ಹುಬ್ಬಳ್ಳಿ-ಬೆಂಗಳೂರು ವಿಶೇಷ ರೈಲು ಸೇವೆ ಅಕ್ಟೋಬರ್ ತನಕ ವಿಸ್ತರಣೆ
ಬೆಂಗಳೂರು, ಜುಲೈ 24; ನೈಋತ್ಯ ರೈಲ್ವೆ ಉತ್ತರ ಕರ್ನಾಟಕ ಭಾಗದ ಜನರಿಗೆ ಸಿಹಿಸುದ್ದಿ ನೀಡಿದೆ. ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಹುಬ್ಬಳ್ಳಿ ಸಂಪರ್ಕಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ವಿಸ್ತರಣೆ ಮಾಡಿ ಆದೇಶ ಹೊಡಿಸಿದೆ.
ಸೋಮವಾರ ಈ ಕುರಿತು ನೈಋತ್ಯ ರೈಲ್ವೆ ಆದೇಶ ಹೊರಡಿಸಿದೆ. ಜುಲೈಗೆ ಅಂತ್ಯವಾಗಬೇಕಿದ್ದ ರೈಲುಗಳ ಸೇವೆ ವಿಸ್ತರಣೆ ಮಾಡಲಾಗಿದೆ. ಆದರೆ ರೈಲಿನ ವೇಳಾಪಟ್ಟಿ, ಬೋಗಿಗಳ ಸಂಯೋಜನೆ ಮತ್ತು ನಿಲುಗಡೆ ತಾಣಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೇಳಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ನಿಲ್ದಾಣಗಳ ನಡುವಿನ ನಿತ್ಯದ ವಿಶೇಷ ಎಕ್ಸ್‌ಪ್ರೆಸ್ ( ರೈಲು ಸಂಖ್ಯೆ 07339/40) ಸೇವೆಯನ್ನು ವಿಸ್ತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದೆ.
ಆದೇಶದ ವಿವರ; ಎಸ್‌ಎಸ್‌ಎಸ್ ಹುಬ್ಬಳ್ಳಿ- ಕೆಎಸ್ಆರ್ ಬೆಂಗಳೂರು ನಡುವೆ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲು (07339) ಸೇವೆಯನ್ನು ಜುಲೈ 28 ರಿಂದ ಸೆಪ್ಟೆಂಬರ್ 30ರ ತನಕ ವಿಸ್ತರಣೆ ಮಾಡಲಾಗಿದೆ. ಈ ಹಿಂದೆ ರೈಲು ಸೇವೆಯನ್ನು ಜುಲೈ 27ರ ತನಕ ಓಡಿಸಲು ತೀರ್ಮಾನಿಸಲಾಗಿತ್ತು.
ಕೆಎಸ್ಆರ್ ಬೆಂಗಳೂರು-ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ರೈಲು (07340) ಸೇವೆಯನ್ನು ಜುಲೈ 29 ರಿಂದ ಅಕ್ಟೋಬರ್ 1 ರ ತನಕ ವಿಸ್ತರಿಸಲಾಗಿದೆ. ಈ ಮೊದಲು ಬೆಂಗಳೂರಿನಿಂದ ಜುಲೈ 28 ರ ತನಕ ರೈಲು ಓಡಿಸಲು ತೀರ್ಮಾನಿಸಲಾಗಿತ್ತು.
ಸದ್ಯ ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ಮಂಗಳವಾರ ಹೊರತುಪಡಿಸಿ ಉಳಿದ ದಿನ ವಂದೇ ಭಾರತ್ ರೈಲು ಸಂಚಾರ ನಡೆಸುತ್ತದೆ. ಈ ಹಿನ್ನಲೆಯಲ್ಲಿ ಬೆಂಗಳೂರು-ಹುಬ್ಬಳ್ಳಿ ನಡುವಿನ ಸಾಮಾನ್ಯ ಎಕ್ಸ್‌ಪ್ರೆಸ್ ರೈಲಿನ ಸಂಚಾರ ಸ್ಥಗಿತಗೊಳಿಸಲಾಗುತ್ತದೆಯೇ? ಎಂಬ ಪ್ರಶ್ನೆ ಎದ್ದಿತ್ತು. ಆದರೆ ರೈಲು ಸೇವೆಯನ್ನು ಮುಂದುವರೆಸುವುದಾಗಿ ಇಲಾಖೆ ಹೇಳಿದೆ, ಈ ಕುರಿತು ಆದೇಶ ಹೊರಡಿಸಿದೆ.
