ಸರ್ಕಾರಿ ಭವನವಾಗಿ ಸೊರಗಿದ ಮಡಿಕೇರಿ ಅರಮನೆ

Madikeri Palace
ಕೊಡಗಿನ ಮುಖ್ಯ ಪಟ್ಟಣ ಮಡಿಕೇರಿಯಲ್ಲಿರುವ ಅರಮನೆ ಮೈಸೂರು ಅರಮನೆಯಂತೆ ವಿಶ್ವವಿಖ್ಯಾತಿ ಪಡೆಯದಿರಬಹುದು ಆದರೆ ತನ್ನದೇ ವಾಸ್ತುಶಿಲ್ಪದೊಂದಿಗೆ ನಿರ್ಮಾಣಗೊಂಡಿರುವ ಈ ಅರಮನೆಗೆ ಸುಮಾರು ಮೂರು ಶತಮಾನಗಳ ಇತಿಹಾಸವಿದೆ.

ಅಂದು ರಾಜವೈಭದಲ್ಲಿದ್ದ ಅರಮನೆ ಇಂದು ಸ್ಮಾರಕವಾಗಿ ದೂರದಿಂದ ಬರುವ ಪ್ರವಾಸಿಗರಿಗೆ ಇಲ್ಲಿನ ಚರಿತ್ರೆಯನ್ನು ಸಾರಿ ಹೇಳಬೇಕಾಗಿತ್ತು. ಆದರೀಗ ಅರಮನೆ ಪಕ್ಕಾ ಸರಕಾರಿ ಭವನವಾಗಿ ಮಾರ್ಪಟ್ಟಿದೆ. ಇವತ್ತು ಮಡಿಕೇರಿಗೆ ಆಗಮಿಸಿದ ಪ್ರವಾಸಿಗರು ನಗರದ ಹೃದಯ ಭಾಗದಲ್ಲಿರುವ ಕೋಟೆಯೆಡೆಗೆ ಧಾವಿಸಿ ಒಳಗಿನ ಅರಮನೆಯತ್ತ ಹೆಜ್ಜೆ ಹಾಕಿ ಎಲ್ಲವನ್ನೂ ವೀಕ್ಷಿಸಿ ಹೊರ ಹೋಗುವಾಗ ಅವರನ್ನೊಮ್ಮೆ ಮಾತನಾಡಿಸಿ ನೋಡಿ ಆಗ ಅವರ ಬಾಯಿಯಿಂದ ಇದು ಅರಮನೆಯಾ ಅಥವಾ ಸರಕಾರಿ ಭವನವೋ? ಗತವೈಭವವನ್ನು ಸಾರುವಂತಹ ಸ್ಮಾರಕವೊಂದನ್ನು ಸಂರಕ್ಷಿಸುವ ರೀತಿಯಾ? ಎಂಬಂತಹ ಅಸಮಾಧಾನದ ಪ್ರಶ್ನೆಗಳು ಈಗಿನ ಅರಮನೆಯ ಕಥೆ-ವ್ಯಥೆಯನ್ನು ಹೇಳುತ್ತವೆ.

ಅಶುಚಿತ್ವ, ಮಾಹಿತಿ ಕೊರತೆ, ಜನಜಂಗುಳಿಯ ಗದ್ದಲ, ವಾಹನಗಳ ಆರ್ಭಟ, ಇನ್ನು ಹಲವಾರು ಸಮಸ್ಯೆಗಳಿಂದಾಗಿ ಅರಮನೆ ತನ್ನ ಸ್ವರೂಪವನ್ನು ಎಲ್ಲೋ ಒಂದು ಕಡೆಯಿಂದ ಕಳೆದುಕೊಳ್ಳುತ್ತಾ ಬರುತ್ತಿದೆಯೇನೋ ಎಂಬಂತೆ ಭಾಸವಾಗುತ್ತಿದೆ.

ಹಾಗೆ ನೋಡಿದರೆ ಅರಮನೆ, ಸುತ್ತಲಿನ ಕೋಟೆ, ಸನಿಹದಲ್ಲಿ ನೆಲೆನಿಂತ ಹಲವು ಸ್ಮಾರಕಗಳಿಗೆಲ್ಲಾ ಸುಧೀರ್ಘವಾದ ಇತಿಹಾಸವಿರುವುದನ್ನು ನಾವು ಕಾಣಬಹುದು. ಸುಮಾರು ಮುನ್ನೂರ ಮೂವತ್ತು ವರ್ಷಗಳ ಹಿಂದೆ ಬೆಟ್ಟವೊಂದನ್ನು ಸಮತಟ್ಟು ಮಾಡಿ ಕೋಟೆಯನ್ನೂ ಹಾಗೂ ಅರಮನೆಯನ್ನು ನಿರ್ಮಿಸಿದ್ದು ಹಾಲೇರಿ ವಂಶದ ರಾಜ ಮುದ್ದುರಾಜ. ಹಾಗಾಗಿ ಮುದ್ದುರಾಜ ನಿರ್ಮಿಸಿದ ಊರು ಮುದ್ದುರಾಜಕೇರಿಯಾಗಿ ಆಮೇಲೆ ಮಡಿಕೇರಿಯಾಯಿತು. ಬ್ರಿಟಿಷರು ಮರ್ಕೆರಾ ಎಂದು ಕರೆದರೂ ಮಡಿಕೇರಿಯಾಗಿಯೇ ಉಳಿದಿದೆ.

