ಮಾದೇಗೌಡರಲ್ಲಿ ಗಾಂಧಿ, ಅಣ್ಣಾ ಹಜಾರೆ ಕಂಡ ಜನತೆ
ಕಾವೇರಿ ನದಿ ನೀರಿನ ವಿವಾದ ಎದುರಾದಾಗಲೆಲ್ಲಾ ಮಂಡ್ಯದ ರೈತ ಸಮೂಹ ಮಾಜಿ ಸಂಸದ ಜಿ ಮಾದೇಗೌಡರ ಮುಂದೆ ನಿಲ್ಲುವುದು ಹಿಂದಿನಿಂದ ನಡೆದು ಬಂದಿದೆ. ಮಾದೇಗೌಡರು ಕೇವಲ ರಾಜಕಾರಣಿಯಾಗಿ ಉಳಿಯದೆ, ಮಂಡ್ಯ ಭಾಗದ ಜನರ ಹೊಸ ಆಶಾಕಿರಣವಾಗಿದ್ದಾರೆ. ಕಾವೇರಿ ಕೊಳ್ಳದ ಜನತೆ ಪಾಲಿಗೆ ಗಾಂಧಿ, ಅಣ್ಣಾ ಹಜಾರೆಯ ಪ್ರತಿರೂಪವಾಗಿ ಕಾಣಿಸಿಕೊಂಡಿದ್ದಾರೆ.
ರಾಜಕೀಯ ಬದುಕಿನುದ್ದಕ್ಕೂ ನೇರ ನಡೆ-ನುಡಿಯಿಂದ ಜನರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದ ಮಾದೇಗೌಡರು ಜಿಲ್ಲೆಯ ರೈತರ ಹಿತಕ್ಕೆ ಧಕ್ಕೆಯಾಗುತ್ತದೆ ಎಂದು ತಿಳಿದಾಗ ಎಲ್ಲವನ್ನೂ ತೊರೆದು ಬೀದಿಗಿಳಿದು ಹೋರಾಟ ನಡೆಸಿದ್ದಾರೆ.

ನಮಗೆ ನೆನಪಿರುವಂತೆ 1991ನೇ ಇಸ್ವಿ. ಕಾವೇರಿ ನ್ಯಾಯಾಧೀಕರಣ ತನ್ನ ಮಧ್ಯಂತರ ಆದೇಶ ನೀಡಿದಾಗ, ಅದನ್ನು ವಿರೋಧಿಸಿ, ನಿಂತ ನಿಲುವಿನಲ್ಲೇ ರಾಜೀನಾಮೆ ಬಿಸಾಕಿದರು. ಸೀದಾ ಮಂಡ್ಯಕ್ಕೆ ಬಂದು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ತಮ್ಮದೇ ಸರ್ಕಾರದ ವಿರುದ್ಧ ರೈತ ಹಿತರಕ್ಷಣಾ ಸಮಿತಿ ಹುಟ್ಟು ಹಾಕಿ ಹೋರಾಟಕ್ಕೆ ಕುಳಿತವರು.
ಮಂಡ್ಯ ಜಿಲ್ಲೆಯ ರೈತರಿಗೆ ಮಾರಕವಾಗುವ ಯಾವುದೇ ನೀತಿ ನಿರ್ಧಾರದ ವಿರುದ್ಧ ಅಧಿಕಾರಕ್ಕೆ ಅಂಟಿ ಕೂಡದೆ ಚಳವಳಿ ಮಾಡಿದ್ದರಿಂದ ರೈತರು ಇವರನ್ನು ತಮ್ಮ ನೆಚ್ಚಿನ ನಾಯಕರೆಂದೇ ತಿಳಿದಿದ್ದರು. ರೈತ ಮುಖಂಡ ನಂಜುಂಡಸ್ವಾಮಿ ಅವರ ನಂತರ ರೈತರು ಹಾಗೂ ಸಾರ್ವಜನಿಕರ ಆಶೋತ್ತರವನ್ನು ಆಡಳಿತ ಸೌಧದ ತನಕ ಒಯ್ಯಬಲ್ಲ ಛಾತಿಯುಳ್ಳ ನಾಯಕರಾಗಿ ಮಾದೇಗೌಡರು ಬೆಳೆದರು.
