Ashada 2024: ಮೈಸೂರಿನ ಚಾಮುಂಡಿಬೆಟ್ಟದಲ್ಲೀಗ ಆಷಾಢ ಸಂಭ್ರಮ..ಭಕ್ತರೇ ಗಮನಿಸಿ!
ಮೈಸೂರು, ಜುಲೈ 10: ನಿಸರ್ಗ ಅದರ ಪಾಡಿಗೆ ಅದು ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುತ್ತದೆ. ಇದೀಗ ಮಳೆಗಾಲವಾಗಿರುವ ಕಾರಣದಿಂದ ಪ್ರಕೃತಿಯ ಚೆಲುವಿನ ನೋಟ ನಮ್ಮೆಲ್ಲರ ಕಣ್ತುಂಬಿಸುತ್ತಿದೆ. ಎಲ್ಲೆಡೆ ಹಸಿರಿನಿಂದ ಕಂಗೊಳಿಸುತ್ತಿರುವ ಸುಂದರ ಪ್ರಾಕೃತಿಕ ನೋಟ ಮೈಮನವನ್ನು ಹಗುರವಾಗಿಸುತ್ತಿದೆ. ಇದೆಲ್ಲದರ ನಡುವೆ ಮೈಸೂರು ನಗರಕ್ಕೆ ಕಳಸಪ್ರಾಯದಂತಿರುವ ಚಾಮುಂಡಿಬೆಟ್ಟ ಆಷಾಢಕ್ಕೆ ತೆರೆದುಕೊಂಡಿದ್ದು, ಹಸಿರು ಸೀರೆಯುಟ್ಟ ಷೋಡಷಿಯಂತೆ ಕಂಗೊಳಿಸುತ್ತಿದೆ.
ಅದೇನೋ ಗೊತ್ತಿಲ್ಲ ಆಷಾಢದ ದಿನಗಳಲ್ಲಿ ಚಾಮುಂಡಿಬೆಟ್ಟಕ್ಕೆ ತೆರಳುವುದೇ ಒಂಥರಾ ಖುಷಿಕೊಡುತ್ತದೆ. ಇಲ್ಲಿನ ಆಹ್ಲಾದಕರ ಪರಿಸರದಲ್ಲಿ ಅಡ್ಡಾಡುವುದು ಎಲ್ಲಿಲ್ಲದ ಮಜಾ ಎನಿಸುತ್ತದೆ. ಅದರಲ್ಲೂ ಮುಂಜಾನೆಯ ಮಂಜಿನಲ್ಲಿ ಒಬ್ಬರಿಗೊಬ್ಬರು ಕಾಣದಷ್ಟು ದಟ್ಟ ಮಂಜಿನಲ್ಲಿ ಹೆಜ್ಜೆ ಹಾಕುತ್ತಾ ಹೋದರೆ ಸ್ವರ್ಗವೇ ಧರೆಗಿಳಿದ ಅನುಭವವಾಗುತ್ತದೆ. ಬಹುಶಃ ಇಂತಹ ಅನುಭವ ಚಾಮುಂಡಿಬೆಟ್ಟ ಹೊರತುಪಡಿಸಿದಂತೆ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ.

ಮೈಸೂರು ನಗರಕ್ಕೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ಕಾಂಕ್ರಿಟ್ ಕಾಡಿನ ನಡುವೆ ಹಸಿರು ಹೊದ್ದು ನಿಂತಿರುವ ಚಾಮುಂಡಿಬೆಟ್ಟ ಆಕರ್ಷಿಸುತ್ತದೆ. ಅದರಲ್ಲೂ ಮುಂಗಾರು ಮಳೆಯಲ್ಲಿ ಮಿಂದು ಆಷಾಢದ ತಂಗಾಳಿಯಲ್ಲಿ ತಲೆದೂಗುವಂತೆ ಭಾಸವಾಗುವ ಈ ಬೆಟ್ಟ ಹಸಿರುರಾಶಿಯಿಂದ ಆಕರ್ಷಿಸುತ್ತದೆ. ಇದರ ನಡುವೆ ಬೆಟ್ಟದ ನಡುವಿನ ಮೆಟ್ಟಿಲನ್ನೇರುವುದು ಅಥವಾ ಬೆಟ್ಟದಲ್ಲಿರುವ ರಸ್ತೆಯಲ್ಲಿ ಸಾಗುವುದು, ಅಲ್ಲಿಂದ ನಿಂತು ನಿಸರ್ಗದ ನೋಟವನ್ನು ವೀಕ್ಷಿಸುವುದು ರೋಮಾಂಚನಕಾರಿಯಾಗಿರುತ್ತದೆ.
