ಮಳವಳ್ಳಿ ಬೆಂಕಿ ಜಲಪಾತ ನೋಡೋಣ ಬನ್ನಿ

ಮಳವಳ್ಳಿ ತಾಲ್ಲೂಕಿನ ಹಲಗೂರು ಬಳಿ ಶಿಂಷಾನದಿ ಸೃಷ್ಟಿಸಿರುವ ಜಲಪಾತವೊಂದು ರುದ್ರರಮಣೀಯವಾಗಿದ್ದು, ಹೆಚ್ಚು ಮಂದಿ ಇದನ್ನು ವೀಕ್ಷಿಸಿಲ್ಲ ಎಂಬುದು ವಿಚಿತ್ರವಾದರೂ ಸತ್ಯ. ಶಿಂಷಾ ಜಲಪಾತ, ಕೊಂಡ ಜಲಪಾತ, ಬೆಂಕಿಜಲಪಾತ ಎಂದೇ ಕರೆಸಿಕೊಳ್ಳುವ ಈ ಜಲಪಾತಕ್ಕೆ ಸರಿಯಾಗಿ ನಾಮಕರಣ ಮಾಡುವವರೂ ಇಲ್ಲ ಎಂಬುದೂ ಅಷ್ಟೇ ಸತ್ಯ.
ಹೋಗುವ ಹಾದಿ:ಹಲಗೂರಿನಿಂದ ಮುತ್ತತ್ತಿಗೆ ಹೋಗುವ ಮಾರ್ಗದಲ್ಲಿ 5 ಕಿ.ಮೀ. ಚಲಿಸಿ ಬೀರೋಟ ಮಾರ್ಗದಲ್ಲಿ 10-12 ಕಿ.ಮೀ. ಚಲಿಸಿದರೆ ಕೊಂಡ ಜಲಪಾತ ಗೋಚರಿಸುತ್ತದೆ. ಜಲಪಾತಕ್ಕೆ ಒಂದು ಸರಿಯಾದ ಹೆಸರೂ ಇಲ್ಲದಿರುವುದರಿಂದ ಸ್ಥಳೀಯರು ಈ ಜಲಪಾತಕ್ಕೆ ತಮ್ಮ ಕಲ್ಪನೆಯ ಹೆಸರಿಟ್ಟಿದ್ದಾರಂತೆ. ಈ ಜಲಪಾತ ಕೊಂಡದಮ್ಮನ ದೇವಸ್ಥಾನದ ಬಳಿಯಿರುವುದರಿಂದ ಕೊಂಡ ಫಾಲ್ಸ್ ಎಂತಲೂ, ಶಿಂಷಾ ನಂದಿಯ ಜಲಪಾತವಾದ್ದರಿಂದ 'ಶಿಂಷಾ ಫಾಲ್ಸ್' ಎಂತಲೂ ಇದಕ್ಕೆ ಹೆಸರು ಬಂದಿದೆಯಂತೆ. ಇನ್ನು 'ಬೆಂಕಿ ಜಲಪಾತ' ಎಂಬ ಹೆಸರು ಹೇಗೆ ಬಂತು ಎಂಬುದು ಸ್ಥಳೀಯರಿಗೂ ತಿಳಿದಿಲ್ಲ.
ಇಂಥಹದೊಂದು ಜಲಪಾತವಿರುವ ಸುದ್ದಿ ತಿಳಿದು ನಮ್ಮ ಸ್ನೇಹಿತರ ತಂಡ ಸ್ಥಳಕ್ಕೆ ಭೇಟಿ ನೀಡಿದಾಗ ಕಂಡ ದೃಶ್ಯ ನಿಜಕ್ಕೂ ರೋಮಾಂಚನ, ಗಗನಚುಕ್ಕಿ-ಭರಚುಕ್ಕಿಯಷ್ಟೇ ಪ್ರಕೃತಿ ವೈಭವ ಹೊಂದಿರುವ, ಅವುಗಳ ಚೆಲುವನ್ನೂ ನಾಚಿಸುವ ಈ ಜಲಪಾತ ಹೆಚ್ಚು ಜನರನ್ನು ಆಕರ್ಷಿಸದಿರುವುದು ನಿಜಕ್ಕೂ ದುರಂತ.
