ಚಿಕ್ಲಿಹೊಳೆಯ ಅರ್ಧ ಚಂದ್ರಾಕೃತಿಯ ತೂಬಿನಲ್ಲಿ ಜಲನರ್ತನ

By: ಬಿಎಂ ಲವಕುಮಾರ್, ಮಡಿಕೇರಿ
Subscribe to Oneindia Kannada

ಕಳೆದ ಕೆಲವು ದಿನಗಳಿಂದ ಕುಂಭದ್ರೋಣ ಮಳೆ ಸುರಿಯುತ್ತಿರುವುದರಿಂದ ಕೊಡಗಿನ ಪುಟ್ಟ ಜಲಾಶಯವಾದ ಚಿಕ್ಲಿಹೊಳೆ ಭರ್ತಿಯಾಗಿದ್ದು, ಹೆಚ್ಚುವರಿ ನೀರು ಅರ್ಧ ಚಂದ್ರಾಕೃತಿಯ ತೂಬಿನಲ್ಲಿ ಹರಿದು ಹೋಗುತ್ತಿದೆ. ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಇದರ ರೌದ್ರತೆ ಇನ್ನಷ್ಟು ಹೆಚ್ಚಾಗಲಿದ್ದು ನೋಡುಗರ ಕಣ್ಮನ ಸೆಳೆಯಲಿದೆ.

ಹಾಗೆ ನೋಡಿದರೆ ಚಿಕ್ಲಿಹೊಳೆ ಜಲಾಶಯ ಇರುವುದು ಹೆಚ್ಚಿನವರಿಗೆ ಗೊತ್ತೇ ಇಲ್ಲ ಎನ್ನಬೇಕು. ಪುಟ್ಟದಾದ ಈ ಜಲಾಶಯದ ಸೊಬಗೇನಿದ್ದರೂ ಮುಂಗಾರು ಮಳೆ ಸುರಿದಾಗ ಮಾತ್ರ.

ಈ ಜಲಾಶಯವನ್ನು ಕುಶಾಲನಗರ ಹಾಗೂ ಪಿರಿಯಾಪಟ್ಟಣ ವ್ಯಾಪ್ತಿಯ ಸುಮಾರು 18 ಗ್ರಾಮಗಳ 862 ಹೆಕ್ಟೇರ್ ಪ್ರದೇಶಕ್ಕೆ ನೀರನ್ನು ಒಗದಿಸುವ ಉದ್ದೇಶದಿಂದ ಕಾವೇರಿ ನದಿಯ ಉಪನದಿಯಾದ ಚಿಕ್ಲಿಹೊಳೆಗೆ 1982ರಲ್ಲಿ ಸುಮಾರು 12 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದರೆ ಬ್ರಿಟಿಷರ ಕಾಲದಲ್ಲಿಯೇ ಕೃಷಿಗೆ ನೀರು ಹರಿಸಲು ಇಲ್ಲಿ ಹೊಳೆಗೆ ಅಡ್ಡಲಾಗಿ ಕಟ್ಟೆ ನಿರ್ಮಿಸಲಾಗಿತ್ತು. ಸ್ವಾತಂತ್ರ್ಯ ನಂತರ 1978ರಲ್ಲಿ ಶಂಕುಸ್ಥಾಪನೆ ನೆರವೇರಿಸಿ 1982ರಲ್ಲಿ ಜಲಾಶಯ ನಿರ್ಮಾಣವಾಯಿತು. [ಕೊಡಗಿನ ಹಾರಂಗಿ, ಚಿಕ್ಲಿಹೊಳೆ ಜಲಾಶಯಗಳಲ್ಲಿ ಜೀವಕಳೆ!]