ಯಶವಂತಪುರ-ಮುರ್ಡೇಶ್ವರ ರೈಲು ವಿಸ್ತರಣೆ; ಮತ್ತೊಂದು ಆದೇಶದಲ್ಲಿ ನೈಋತ್ಯ ರೈಲ್ವೆ ಬೆಂಗಳೂರಿನ ಯಶವಂತಪುರ-ಮುರ್ಡೇಶ್ವರ ಸಾಪ್ತಾಹಿಕ ವಿಶೇಷ ರೈಲುಗಳ ಸೇವೆಯ ಅವಧಿ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ಯಶವಂತಪುರ-ಮುರ್ಡೇಶ್ವರ ನಡುವೆ ಸಂಚರಿಸುವ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ (06563/ 06564) ರೈಲುಗಳ ಸೇವೆಯ ಅವಧಿಯನ್ನು ಪ್ರಯಾಣಿಕರ ಬೇಡಿಕೆ ಹಿನ್ನೆಲೆಯಲ್ಲಿ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದೆ.
ಈ ರೈಲುಗಳ ಸೇವೆ ವಿಸ್ತರಣೆ ಮಾಡಲಾಗಿದೆ. ಆದರೆ ವೇಳಾಪಟ್ಟಿ, ನಿಲ್ದಾಣ, ದರಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈ ರೈಲನ್ನು ಖಾಯಂಗೊಳಿಸಬೇಕು ಮತ್ತು ಪ್ರತಿದಿನ ಓಡಿಸಬೇಕು ಎಂಬ ರೈಲು ಪ್ರಯಾಣಿಕರ ಬೇಡಿಕೆಗೆ ಇಲಾಖೆ ಈ ಬಾರಿಯೂ ಸ್ಪಂದಿಸಿಲ್ಲ.
ಪ್ರತಿ ಶನಿವಾರ ಯಶವಂತಪುರ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 06563 ಯಶವಂತಪುರ-ಮುರ್ಡೇಶ್ವರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಆಗಸ್ಟ್ 5 ರಿಂದ 26ರ ವರೆಗೆ ವಿಸ್ತರಿಸಲಾಗುತ್ತಿದೆ. ಈ ಮೊದಲು ಜುಲೈ 29 ರವರೆಗೆ ರೈಲು ಚಲಿಸಲಿದೆ ಎಂದು ಸೂಚಿಸಲಾಗಿತ್ತು.
ಪ್ರತಿ ಭಾನುವಾರ ಮುರ್ಡೇಶ್ವರದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 06564 ಮುರ್ಡೇಶ್ವರ-ಯಶವಂತಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಆಗಸ್ಟ್ 6ರಿಂದ 27ರ ವರೆಗೆ ವಿಸ್ತರಿಸಲಾಗುತ್ತಿದೆ. ಈ ಮೊದಲು ಜುಲೈ 30ರ ತನಕ ರೈಲು ಚಲಿಸಲಿದೆ ಎಂದು ಆದೇಶಿಸಲಾಗಿತ್ತು.
ಕಳೆದ ತಿಂಗಳು ಭಾರತೀಯ ರೈಲ್ವೆ ಯಶವಂತಪುರ-ಮುರ್ಡೇಶ್ವರ ರೈಲು ಸಂಚಾರ ರದ್ದುಗೊಳಿಸಲಿದೆ ಎಂಬ ಸುದ್ದಿ ಹಬ್ಬಿತ್ತು. ಆಗ ರೈಲು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಬೆಂಗಳೂರು ಮತ್ತು ಕರಾವಳಿ ಸಂಪರ್ಕಿಸುವ ರೈಲನ್ನು ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸಿದ್ದರು. ಆಗ ಜುಲೈ ಅಂತ್ಯದ ತನಕ ರೈಲು ಸೇವೆ ವಿಸ್ತರಣೆ ಮಾಡಲಾಗಿತ್ತು. ಈಗ ಅದನ್ನು ಆಗಸ್ಟ್ ತನಕ ವಿಸ್ತರಣೆ ಮಾಡಲಾಗಿದೆ.












Click it and Unblock the Notifications