ಕೇವಲ ಕಾಲು ಹಾದಿಯಂತಿರುವ ಕಚ್ಚಾರಸ್ತೆಯಲ್ಲಿ ಮುರ್ನಾಲ್ಕು ಕಿ.ಮೀ. ಚಲಿಸಿ, ಅಲ್ಲಲ್ಲಿ ಕಣಿವೆಯಂತಾಗಿರುವ ರಸ್ತೆಯನ್ನು ದಾಟಿ, ನುಜ್ಜುಗಲ್ಲುಗಳ ಮೇಲೆ ನರ್ತಿಸುತ್ತಾ ಹೋಗುವಾಗ ಜಲಲ ಜಲಧಾರೆಯ ಭೋರ್ಗರೆತ ಕಿವಿಗೆ ಅಪ್ಪಳಿ ಸುತ್ತದೆ. ದಾರಿಯೇ ಇಲ್ಲದ ದಾರಿಯಲ್ಲಿ ಗಿಡಗಂಟೆಗಳನ್ನು ಸರಿಸುತ್ತಾ ಮುನ್ನುಗ್ಗಿದರೆ ಒಮ್ಮೆಲೆ ಕೊಂಡ ಜಲಪಾತದ ವೈಭವ ಕಣ್ಣಿಗೆ ರಾಚುತ್ತದೆ.
ಜಲಪಾತವನ್ನು ನಿಂತು ವೀಕ್ಷಿಸಲೂ ಅಲ್ಲಿ ಸ್ಥಳವಿಲ್ಲ. ಅತಿ ಕಡಿದಾದ ಸಣ್ಣ ಕಾಲುದಾರಿಯಂತಿರುವ ದಾರಿಯಲ್ಲಿ ಜಲಪಾತದ ಕೆಳಕ್ಕೆ ಇಳಿದರೆ ಜಲಪಾತದ ವೈಭವ ಕಣ್ಮನ ತಣಿಸುತ್ತದೆ. ಕಲ್ಲುಗಳ ಮೇಲೆ ನಡೆದು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಎದುರಾಗುವ ಬಂಡೆಗಳನ್ನು ದಾಟಿದರೆ ಜಲಪಾತವನ್ನು ಮುಟ್ಟಲೂಬಹುದು. ಆದರೆ ಭಾರೀ ಇಳಿಮುಖ ವಾಗಿರುವ, ಕಾಲಿಟ್ಟರೆ ಜಾರುವ ಬಂಡೆಗಳನ್ನು ದಾಟುವುದು ಭಯಂಕರ ಅನುಭವ.
ಹಲವಾರು ಕವಲುಗಳಾಗಿ ಸುಮಾರು 100 ಅಡಿಗಳಷ್ಟು ಎತ್ತರದಿಂದ ದುಮ್ಮಿಕ್ಕುವ ಜಲಪಾತದ ಭೋರ್ಗರೆತ ನಮ್ಮೆಲ್ಲಾ ನೋವುಗಳನ್ನು ಒಮ್ಮೆಲೆ ದೂರವಾಗಿಸುತ್ತದೆ. ಇಂತಹ ಜಲಪಾತ ವನ್ನು ವೀಕ್ಷಿಸಲು ಸಂಬಂಧಪಟ್ಟವರು ಅನುಕೂಲ ಮಾಡಿಕೊಡದಿರುವುದು ಬೇಸರವನ್ನೂ ತರಿಸುತ್ತದೆ. ಗಿಡಗಂಟೆಗಳೇ ಪ್ರಧಾನವಾಗಿರುವ ಈ ಸ್ಥಳವನ್ನು ಸ್ವಚ್ಚಗೊಳಿಸಿ, ಭೂಮಿಯನ್ನು ಮಟ್ಟಮಾಡಿ, ರಸ್ತೆ ಅಭಿವೃದ್ದಿಪಡಿಸಿದರೆ ಈ ಸ್ಥಳ ಒಂದು ದಿನದ ಉಲ್ಲಾಸಕ್ಕೆ ಹೇಳಿ ಮಾಡಿಸಿದಂತಹ ಸ್ಥಳವಾಗುತ್ತದೆ.