ಚಾಮುಂಡೇಶ್ವರಿಯ ದರ್ಶನದಿಂದ ಜೀವನ ಪಾವನ
ಈ ಬಾರಿ ಆಷಾಢಕ್ಕೆ ವರುಣನ ಆಗಮನ ಎದ್ದು ಕಾಣಿಸುತ್ತಿದೆ. ಆಷಾಢ ಆರಂಭವಾದಲ್ಲಿಂದ ಚಾಮುಂಡಿಬೆಟ್ಟಕ್ಕೆ ಮೋಡ ಮುಸುಕಿನ ತೆರೆ ಎಳೆದಿರುವ ವರುಣ ಆಗೊಮ್ಮೆ ಈಗೊಮ್ಮೆ ಜಿಟಿ ಜಿಟಿ ಮಳೆ ಸುರಿಸುತ್ತಿದ್ದಾನೆ. ಸಾಮಾನ್ಯವಾಗಿ ಆಷಾಢದಲ್ಲಿ ಇಂತಹದ್ದೇ ವಾತಾವರಣವಿರುತ್ತದೆ. ಕಳೆದ ಬಾರಿ ಮುಂಗಾರು ಕೈಕೊಟ್ಟ ಕಾರಣ ಆಷಾಢದ ಆ ವಾತಾವರಣ ನಿರ್ಮಾಣವಾಗಿರಲಿಲ್ಲ. ಆದರೆ ಈ ಬಾರಿ ಆಷಾಢಕ್ಕೆ ವರುಣನೂ ಎಂಟ್ರಿ ಕೊಟ್ಟಿರುವುದು ಎದ್ದು ಕಾಣಿಸುತ್ತಿದೆ.
ಆಷಾಢದ ದಿನಗಳಲ್ಲಿ ಮೆಟ್ಟಿಲೇರಿ ಚಾಮುಂಡೇಶ್ವರಿಯನ್ನು ದರ್ಶನ ಮಾಡಿದರೆ ಜೀವನ ಪಾವನವಾಗುತ್ತದೆ ಎಂಬ ನಂಬಿಕೆಯೂ ಇದೆ. ಚಾಮುಂಡಿಬೆಟ್ಟದಲ್ಲಿ ಆಷಾಢದ ಎಲ್ಲ ದಿನಗಳಲ್ಲಿಯೂ ಚಾಮುಂಡೇಶ್ವರಿಗೆ ಪೂಜಾ ಕೈಂಕರ್ಯಗಳು ನಡೆಯುತ್ತವೆಯಾದರೂ ಶುಕ್ರವಾರ ಶುಭವಾಗಿರುವುದರಿಂದ ಅಂದು ಅಮ್ಮನವರಿಗೆ ವಿಶೇಷ ಪೂಜಾ ಕೈಂಕರ್ಯ, ಅಲಂಕಾರಗಳು ನೆರವೇರಲಿವೆ. ಈ ದಿನ ಚಾಮುಂಡೇಶ್ವರಿಯ ದರ್ಶನ ಮಾಡಿದರೆ ಇಷ್ಟಾರ್ಥಗಳು ಪ್ರಾಪ್ತಿಯಾಗುತ್ತವೆ ಎಂಬ ನಂಬಿಕೆಯಿದೆ. ಹೀಗಾಗಿ ಅಂದು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಚಾಮುಂಡಿಬೆಟ್ಟದಲ್ಲಿ ನೆರೆದು ತಾಯಿಯ ದರ್ಶನ ಪಡೆಯುತ್ತಾರೆ.

