ಮೈಸೂರಿಗೆ 50 ಹೊಸ ಕೆಎಸ್ಆರ್‌ಟಿಸಿ ಬಸ್ ನೀಡಿದ ಸರ್ಕಾರ
ಮೈಸೂರು, ಜೂನ್ 02: ಮೈಸೂರು ನಗರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ನಗರ ಸಾರಿಗೆ ಸೇವೆಯನ್ನು ನೀಡುತ್ತಿದೆ. ಈ ಸೇವೆಗೆ ಅನುಕೂಲವಾಗಲು ರಾಜ್ಯ ಸರ್ಕಾರ 50 ಹೊಸ ಬಸ್‌ಗಳನ್ನು ನೀಡಿದೆ.
ನಗರದ ಹಲವು ಮಾರ್ಗಗಳಲ್ಲಿ ಸಂಚಾರ ನಡೆಸುವ ಕೆಎಸ್ಆರ್‌ಟಿಸಿ ನಗರ ಸಾರಿಗೆ ಬಸ್‌ಗಳು ಹಳೆಯದಾಗಿವೆ. ಕೆಎಸ್ಆರ್‌ಟಿಸಿ ನಿಯಮದಂತೆ ಬಸ್‌ಗಳನ್ನು ಬದಲಾವಣೆ ಮಾಡಬೇಕಿದೆ. ಆದ್ದರಿಂದ ಹೊಸ ಬಸ್ ಮಂಜೂರು ಮಾಡಲಾಗಿದೆ.

ಮಹಿಳೆಯರ ಉಚಿತ ಬಸ್ ಪ್ರಯಾಣ 'ಶಕ್ತಿ' ಯೋಜನೆ ಆರಂಭವಾದ ಬಳಿಕ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಅಧಿಕವಾಗುತ್ತಿದೆ. ಆದ್ದರಿಂದ ಹಳೆಯ ಬಸ್‌ಗಳನ್ನು ಸ್ಕ್ರಾಪ್ ಮಾಡಿ, ಆ ಮಾರ್ಗದಲ್ಲಿ ಹೊಸ ಬಸ್‌ಗಳನ್ನು ಓಡಿಸಲಾಗುತ್ತದೆ. ಇದಕ್ಕಾಗಿ 50 ಬಸ್‌ಗಳನ್ನು ಮಂಜೂರು ಮಾಡಲಾಗಿದೆ.
ಕಡಿಮೆ ಬಸ್‌ಗಳಿವೆ ಎಂಬ ಆರೋಪ: ಮೈಸೂರು ನಗರದಲ್ಲಿ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್‌ಗಳಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಈಗ ಹಳೆಯ ಬಸ್‌ಗಳನ್ನು ಸ್ಕ್ರಾಪ್ ಮಾಡಿದರೆ ಮತ್ತಷ್ಟು ಬಸ್‌ಗಳ ಕೊರತೆ ಉಂಟಾಗುತ್ತಿತ್ತು. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ತವರು ನಗರಕ್ಕೆ 50 ಹೊಸ ಬಸ್‌ಗಳನ್ನು ಮಂಜೂರು ಮಾಡಿಸಿದ್ದಾರೆ.
ಹಂತ-ಹಂತವಾಗಿ 5 ದಿನಗಳಿಂದ ಹೊಸ ಬಸ್‌ಗಳು ಮೈಸೂರು ನಗರಕ್ಕೆ ಆಗಮಿಸಿ ವಿಭಾಗೀಯ ಕಛೇರಿಯನ್ನು ಸೇರಿಕೊಳ್ಳುತ್ತಿವೆ. ಪ್ರಯಾಣಿಕರ ಸಂಚಾರಕ್ಕೆ ಬಸ್‌ಗಳು ಸಿದ್ಧವಾಗಿದ್ದು, ಹೊಸ ಬಸ್‌ಗಳು ಕೆಲವೇ ದಿನಗಳಲ್ಲಿ ರಸ್ತೆಗೆ ಇಳಿಯಲಿವೆ.