ಮಾರ್ಗ ಸೂಚಿ ಕೊರತೆ: ಇಲ್ಲೊಂದು ಜಲಪಾತವಿದೆ ಎಂಬುದನ್ನು ಸೂಚಿಸುವ ಮಾರ್ಗ ಸೂಚಿಯಾಗಲೀ, ನಾಮಫಲಕಗಳಾಗಲಿ ಇಲ್ಲಿ ಇಲ್ಲ. ರಸ್ತೆಯನ್ನು ನೋಡಿದರೆ ಇಲ್ಲಿ ಯಾವ ಜಲಪಾತವೂ ಇಲ್ಲ ಎನ್ನಿಸದಿರದು. ಅಲ್ಲಿ ಯಾರಾದರೂ ದನ-ಕುರಿ ಮೇಯಿಸುವವರು ಸಿಕ್ಕರೆ ಅವರಿಂ ದಷ್ಟೇ ಮಾಹಿತಿ ಪಡೆದು ಮುಂದೆ ಸಾಗಬಹುದು. ಅತಿ ಕಿರಿದಾದ ರಸ್ತೆಯಲ್ಲಿ ಸಾಗುವುದು ಒಂದು ಸಾಹಸವೇ ಸರಿ.
ಇನ್ನೊಂದು ಮಾರ್ಗ : ಮಳವಳ್ಳಿ ತಾಲ್ಲೂಕಿನ ಹಲಗೂರಿನಿಂದ ಮುತ್ತತ್ತಿಗೆ ಹೋಗುವ ಮಾರ್ಗದಲ್ಲಿ ಹಲಗೂರಿನಿಂದ 5 ಕಿ.ಮೀ. ಚಲಿಸಿದರೆ ಅಲ್ಲಿ ರಸ್ತೆ ಇಬ್ಬಾಗವಾಗಿ ಎಡ ರಸ್ತೆ ಮುತ್ತತ್ತಿಗೆ ಹೋದರೆ, ಬಲ (ಅಲ್ಲಿ ನೇರ) ರಸ್ತೆ ಬೀರೋಟ ಗ್ರಾಮದ ಕಡೆಗೆ ಹೋಗುತ್ತದೆ. ಬೀರೋಟ ಮಾರ್ಗದಲ್ಲಿ ಕರ್‍ಲುಕಟ್ಟೆ, ಗಾಣಾಳು, ಕೆಂಚಬೋವಿದೊಡ್ಡಿ ಗ್ರಾಮಗಳನ್ನು ದಾಟಿದರೆ ಕೆಂಚಬೋವಿದೊಡ್ಡಿ ಗ್ರಾಮ ಬಿಟ್ಟು ಕೇವಲ 200 ಮೀಟರ್ ಸಾಗಿ ಮುಖ್ಯರಸ್ತೆಯಿಂದ ಬಲಕ್ಕೆ ತಿರುಗಿ (ಅಲ್ಲಿ ನಾಮಫಲಕ ಇಲ್ಲದ್ದರಿಂದ ಯಾರನ್ನಾದರೂ ಕೇಳಿದರೆ ಒಳ್ಳೆಯದು) ಕಿರಿದಾದ, ಬೇಲಿಮಯ ರಸ್ತೆಯಲ್ಲಿ ಸಾಗಬೇಕು.
ಅಲ್ಲಿಂದ ರಸ್ತೆ ಸಂಪೂರ್ಣ ಕಚ್ಚಾರಸ್ತೆಯಾಗಿದ್ದು, ಕೇವಲ ಎತ್ತಿನಗಾಡಿ ಓಡಾಡುವಂತಿದೆ. ಅಲ್ಲಿಂದ ಮೂರ್ನಾಲ್ಕು ಕಿ.ಮೀ. ಸಾಗಬೇಕು. ಆ ಕಚ್ಚಾ ರಸ್ತೆಗೆ ಬೈಕ್, ಟಾಟಾಸುಮೋ, ಕ್ವಾಲೀಸ್‌ಗಳಾದರೆ ಉತ್ತಮ, ನಡೆದು ಹೋಗುವುದು ಇನ್ನೂ ಉತ್ತಮ. ಕಾರಿನಲ್ಲಿಯೂ ಹೋಗಬಹುದಾದರೂ ಅದು ಸ್ವಲ್ಪ ಕಷ್ಟಕರ. ನಜ್ಜುಗಲ್ಲುಗಳ ದಾರಿಯಲ್ಲಿ ಒಮ್ಮೆಲೆ ಇಳಿ ಯುವ, ಒಮ್ಮೆಲೆ ಏರುವ ಪ್ರಸಂಗಗಳು ಬರುವುದರಿಂದ ಭಯದ ಪರಿಸ್ಥಿತಿ ಎದುರಾಗುತ್ತದೆ. ಅಲ್ಲಲ್ಲಿ ರಸ್ತೆಗಳು ಇಬ್ಬಾಗ ವಾಗುವುದರಿಂದ ದಾರಿ ತಪ್ಪುವ ಅವಕಾಶವೂ ಉಂಟು. ಇದೆಲ್ಲವನ್ನು ಮೀರಿ ಜಲಪಾತ ತಲುಪಿದಾಗ ಆಗುವ ಆನಂದ ಮಾತ್ರ ಅದ್ಭುತ.