ಅರಮನೆ ಹುಟ್ಟಿ, ಬೆಳೆದ ಕಥೆ: 1681ರಲ್ಲಿ ನಿರ್ಮಾಣವಾದಾಗ ಬರೀ ಮಣ್ಣಿನಿಂದ ನಿರ್ಮಿಸಿದ ಕೋಟೆಯಾಗಿತ್ತು. ಮುದ್ದುರಾಜ ನಿರ್ಮಿಸಿದ ಕೋಟೆಯನ್ನು ನಂತರ ವಶಪಡಿಸಿಕೊಂಡ ಟಿಪ್ಪು ಸುಲ್ತಾನ್ ಮಣ್ಣಿನಕೋಟೆಯನ್ನು ಕಲ್ಲಿನ ಕೋಟೆಯಾಗಿ ಮಾರ್ಪಡಿಸಿದನಲ್ಲದೆ, "ಜಾಫರಾಬಾದ್" ಎಂಬ ಹೆಸರಿಟ್ಟನು. ಆ ಬಳಿಕ 1734ರಲ್ಲಿ ಇದು ಬ್ರಟಿಷರ ವಶವಾಯಿತು. ಮಡಿಕೇರಿ ನಗರದ ನಡುವೆ ಸ್ವಲ್ಪ ಎತ್ತರ ಪ್ರದೇಶದಲ್ಲಿ ಕೋಟೆ ಹಾಗೂ ಅರಮನೆ ನಿರ್ಮಾಣಗೊಂಡಿದೆ. ಕೋಟೆಯು ಅಂಕುಡೊಂಕಾದ ಷಡ್ಕೋನಾಕಾರದ ಸ್ಥಳ ವಿನ್ಯಾಸವನ್ನು ಹೊಂದಿದ್ದು, ಆರು ವಿವಿಧ ಮೂಲೆಗಳಲ್ಲಿ ಬುರುಜನ್ನು ಹೊಂದಿದೆ.

ಈ ಬುರುಜುಗಳಿಂದ ನಿಂತು ನೋಡಿದರೆ ನಗರದ ವಿಹಂಗಮ ನೋಟ ಲಭ್ಯವಾಗುತ್ತದೆ. ಕೋಟೆಯ ಮಹಾದ್ವಾರವು ಪೂರ್ವಾಭಿಮುಖವಾಗಿದ್ದು, ಈ ದ್ವಾರದಿಂದ ಪ್ರವೇಶಿಸಿ ಮೊದಲ ದ್ವಾರ ದಾಟುತ್ತಿದ್ದಂತೆಯೇ ಗಣಪತಿ ದೇಗುಲ ಸಿಗುತ್ತದೆ. ಅಲ್ಲಿಂದ ಮುಂದೆ ಸಿಗುವ ದ್ವಾರ ಪ್ರವೇಶಿಸಿ ಮುನ್ನಡೆದರೆ ಅರಮನೆ ಎದುರಾಗುತ್ತದೆ. ಅರಮನೆಯು 1814ರ ನಂತರದ ವರ್ಷಗಳಲ್ಲಿ ಪುನರ್ರಚನೆಗೊಂಡಿದ್ದು, ಎರಡನೆಯ ಲಿಂಗರಾಜನ ಕಾಲದಲ್ಲಿದ್ದ ಹುಲ್ಲಿನ ಛಾವಣಿಯನ್ನು ತೆಗೆದು ಬ್ರಿಟಿಷರು ಹೆಂಚು ಹಾಕಿದರು. ಅರಮನೆಯ ಆರಂಭ ಮತ್ತು ಮುಕ್ತಾಯದ ಬಗೆಗೆ ಇಲ್ಲಿನ ಹಿತ್ತಾಳೆಯ ಫಲಕ ಮಾಹಿತಿ ನೀಡುತ್ತದೆ.

