ರವಿ ಬೆಳಗೆರೆಗೆ ವಿಧಿಸಿದ ಶಿಕ್ಷೆ ಖಂಡನಾರ್ಹ: ಸನತ್ ಕುಮಾರ್ ಬೆಳಗಲಿ
ಬೆಂಗಳೂರು, ಜೂನ್ 24: ವಿಧಾನಾಮಂಡಲದ ಕೆಲಸ ಕಾನೂನು ರಚನೆ ಮಾಡುವುದೇ ಹೊರತು, ಶಿಕ್ಷೆ ನೀಡುವುದಲ್ಲ. ಪತ್ರಕರ್ತ ರವಿ ಬೆಳಗೆರೆ ಅವರ ವಿರುದ್ಧ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವುದಕ್ಕೆ ಸೂಚನೆ ಮಾಡಿರುವುದು ದಮನಕಾರಿ ನೀತಿ. ಇದನ್ನು ಖಂಡಿಸುತ್ತೇನೆ ಎಂದು ಹಿರಿಯ ಪತ್ರಕರ್ತರಾದ ಸನತ್ ಕುಮಾರ್ ಬೆಳಗಲಿ ಅವರು ಶನಿವಾರ ಪ್ರತಿಕ್ರಿಯಿಸಿದ್ದಾರೆ.
ನಮ್ಮ ಸಂವಿಧಾನವೇ ಈ ವಿಚಾರವನ್ನು ಸ್ಪಷ್ಟಪಡಿಸುತ್ತದೆ ಶಾಸಕಾಂಗದ ಕೆಲಸ ಕಾನೂನು ರಚನೆ ಮಾಡುವುದೇ ವಿನಾ ಜಾರಿಯ ಜವಾಬ್ದಾರಿ ನ್ಯಾಯಾಂಗದ್ದಾಗಿರುತ್ತದೆ. ಬಹಳ ಹಿಂದಿನಿಂದಲೂ ಈ ವಿಚಾರದಲ್ಲಿ ಸಂಘರ್ಷಗಳು ನಡೆದುಕೊಂಡು ಬರುತ್ತಿವೆ. ಈ ರೀತಿಯ ಕ್ರಮಗಳು ಪತ್ರಿಕಾ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನಕಾರಿ ನೀತಿ ಎಂದು ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದರು.

ಸದನದಿಂದ ರಚನೆಯಾದ ಸಮಿತಿಯ ಮುಂದೆ ರವಿ ಬೆಳಗೆರೆಯವರು ಹಾಜರಾಗಿ ತಮ್ಮ ಅಭಿಪ್ರಾಯ ಅಥವಾ ಉತ್ತರ ದಾಖಲಿಸಬೇಕಿತ್ತು ಅನ್ನೋದು ನಿಜ. ಆದರೆ ಅದು ಸಣ್ಣ ಮಟ್ಟದ ತಾಂತ್ರಿಕ ದೋಷ ಅಷ್ಟೇ. ಅಂಥ ಸಣ್ಣ ದೋಷಕ್ಕೆ ಇಂಥ ಶಿಕ್ಷೆ ವಿಧಿಸುವುದು ಯಾವ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.












Click it and Unblock the Notifications