ಕೊಡಚಾದ್ರಿ : ನಿನ್ನೆ-ಇಂದು-ನಾಳೆ?
ಪ್ರವಾಸಿಗರ ಸ್ವರ್ಗ, ಪಶ್ಚಿಮ ಘಟ್ಟಗಳ ಹಿರಿಯಣ್ಣ ಕೊಡಚಾದ್ರಿ ಅಪಾಯದಂಚಿನಲ್ಲಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ, ಇಲ್ಲಿನ ಸೊಬಗು-ಸಂಭ್ರಮ-ಪುಳಕಗಳು ಮುಂದಿನ ದಿನಗಳಲ್ಲಿ ಇಲ್ಲವಾಗಬಹುದು!
- ಫೋಟೊ-ಬರಹ : ಆರ್.ಶರ್ಮಾ, ತಲವಾಟ
ಪಶ್ಚಿಮ ಘಟ್ಟಗಳು ಚಾರಣಿಗರ ಪುಣ್ಯ ಕ್ಷೇತ್ರ. ಚಾರಣಿಗರ ಮನತಣಿಸುವಷ್ಟು ಹೇರಳ ಸ್ಥಳಗಳನ್ನು ಹೊಂದಿರುವ ಪಶ್ಚಿಮ ಘಟ್ಟಗಳು ಒಂದೆಡೆ ಮರಕಡಿವವರಿಂದ ವಿನಾಶದತ್ತ ಸರಿಯುತ್ತಿದ್ದರೆ, ಮತ್ತೊಂದೆಡೆ ಮಣ್ಣು ಸವಕಳಿಯಿಂದ ಭೂಕುಸಿತದ ಭೀತಿಯನ್ನು ಎದುರಿಸುತ್ತಿದೆ. ಅವುಗಳಲ್ಲಿ ಹೆಚ್ಚು ಹಾನಿಗೊಳಗಾಗುವುದು ಪ್ರವಾಸಿ ತಾಣಗಳು. ಪ್ರಸ್ತುತ ಭೂ ಸವಕಳಿಯಿಂದ ಅಪಾಯದತ್ತ ಸರಿಯುತ್ತಿರುವ ಪರ್ವತ ಶ್ರೇಣಿಗಳಲ್ಲಿ ಪ್ರಥಮ ಸ್ಥಾನ ಕೊಡಚಾದ್ರಿಗೆ ದೊರಕುತ್ತಿದೆ.
ಕೊಡಚಾದ್ರಿಯನ್ನು ಪಶ್ಚಿಮ ಘಟ್ಟಗಳ ಹಿರಿಯಣ್ಣ ಎನ್ನಬಹುದು. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಗಡಿಯಂಚಿನ ಪ್ರವಾಸಿ ತಾಣ. ಇದು ಸಮುದ್ರ ಮಟ್ಟದಿಂದ 5000 ಅಡಿ ಎತ್ತರದಲ್ಲಿದ್ದು ಕರ್ನಾಟಕದಲ್ಲಿ ಮುಳ್ಳಯ್ಯನಗಿರಿ ಬೆಟ್ಟವನ್ನು ಹೊರತುಪಡಿಸಿದರೆ ಕೊಡಚಾದ್ರಿಯೇ ಅತ್ಯಂತ ಎತ್ತರದ ಪರ್ವತ ಶ್ರೇಣಿ. ಸೂರ್ಯಾಸ್ತ ಮತ್ತು ಸೂರ್ಯೋದಯದ ದೃಶ್ಯಗಳನ್ನು ಒಂದೇ ಜಾಗದಿಂದ ವೀಕ್ಷಿಸಬಹುದು ಎಂಬುದು ಇಲ್ಲಿಯ ಹೆಗ್ಗಳಿಕೆ.
ಸೊಬಗಿಗೆ ಇನ್ನೊಂದು ಹೆಸರು :
3600 ವರ್ಷಗಳ ಹಿಂದೆ ಶಂಕರಾಚಾರ್ಯರು ಇಲ್ಲಿಗೆ ಆಗಮಿಸಿದ್ದರು ಎನ್ನುತ್ತದೆ ಇತಿಹಾಸ. ಕೊಡಚಾದ್ರಿಯ ತುಟ್ಟತುದಿಯಲ್ಲಿ ಕಲ್ಲಿನಿಂದ ನಿರ್ಮಾಣಗೊಂಡ ಸರ್ವಜ್ಞಪೀಠದಲ್ಲಿ ತಪೋನಿರತ ಶಂಕರಾಚಾರ್ಯರ ವಿಗ್ರಹ ಇದನ್ನು ಪುಷ್ಠೀಕರಿಸುತ್ತದೆ. ಕೊಡಚಾದ್ರಿಯ ತುದಿಯಲ್ಲಿ ಎರಡು ದೇವಸ್ಥಾನಗಳು ಭಕ್ತರನ್ನು ಸೆಳೆಯುತ್ತವೆ. ಆ ಎತ್ತರದಲ್ಲಿ ದಿನದ ಇಪ್ಪತ್ನಾಲ್ಕು ಗಂಟೆಯೂ ಜುಳು ಜುಳು ಹರಿಯುವ ನೀರು ಅಚ್ಚರಿ ತರಿಸುತ್ತವೆ. ನೀರಿಗಾಗಿ ಹಪಹಪಿಸುತ್ತಿರುವ ಇಂದಿನದಿನಗಳಲ್ಲಿ ಅಷ್ಟೆತ್ತರದ ಜಾಗಕ್ಕೆ ನೀರಿನ ಸರಬರಾಜು ನಿರ್ವಹಿಸುತ್ತಿರುವ ನಿಸರ್ಗದ ಶಕ್ತಿಯ ಬಗ್ಗೆ ವಿಸ್ಮಯ ಮೂಡಿಸುತ್ತದೆ.
ಸೂರ್ಯೋದಯದ ನಯನಮನೋಹರ ದೃಶ್ಯಗಳಿಗಾಗಿಯೇ ಇಲ್ಲಿಗೆ ಹೆಚ್ಚಿನ ಜನರು ಬರುತ್ತಾರೆ. ಇಲ್ಲಿ ಮೋಡಗಳು ಕೈಗೆ ಸಿಗುತ್ತದೆಯಾದ್ದರಿಂದ ಚಲನಚಿತ್ರಗಳಲ್ಲಿನ ಸ್ವರ್ಗದ ವಾತಾವರಣವನ್ನು ಇಲ್ಲಿ ಅನುಭವಿಸಬಹುದು. ಆಧ್ಯಾತ್ಮದ ಆಸಕ್ತಿಯಿರುವ ಜನರ ತಪಸ್ಸಿಗೆ ಹೇಳಿಮಾಡಿಸಿದಂತಹ ಜಾಗವಿದು. ಆದರೆ ಪ್ರಸಕ್ತ ಸ್ಥಿತಿ ಹೀಗೆಯೇ ಮುಂದುವರೆದಲ್ಲಿ ಈ ತಾಣ ತನ್ನ ಎಲ್ಲ ಪಾವಿತ್ರ್ಯಗಳನ್ನು, ಮೋಹಕತೆಯನ್ನು, ತನ್ಮಯತೆಯನ್ನು ಕಳೆದುಕೊಳ್ಳಬಹುದು..
ಶಿವಮೊಗ್ಗದಿಂದ ಹೊಸನಗರದ ಮಾರ್ಗವಾಗಿ 100 ಕಿಲೋಮೀಟರ್ ದೂರ ಸಾಗಿದರೆ ಸಂಪೆಕಟ್ಟೆ. ಅಲ್ಲಿಂದ 17 ಕಿಲೋಮೀಟರ್ ದೂರ ಪ್ರಯಾಣಿಸಿದರೆ ಕೊಡಚಾದ್ರಿ ಪರ್ವತದ ತುತ್ತ ತುದಿಯಾದ ಸರ್ವಜ್ಞಪೀಠ. ದಕ್ಷಿಣ ಕನ್ನಡದ ಕೊಲ್ಲೂರಿನ ಕಡೆಯಿಂದ ಕೊಡಚಾದ್ರಿ ಕೇವಲ 43 ಕಿಲೋಮೀಟರ್ .ಆ ಕಾರಣದಿಂದ ಬೇಸಿಗೆಯಲ್ಲಿ ಕೊಡಚಾದ್ರಿ ಪ್ರವಾಸಿಗರಿಂದ ತುಂಬಿರುತ್ತದೆ.
ಅಪಾಯದ ಮಡಿಲು :
ಕೊಡಚಾದ್ರಿ ಬೆಟ್ಟಕ್ಕೆ ಸಂಪೆಕಟ್ಟೆಯಿಂದ ಆರಂಭವಾಗುವ ಸುಮಾರು 9 ಕಿಲೋಮೀಟರ್ ಘಟ್ಟದ ರಸ್ತೆ ಅಪಾಯಕಾರಿಯಾಗಿದೆ. ಈ ರಸ್ತೆಯ ಅತ್ಯಂತ ಕೆಟ್ಟದಾದ ನಿರ್ವಹಣೆ ಕೊಡಚಾದ್ರಿಯ ಭವಿಷ್ಯಕ್ಕೆ ಮಾರಕವಾಗಿದೆ. ಈ ರಸ್ತೆ ಅದೆಷ್ಟು ಕೆಟ್ಟದಾಗಿದೆ ಮತ್ತು ಭೀಕರವಾಗಿದೆ ಎಂದು ಇಲ್ಲಿ ವರ್ಣಿಸಲಾಗದು. ದಿನನಿತ್ಯ 50 ಜೀಪುಗಳು ಓಡಾಡುವ ರಸ್ತೆಯ ಪಕ್ಕದಲ್ಲಿನ ಬೃಹದಾಕಾರವಾದ ಹೊಂಡಗಳು ನಿರ್ಮಾಣಗೊಂಡು ಅಪಾಯಕ್ಕೆ ಆಹ್ವಾನ ನೀಡುತ್ತವೆ.
ಸಾಮಾನ್ಯವಾಗಿ ಮನುಷ್ಯ ಕಾಲಿಡುವ ಜಾಗಗಳೆಲ್ಲಾ ಒಂದೆಲ್ಲಾ ಒಂದು ರೀತಿಯ ಹಾನಿಗೊಳಗಾಗಿದೆ. ಮಲೆನಾಡಿನಲ್ಲಿ ಮನುಷ್ಯರು ನಿತ್ಯ ಓಡಾಡದ ಕಡಿದಾದ ಸಾವಿರಾರು ಗುಡ್ಡಬೆಟ್ಟಗಳಿವೆ. ಅವು ಯಾವುವೂ ಭೂ ಕೊರೆತವನ್ನು ಕಂಡಿಲ್ಲ. ಎಂಥಹಾ ಮಳೆಗೂ ಅವು ಬೆಚ್ಚದೆ ಬೆದರದೆ ನಿಂತಿದೆ. ಕಾರಣ ಸ್ಪಷ್ಟ. ಗುಡ್ಡದ ಮೇಲ್ಮಣ್ಣು ತೊಳೆಯದಂತೆ ಪ್ರಕೃತಿ ಹುಲ್ಲಿನ ಚಾದರ ನಿರ್ಮಿಸಿದೆ. ಕಾಡುಗಳಿದ್ದ ಗುಡ್ಡಗಳಂತೂ ಇನ್ನೂ ಸುರಕ್ಷಿತ. ಆದರೆ ಕೊಡಚಾದ್ರಿ ಬೆಟ್ಟದ ಮಣ್ಣು ಕರಗಿ ಬೆಟ್ಟದ ತಳ ತಲುಪುತ್ತಿದೆ. ಇದಕ್ಕೆ ಪ್ರಮುಖ ಕಾರಣ ಮಾನವ ನಿರ್ಮಿತ ರಸ್ತೆ. ಕಿರಿದಾದ ಜಾಗದಲ್ಲಿ ಚರಂಡಿಯಿಲ್ಲದಿರುವುದರಿಂದ ನೀರು ಒಂದೆಡೆ ಸಂಗ್ರಹವಾಗಿ ಒತ್ತಡದಿಂದ ಹರಿದು ಬೃಹದಾಕಾರದ ಕಾಲುವೆ ನಿರ್ಮಾಣಗೊಂಡಿದೆ. ಆ ಕಾಲುವೆ ಮಳೆಗಾಲದಲ್ಲಿ ಕೊಡಚಾದ್ರಿಯ ಒಡಲಿನಿಂದ ನೂರಾರು ಟನ್‌ಗಟ್ಟಲೆ ಮಣ್ಣನ್ನು ಬುಡ ತಲುಪಿಸುತ್ತಿವೆ.
ಕೆಮ್ಮಣ್ಣು ಬುಡ ತಲುಪುವುದು ಸುಲಭ ಆದರೆ ಮತ್ತೆ ಹಾನಿಯಾದ ಜಾಗವನ್ನು ತುಂಬುವುದು ಮನುಷ್ಯ ಪ್ರಯತ್ನದಿಂದ ಕಷ್ಟ ಸಾಧ್ಯ. ಇದೇ ತರಹ ಇನ್ನು ಹತ್ತೆಂಟು ವರ್ಷಗಳ ಕಾಲ ಮುಂದುವರೆದಲ್ಲಿ ಕೊಡಚಾದ್ರಿ ಪರ್ವತ ಭೂಕುಸಿತವನ್ನು ಕಾಣುವುದು ನಿಶ್ಚಿತ. ಕೊಡಚಾದ್ರಿ ಪರ್ವತ ವಿಶಿಷ್ಟ ವಿನ್ಯಾಸವನ್ನು ಹೊಂದಿದ ಗುಡ್ಡ. ಗುಡ್ಡದ ಶಿವಮೊಗ್ಗ ಜಿಲ್ಲೆಗೆ ತೆರೆದುಕೊಂಡಿರುವ ಭಾಗ ಇಳಿಜಾರನ್ನು ಹೊಂದಿದ್ದು ದಕ್ಷಿಣ ಕನ್ನಡಕ್ಕೆ ತೆರೆದುಕೊಂಡಿರುವ ಭಾಗ ಕಡಿದಾಗಿದೆ. ಆ ಕಾರಣದಿಂದ ಮಳೆಯ ನೀರು, ಪ್ರಕೃತಿ ಸಹಜ ಪರ್ವತವು ಭಾಗಶಃ ಕೊಚ್ಚಿಹೋಗುವಷ್ಟು ಹಾನಿ ಮಾಡಬಲ್ಲದು.
ಈಗಾಗಲೆ ಸಂಪೆಕಟ್ಟೆಯಿಂದ ಕೊಡಚಾದ್ರಿಯ 9 ಕಿಲೋಮೀಟರ್ ದಾರಿಯಲ್ಲಿ ನಾಲ್ಕು ಕಡೆ ಬೃಹತ್ತಾದ ಕಾಲುವೆ ನಿರ್ಮಾಣಗೊಂಡಿದೆ. ದೇವಸ್ಥಾನದ ಎದುರು ಭಾಗದಲ್ಲಿನ ರಸ್ತೆ ಬಾಯಿ ತೆರೆದು ನಿಂತಿದೆ. ಇನ್ನು ಹಾನಿಯಾಗಲು ಹೆಚ್ಚಿನ ವರ್ಷಗಳಕಾಲ ತಗುಲುವುದಿಲ್ಲ. ಸರ್ಕಾರ, ಪರಿಸರಪ್ರಿಯ ಸಂಘಟನೆಗಳು ಈ ಅಮೂಲ್ಯ ಪರ್ವತಶ್ರೇಣಿಯನ್ನು ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿಯನ್ನು ಹೊರಬೇಕಾಗಿದೆ. ಪ್ರಕೃತಿ ಸಾವಿರಾರು ವರ್ಷಗಳಿಂದ ಜತನವಾಗಿ ಕಾಯ್ದಿಟ್ಟುಕೊಂಡು ಬಂದಿದ್ದ ಪರ್ವತ ಶ್ರೇಣಿ ಮಾನವನ ಅನುಕೂಲಕ್ಕಾಗಿ ನಿರ್ಮಿಸಿಕೊಂಡ ರಸ್ತೆಯಿಂದಾಗಿ ನಾಶವಾಗಹೊರಟಿದೆ. ರಕ್ಷಿಸಬೇಕಾದ ಹೊಣೆ ಎಲ್ಲರದ್ದೂ.











Click it and Unblock the Notifications