ಬಳುಕುತ ಭೋರ್ಗರೆಯುತ್ತಿರುವ ಇರ್ಪು ಜಲಧಾರೆ

Iruppu falls in Coorg
ಧಾರಾಕಾರ ಮಳೆಗೆ ಮೈಕೈ ತುಂಬಿಕೊಂಡು ಹೆಬ್ಬಂಡೆಗಳ ಮೇಲೆ ಹಾಲ್ನೊರೆಯುಕ್ಕಿಸುತ್ತಾ ಭೋರ್ಗರೆಯುವ ಜಲಧಾರೆಗಳನ್ನು ವೀಕ್ಷಿಸಲು ಪ್ರವಾಸಿಗರ ದಂಡು ಕೊಡಗಿನತ್ತ ಆಗಮಿಸುತ್ತಿದ್ದು ವೀರಾಜಪೇಟೆ ತಾಲೂಕಿನ ಶ್ರೀಮಂಗಲ ಬಳಿಯ ಇರ್ಪು ಜಲಧಾರೆ ಇದೀಗ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ.

ಇಲ್ಲಿರುವ ಜಲಪಾತಗಳಿಗೆ ಹೋಲಿಸಿದರೆ ಇರ್ಪು ಜಲಪಾತ ತನ್ನದೇ ಆದ ವೈಶಿಷ್ಟ್ಯತೆಯಿಂದ ಗಮನಸೆಳೆಯುತ್ತದೆ. ಈ ಜಲಪಾತ ಅತಿ ಎತ್ತರದಿಂದ ಎರಡು ಹಂತದಲ್ಲಿ ಇಳೆಯೆಡೆಗೆ ಧುಮುಕಿ ಬಳಿಕ ಚಿಕ್ಕಾತಿಚಿಕ್ಕ ಜಲಧಾರೆಗಳಾಗಿ ಹರಿಯುವಾಗ ಕಂಗೊಳಿಸುವ ದೃಶ್ಯ ಸುಂದರ... ರಮಣೀಯ...

ಪರಮ ಪವಿತ್ರ ಜಲಧಾರೆ : ಬೇಸಿಗೆಯಲ್ಲಿ ತನ್ನ ಸೌಂದರ್ಯ ಕಳೆದುಕೊಂಡ ಜಲಪಾತ, ಮಳೆಗಾಲದಲ್ಲಿ ಧಾರಾಕಾರವಾಗಿ ಮಳೆಸುರಿಯುವಾಗ ಭೋರ್ಗರೆದು ಧುಮುಕುವ ರುದ್ರರಮಣೀಯ ದೃಶ್ಯ ನೋಡುಗರ ಮನಪಟಲದಲ್ಲಿ ಅಚ್ಚಳಿಯದಂತೆ ಉಳಿದುಬಿಡುತ್ತದೆ. ಲಕ್ಷ್ಮಣತೀರ್ಥ ನದಿಯಿಂದ ನಿರ್ಮಿತವಾಗಿರುವ ಜಲಪಾತವು ಕೇವಲ ಜಲಪಾತ ಮಾತ್ರವಾಗಿರದೆ ಪರಮಪವಿತ್ರವಾಗಿ, ಇಷ್ಟಾರ್ಥಗಳನ್ನು ನೆರವೇರಿಸುವ ಜಲಧಾರೆಯಾಗಿ ಕೊಡಗಿನವರ ನಂಬಿಕೆಗೆ ಪಾತ್ರವಾಗಿದೆ.