ನಾಲ್ಕು ಶುಭ ಶುಕ್ರವಾರದೊಂದಿಗೆ ವರ್ಧಂತಿ
ಈ ಬಾರಿ ಜುಲೈ 12, ಜುಲೈ 19, ಜುಲೈ 26ರಂದು ಕ್ರಮವಾಗಿ ಮೊದಲನೇ, ಎರಡನೇ ಹಾಗೂ ಮೂರನೇ ಆಷಾಢ ಶುಕ್ರವಾರ ಬಂದಿದೆ. ಇದರ ಜತೆಗೆ ಜುಲೈ 27ರಂದು (ಶನಿವಾರ) ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ನಡೆಯಲಿದೆ. ಆ.2ರಂದು ಕೊನೆಯ ಆಷಾಢ ಶುಕ್ರವಾರವಾಗಿರಲಿದೆ. ಹೀಗಾಗಿ ಭಕ್ತರು ಚಾಮುಂಡಿಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯನ್ನು ತಳ್ಳಿ ಹಾಕುವಂತಿಲ್ಲ.
ಹಾಗೆನೋಡಿದರೆ ಆಷಾಢದ ದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿರುತ್ತದೆಯಾದರೂ ಉಳಿದ ದಿನಗಳಲ್ಲಿಯೂ ಪ್ರವಾಸಿಗರು ಸೇರಿದಂತೆ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಮೈಸೂರಿನ ಸ್ಥಳೀಯರು ಪ್ರತಿದಿನವೂ ಮೆಟ್ಟಿಲೇರಿ ಅಥವಾ ಬಸ್ಸಿನಲ್ಲಿ ಚಾಮುಂಡಿಬೆಟ್ಟಕ್ಕೆ ಆಗಮಿಸಿ ಪೂಜಾ ಕೈಂಕರ್ಯವನ್ನು ನೆರವೇರಿಸಿಕೊಂಡು ತೆರಳಿದರೆ ಪಾದದ ಬಳಿ ಮೇಕೆ ಕುರಿಗಳನ್ನು ಬಲಿ ನೀಡಿ ಪರ ಮಾಡುವ ಕಾರ್ಯವೂ ನಡೆಯುತ್ತಿರುತ್ತದೆ.
ಆಷಾಢ ಚಾಮುಂಡೇಶ್ವರಿಯ ಜನ್ಮ ಮಾಸ
ಆಷಾಢ ಮಾಸ ಚಾಮುಂಡೇಶ್ವರಿಯ ಜನುಮ ಮಾಸದ ಸಂಭ್ರಮದ ಕಾಲವಾಗಿದ್ದು, ಈ ಕಾಲದಲ್ಲಿ ತಾಯಿ ಚಾಮುಂಡೇಶ್ವರಿ ತನ್ನನ್ನು ನೋಡಲು ಬರುವ ಭಕ್ತರನ್ನು ಆಶೀರ್ವದಿಸಲು ನಿಂತಂತೆ ಗೋಚರವಾಗುತ್ತದೆ. ಜತೆಗೆ ಎಲ್ಲೆಲ್ಲೂ ಚಾಮುಂಡೇಶ್ವರಿಯ ಸ್ಮರಣೆ ನಡೆಯುತ್ತದೆ. ಚಾಮುಂಡೇಶ್ವರಿಯ ದರ್ಶನ ಪಡೆಯಲು ಬರುವ ಭಕ್ತರಿಗೆ ದಾನಿಗಳಿಂದ ಅನ್ನ ಸಂತರ್ಪಣೆಯೂ ನಡೆಯುತ್ತದೆ.

ಇದೆಲ್ಲದರ ನಡುವೆ ಚಾಮುಂಡಿಬೆಟ್ಟಕ್ಕೆ ಮೆಟ್ಟಿಲೇರಿ ತೆರಳುವ ಭಕ್ತರಿಗೆ ಸುಂದರ ನಿಸರ್ಗ ಮೈಪುಳಕಗೊಳಿಸುತ್ತಿದ್ದು, ಮೆಟ್ಟಿಲೇರುವಾಗಿನ ಆಯಾಸವನ್ನೆಲ್ಲ ಸುತ್ತಲಿನ ಹಸಿರ ಚೆಲುವು ತಣಿಸುತ್ತಿದೆ. ಕಣ್ಣು ಹಾಯಿಸಿದುದ್ದಕ್ಕೂ ನಿಸರ್ಗದ ಥಳಕು ದೈಹಿಕ ಆಯಾಸವನ್ನು ಹೊಡೆದೊಡಿಸಿ ಉಲ್ಲಾಸ ತುಂಬುತ್ತಿದೆ. ಬೆಟ್ಟವೇರುತ್ತಾ ಹೋದಂತೆ ಅಲ್ಲಿಂದ ಕಾಣಸಿಗುವ ಮೈಸೂರು ನಗರದ ನೋಟ ಕಣ್ಣಿಗೆ ಹಿತನೀಡುತ್ತದೆ. ಕೆಲಸ, ಓಡಾಟ ಹೀಗೆ ಒತ್ತಡದ ಬದುಕನ್ನು ಸವೆಸುವವರು ಆಷಾಢದ ದಿನಗಳಲ್ಲಿ ಚಾಮುಂಡಿಬೆಟ್ಟಕ್ಕೆ ಬಂದು ಹೋದರೆ ಮೈಮನ ಹಗುರವಾಗಿ ನೆಮ್ಮದಿ ಸಿಗುವುದರಲ್ಲಿ ಎರಡು ಮಾತಿಲ್ಲ.
