ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀವ್ ಜೋಗಕ್ಕೆ ಬಂದಿದ್ರಾ....?

By Staff
|
Google Oneindia Kannada News

ನಾವು ನಿಮಗೋಸ್ಕರ ಎಲ್ಲಾನು ಸಹಿಸ್ತೀವಿ. ಈ ಅತಿ ಮಳೆ, ನಮ್ಮ ಪೈರು ಲಾಸ್, ಟ್ರಾಫಿಕ್ ಜಾಮ್, ಎಲ್ಲಾ ಓಕೆ ಆದ್ರೆ ಈ ಗಲೀಜು ಯಾಕೆ? ಅಲ್ವಾ? ಇರ್ಲಿ ಬಿಡಿ ಇಲ್ಲಿಯವರೆಗೆ ಆಗಿದ್ದು ಆಗೋಯ್ತು . ನೀವು ಮಾತ್ರಾ ಈವರ್ಷ ಮಿಸ್ ಮಾಡ್ಕೋಳ್ದೆ ಜೋಗಕ್ಕೆ ಬರ್ಬೇಕು...ಬರ್ಲೇಬೇಕು ಕಣ್ರೀ...

ಆರ್.ಶರ್ಮಾ, ತಲವಾಟ

Sharavati Rolls Royceಆವತ್ತು ನಾನು ನಮ್ಮ ದಟ್ಸ್ ಕನ್ನಡ.ಕಾಮ್ ನಲ್ಲಿ ಜೋಗಕ್ಕೆ ಬನ್ನಿ ಅಂತ ಕರೆದಿದ್ದಕ್ಕೆನೆ ಈ ವರ್ಷ ಸಿಕ್ಕಾಪಟ್ಟೆ ಜನ ಜೋಗ ಫಾಲ್ಸ್ ನೋಡೋಕೆ ಬರ್ತಾಯಿದಾರೆ ಅಂತಾ ನಾನೇನೋ ಜಂಬ ಕೊಚ್ಚಲ್ಲ. ಏನೋ ನಮ್ಮ ಕನ್ನಡದ ಜನ ಬಂದುಹೋಗಲಿ ಅಂತ ಕರೆದೆನೆ ಹೊರತು ಬೇರೆ ಏನೂ ಇಲ್ಲ. ಆದರೂ ಜೋಗದ ಗುಂಡಿಯ ಬೇಜಾನ್‌ ಅಭಿಮಾನಿಗಳು ನನಗೆ ಫೋನ್ ಮಾಡಿ ಮಾಹಿತಿ ಕೇಳಿದ್ದಂತೂ ನಿಜ.

ಶಂಕರಪ್ಪನೋರು, ಕಿರಣ್, ರಮ್ಯಾ, ಮಹದೇವ್, ಹೀಗೆ ಹತ್ತಾರು ಜನ ಫೋನ್ ಮಾಡಿ ಜೋಗ ಹೇಗಿದೆ ? ಈಗ? ಅಂತ ಕೇಳಿದ್ರು. ಬಿ.ಇ.ಎಲ್ ನಲ್ಲಿ ಡ್ಯೂಟಿ ಮಾಡೊ ಪ್ರಸನ್ನ ಬಸ್ ಹತ್ತಿ ಬಂದಿದ್ರು, ನಮ್ಮ ಮನೆ, ಜೋಗ, ಇಲ್ಲಿ ಮಳೆ ಜಿಗಣೆ ಎಲ್ಲಾನೂ ಎಂಜಾಯ್ ಮಾಡಿ ವಾಪಾಸ್ ಬೆಂಗಳೂರಿಗೆ ಹೊರಟು ಹೋದ್ರು. ಬೆಳಿಗ್ಗೆಯಿಂದ ಭತ್ತದ ಗದ್ದೆಯಲ್ಲಿ ಸೊಂಟ ಬಗ್ಗಿಸಿ ನಾಟಿ ಮಾಡಿದ್ದನ್ನ ಹುಯ್ಯೋ ಹುಯ್ಯೋ ಮಳೆರಾಯ ಎಲ್ಲಾನು ನುಂಗಿ ಹಾಕಿದ್ದನ್ನು ನೋಡಿದ್ರು, ಅತಿ ಮಳೆಯಿಂದ ಅಡಿಕೆ ಕೊಳೆ ರೋಗ ಜಾಸ್ತಿ ಯಾಗಿದ್ದನ್ನು ನೋಡಿ ತ್ಚು... ತ್ಚು..ತ್ಚು ಅಂತದ್ರು.