ಎರಡು ಅಂತಸ್ತನ್ನು ಹೊಂದಿರುವ ಅರಮನೆಯು ಚೌರಸ್ ಸ್ಥಳ ವಿನ್ಯಾಸವನ್ನು ಹೊಂದಿದೆ. ವಿಶಾಲ ಹಜಾರಗಳನ್ನು ಸಭಾ ಭವನವನ್ನು ಹೊಂದಿರುವ ಅರಮನೆಯ ಭಿತ್ತಿಗಳಲ್ಲಿ ವಿವಿಧ ಚಿತ್ರಗಳು ಮೂಡಿವೆ. ವಾಸ್ತುಶಿಲ್ಪ ವಿನ್ಯಾಸದಲ್ಲಿ ಹೊಸತನವಿದ್ದು, ಆಕರ್ಷಣೀಯವಾಗಿದೆ. ಸುಮಾರು 100 ಅಡಿಯಷ್ಟು ಅಗಲವಿರುವ ಕಟ್ಟಡದಲ್ಲಿ ಕಮಾನು ಹಾಗೂ ಎತ್ತರವಾದ ಚೌಕಾಕಾರದ ಕಿಟಕಿಗಳು ಬಣ್ಣದ ಗಾಜುಗಳಿಂದ ಕೂಡಿದ್ದು ಗಮನಸೆಳೆಯುತ್ತವೆ.

ಅರಮನೆ ಒಳ ನೋಟ: ಅರಮನೆಯ ಒಳ ಪ್ರವೇಶಿಸಿದರೆ ಕೆರೆಯೇನೋ ಎಂಬಂತಹ ವಿಶಾಲ ಪ್ರಾಂಗಣವಿದ್ದು, ಅದರ ಮಧ್ಯೆ ಆಮೆಯೊಂದು ಕಾಣಿಸುತ್ತದೆ. ಕಲ್ಲಿನ ಆಮೆಯ ಆಕೃತಿಯು ರಾಜರ ಕಾಲದಲ್ಲಿ ರಹಸ್ಯ ಮಾರ್ಗದ ಪ್ರವೇಶ ದ್ವಾರವಾಗಿತ್ತೆಂದು ಹೇಳಲಾಗಿದೆ. ಮುಂಭಾಗದ ಪ್ರವೇಶ ದ್ವಾರದಲ್ಲಿ ಎರಡು ಕುದುರೆಗಳು ನೆಗೆಯುತ್ತಿರುವ ಕೆತ್ತನೆಯ ವೀಕ್ಷಕ ಮಂಟಪ ಕಾಣಸಿಗುತ್ತದೆ. ಅರಮನೆಯ ಎಡ ಪಾರ್ಶ್ವದ ಮುಂಭಾಗದಲ್ಲಿ ಕಲ್ಲಿನಿಂದ ಕೆತ್ತಲಾದ ಎರಡು ಆನೆಗಳು ಆಕರ್ಷಕವಾಗಿವೆ. ಅರಮನೆಯ ಒಂದು ಪಾರ್ಶ್ವದಲ್ಲಿ ಗಡಿಯಾರ ಗೋಪುರ ಕಂಡು ಬರುತ್ತದೆ.

ಅರಮನೆ ಆವರಣದಲ್ಲಿ ವಸ್ತು ಸಂಗ್ರಹಾಲಯವಿದ್ದು, ಈ ಸಂಗ್ರಹಾಲಯದ ಕಟ್ಟಡ ಹಿಂದೆ ಚರ್ಚ್ ಆಗಿತ್ತಂತೆ. ಕೋನಾಕಾರದ ಗಾಥಿಕ್ ಶೈಲಿಯ ಗೋಪುರವನ್ನು ಹೊಂದಿರುವ ಈ ಕಟ್ಟಡ ಕೋನಾಕಾರದ ಕಮಾನುಗಳ ಕಿಟಿಕಿಯೊಂದಿಗೆ ಸುಂದರವಾಗಿದೆ. ಪಕ್ಕದಲ್ಲಿಯೇ ಮಹಾತ್ಮಗಾಂಧಿ ಕೇಂದ್ರ ಗ್ರಂಥಾಲಯವಿದೆ. ಹಿಂದೆ ತಪ್ಪಿತಸ್ಥರನ್ನು ಗಲ್ಲಿಗೇರಿಸುತ್ತಿದ್ದರೆನ್ನಲಾದ ಬಾವಿಯಿದ್ದು, ಇದರತ್ತ ತೆರಳುವ ಪ್ರವಾಸಿಗರು ಕುತೂಹಲದ ನೋಟ ಬೀರುತ್ತಾರೆ. ಮಡಿಕೇರಿ ಅರಮನೆ ಆಕರ್ಷಕ, ಇತಿಹಾಸ ರೋಮಾಂಚಕ.

ಕಿರಿಕಿರಿ ತಾಣವಾದ ಅರಮನೆ: ಅದರೆ ಇವತ್ತು ಅರಮನೆ ಅರಮನೆಯಾಗಿ ಉಳಿಯದಿರುವುದು ದುರಂತ. ಜಿಲ್ಲಾಧಿಕಾರಿಗಳ ಕಛೇರಿ ಸೇರಿದಂತೆ ಹಲವಾರು ಇಲಾಖೆಗಳ ಕಛೇರಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಅರಮನೆ ಹಿಂಭಾಗವೇ ನ್ಯಾಯಾಲಯದ ಕಟ್ಟಡವಿದೆ. ಅರಮನೆಯಲ್ಲಿಯೇ ಜಿಲ್ಲಾಧಿಕಾರಿಗಳ ಕಛೇರಿಯಿರುವುದರಿಂದ ಮುಷ್ಕರ, ಪ್ರತಿಭಟನೆ ಮುಂತಾದವುಗಳು ನಡೆಯುವುದರಿಂದ ಸದಾ ಜನಜಂಗುಳಿ ನೆರೆದಿರುತ್ತದೆ. ಇದು ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಕಿರಿಕಿರಿ ಉಂಟು ಮಾಡುತ್ತದೆ.

ಅಷ್ಟೇ ಅಲ್ಲ ಮಾಹಿತಿ ನೀಡಲು ಕೂಡ ಯಾರು ಇಲ್ಲದೆ ಇರುವುದು ಬೇಸರ ತರಿಸುತ್ತದೆ. ಜೊತೆಗೆ ಅರಮನೆಯ ಕೆಲವೆಡೆಗಳಲ್ಲಿ ಧೂಳು, ಜೇಡರಬಲೆ ಸಾಮಾನ್ಯವಾಗಿದೆ. ಅರಮನೆ ಆವರಣದಲ್ಲಿರುವ ಉದ್ಯಾನವನವೂ ಕೂಡ ಆಕರ್ಷಿಸುವಲ್ಲಿ ವಿಫಲವಾಗಿದೆ. ಇಲ್ಲಿ ಸೂಕ್ತವಾದ ಶೌಚಾಲಯವಿಲ್ಲದಿರುವುದರಿಂದ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡಿ ಗಬ್ಬುವಾಸನೆ ಅಸಹ್ಯ ಮೂಡಿಸುತ್ತದೆ. ಹಿಂದೆ ಕೋಟೆ ಆವರಣದಲ್ಲಿಯೇ ಕಾರಾಗ್ರಹವಿತ್ತಾದರೂ ಅದನ್ನೀಗ ಬೇರೆಡೆಗೆ ಸ್ಥಳಾಂತರಿಸಲಾಗಿದೆ.

ಸೂಕ್ತ ಸ್ಥಳದಲ್ಲಿ ಆಡಳಿತ ಭವನ ನಿರ್ಮಿಸಿ ಅಲ್ಲಿಗೆ ಕಛೇರಿಗಳನ್ನು ಸ್ಥಳಾಂತರಿಸುವ ಪ್ರಸ್ತಾವನೆ ನಡೆಯುತ್ತಿದೆಯಾದರೂ ಅದು ಸಧ್ಯಕ್ಕೆ ಆಗುವ ಲಕ್ಷಣಗಳು ಕಾಣದ ಹಿನ್ನಲೆಯಲ್ಲಿ ಪ್ರಾಚ್ಯವಸ್ತು ಸಂಶೋಧನಾ ಇಲಾಖೆ ಮೌನಕ್ಕೆ ಶರಣಾಗಿದೆ.

ಇತಿಹಾಸ, ಭವ್ಯ ಪರಂಪರೆಯನ್ನು ನಾಡಿಗೆ ಸಾರುವ ಮೂಲಕ ಸ್ಮಾರಕವಾಗಿ ನಿಂತಿರುವ ಮಡಿಕೇರಿ ಅರಮನೆಯನ್ನು ಇನ್ನೊಂದಷ್ಟು ಅಭಿವೃದ್ಧಿಗೊಳಿಸಿ ಮುಂದಿನ ಪೀಳಿಗೆಗೂ ಸಂರಕ್ಷಿಸುವ ಕಾರ್ಯ ತುರ್ತಾಗಿ ಆಗಬೇಕಿದೆ. ಇದು ಸಾಧ್ಯವೆ? ಎಂಬುವುದು ಮಾತ್ರ ನಮ್ಮೆಲ್ಲರ ಮುಂದೆ ಪ್ರಶ್ನೆಯಾಗಿಯೇ ಉಳಿಯುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+