ಹೋಗುವುದು ಹೇಗೆ? : ಜಲಪಾತವನ್ನು ನೋಡಲು ಬರುವವರು ಮಡಿಕೇರಿ ಕಡೆಯಿಂದ ಬರುವುದಾದರೆ ಮೂರ್ನಾಡು, ವೀರಾಜಪೇಟೆ, ಗೋಣಿಕೊಪ್ಪ, ಶ್ರೀಮಂಗಲ ಮೂಲಕ ಹಾಗೂ ಮೈಸೂರಿನಿಂದ ಬಂದರೆ ಹುಣಸೂರು, ಪಂಚವಳ್ಳಿ, ಗೋಣಿಕೊಪ್ಪ ಮೂಲಕ ಇರ್ಪುಗೆ ಬಂದರೆ ಅಲ್ಲಿನ ರಾಮೇಶ್ವರ ದೇವಾಲಯಕ್ಕೆ ಒಂದು ಕಿ.ಮೀ. ದೂರದಲ್ಲಿದೆ. ಜಲಪಾತ ತನ್ನ ಮೋಹಕತೆ, ಕುಲುಕುಲು ಸೌಂದರ್ಯ, ವಯ್ಯಾರದ ನಾಟ್ಯ, ಜುಳುಜುಳು ನಿನಾದದೊಂದಿಗೆ ಸುಮಾರು ಎಪ್ಪತ್ತು ಅಡಿಯಷ್ಟು ಎತ್ತರದಿಂದ ಧುಮುಕಿ, ಅಲ್ಲಿಂದ ಮತ್ತೆ ನೂರು ಅಡಿಯಷ್ಟು ಕೆಳಕ್ಕೆ ಜಿಗಿಯುತ್ತಾ, ಅಲ್ಲಿಂದ ಅಂಕುಡೊಂಕಾಗಿ ಹರಿದು ಚಿಕ್ಕಾತಿ ಚಿಕ್ಕ ಜಲಧಾರೆಗಳನ್ನು ಸೃಷ್ಟಿಸಿದೆ. ಸುಮಾರು ಇನ್ನೂರು ಅಡಿಯಷ್ಟು ಎತ್ತರದಿಂದ ಪ್ರಮುಖವಾಗಿ ಎರಡು ಹಂತಗಳಲ್ಲಿ ಧುಮುಕಿ ಹರಿಯುವ ಜಲಧಾರೆಯ ಸೊಬಗನ್ನು ಹತ್ತಿರದಿಂದ ಸವಿಯುವುದೆಂದರೆ ಮರೆಯಲಾಗದ ಅನುಭವವಾಗುತ್ತದೆ.

ಈ ಜಲಧಾರೆಗೆ ತಲೆಕೊಟ್ಟು ಮೀಯುವುದೆಂದರೆ ಇಲ್ಲಿನವರು ಪವಿತ್ರವೆಂದು ನಂಬುತ್ತಾರೆ. ಪ್ರತಿವರ್ಷದ ಶಿವರಾತ್ರಿಯಂದು ಇಲ್ಲಿ ಜಾತ್ರೆ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಸ್ನಾನಗೈಯ್ಯಲು ಸಹಸ್ರಾರು ಮಂದಿ ಆಗಮಿಸುತ್ತಾರೆ. ತಾತ್ಕಾಲಿಕವಾಗಿ ಕಟ್ಟಲಾಗುವ ಮರದ ಅಟ್ಟಳಿಗೆಯಲ್ಲಿ ನಿಂತು ಮೀಯುವುದು ರೂಢಿ. ಹೀಗೆ ಸ್ನಾನ ಮಾಡಿದರೆ ಬೇಡಿದ ಫಲ ಒದಗುತ್ತದೆ ಎಂಬ ಪ್ರಬಲ ನಂಬಿಕೆಯಿದೆ. ಅದರಲ್ಲೂ ನವದಂಪತಿಗಳು ಕೈಕೈ ಹಿಡಿದು ಸ್ನಾನ ಮಾಡಿದರೆ ಬಯಸಿದ್ದು ಈಡೇರುತ್ತದೆ ಎಂಬ ನಂಬಿಕೆ ಇಲ್ಲಿನವರದ್ದಾಗಿದೆ.

ಲಕ್ಷ್ಮಣ ಸೃಷ್ಟಿಸಿದ ಜಲಪಾತ : ಇನ್ನು ಈ ಜಲಪಾತ ಹೇಗೆ ಸೃಷ್ಟಿಯಾಯಿತು ಎಂಬುದಕ್ಕೂ ಇಲ್ಲೊಂದು ಪುರಾಣ ಕಥೆಯಿರುವುದನ್ನು ನಾವು ಕಾಣಬಹುದು. ಅದೇನೆಂದರೆ ಸೀತೆಯನ್ನು ಅರಸುತ್ತಾ ಹೊರಟ ರಾಮಲಕ್ಷ್ಮಣರು ಬ್ರಹ್ಮಗಿರಿಯ ತಪ್ಪಲಿಗೆ ಬರುತ್ತಾರೆ. ಈ ಬೆಟ್ಟ ದಾಟಿದರೆ ಕೇರಳ ಸೀಮೆ. ಎಲ್ಲರೂ ಬೆಟ್ಟಗುಡ್ಡಗಳನ್ನು ದಾಟಿ ಶ್ರೀರಾಮ ಸೇರಿದಂತೆ ವಾನರರು ನಡೆಯುತ್ತಿದ್ದರೆ ಕೋಪಗೊಂಡ ಲಕ್ಷ್ಮಣ ಮುಂದಕ್ಕೆ ಹೆಜ್ಜೆಯಿರಿಸದೆ ಅಲ್ಲಿಯೇ ಕುಳಿತುಕೊಂಡನಂತೆ. ಎಂದೂ ರಾಮನಿಗೆ ಎದುರಾಡದ ಲಕ್ಷ್ಮಣ ಅಂದು ಕೋಪಗೊಂಡು ಕುಳಿತದ್ದೇ ಮಲಯಾಳದಲ್ಲಿ ಇರಿಕ್ಕನ್ (ಕುಳಿತುಕೊಳ್ಳುವುದು) ಪದದಿಂದ ಇರ್ಪು ಹುಟ್ಟಿತೆಂದು ಹೇಳಲಾಗುತ್ತಿದೆ.

ಕೆಲಕಾಲದ ನಂತರ ಶಾಂತಗೊಂಡ ಲಕ್ಷ್ಮಣ ತನ್ನ ವರ್ತನೆಗೆ ನಾಚಿ ಅಣ್ಣ ಶ್ರೀರಾಮನನ್ನು ನೋಯಿಸಿದ್ದಕ್ಕಾಗಿ ಅಗ್ನಿಕುಂಡ ನಿರ್ಮಿಸಿ ಅದರಲ್ಲಿ ಆತ್ಮಾಹುತಿ ಮಾಡಲು ನಿರ್ಧರಿಸಿದನಂತೆ. ಇದನ್ನು ಕಂಡ ರಾಮ ಭಯಗೊಂಡು ಲಕ್ಷ್ಮಣನನ್ನು ಸಮಾಧಾನಗೊಳಿಸಿ ಆತನ ತಪ್ಪನ್ನು ಕ್ಷಮಿಸಿದ. ಇದರಿಂದ ಸಂತೋಷಗೊಂಡ ಲಕ್ಷ್ಮಣ ತಾನು ನಿರ್ಮಿಸಿದ ಅಗ್ನಿಕುಂಡವನ್ನು ಆರಿಸಲು(ನಂದಿಸಲು) ಬಾಣಬಿಟ್ಟನಂತೆ ಹಾಗೆ ಬಿಟ್ಟ ಬಾಣ ಜಲಧಾರೆಯನ್ನು ಸೃಷ್ಟಿಸಿ ಅಗ್ನಿಕುಂಡವನ್ನು ನಂದಿಸಿತಂತೆ. ಈ ರೀತಿ ಸೃಷ್ಟಿಯಾದ ಇರ್ಪು ಜಲಧಾರೆಯನ್ನು ರಾಮನೇ ಲಕ್ಷ್ಮಣತೀರ್ಥವೆಂದು ಹೆಸರಿಸಿ ಎಲ್ಲರೂ ಕುಡಿದು ಸಂತುಷ್ಟಗೊಂಡರಂತೆ. ಆದುದರಿಂದ ಇಂದಿಗೂ ಇರ್ಪು ಜಲಪಾತ ಪರಮಪವಿತ್ರ ಜಲಧಾರೆಯಾಗಿಯೇ ಉಳಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+