ಹೌದು ಕಣ್ರಿ ನಾನು ಜೋಗಕ್ಕೆ ಬನ್ನಿ ಬನ್ನಿ ಅಂತ ಕರ್ದಿದ್ದೇನೋ ನಿಜ, ನೀವು ನೀವಾಗಿಯೇ ಬಂದಿದ್ದು ನಿಜ ಆದರೆ ನಾವು ರೈತರು ಈ ವರ್ಷ ತತ್ತರಿಸಿ ಹೋಗೀದೀವಿ ಕಣ್ರಿ. ಕುಮಾರಣ್ಣ ಈ ವರ್ಷ ಸಾಲ ಮನ್ನಾ ಮಾಡಿ ಸ್ವಲ್ಪ ನೆಮ್ಮದಿ ಕೊಟ್ರು ಅನ್ನಿ . ಅವ್ರು ಸಾಲ ಮನ್ನಾ ಮಾಡಿದ್ದು ನೋಡಿ ನಿಮ್ಗೆ ,'ಅಲ್ಲಾ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟೊರು ನಾವು. ಈ ವಯ್ಯಾ ರೈತರಿಗೆ ಪುಗಸಟ್ಟೆ ಸಾಲ ಮನ್ನಾ ಮಾಡ್ಬಿಟ್ನಲ್ಲಾ' ಅಂತ ಒಂದಲ್ಲಾ ಒಂದು ಸಲ ಮನಸ್ಸಿನಾಗೆ ಅಂದ್ಕೋಡೇ ಇರ್ತೀರಾ. ಆದ್ರೆ ಈ ಪಾಟಿ ಮಳೆ ಸಹಿಸಿಕೊಂಡು ನಿಮ್ಗೆ ಕರೆಂಟು, ಅಕ್ಕಿ ಎಲ್ಲಾ ಸಪ್ಲೈ ಮಾಡ್ತೀವಲ್ಲಾ ಅದ್ಕೆ ಸರಿ ಹೋಯ್ತು ಅನ್ಕೋಳ್ಳಿ ಅಂತಾವೆ ನಮ್ಮ ರೈತರು.

ನೀವೇನೋ ಜೋಗಕ್ಕೆ ಬಂದ್ರಿ ವಾವ್ ಅಮೇಜಿಂಗ್, ವಾಟ್ ಎ ಬ್ಯೂಟಿ, ಆವ್‌ ಇನ್ಸ್‌ಪೈರಿಂಗ್‌ ಅಂದ್ರಿ ಹೋದರಿ. ಆದರೆ ನಮ್ಗಿಲ್ಲಿ ಮಳೆ ಹೆಚ್ಚಾಗಿ ಸುಸ್ತು ಕಣ್ರೀ.. ನಿಮ್ಮಿಂದ ನಮ್ಮ ರೈತರ ಅನಾನಸ್ ಖಾಲಿಯಾಯ್ತು ನಿಜ. ಆದ್ರೆ ಕೆಲವರು ತಿಂದ ಪ್ಲೇಟು ಅನ್ನ ಎಲ್ಲಾ ಫಾಲ್ಸ್ ಹತ್ರಾನೆ ಬಿಸಾಕಿ ಹೋಗೀದಾರೆ. ರಸ್ತೆ ಬದಿಯಲ್ಲಿ ಬೀರು ಕುಡ್ದು ಬಾಟ್ಲಿ ಎಸೆದು ಹೋಗಿದಾರೆ ಕಣ್ರಿ...ಅದು ನೀವಲ್ಲ... ನೀವು ಅಂತೋರಲ್ಲ ಅಂತ ನನಗೆ ಗೊತ್ತು ಆದ್ರೆ ಬೇರೆಯವರು ಎಸೆಯೋವಾಗ ನೀವು ತಿಳಿ ಹೇಳ್ಬಹುದಿತ್ತು ಅಲ್ವೇನ್ರೀ... ಜೋಗ ಅಂದ್ರೆ ನಿಮ್ದು ನಮ್ದು ಎಲ್ರದ್ದು ಕಣ್ರಿ.... ಹೀಗೆಲ್ಲಾ ಹೇಳ್ದೆ ಅಂತ ಕೋಪ ಮಾಡ್ಕೋಬೇಡಿ.

