ಬೆಳಗಾವಿ-ಗೋವಾ ಹೆದ್ದಾರಿ; ಅಪ್‌ಡೇಟ್ ಕೊಟ್ಟ ಸಚಿವರು
ಬೆಳಗಾವಿ, ಡಿಸೆಂಬರ್ 10; ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬವಾಗುತ್ತಿದೆ. ಇದರಿಂದಾಗಿ ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. 2024ರ ಮೇ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಕರ್ನಾಟಕದ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ವಿಧಾನ ಪರಿಷತ್‌ನಲ್ಲಿ ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕುರಿತು ಮಾಹಿತಿ ಕೊಟ್ಟಿದ್ದಾರೆ.

ಸಚಿವರ ಪ್ರಕಾರ ಖಾನಾಪುರ ತಾಲೂಕಿನ ಮೂಲಕ ಹೆದ್ದಾರಿ ಹಾದು ಹೋಗಬೇಕು. ಆದರೆ ತಾಲೂಕಿನಲ್ಲಿ ದಟ್ಟವಾದ ಅರಣ್ಯ ಪ್ರದೇಶ ಇರುವ ಕಾರಣ ಯೋಜನೆ ವಿಳಂಬವಾಗಿದೆ. ಮೀಸಲು ಅರಣ್ಯ ಪ್ರದೇಶದಲ್ಲಿ ಕಾಮಗಾರಿ ನಡೆಸಲು ಅರಣ್ಯ ಇಲಾಖೆಯ ನಿಯಮಗಳು ಅಡ್ಡಿಯಾಗಿವೆ.
4 ವರ್ಷದಿಂದ ಕಾಮಗಾರಿ; ಸುಮಾರು 52 ಕಿ. ಮೀ. ರಾಷ್ಟ್ರೀಯ ಹೆದ್ದಾರಿ ಯೋಜನೆ ಆರಂಭಗೊಂಡು ಸುಮಾರು ನಾಲ್ಕೂವರೆ ವರ್ಷಗಳು ಕಳೆದಿವೆ. ಪರಿಸರವಾದಿಗಳು ಕಾಡಿನಲ್ಲಿ ರಸ್ತೆ ನಿರ್ಮಾಣ ಮಾಡುವುದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದರು. ಕೋರ್ಟ್ ಯೋಜನೆಗೆ ತಡೆಯಾಜ್ಞೆ ನೀಡಿತ್ತು. ಕಳೆದ ವರ್ಷದ ನವೆಂಬರ್‌ನಲ್ಲಿ ತಡೆಯಾಜ್ಞೆ ತೆರವಾದರೂ ಸಹ ಗುತ್ತಿಗೆದಾರರ ಬದಲಾವಣೆಯಿಂದ ಯೋಜನೆ ಮತ್ತೆ ವಿಳಂಬವಾಯಿತು.
ಹೊಸ ಗುತ್ತಿಗೆದಾರರಿಗೆ ಯೋಜನೆಯನ್ನು ನೀಡಲಾಗಿದೆ, ಜೊತೆ ನಿರಂತರವಾಗಿ ಸಭೆಯನ್ನು ನಡೆಸುತ್ತಾ ಯೋಜನೆಯ ಕಾಮಗಾರಿಯ ಪ್ರಗತಿಯ ಕುರಿತು ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಯೋಜನೆಗೆ ಇದ್ದ ಹಣಕಾಸಿನ ಸಮಸ್ಯೆಯನ್ನು ಸಹ ಬಗೆಹರಿಸಲಾಗಿದೆ. 2024ರ ಮೇ ಒಳಗೆ ರಸ್ತೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಳಗಾವಿ-ಖಾನಾಪುರ ನಡುವಿನ ಸುಮಾರು 30 ಕಿ. ಮೀ. ಕಾಮಗಾರಿ ಪೂರ್ಣಗೊಂಡಿದೆ. ಬೆಳಗಾವಿ ಮತ್ತು ಗೋವಾ ನಡುವಿನ ಆರಾಮದಾಯಕ ಪ್ರಯಾಣಕ್ಕಾಗಿ ಈ ಯೋಜನೆ ಕೈಗೊಂಡಿದ್ದು, ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣಗೊಳ್ಳುವ ವಿಶ್ವಾಸವಿದೆ. ಈ ರಸ್ತೆ ಕಾಮಗಾರಿ ಕಾರಣ ಬೆಳಗಾವಿ-ಗೋವಾ ನಡುವೆ ನೇರವಾಗಿ ಸಂಚಾರ ನಡೆಸಬೇಕಾದ ವಾಹನಗಳು ಕಾರವಾರ, ಯಲ್ಲಾಪುರ ಮಾರ್ಗವಾಗಿ ಸುತ್ತಿ ಬಳಸಿ ಸಂಚಾರ ನಡೆಸಬೇಕಿದೆ.
ಪ್ರತಿನಿತ್ಯ ನೂರಾರು ವಾಹನಗಳು ಈ ಮಾರ್ಗದಲ್ಲಿ ಸಂಚಾರ ನಡೆಸುತ್ತವೆ. ಆದರೆ ನಾಲ್ಕೂವರೆ ವರ್ಷದಿಂದ ಕಾಮಗಾರಿ ವಿಳಂಬ ಮಾಡುತ್ತಿರುವುದಕ್ಕೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ಬದಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಿ ಎಂದು ಸಹ ವಾಹನ ಮಾಲೀಕರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆ ಮಾಡಿದ್ದಾರೆ.
ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾರಿ ಕರ್ನಾಟಕ-ಗೋವಾವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ. ಸುಮಾರು ನಾಲ್ಕೈದು ಕಿ. ಮೀ. ಕಾಮಗಾರಿ ಮಾತ್ರ ಬಾಕಿ ಇದೆ. ರಸ್ತೆ ವಿಸ್ತರಣೆ, ಕಾಂಕ್ರೀಟ್ ಹಾಕುವುದು ಸೇರಿದಂತೆ ವಿವಿಧ ಕೆಲಸಗಳು ಮೇ ತಿಂಗಳೊಳಗೆ ಪೂರ್ಣಗೊಳ್ಳಲಿವೆ ಎಂಬ ನಿರೀಕ್ಷೆ ಅಧಿಕಾರಿಗಳದ್ದು, ಬಳಿಕ ರಸ್ತೆ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ.
ಕರ್ನಾಟಕದಿಂದ ಗೋವಾಕ್ಕೆ ಹೋಗುವ ವಾಹನ ಸವಾರರು ಮಾತ್ರವಲ್ಲ, ಗೋವಾದಿಂದ ಕರ್ನಾಟಕಕ್ಕೆ ಆಗಮಿಸುವ ವಾಹನ ಸವಾರರು ಸಹ ರಸ್ತೆ ಕಾಮಗಾರಿ ಕಾರಣ ತೊಂದರೆ ಅನುಭವಿಸುತ್ತಿದ್ದಾರೆ. ಬೇಗ ಕಾಮಗಾರಿ ಪೂರ್ಣಗೊಳಿಸಿ ಇಲ್ಲವೇ ಒಂದು ಬದಿ ಸಂಚಾರಕ್ಕೆ ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ.












Click it and Unblock the Notifications