ಶಿಂಷಾ ನದಿಯ ನೀರನ್ನು ಬಳಸಿಕೊಂಡು ಇಲ್ಲಿ ವಿದ್ಯುತ್ ಉತ್ಪಾದನೆಯೂ ನಡೆಯುತ್ತಿದೆ ಅದನ್ನು ನೋಡಲು (ಚಾನಲ್ ಬಳಿ) ಎಡಕ್ಕೆ ಚಲಿಸಬೇಕು. ಆ ಸ್ಥಳದಿಂದ ನಿಂತು ನೋಡಿದರೆ ಶಿಂಷಾನದಿ, ಕಣಿವೆಯಲ್ಲಿ ಹರಿಯುವ ದೃಶ್ಯ ರುದ್ರ ರಮಣೀಯ. ಪ್ರಕೃತಿಯ ಸಿರಿಯನ್ನೆಲ್ಲಾ ತನ್ನಲ್ಲಿ ಹುದಗಿಸಿಕೊಂಡು ನದಿ ಹರಿಯುತ್ತಿರುವಂತೆ ಭಾಸವಾಗುತ್ತದೆ. ಅಲ್ಲಿಂದ ಏಷ್ಯಾಖಂಡ ದಲ್ಲಿಯೇ ಮೊದಲ ಬಾರಿಗೆ ಜಲ ವಿದ್ಯುತ್ ಉತ್ಪಾದನೆ ಮಾಡಿದ ಶಿಂಷಾ ಗ್ರಾಮವೂ ಗೋಚರಿಸುತ್ತದೆ.
ಒಟ್ಟಾರೆ ಸೌಲಭ್ಯಗಳೇ ಇಲ್ಲದಿದ್ದರೂ ಪ್ರಕೃತಿ ಸೊಬಗನ್ನು ಮೈದುಂಬಿ ಕೊಂಡು ಹರಿಯುತ್ತಿರುವ ಕೊಂಡ ಜಲಪಾತ ಸ್ವಲ್ಪಸ್ವಲ್ಪವೇ ಪ್ರಚಾರಕ್ಕೆ ಬರುತ್ತಿದೆ. ಸ್ಥಳೀಯ ಗ್ರಾ.ಪಂ. ಅಥವಾ ಪ್ರವಾಸೋದ್ಯಮ ಇಲಾಖೆ ಈ ಜಲಪಾತಕ್ಕೆ ಸ್ವಷ್ಟ ರೂಪಕೊಟ್ಟರೆ ಇದೊಂದು ಉತ್ತಮ ಪ್ರವಾಸಿ ತಾಣವಾಗುವುದರಲ್ಲಿ ಅನುಮಾನವೇ ಇಲ್ಲ. ಅಂತಹ ಸೌಲಭ್ಯ ಸಿಕ್ಕಿ ಇದೊಂದು ಹೆಸರುವಾಸಿ ಜಲಪಾತವಾಗಲಿ ಎಂಬುದೇ ಈ ಲೇಖನದ ಉದ್ದೇಶ.
ವಿಡಿಯೋಗಳು:.ದೇವೇಗೌಡ ಆಧುನಿಕ ಭಸ್ಮಾಸುರ: ಬಚ್ಚೇಗೌಡ | ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡು |
ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ | ಟ್ವಿಟ್ಟರಲ್ಲಿ ಹಿಂಬಾಲಿಸಿ | ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಸುದ್ದಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications