Notifications