ಆರು ತಿಂಗಳ ಹಿಂದೆ ಟಾಟಾ ಕಂಪನಿಯ 5 ಬಸ್‌ಗಳನ್ನು ಮೈಸೂರು ನಗರದಲ್ಲಿ ಓಡಿಸಲಾಗಿತ್ತು. ಈ ಬಸ್‌ಗಳ ಕಾರ್ಯಕ್ಷಮತೆ, ಪ್ರಯಾಣಿಕರ ಸಂಖ್ಯೆ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ನಡೆಸಿದ ಬಳಿಕ ಹೊಸ ಬಸ್‌ಗಳನ್ನು ತರಿಸಲಾಗಿದೆ.
ಬಿಳಿ ಮತ್ತು ಆಕಾಶ ನೀಲಿ ಬಣ್ಣದ ಬಸ್‌ಗಳು ಇದಾಗಿದ್ದು, ನಗರ ಮತ್ತು ಗ್ರಾಮೀಣ ಭಾಗದಲ್ಲಿ ಸಂಚಾರ ನಡೆಸುತ್ತವೆ. ಗ್ರಾಮಾಂತರ ಭಾಗದಲ್ಲಿ 2+3 ಆಸನ ಇರುವ ಬಸ್, ನಗರದಲ್ಲಿ 2+2 ಆಸನ ಇರುವ ಬಸ್‌ಗಳನ್ನು ಓಡಿಸಲಾಗುತ್ತದೆ.
ಪ್ರಯಾಣಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಕೆಲವು ಮಾರ್ಪಾಡುಗಳನ್ನು ಮಾಡಿ ಕೆಲವೇ ದಿನಗಳಲ್ಲಿ ಹೊಸ ಬಸ್‌ಗಳ ಸಂಚಾರವನ್ನು ಆರಂಭಿಸಲಾಗುತ್ತದೆ. ಜೂನ್ ತಿಂಗಳ ಅಂತ್ಯದಲ್ಲಿ ನಗರ ಸಾರಿಗೆ ಸೇವೆಗಾಗಿ ಇನ್ನಷ್ಟು ಬಸ್‌ಗಳು ಮೈಸೂರು ನಗರಕ್ಕೆ ಆಗಮಿಸಲಿವೆ.
ಈ ಹೊಸ ಬಸ್‌ಗಳಲ್ಲಿ ಎಲೆಕ್ಟ್ರಾನಿಕ್ ಬೋರ್ಡ್‌ಗಳು ಇರುವುದಿಲ್ಲ. ಕೈ ಬರಹದಲ್ಲೇ ಬರೆದ ಮಾರ್ಗ ಸಂಖ್ಯೆ, ಅಕ್ಷರಗಳು ಇರುತ್ತವೆ. ಎಲೆಕ್ಟ್ರಾನಿಕ್ ಬೋರ್ಡ್‌ಗಳು ಆಗಾಗ ಕೆಟ್ಟು ಜನರ ಆಕ್ರೋಶಕ್ಕೆ ಗುರಿಯಾಗುವುದು ತಪ್ಪಿಸಲು ಹಳೆಯ ಬೋರ್ಡ್‌ಗಳ ಮಾದರಿಯನ್ನು ಅನುಸರಿಸಲಾಗುತ್ತಿದೆ.
ಯಾವ ಮಾರ್ಗದ ಹಳೆ ಬಸ್‌ಗಳನ್ನು ಸ್ಕ್ರಾಪ್ ಮಾಡಿ ಹೊಸ ಬಸ್‌ಗಳನ್ನು ಪರಿಚಯಿಸಬೇಕು?. ಯಾವ ಹೊಸ ಮಾರ್ಗದಲ್ಲಿ ಹೊಸ ಬಸ್‌ಗಳನ್ನು ಓಡಿಸಬೇಕು ಎಂದು ವಿಭಾಗೀಯ ಕಛೇರಿ ತೀರ್ಮಾನ ಮಾಡಿ ಬಸ್ ಸಂಚಾರವನ್ನು ಆರಂಭಿಸಲಿದೆ.












Click it and Unblock the Notifications