Trash spilled in jogನಾವು ನಿಮಗೋಸ್ಕರ ಎಲ್ಲಾನು ಸಹಿಸ್ತೀವಿ. ಈ ಅತಿ ಮಳೆ, ನಮ್ಮ ಪೈರು ಲಾಸ್, ಟ್ರಾಫಿಕ್ ಜಾಮ್, ಎಲ್ಲಾ ಓಕೆ ಆದ್ರೆ ಈ ಗಲೀಜು ಯಾಕೆ? ಅಲ್ವಾ?. ಇರ್ಲಿ ಬಿಡಿ ಇಲ್ಲಿಯವರೆಗೆ ಆಗಿದ್ದು ಆಗೋಯ್ತು . ಫಾಲ್ಸ್ ಜಾಗದಲ್ಲಿ ಊಟದ ತಟ್ಟೆ ಎಸ್ದಿದ್ದ ಫೋಟೋನಾ ನಮ್ಮ ಇನ್ಫೋಸಿಸ್ ವಾಸಿಷ್ಟನಿಗೆ ಮೈಲ್ ಮಾಡಿದ್ದೆ, ಅದ್ಕೆ ಅವ್ನು ನಾವು ಬರ್ತೀವಿ ಕ್ಲೀನ್ ಮಾಡೋಣ, ಅಲ್ಲಿ ಬೋರ್ಡ್ ಹಾಕೋಣ.. ಸರ್ಕಾರಕ್ಕೆ ಒಂದು ವರದಿ ಕೊಡೋಣ ಅಂತ ಮೈಲ್ ಮಾಡಿದಾನೆ ಕಣ್ರಿ.. ಅಲ್ಲಿದ್ರು ನಿಮ್ಗೆಲ್ಲಾ ಎಷ್ಟೊಂದು ಕಾಳಜಿ ನಮ್ಮ ಬಗ್ಗೆ .

ಅದ್ಕೆ ಖುಷಿಯಾಗುತ್ತೆ ಹಾಗಾಗಿ ರುದ್ರ ರಮಣೀಯ ಜೋಗದ ಫೋಟೋನಾ, ಇಲ್ಲಿಗೆ ಬಾರದಿರುವ ನಿಮ್ಮವರಿಗಾಗಿ ತೆಗೆದು ಕಳುಹಿಸಿದ್ದೀನಿ. ಮತ್ತೆ ಬನ್ನಿ ಜೋಗಕ್ಕೆ...

. ಭತ್ತ ಬೆಳೆಯೋ ಕೃಷಿಕರು ಮಳೆ ಹೆಚ್ಚಾಗಿದ್ದಕ್ಕೆ ಸಿಟ್ಟಾಗಿದಾರೆ ನಿಜ, ನೀವು 8 ಲಕ್ಷದ ಕಾರಿನಲ್ಲಿ ರೊಂಯ್ .. ಅಂತ ಹೋಗುವಾಗ ಅವ್ರಿಗೆ ಸಿಟ್ಟು ಬರುತ್ತೆ ನಿಜ...ಒಂದ್ಸಾರಿ ದೇವ್ರನ್ನ ಮತ್ತು ನಿಮ್ಮನ್ನು ಶಪಿಸಿ, 'ನಾವು ಇಲ್ಲಿ ಹೊಟ್ಟೆಗಿಲ್ದೆ ಸಾಯ್ತಾ ಇದೀವಿ.. ಇವ್ರು ಮಜ ಮಾಡಾಕೆ ಬರ್ತಾರೆ ಅಂತ ಅಂದುಬಿಡಬಹುದು.. '. ಅದು ನಿಮಗೆ ಕೇಳ್ಸಲ್ಲ ನಿಜ ಅಕಸ್ಮಾತ್ ಕೇಳ್ಸಿದ್ರೂ ಬೇಜಾರು ಮಾಡ್ಕೋಬೇಡಿ . ಅವರ ವರ್ಷದ ಕೂಳು ಅತಿ ಮಳೆಯಿಂದ ಕಾಣೆಯಾಗಿದೆ ಕಣ್ರಿ. ನಮ್ಮ ದೇಶದಲ್ಲಿ ಕಳ್ರಿಗೆ, ದಗಾಕೋರರಿಗೆ, ಅನ್ಯಾಯ ಮಾಡೋರಿಗೆ, ದಗಲಬಾಜಿಗಳಿಗೆ ಮೂರೊತ್ತು ಊಟ ಸಿಗುತ್ತೆ ಆದ್ರೆ ರೈತರ ಸ್ಥಿತಿ ಮಾತ್ರಾ ಯಾರಿಗೂ ಬ್ಯಾಡ ಕಣ್ರೀ.. ಹಾಗಾಗಿ ಅವ್ರು ಅಂದ್ರೂ ಹೊಟ್ಟೆಗೆ ಹಾಕ್ಕೋಳ್ರಿ ಪಾಪ.

