ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಪ್ತ ಮುಕ್ತಿ ಕ್ಷೇತ್ರಗಳಲೊಂದೂರು ಶ್ರೀ ಮೂಕಾಂಬಿಕೆಯ ಕೊಲ್ಲೂರು

By Staff
|
Google Oneindia Kannada News

*ವಿಘ್ನೕಶ್ವರ ಕುಂದಾಪುರ

ಕೊಲ್ಲೂರೆಂದರೆ ತಕ್ಷಣಕ್ಕೆ ನೆನಪಿಗೆ ಬರುವುದು ಬಂಗಾರ ಲೇಪಿತ ಶಿಖರ ಹಾಗೂ ತಾಮ್ರ ಛಾವಣಿಯ ದೇವಸ್ಥಾನದೊಡತಿ ಮೂಕಾಂಬಿಕೆ, ಸೌಪರ್ಣಿಕಾ ಹಾಗೂ ಶಂಕರಾಚಾರ್ಯ. ರಮಣೀಯ ಪಶ್ಚಿಮ ಘಟ್ಟಗಳ ಪದತಲದಲ್ಲಿರುವ ಮೂಕಾಂಬಿಕೆಯ ತವರು ಅಪ್ಪಟ ಕನ್ನಡ ನೆಲವಾದರೂ ಅಲ್ಲಿ ಮಲಯಾಳಂ, ತಮಿಳುಗಳಿಗೂ ಅಗ್ರ ತಾಂಬೂಲವುಂಟು. ಇವುಗಳೊಂದಿಗೆ ಸ್ಥಳೀಯ ತುಳು ಕೂಡ ಚಾಲ್ತಿಯಲ್ಲಿದೆ. ಆ ಮಟ್ಟಿಗೆ ಕೊಲ್ಲೂರೆಂದರೆ ಸರ್ವ ಜನಾಂಗಗಳ ಶಾಂತಿಯ ತೋಟ.

ಪರಶುರಾಮನಿಂದ ನಿರ್ಮಿತವಾದ ಏಳು ಮುಕ್ತಿ ಕ್ಷೇತ್ರಗಳಲ್ಲಿ ಕೊಲ್ಲೂರು ಪ್ರಮುಖವಾದುದು. ಉಡುಪಿ, ಸುಬ್ರಹ್ಮಣ್ಯ, ಕುಂಭಾಸಿ, ಕೋಡೇಶ್ವರ, ಶಂಕರನಾರಾಯಣ ಹಾಗೂ ಗೋಕರ್ಣ ಉಳಿದ ಮುಕ್ತಿ ಸ್ಥಳಗಳು. ಈಶ್ವರ. ಸುಬ್ರಹ್ಮಣ್ಯ, ಗಣೇಶ ಹಾಗೂ ಪಾರ್ವತಿ ಇಲ್ಲಿನ ಪ್ರಮುಖ ದೇವರುಗಳಾರೂ, ಇಲ್ಲಿ ನ ವೀರಭದ್ರ, ಮಹಾಲಕ್ಷ್ಮಿ, ಆಂಜನೇಯ, ಸರಸ್ವತಿ, ನಾಗದೇವನಿಗೂ ಅಪಾರ ಭಕ್ತರುಂಟು.

ಸೌಂದರ್ಯ ಲಹರಿಗೆ ಸ್ಫೂರ್ತಿಯಾದ ಸೌಂದರ್ಯದ ಕೊಳ್ಳ

ಕೊಲ್ಲೂರು ಪರಶುರಾಮ ನಿರ್ಮಿತ ಎಂದು ಪುರಾಣಗಳು ಸಾರಿದರೆ, ಮೂಕಾಂಬಿಕೆಯ ವಿಗ್ರಹವನ್ನು ಕೊಲ್ಲೂರಿನಲ್ಲಿ ಸ್ಥಾಪಿಸಿದ್ದು ಶಂಕರಾಚಾರ್ಯ ಅನ್ನುತ್ತದೆ ಇತಿಹಾಸ. ಆದಿಶಕ್ತಿಯೇ ಈ ಕುರಿತು ಶಂಕರರಿಗೆ ಅಪ್ಪಣೆ ನೀಡಿದಳೆನ್ನುವುದು ನಂಬುಗೆ. ಶಂಕರರು ಧ್ಯಾನ ನಿರತರಾಗಿದ್ದ ಸ್ಥಳವನ್ನು ಈಗಲೂ ಕಾಣಬಹುದು. ಕೊಡಚಾದ್ರಿ ಪರ್ವತ ಶ್ರೇಣಿ, ಅಂಬಾವನ ಹಾಗೂ ಚಿತ್ರಮೂಲಂಗಳಲ್ಲಿ ಶಂಕರರು ಧ್ಯಾನ ಮಗ್ನರಾಗಿರುತ್ತಿದ್ದರೆಂದು ನಂಬಲಾಗಿದೆ. ಶಂಕರರು ತಮ್ಮ ಪ್ರಸಿದ್ಧ ರಚನೆ ಸೌಂದರ್ಯ ಲಹರಿಯನ್ನು ರಚಿಸಿದ್ದು ಕೊಡಚಾದ್ರಿಯ ಸುಂದರ ಪರಿಸರದಲ್ಲಿಯೆ.

