Vande Bharat; ಬೆಂಗಳೂರು-ಕಲಬುರಗಿ ರೈಲು ಬಗ್ಗೆ 4 ಬೇಡಿಕೆ
ಬೆಂಗಳೂರು, ಮಾರ್ಚ್ 21: ಪ್ರಯಾಣಿಕರ ಬಹುದಿನದ ಬೇಡಿಕೆಯಂತೆ ಬೆಂಗಳೂರು-ಕಲಬುರಗಿ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗಿದೆ. 5 ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಈ ರೈಲಿನ ಕುರಿತು ಈಗ ರೈಲ್ವೆ ಇಲಾಖೆಗೆ 4 ಬೇಡಿಕೆ ಸಲ್ಲಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 12ರಂದು ಬೆಂಗಳೂರು-ಕಲಬುರಗಿ ವಂದೇ ಭಾರತ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ್ದರು. ಮಾರ್ಚ್ 15ರಿಂದ ರೈಲು ಸಂಚಾರ ಆರಂಭವಾಗಿದೆ. 8 ಬೋಗಿಯ ಈ ರೈಲು ವಾರದಲ್ಲಿ 6 ದಿನಗಳ ಕಾಲ ಸಂಚಾರ ನಡೆಸಲಿದೆ.

ಬೆಂಗಳೂರು ನಗರದ ಬೈಯಪ್ಪನಹಳ್ಳಿಯ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಲಬುರಗಿ ನಡುವೆ ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿದೆ. ರೈಲು ನಂಬರ್ 22232 ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಲಬುರಗಿ ನಡುವೆ, ರೈಲು ನಂಬರ್ 22231 ಕಲಬುರಗಿ-ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಡುವೆ ಓಡಾಡುತ್ತಿದೆ.
4 ಬೇಡಿಕೆಗಳು ಏನು?; ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಲಬುರಗಿ ರೈಲಿನ ಕುರಿತು ರೈಲ್ವೆ ಇಲಾಖೆ ಬೇಡಿಕೆಗಳನ್ನು ಸಲ್ಲಿಸಲಾಗಿದೆ. ಮಾರ್ಚ್ 20ರ ಮಾಹಿತಿಯಂತೆ ಈ ರೈಲಿನ ಚೇರ್‌ಕಾರ್‌ನಲ್ಲಿ 478 ಸೀಟುಗಳ ಪೈಕಿ 230 ಸೀಟು ಬುಕ್ ಆಗಿತ್ತು. ಎಕ್ಸಿಕ್ಯುಟಿವ್ ಚೇರ್ ಕಾರ್‌ನಲ್ಲಿ 52 ಸೀಟುಗಳ ಪೈಕಿ 39 ಸೀಟುಗಳು ಬುಕ್ ಆಗಿದೆ. ಒಟ್ಟು 530 ಸೀಟುಗಳ ಪೈಕಿ 269 ಸೀಟುಗಳು ಭರ್ತಿ ಆಗಿವೆ.
ಈ ರೈಲಿನ ವೇಗವನ್ನು 1 ಗಂಟೆ 30 ನಿಮಿಷಕ್ಕೆ ಹೆಚ್ಚಿಸಬೇಕು. ಕಲಬುರಗಿಯಿಂದ ಬೆಳಗ್ಗೆ 6 ಗಂಟೆಗೆ ರೈಲು ಸಂಚಾರ ಆರಂಭಿಸಬೇಕು. ಯಾದಗಿರಿಯಲ್ಲಿ ರೈಲಿಗೆ ನಿಲುಗಡೆ ನೀಡಬೇಕು ಮತ್ತು ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬದಲು ಕಂಟೋನ್ಮೆಂಟ್ ತನಕ ರೈಲು ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಇಡಲಾಗಿದೆ.
ಕಲಬುರಗಿ-ಬೆಂಗಳೂರು ನಡುವಿನ ವಂದೇ ಭಾರತ್ ರೈಲು ಬೆಳಗ್ಗೆ 5.15ಕ್ಕೆ ಕಲಬುರಗಿಯಿಂದ ಹೊರಟು ಮಧ್ಯಾಹ್ನ 12.45ಕ್ಕೆ ಬೆಂಗಳೂರು ತಲುಪಲಿದೆ. ಮಧ್ಯಾಹ್ನ ಬೆಂಗಳೂರಿನಿಂದ ಹೊರಟು ರಾತ್ರಿ 11.30ಕ್ಕೆ ಕಲಬುರಗಿಗೆ ತಲುಪಲಿದೆ. ಕಲಬುರಗಿ, ವಾಡಿ, ರಾಯಚೂರು, ಮಂತ್ರಾಲಯ ರೋಡ್, ಗುಂತಕಲ್, ಅನಂತಪುರ, ಧರ್ಮಾವರಂ, ಯಲಹಂಕ ನಿಲ್ದಾಣದಲ್ಲಿ ನಿಲುಗಡೆ ಇದೆ.
ಆದರೆ ಬೆಂಗಳೂರು-ಕಲಬುರಗಿ ನಡುವಿನ ನೂತನ ರೈಲು ಯಾದಗಿರಿಯಲ್ಲಿ ಏಕೆ ನಿಲ್ಲುವುದಿಲ್ಲ? ಎಂದು ಜನರು ಪ್ರಶ್ನೆ ಮಾಡಿದ್ದರು. ಯಾದಗಿರಿ ಜಿಲ್ಲೆ ರಚನೆಯಾಗಿ 14 ವರ್ಷ ಕಳೆದಿದೆ. ಆದರೆ ಇಂದಿಗೂ ಸಹ 8 ರಿಂದ 10 ಪ್ರಮುಖ ರೈಲುಗಳು ನಿಲುಗಡೆಗೊಳ್ಳುತ್ತಿಲ್ಲ. ಈಗ ವಂದೇ ಭಾರತ್ ಸಹ ನಿಲುಗಡೆ ಇಲ್ಲ. ಈ ಕುರಿತು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿತ್ತು.
ಪ್ರಯಾಣಿಕರ ಇಟ್ಟಿರುವ ಬೇಡಿಕೆಗೆ ರೈಲ್ವೆ ಇಲಾಖೆ ಮನ್ನಣೆ ನೀಡಲಿದೆಯೇ?. ಬೆಂಗಳೂರು-ಕಲಬುರಗಿ ರೈಲಿನ ವೇಳಾಪಟ್ಟಿ, ನಿಲ್ದಾಣ ಬದಲಾವಣೆಯಾಗಲಿದೆಯೇ? ಎಂದು ಕಾದು ನೋಡಬೇಕಿದೆ.












Click it and Unblock the Notifications