ಆವ್ರು ನಮ್ಮನಿಮ್ಮ ಹೊಟ್ಟೆ ತುಂಬ್ಸೋಕು ಒದ್ದಾಡ್ತಾ ಇದಾರೆ ಕಣ್ರೀ.. ಅದಕ್ಕೋಸ್ಕರ ತಮ್ಮ ಹೊಟ್ಟೆಯನ್ನ ಬೆನ್ನಿಗೆ ಅಂಟಿಸಿಕೊಂಡಿದ್ದಾರೆ ಕಣ್ರೀ... ಆದ್ರೆ ತುಂಬಾ ಮುಗ್ದರು ಕಣ್ರೀ. " ಇವನೆ ನೋಡು ಅನ್ನದಾತ ಹೊಲದಿ ದುಡಿದೆ ದುಡಿವನು.. ನಾಡ ಜನರು ಬದುಕಲೆಂದು ಧವಸ ಧಾನ್ಯ ಬೆಳೆವೆನು" ಅಂತ 4ನೇ ಕ್ಲಾಸಿನ ಪುಸ್ತಕದಲ್ಲಿ ಪದ್ಯ ಇಟ್ಟು, ರೈಲ್ ಹಚ್ಚ್ಸಿದ್ರೆ ಅಷ್ಟಕ್ಕೆ ಅದು ನಿಜ ಅನ್ಕೊಂಡು ದುಡಿತಾರೆ ಮತ್ತು ದುಡಿತಾನೆ ಇದಾರೆ ಕಣ್ರಿ.... ಅವೆಲ್ಲಾ ಅವರವರ ಹಣೆ ಬರಹ ಅಂದ್ರಾ... ಇರ್ಲಿ ಬಿಡಿ ಯಾರ್ ಯೆನ್ ಮಾಡಾಕಾಯ್ತದೆ..

ನೀವು ಮಾತ್ರಾ ಈವರ್ಷ ಮಿಸ್ ಮಾಡ್ಕೋಳ್ದೆ ಜೋಗಕ್ಕೆ ಬರ್ಬೇಕು...ಬರ್ಲೇಬೇಕು...ಶರಾವತಿ ತನಗೆ ಗೊತ್ತಿಲ್ದಂಗೆ ಅರಬ್ಬಿ ಸಮುದ್ರ ಸೇರೋ ತವಕ ನಿಮ್ಮ ಕಣ್ಣಿನ ಮೂಲಕ ಶಾಶ್ವತ ನೆನಪಾಗಿ ಉಳಿಬೇಕು ಕಣ್ರೀ...

ಇದನ್ನೂ ನೋಡಿ:
"ಮುಂಗಾರು ಮಳೆ ಸ್ಪಾಟ್ " ನಿಂದ ಕಂಡ ಜೋಗ

ಕಣ್ತುಂಬ ನೋಡೋಣು ಬಾರಾ, 'ಕರ್ನಾಟಕದ ನಯಾಗರಾ'ಕಣ್ತುಂಬ ನೋಡೋಣು ಬಾರಾ, 'ಕರ್ನಾಟಕದ ನಯಾಗರಾ'

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X