ಕೊರೊನಾವೈರಸ್ ಗುಣಮುಖರನ್ನೂ ಬಿಡುತ್ತಿಲ್ಲ ಈ ಆರೋಗ್ಯ ಸಮಸ್ಯೆಗಳು!?
ಬೆಂಗಳೂರು, ಅಕ್ಟೋಬರ್ 11: ಕೊರೊನಾವೈರಸ್ ಸೋಂಕಿನಿಂದ ಗುಣಮುಖರಾದವರು ನಿರಾಳರಾಗುವ ಪರಿಸ್ಥಿತಿ ಈಗಿಲ್ಲ. ಕೊವಿಡ್-19 ಸೋಂಕು ಕಾಣಿಸಿಕೊಂಡವರಲ್ಲಿ ಕೆಲವು ದೀರ್ಘಾವಧಿ ಆರೋಗ್ಯ ಸಮಸ್ಯೆಗಳು ಗೋಚರಿಸುತ್ತಿರುವುದರ ಬಗ್ಗೆ ವರದಿಯಾಗಿದೆ.
ಕೊವಿಡ್-19 ಸೋಂಕಿತರಲ್ಲಿ ಯಾವ ರೀತಿ ಲಕ್ಷಣಗಳು ಗೋಚರಿಸುತ್ತವೆ, ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂಬುದರ ಬಗ್ಗೆ ಈಗಾಗಲೇ ಸರ್ವೇ ಸಾಮಾನ್ಯವಾಗಿ ಗೊತ್ತಿದೆ. ಆದರೆ ಕೊರೊನಾವೈರಸ್ ಸೋಂಕಿನಿಂದ ಗುಣಮುಖರಾದವರಲ್ಲೂ ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.
ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಆಯಾಸ, ಶ್ವಾಸಕೋಶ ಸಮಸ್ಯೆ, ಹೃದಯ ಸಂಬಂಧಿತ ಕಾಯಿಲೆ ಹಾಗೂ ಸ್ನಾಯು ಸೆಳೆತದ ಸಮಸ್ಯೆಗಳು ಸೇರಿದಂತೆ ಹಲವು ರೀತಿಯ ಆರೋಗ್ಯ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ. ಕೊರೊನಾವೈರಸ್ ಸೋಂಕು ಈ ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆಯಾ?, ಈ ಸಮಸ್ಯೆಗಳಿಗೆ ಮೂಲ ಕಾರಣವೇನು?, ಕೊವಿಡ್-19 ಗುಣಮುಖರಲ್ಲಿ ಕಾಣಿಸಿಕೊಳ್ಳುವ ಆರೋಗ್ಯ ತೊಂದರೆಗಳ ಬಗ್ಗೆ ವೈದ್ಯರು ಹೇಳುವುದೇನು?, ಆರೋಗ್ಯ ಸಮಸ್ಯೆ ನಿವಾರಣೆಗೆ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಮುಂದೆ ಓದಿ.

ಕೊವಿಡ್-19 ಸೋಂಕಿನಿಂದ ಗುಣಮುಖರಾದ ಗೌರಮ್ಮ
ಕೊರೊನಾವೈರಸ್ ಸೋಂಕಿನಿಂದ ಗುಣಮುಖರಾದ 69 ವರ್ಷದ ಗೌರಮ್ಮ, ಈ ಮೊದಲು ಬೆಳಗ್ಗೆ 5 ಗಂಟೆಗೆ ಎದ್ದು ಹೈನುಗಾರಿಕೆ ಕಾರ್ಯದ ಜೊತೆಗೆ ಮನೆ ಕೆಲಸವನ್ನು ನಿಭಾಯಿಸುತ್ತಿದ್ದರು. ಆದರೆ ಕೊವಿಡ್-19 ಸೋಂಕಿನಿಂದ ಗುಣಮುಖರಾಗಿ 6 ತಿಂಗಳು ಕಳೆದರೂ ಹಾಸಿಗೆಯಿಂದ ಬೇಗ ಏಳುವುದಕ್ಕೆ ಆಗುತ್ತಿಲ್ಲ. "ನನಗೆ ಯಾರೊಂದಿಗೂ ಮಾತನಾಡುವುದಕ್ಕೆ ಸಾಧ್ಯವಾಗುತ್ತಿಲ್ಲ, ನಿಶಕ್ತಿಯಿಂದಾಗಿ ತುಂಬಾ ಆಯಾಸವಾಗುತ್ತಿದೆ " ಎಂದು ಸ್ವತಃ ಗೌರಮ್ಮ ಹೇಳಿದ್ದಾರೆ.

ರಾಜ್ಯದ ಗ್ರಾಮೀಣ ಭಾಗದಲ್ಲಿ ಕೊವಿಡ್-19 ದೀರ್ಘಕಾಲಿಕ ಲಕ್ಷಣ
ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾವೈರಸ್ ಸೋಂಕಿನಿಂದ ಗುಣಮುಖರಾದ ರೋಗಿಗಳ ಪೈಕಿ ನೂರಾರು ಜನರಿಗೆ ದೀರ್ಘಕಾಲಿಕ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ ಎಂದು ವೈದ್ಯರು ಹೇಳುತ್ತಿದ್ದಾರೆ. ನಗರ ಪ್ರದೇಶಗಳಲ್ಲೂ ಜನರು ಕೊವಿಡ್-19 ಗುಣಮುಖರು ಆಸ್ಪತ್ರೆಗಳಿಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆದುಕೊಳ್ಳುವಂತೆ ವೈದ್ಯರು ಹೇಳುತ್ತಿದ್ದಾರೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಯಾವುದೇ ರೀತಿ ಲಕ್ಷಣಗಳನ್ನು ಗುರುತಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಕೆಲವರು ಮನೋದೌರ್ಬಲ್ಯದಿಂದ ಮೃತಪಟ್ಟರೆ, ಇನ್ನು ಕೆಲವರು ಪಾರ್ಶ್ವವಾಯು, ಹೃದಯಾಘಾತದಿಂದ ಪ್ರಾಣ ಬಿಟ್ಟಿದ್ದಾರೆ.

ಆಯಾಸ ಎನ್ನುವುದು ಹಳ್ಳಿ ಜನರಿಗೆ ಒಂದು ಸಮಸ್ಯೆಯಲ್ಲ
"ಸಾಮಾನ್ಯವಾಗಿ ಆಯಾಸವನ್ನು ಒಂದು ಆರೋಗ್ಯ ಸಮಸ್ಯೆ ಎಂದು ಗ್ರಾಮೀಣ ಪ್ರದೇಶದ ಜನರು ತಿಳಿದುಕೊಳ್ಳುವುದೇ ಇಲ್ಲ. ಇಂತಹ ಅನೇಕ ಪ್ರಕರಣಗಳನ್ನು ನಾವು ನೋಡುತ್ತಿದ್ದೇವೆ. ಹಳ್ಳಿಗಳಲ್ಲಿ ಜನರು ಈ ರೋಗದ ಲಕ್ಷಣಗಳು ಕೊರೊನಾವೈರಸ್ ಸೋಂಕಿಗೆ ಸಂಬಂಧಿಸಿಲ್ಲ, ನನಗೆ ಏನಾಗಿದೆ ಎಂದು ಅವರು ಆಶ್ಚರ್ಯ ಪಡುತ್ತಾರೆ. ಆಯಾಸ ಎಂಬುದು ಒಂದು ಸಾಮಾನ್ಯ ಲಕ್ಷಣವಾಗಿದೆ. ಅನೇಕರು ಮಧುಮೇಹ ಕಾಯಿಲೆಯನ್ನು ಹೊಂದಿದ್ದರೆ, ಅದು ನಿಯಂತ್ರಣಕ್ಕೆ ಬರುವುದಿಲ್ಲ. ಉಳಿದ ಶ್ವಾಸಕೋಶದ ಸಮಸ್ಯೆಗಳು ಕೂಡ ಇದ್ದು, ಅವುಗಳನ್ನು ಪ್ರತಿ ತಿಂಗಳು ಪರಿಶೀಲಿಸಬೇಕು", ಎಂದು ಜಯದೇವ ಹೃದ್ರೋಗ ರೋಗಗಳ ಸಂಸ್ಥೆಯ ನಿರ್ದೇಶಕ ಡಾ. ಮಂಜುನಾಥ್ ತಿಳಿಸಿದ್ದಾರೆ.

ಎರಡು ಗಂಟೆ ನಿಲ್ಲುವುದಕ್ಕೂ ಆಗುವುದಿಲ್ಲ
ಹಿರೇಕೆರೂರು ಮೂಲದ 49 ವರ್ಷದ ರಾಮಪ್ಪ ಕಲ್ವಾಡ್ ಉದ್ಯೋಗದಲ್ಲಿ ಇಸ್ತ್ರಿ ಅಂಗಡಿ ಇಟ್ಟುಕೊಂಡಿದ್ದಾರೆ. ಕೊವಿಡ್-19 ಸೋಂಕಿನಿಂದ ಗುಣಮುಖರಾಗಿ 3 ತಿಂಗಳು ಕಳೆದರೂ ಇವರಲ್ಲಿ ಇಂದಿಗೂ ಆರೋಗ್ಯ ಸಮಸ್ಯೆ ಬೆನ್ನುಬಿಡದೇ ಕಾಡುತ್ತಿದೆ. ಆಯಾಸ ಹಾಗೂ ಸ್ನಾಯು ಸೆಳೆತ ನನ್ನ ದುಡಿಮೆಗೆ ಅಡ್ಡಿಯಾಗುತ್ತಿದೆ ಎನ್ನುವುದೇ ರಾಮಪ್ಪರ ನೋವಿನ ನುಡಿ. "ಲಾಕ್ ಡೌನ್ ಮೊದಲೇ ನನ್ನ ಉದ್ಯೋಗಕ್ಕೆ ಪೆಟ್ಟು ಕೊಟ್ಟಿದೆ. ಇದರ ಮಧ್ಯೆ ಮೊದಲು ನಾನು ಬಟ್ಟೆಗಳನ್ನು ಇಸ್ತ್ರಿ ಮಾಡುವುದಕ್ಕೆ ಏಳು ಗಂಟೆ ನಿಂತುಕೊಳ್ಳುತ್ತಿದ್ದೆನು. ಆದರೆ ಈಗ ನನ್ನ ಕಾಲುಗಳಲ್ಲಿನ ಸ್ನಾಯು ಸೆಳೆತದಿಂದಾಗಿ ಎರಡು ಗಂಟೆ ಸಹ ನಿಲ್ಲುವುದಕ್ಕೆ ಸಾಧ್ಯವಾಗುತ್ತಿಲ್ಲ. ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿದರೆ ಕೊವಿಡ್-19 ಸೋಂಕಿನ ನಂತರದಲ್ಲಿ ಈ ರೀತಿಯ ಆರೋಗ್ಯ ಸಮಸ್ಯೆಗಳು ಸರ್ವೇಸಾಮಾನ್ಯವೆಂದು ವೈದ್ಯರು ಹೇಳುತ್ತಿದ್ದಾರೆ," ಎಂದು ರಾಮಪ್ಪ ಹೇಳಿದ್ದಾರೆ.

ಕೊವಿಡ್-19 ಗುಣಮುಖರಲ್ಲಿ ಸಮಸ್ಯೆಗಳು ಒಂದೆರೆಡಲ್ಲ
ಕೊರೊನಾವೈರಸ್ ಸೋಂಕಿನಿಂದ ಗುಣಮುಖರಾದವರಲ್ಲಿ ಸ್ನಾಯು ಸೆಳೆತ ಒಂದು ಸಾಮಾನ್ಯ ಲಕ್ಷಣ ಎಂಬುದನ್ನು ವಿಕ್ಟೋರಿಯಾ ಆಸ್ಪತ್ರೆ ವೈದ್ಯ ಡಾ. ಚಂದ್ರಶೇಖರ್ ಸಹ ಒಪ್ಪಿಕೊಳ್ಳುತ್ತಾರೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS) ಮೂಲಕ ಕೋವಿಡ್ ನಂತರದ ಪರಿಣಾಮಗಳ ಅಧ್ಯಯನವನ್ನು ನಡೆಸಲಾಗಿದೆ. ಉದ್ಯೋಗ ಕಳೆದುಕೊಂಡಿರುವುದು, ಮದುವೆ ರದ್ದು ಆಗಿರುವುದು ಹಾಗೂ ಆಪ್ತರನ್ನು ಕಳೆದುಕೊಂಡಿರುವುದರಿಂದ ಕೆಲವು ರೋಗಿಗಳು ತೀವ್ರ ಖಿನ್ನತೆಗೆ ಒಳಗಾಗಿರುತ್ತಾರೆ. ಅಂಥವರಲ್ಲಿ ಕೋಪ, ನಿರಾಕರಣೆ ಮನೋಭಾವ ಹೆಚ್ಚಾಗಿರುತ್ತದೆ. ಇವು ಕೊವಿಡ್-19 ಸೋಂಕಿನ ನಂತರದ ದೈಹಿಕ ಸಮಸ್ಯೆಗಳಲ್ಲ ಬದಲಿಗೆ ಇವು ಮಾನಸಿಕ ಸಮಸ್ಯೆಗಳಾಗಿರುತ್ತವೆ.

ಕೊವಿಡ್-19 ಸೋಂಕಿನ ಸಾಮಾನ್ಯ ಲಕ್ಷಣಗಳ ಬಗ್ಗೆ ತಿಳಿಯೋಣ
ಸಾಮಾನ್ಯವಾಗಿ ಕೊರೊನಾವೈರಸ್ ಸೋಂಕಿನ ರೂಪಾಂತರಗಳು ಬದಲಾದಂತೆ ಸೋಂಕಿನ ಲಕ್ಷಣಗಳಲ್ಲಿ ಕೆಲವು ಬದಲಾವಣೆಗಳನ್ನು ಕಾಣುತ್ತೇವೆ. ಆದರೆ ಆರ್ 1 ರೂಪಾಂತರ ವೈರಸ್ ಸೋಂಕಿತರಲ್ಲಿ ಸಾಮಾನ್ಯ ಸೋಂಕಿನ ಲಕ್ಷಣಗಳೇ ಕಾಣಿಸಿಕೊಳ್ಳುತ್ತವೆ. ಹಾಗಿದ್ದರೆ ಸಾಮಾನ್ಯವಾಗಿ ಯಾವ ಲಕ್ಷಣಗಳು ಕೊರೊನಾವೈರಸ್ ಸೋಂಕಿನ ಅಪಾಯವನ್ನು ದೃಢಪಡಿಸುತ್ತವೆ ಎಂಬುದನ್ನು ಒಮ್ಮೆ ನೋಡಿ.
*ಜ್ವರ
*ಕೆಮ್ಮು
*ಉಸಿರಾಟ ತೊಂದರೆ
*ಶೀತ
*ಶೀತದ ಪುನರಾವರ್ತನೆ
*ಮೂಳೆಗಳಲ್ಲಿ ನೋವು
*ತಲೆನೋವು
*ಗಂಟಲು ಕೆರೆತ
*ರುಚಿ ಮತ್ತು ವಾಸನೆ ಗುರುತಿಸಲು ಆಗುವುದಿಲ್ಲ
*ಅತಿಸಾರ
*ವಾಂತಿ

ಕೊರೊನಾವೈರಸ್ ಗುಣಮುಖರಲ್ಲಿನ ರೋಗದ ಲಕ್ಷಣಗಳು
"ಕೊರೊನಾವೈರಸ್ ಸೋಂಕಿನಿಂದ ಗುಣಮುಖರಾದ ನಂತರದಲ್ಲಿ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ರಾಜೀವ್ ಗಾಂಧಿ ಹೃದ್ರೋಗ ರೋಗಗಳ ಸಂಸ್ಥೆ (ಆರ್‌ಜಿಐಸಿಡಿ)ಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ನಂತರದ ಆರೈಕೆ ಕೇಂದ್ರವನ್ನು ಪ್ರಾರಂಭಿಸಲು ಯೋಜಿಸಲಾಗುತ್ತಿದೆ," ಎಂದು ನಿರ್ದೇಶಕ ಸಿ ನಾಗರಾಜ್ ಹೇಳಿದ್ದಾರೆ. ಈ ಮಧ್ಯೆ ಕೊವಿಡ್-19 ಗುಣಮುಖರಲ್ಲಿ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಯ ಲಕ್ಷಣಗಳು ಇಂತಿವೆ.
*ತೀವ್ರ ತೂಕ ನಷ್ಟ
* ಆಯಾಸ
* ಅಲರ್ಜಿ
* ಖಿನ್ನತೆ
* ಶುದ್ಧತ್ವ ಮಟ್ಟದಲ್ಲಿ ಕುಸಿತ
* ಮನಸ್ಥಿತಿ ಬದಲಾವಣೆ
* ಪರಿಶ್ರಮದ ಪ್ರಮಾಣದಲ್ಲಿ ಇಳಿಕೆ

ಯಾವ ರೀತಿ ವೈದ್ಯಕೀಯ ಪರೀಕ್ಷೆಗಳು ಗುಣಮುಖರಿಗೆ ಅಗತ್ಯ
ಕೊವಿಡ್-19 ಸೋಂಕಿನಿಂದ ಗುಣಮುಖರಾದ ನಂತರದಲ್ಲೂ ಜನರು ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಜಾಗೃತಿ ವಹಿಸಬೇಕಾಗುತ್ತದೆ. ಗುಣಮುಖರಲ್ಲಿ ಕಾಣಿಸಿಕೊಳ್ಳುವ ರೋಗಗಳ ತಪಾಸಣೆಗೆ ಶ್ವಾಸಕೋಶದ ಕಾರ್ಯ ಪರೀಕ್ಷೆ(Pulmonary Function Test), ಶ್ವಾಸಕೋಶದ ಸ್ಥಿತಿಸ್ಥಾಪಕತ್ವ ಪರೀಕ್ಷೆ(Lung Elasticity Test), ಎದೆಯ ಕ್ಷ-ಕಿರಣ(chest X-ray), ಇಸಿಜಿ, ಎಚ್‌ಬಿ ಮಟ್ಟದ ಪರಿಶೀಲನೆ ನಡೆಸಲಾಗುತ್ತದೆ. ಎಲ್ಲಾ ಪಿಎಚ್‌ಸಿಗಳಲ್ಲಿ ಈ ಸೌಲಭ್ಯವಿಲ್ಲ ಹಾಗಾಗಿ ನಾವು ಮೊಬೈಲ್ ಕೇರ್ ಸೆಂಟರ್ ಅನ್ನು ಯೋಜಿಸುತ್ತಿದ್ದೇವೆ ಎಂದು ನಿರ್ದೇಶಕ ಸಿ ನಾಗರಾಜ್ ಹೇಳಿದ್ದಾರೆ. ಅಲ್ಲದೇ ಗ್ರಾಮೀಣ ಪ್ರದೇಶಗಳಲ್ಲಿ ಜನರು ತಮ್ಮ ಮಾನಸಿಕ ಆರೋಗ್ಯ ಸ್ಥಿತಿಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಪ್ರತಿತಿಂಗಳು ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ ಎಂದು ವೈದ್ಯರು ಸಲಹೆ ನೀಡುತ್ತಾರೆ.
Recommended Video

ದೇಶದಲ್ಲಿ ಕೊವಿಡ್-19 ಮತ್ತು ಸಾವಿನ ಸಂಖ್ಯೆ ಎಷ್ಟಿದೆ?
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 18,132 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಒಂದೇ ದಿನ 21,563 ಮಂದಿ ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದರೆ, ಇದೇ ಅವಧಿಯಲ್ಲಿ 193 ಮಂದಿ ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಸೋಮವಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಕೊರೊನಾವೈರಸ್ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2,27,347ರಷ್ಟಿದೆ. ಇದರ ಹೊರತಾಗಿ ದೇಶದಲ್ಲಿ 3,32,93,478 ಮಂದಿ ಸೋಂಕಿತರು ಗುಣಮುಖರಾಗಿದ್ದು, 4,50,782 ಮಂದಿ ಕೊರೊನಾವೈರಸ್ ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ.












Click it and Unblock the Notifications