ತ್ರಿಮೂರ್ತಿ ರೂಪ ಸ್ವಯಂಭು ಲಿಂಗ : ಮೂಕಾಂಬಿಕೆಗೆ ಅಭಿಮುಖವಾಗಿರುವ ಜ್ಯೋತಿರ್ಲಿಂಗ ತ್ರಿಮೂರ್ತಿಗಳನ್ನು ಪ್ರತಿನಿಧಿಸುತ್ತದೆ. ಶಿವ ಹಾಗೂ ಶಕ್ತಿಯ ಪ್ರತೀಕವೆಂದು ನಂಬಲಾಗಿರುವ ಸುವರ್ಣ ರೇಖೆ ಲಿಂಗದ ಮಧ್ಯಭಾಗದಲ್ಲಿದೆ. ಲಿಂಗದ ಮೇಲೆ ಪ್ರತಿಫಲಿಸುವ ಸೂರ್ಯ ಕಿರಣದಲ್ಲಿ ಮಾತ್ರ ಗೋಚರಿಸುವಷ್ಟು ಈ ಸುವರ್ಣರೇಖೆ ಸೂಕ್ಷ್ಮವಾದುದು.

ಸ್ವಯಂಭು ಲಿಂಗ ತ್ರಿಮೂರ್ತಿಗಳ ಏಕಾಕಾರವಾದರೆ, ತಾಯಿ ಮೂಕಾಂಬಿಕೆ ಲೋಕಮಾತೆಯರ ಪ್ರತೀಕ. ಪಾರ್ವತಿ, ಲಕ್ಷ್ಮಿ ಹಾಗೂ ಸರಸ್ವತಿಯವರ ಸಂಗಮವೆ ಮೂಕಾಂಬಿಕೆಯ ಅವತಾರ ಎನ್ನುವ ನಂಬುಗೆ ನಾಲಗೆಗಳಲ್ಲಿ ಜೀವಂತವಾಗಿ ಉಳಿದುಬಂದಿದೆ.

ಊರಿನ ಹೆಸರಿಗೂ ಉಂಟು ಪುರಾಣದ ನಂಟು : ಸ್ಕಂದ ಪುರಾಣದಲ್ಲಿ ಕೊಲ್ಲೂರನ್ನು ಮಹಾರಣ್ಯಪುರ ಎಂದು ಹೆಸರಿಸಲಾಗಿದೆ. ಕೋಲ ಎನ್ನುವ ಮಹರ್ಷಿ ಇಲ್ಲಿ ತಪಸ್ಸಾಚರಿಸಿದನಂತೆ. ಪ್ರತ್ಯಕ್ಷನಾದ ಶಿವ ತನ್ನನ್ನು ಲಿಂಗರೂಪದಲ್ಲಿ ಆರಾಧಿಸುವಂತೆ ಸೂಚಿಸಿದ. ಶಕ್ತಿ ಕೂಡ ಸ್ವ ಇಚ್ಛೆಯಿಂದ ಮಹಾಲಕ್ಷ್ಮಿಯಾಗಿ ಅಲ್ಲಿ ನೆಲೆಸಿದಳು. ಕೋಲ ಮಹರ್ಷಿಯಿಂದ ಕೊಲ್ಹಾಪುರ ಎಂದು ಹೆಸರಾದ ಊರು ನಾಲಗೆಗಳಲ್ಲಿ ಉರುಳುತ್ತ ಕೊಲ್ಲೂರಾಯಿತು.

ಮತ್ತೊಂದು ನಂಬಿಕೆ, ದೇವಿ ಮೂಕಾಂಬಿಕೆಯಾದ ಪರಿಯನ್ನು ಬಣ್ಣಿಸುತ್ತದೆ. ಕೋಲ ಮಹರ್ಷಿಯ ಕೋರಿಕೆಯ ಮೇರೆಗೆ ಮೂಕನೆಂಬ ದೈತ್ಯನನ್ನು ಕೊಂದ ದೇವಿ ಮೂಕಾಂಬಿಕೆ ಎಂದು ಕರೆಸಿಕೊಂಡಳು. ಮೂಕಾಸುರನನ್ನು ಮರ್ದಿಸಿದ ಸ್ಥಳ ಮಾರಣ ಘಾಟ್‌ ಕೊಲ್ಲೂರಿಗೆ 24 ಕಿಮೀ ದೂರದಲ್ಲಿದೆ. ಅಲ್ಲಿ ದೇವಿಯನ್ನು ಪ್ರತಿನಿಧಿಸುವ ಶಕ್ತಿ ಸೂಚಕ ಶ್ರೀಚಕ್ರವಿದೆ .

ಮೂಕಾಂಬಿಕೆಗೆ ನಿತ್ಯ ಜೋಗುಳ ಹಾಡುತ್ತ ಹರಿಯುವ ಸೌಪರ್ಣಿಕಾ ನದಿ ನಾಮ ಮೂಲ ಕುತೂಹಲಕರವಾದುದು. ಸುಪರ್ಣ ಎನ್ನುವ ಗರುಡ ಇಲ್ಲಿ ತಪಸ್ಸನ್ನಾಚರಿಸಿ ದೇಹತ್ಯಾಗ ಮಾಡಿದನಂತೆ. ಆ ಕಾರಣದಿಂದಲೇ ನದಿಗೆ ಸೌಪರ್ಣಿಕಾ ಹೆಸರು ಬಂತು. ಈ ಭಾಗದ ಗಂಗೆಯೆಂದೇ ಹೆಸರಾಗಿರುವ ಸೌಪರ್ಣಿಕೆಯಲ್ಲಿ ನ ಸ್ನಾನ ಪುಣ್ಯಕರವಾದುದು ಎಂದು ನಿತ್ಯ ಮೀಯುವ ಸಾವಿರಾರು ಭಕ್ತರು ನಂಬಿದ್ದಾರೆ.

ನಿಸರ್ಗದ ಹಾದಿಯಲ್ಲಿ ಕೊಲ್ಲೂರಿಗೆ ಪಯಣ : ಕೊಲ್ಲೂರು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನಲ್ಲಿದೆ. ಕುಂದಾಪುರದಿಂದ ಅಲ್ಲಿಗೆ ಕೇವಲ 50 ಕಿಮೀ ದೂರ. 80 ಕಿಮೀ ದೂರದಲ್ಲಿ ಉಡುಪಿ ಹಾಗೂ 135 ಕಿಮೀ ದೂರದಲ್ಲಿ ಮಂಗಳೂರಿದೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ಮಂಗಳೂರುಗಳಿಂದ ಸಾಕಷ್ಟು ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳಿವೆ. ಉಡುಪಿಯಿಂದ ನಿಯಮಿತವಾಗಿ ಬಸ್ಸುಗಳೂ ಉಂಟು. ಟ್ಯಾಕ್ಸಿಗಳು ಬೇಕಾದಷ್ಟಿವೆ.

ವಸತಿ : ಖಾಸಗಿ ಹೊಟೇಲ್‌ಗಳು ಹಾಗೂ ಪಿಡಬ್ಲ್ಯೂಡಿ ವಸತಿ ಗೃಹಗಳಲ್ಲಿ ತಂಗಲಿಕ್ಕೆ ಅವಕಾಶ ಉಂಟು. ಕೊಲ್ಲೂರಿಗೆ ಬಂದವರು ನೆರೆಯ ಅರಸಿನ ಮಕ್ಕಿ ಜಲಪಾತ ಹಾಗೂ ಮರವಂತೆಗಳ ಸೌಂದರ್ಯವನ್ನೂ ಉಂಡು ಹೋಗಬಹುದು. ಕೊಡಚಾದ್ರಿಯಂತೂ ಚಾರಣಪ್ರಿಯರಿಗೆ ಸ್ವರ್ಗ ಸಮಾನ.

ವಾರ್ತಾಸಂಚಯ
ಮುಖಪುಟ / ನೋಡು ಬಾ ನಮ್ಮೂರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X