Attractive Chiklihole reservoir near Kushalnagar in Coorg

ಒಂದೆಡೆ ಕಾಫಿ ತೋಟ, ಮತ್ತೊಂದೆಡೆ ಅರಣ್ಯ. ಇದರ ನಡುವಿನ ಪ್ರಕೃತಿಯ ಮಡಿಲಲ್ಲಿ ನಿರ್ಮಾಣಗೊಂಡ ಜಲಾಶಯ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿತ್ತು. ಅಷ್ಟೇ ಅಲ್ಲ ಈ ಜಲಾಶಯ ಸುತ್ತಮುತ್ತಲಿನ ವಿರುಪಾಕ್ಷಪುರ, ರಸೂಲ್‌ಪುರ, ರಂಗಸಮುದ್ರ, ಬೊಳ್ಳೂರು, ಬಸವನಹಳ್ಳಿ, ಚಿಕ್ಕಬೆಟ್ಟಗೇರಿ, ದೊಡ್ಡಬೆಟ್ಟಗೇರಿ, ಹೊಸಪಟ್ಟಣ ಮುಂತಾದ ಗ್ರಾಮಗಳ ರೈತರ ಸುಮಾರು ಎರಡು ಸಾವಿರ ಎಕರೆಗೂ ಹೆಚ್ಚು ಕೃಷಿ ಭೂಮಿಗೆ ನೀರನ್ನು ಒದಗಿಸುತ್ತಿತ್ತು. ಆ ಕಾಲದಲ್ಲಿ ಸಮೃದ್ಧ ಮಳೆಯಾಗುತ್ತಿದ್ದುದರಿಂದ ಮುಂಗಾರು ಪ್ರಾರಂಭವಾಗುತ್ತಿದ್ದಂತೆಯೇ ಜಲಾಶಯ ಭರ್ತಿಯಾಗಿ ರೈತರಿಗೆ ನೀರೊದಗಿಸುತ್ತಿತ್ತು. ಜಲಾಶಯದ ಪಕ್ಕದಲ್ಲಿಯೇ ಕಾವೇರಿ ನೀರಾವರಿ ನಿಗಮದ ಕಛೇರಿಯಿದ್ದುದರಿಂದ ಎಲ್ಲವೂ ಸಮರ್ಪಕವಾಗಿ ನಡೆಯುತ್ತಿತ್ತು.

ಸರಕಾರದ ನಿರ್ಲಕ್ಷ್ಯ : ಅವತ್ತು ಈ ಜಲಾಶಯದ ಬಗ್ಗೆ ಒಂದಷ್ಟು ಕಾಳಜಿ ವಹಿಸಿ ಅಭಿವೃದ್ಧಿಪಡಿಸಿದ್ದರೆ ಬಹುಶಃ ಇದೊಂದು ಸುಂದರ ಪ್ರವಾಸಿ ತಾಣವಾಗಿ ರೂಪುಗೊಳ್ಳುತ್ತಿತ್ತು. ಆದರೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜಲಾಶಯ ಅಭಿವೃದ್ಧಿ ಕಾಣುವ ಬದಲು ಅಧೋಗತಿಯತ್ತ ಸಾಗತೊಡಗಿತು. [ಕೊಡಗಿನಲ್ಲಿ ಕುಂಭದ್ರೋಣ ಮಳೆ, ಭಾಗಮಂಡಲ ಜಲಾವೃತ]

Attractive Chiklihole reservoir near Kushalnagar in Coorg

ಈ ಜಲಾಶಯವನ್ನು ಕಾಯಲು ಕಾವಲುಗಾರರನ್ನು ನೇಮಿಸದ ಕಾರಣ ಜಲಾಶಯದ ಉದ್ದಕ್ಕೂ ನಿರ್ಮಿಸಲಾಗಿದ್ದ ಕಬ್ಬಿಣದ ಸರಪಳಿಗಳು, ಯಂತ್ರೋಪಕರಣಗಳ ಬಿಡಿಭಾಗಗಳು ಕಳ್ಳರ ಪಾಲಾಗಿವೆ. ಅಷ್ಟೇ ಅಲ್ಲ ನಿರ್ಜನ ಪ್ರದೇಶವಾದುದರಿಂದ ಮೋಜು ಮಸ್ತಿ ಹಾಗೂ ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಾಡಾಗುತ್ತಿದೆ. ಹೀಗಾಗಿ ದೂರದಿಂದ ಬರುವ ಪ್ರವಾಸಿಗರು ಮುಜುಗರಕ್ಕೊಳಗಾಗುವಂತಹ ಸನ್ನಿವೇಶ ನಿರ್ಮಾಣವಾಗಿದೆ.