ಚಾಮುಂಡಿ ಬೆಟ್ಟಕ್ಕೆ ಬರುವವರೇ ಗಮನಿಸಿ
ಸುಂದರ ನಿಸರ್ಗದ ಚಾಮುಂಡಿಬೆಟ್ಟದ ಪರಿಸರವನ್ನು ಉಳಿಸಿಕೊಳ್ಳುವಲ್ಲಿ ಇಲ್ಲಿಗೆ ಬರುವ ಪ್ರತಿಯೊಬ್ಬ ಪ್ರವಾಸಿಗ ಅಥವಾ ಭಕ್ತರ ಪಾತ್ರವಿದೆ. ಹೀಗಾಗಿ ಕೆಲವೊಂದು ವಿಚಾರಗಳನ್ನು ಅರಿತು ಅದರಂತೆ ಇಲ್ಲಿ ನಡೆದುಕೊಂಡರೆ ತುಂಬಾ ಒಳ್ಳೆಯದು. ಅದು ಏನೆಂದರೆ ಚಾಮುಂಡಿಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದ್ದು, ಇದನ್ನು ಕಟ್ಟುನಿಟ್ಟಾಗಿ ಪಾಲಿಸಿ. ಬೆಟ್ಟಕ್ಕೆ ಬರುವವರು ಪ್ಲಾಸ್ಟಿಕ್ ನ್ನು ತರಲೇಬೇಡಿ, ಅದಕ್ಕಿಂತ ಹೆಚ್ಚಾಗಿ ಇದು ಮೋಜಿನ ತಾಣವಲ್ಲ ಹೀಗಾಗಿ ಮೋಜು ಮಸ್ತಿ ಮಾಡುವ ಭ್ರಮೆಯಲ್ಲಿ ಖಂಡಿತಾ ಬರಬೇಡಿ.
ಇಲ್ಲಿನ ಬಂಡೆಕಲ್ಲುಗಳ ಮೇಲೆ ನಿಂತು ಹುಚ್ಚಾಟ ಆಡುವುದು, ಸೆಲ್ಪಿಗಾಗಿ ಕಾಡಿನ ನಡುವಿನ ಬಂಡೆಕಲ್ಲುಗಳನ್ನೇರುವುದು, ಕಾಡಿನೊಳಗೆ ಎಲ್ಲೆಂದರಲ್ಲಿ ಅಲೆದಾಡುವುದನ್ನು ಮಾಡಬೇಡಿ, ಕಸವನ್ನು ಇಲ್ಲಿರುವ ಬುಟ್ಟಿಯಲ್ಲಿಯೇ ಎಸೆಯಿರಿ. ಜೋರಾಗಿ ಕಿರುಚುವುದು, ಅಸಹ್ಯವಾಗಿ ವರ್ತಿಸುವುದು.. ಮುಂತಾದ ವರ್ತನೆಗಳನ್ನು ಮಾಡಬೇಡಿ.. ನೆನಪಿರಲಿ ಇದು ದೈವಶ್ರದ್ಧಾ ತಾಣ ಹೀಗಾಗಿ ಒಂದೊಳ್ಳೆಯ ಮನಸ್ಸಿನಿಂದಲೇ ಬನ್ನಿ... ನಿಮಗೆ ಒಳ್ಳೆಯದಾಗಲಿ..












Click it and Unblock the Notifications