ಜಲಾಶಯದ ಹೂಳನ್ನು ಸಮರ್ಪಕವಾಗಿ ತೆಗೆಯದ ಕಾರಣ ಹೆಚ್ಚು ನೀರು ಶೇಖರಣೆಯಾಗುತ್ತಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ. ಈ ಜಲಾಶಯದಲ್ಲಿ ದೇವಾಲಯವೊಂದು ಮುಳುಗಡೆಯಾಗಿದ್ದು, ಬೇಸಿಗೆ ಬರುತ್ತಿದ್ದಂತೆಯೇ ನೀರು ಕಡಿಮೆಯಾದಾಗ ದೇವಾಲಯ ಕಾಣಸಿಗುತ್ತದೆ. [ಭಾರೀ ಮಳೆ, ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಮುಳುಗಡೆ]

Attractive Chiklihole reservoir near Kushalnagar in Coorg

ಕಣ್ಣಿಗೆ ಸೊಬಗು: ಈ ಜಲಾಶಯದಲ್ಲಿ ಇರುವುದು ಒಂದೇ ಕ್ರೆಸ್ಟ್‌ಗೇಟ್ ಜಲಾಶಯದ ಗರಿಷ್ಠ ಮಟ್ಟಕ್ಕಿಂತ ಹೆಚ್ಚಿನ ನೀರು ತುಂಬಿದ ಸಂದರ್ಭ ಅದು ತಾನಾಗಿಯೇ ಹರಿದು ಹೋಗಲು ಅನುಕೂಲವಾಗುವಂತೆ ಜಲಾಶಯದ ಒಂದು ಬದಿಯಲ್ಲಿ ವೃತ್ತಾಕಾರದ ತೂಬನ್ನು ಮಾಡಿದ್ದಾರೆ. ಇದರ ಮೂಲಕ ನೀರು ವೃತ್ತಾಕಾರವಾಗಿ ಧುಮುಕುತ್ತಾ ತೂಬಿನ ಮೂಲಕ ಹರಿದು ಹೋಗುವ ದೃಶ್ಯವನ್ನು ನೋಡುವುದೇ ಕಣ್ಣಿಗೊಂದು ಹಬ್ಬವಾಗಿ ಬಿಡುತ್ತದೆ.

ಮಡಿಕೇರಿಯಿಂದ ಸುಮಾರು 26 ಕಿ.ಮೀ. ದೂರದಲ್ಲಿರುವ ಚಿಕ್ಲಿಹೊಳೆ ಜಲಾಶಯಕ್ಕೆ ಯಾವುದೇ ಬಸ್ ಸೌಲಭ್ಯವಿಲ್ಲ. ಹಾಗಾಗಿ ಸ್ವಂತ ವಾಹನಗಳಲ್ಲಿ ಅಥವಾ ಮಡಿಕೇರಿಯಿಂದ ಸುಂಟಿಕೊಪ್ಪದವರೆಗೆ ಬಸ್‌ನಲ್ಲಿ ತೆರಳಿ ಅಲ್ಲಿಂದ ಕಂಬಿಬಾಣೆಗೆ ಆಟೋ ಅಥವಾ ಜೀಪಿನಲ್ಲಿ ತೆರಳಬಹುದು. ಎರಡು ಗುಡ್ಡದ ನಡುವೆ ಹರಿಯುತ್ತಿದ್ದ ಚಿಕ್ಲಿಹೊಳೆಗೆ ಅಡ್ಡಲಾಗಿ ಕಟ್ಟೆಯನ್ನು ಕಟ್ಟಿ ಜಲಾಶಯವನ್ನು ನಿರ್ಮಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chiklihole reservoir built over Chiklihole river near Kushalnagar in Coorg district is beautiful place but neglected one. During monsoon it is wonderful sight to see water flowing in semi circular structure. Karnataka government can convert this into beautiful tourism spot.
Please Wait while comments are loading...