ಏಕೆ ಬೇಕಿತ್ತು ಈ ಇಳಿವಯಸ್ಸಿನಲ್ಲಿ: ಮಾದೇಗೌಡರು ಉಪವಾಸ ಸತ್ಯಾಗ್ರಹ ಹೂಡಿದಾಗ ನಮ್ಮ ಕಡೆ ಜನ ಇದೇ ಪ್ರಶ್ನೆ ಎತ್ತಿದ್ದರು. ಆದರೆ, ಧೈರ್ಯವಾಗಿ ಯಾರು ಕೇಳುವಂಥ ಪರಿಸ್ಥಿತಿ ಇದಲ್ಲ. ಮಕ್ಕಳು, ಮೊಮ್ಮಗಳ ಜೊತೆ ಆರಾಮವಾಗಿ ನಿವೃತ್ತಿ ಜೀವನ ಸಾಗಿಸುತ್ತ ಮಾದೇಗೌಡರು ಎಲ್ಲಾ ನಿವೃತ್ತಿ ಅಂಚಿನ ರಾಜಕಾರಣಿಗಳಂತೆ ಇದ್ದು ಬಿಡಬಹುದಿತ್ತು.
ಆದರೆ, ಮಾದೇಗೌಡರಲ್ಲದೆ ಇನ್ನೊಬ್ಬರು ರಾಜ್ಯದ ಮುಖ್ಯಮಂತ್ರಿಗಳಿಗೆ ಕರೆ ಮಾಡಿ ನೇರವಾಗಿ ದಿಟ್ಟವಾಗಿ ಪ್ರಶ್ನಿಸುವವರು ಎಲ್ಲಿದ್ದರು. ಅಮರನಾಥ್ ಅಲಿಯಾಸ್ ಅಂಬರೀಷ್ ಅವರು ಕಣಕ್ಕಿಳಿದರೂ ಅವರು ರಾಜಕೀಯ ಮಾಡಲು ಬಂದಿದ್ದಾರೆ ಎಂದೇ ಹಲವರು ಎಣಿಸಿದ್ದುಂಟು.
ರಾಜ್ಯದ ರೈತನಾಯಕರ ಜೊತೆಗೆ ಮಾದೇಗೌಡರನ್ನೂ ಹಲವರು ಅನುಮಾನದಿಂದ ನೋಡಿದ್ದರು. ಆದರೆ, ಮಾದೇಗೌಡರ ಗುಣವನ್ನು ಹತ್ತಿರದಿಂದ ನೋಡಿದ್ದ ಜಿಲ್ಲೆಯ ಹಿರಿಯ ರಾಜಕಾರಣಿಗಳು ಅವತ್ತು ಮಾದೇಗೌಡರ ಬೆಂಬಲಕ್ಕೆ ನಿಂತಿದ್ದರಿಂದ ರೈತರು ಕೂಡ ಇವರ ಕೈ ಬಿಡಲಿಲ್ಲ.
ಉಲ್ಬಣಿಸಿರುವ ಕಾವೇರಿ ವಿವಾದದ ವಿರುದ್ಧ ತಮ್ಮ ಇಳಿವಯಸ್ಸಿನಲ್ಲೂ ಗುಡುಗುತ್ತಿರುವ ಮಾದೇಗೌಡರು ಚಳವಳಿಕಾರರು ಹಿಂಸಾಚಾರಕ್ಕಿಳಿಯುವದನ್ನು ಇಷ್ಟಪಡುವುದಿಲ್ಲ. ಆದ್ದರಿಂದಲೇ ನಿರಂತರವಾಗಿ ಒಂದು ತಿಂಗಳಿನಿಂದ ಮಂಡ್ಯ ಜಿಲ್ಲೆಯಲ್ಲಿ ಬಂದ್, ಹರ
ತಾಳ, ಪ್ರತಿಭಟನೆಗಳು ನಡೆಯುತ್ತಿದ್ದರೂ ಚಳವಳಿ ಹಿಂಸಾರೂಪ ಪಡೆದಿಲ್ಲ.
ಅದಕ್ಕೇ ಮಂಡ್ಯದ ಜನ ಮಾದೇಗೌಡರನ್ನು ನಮ್ಮ ನಡುವಿನ ಗಾಂಧಿ ಎಂದು ಕರೆಯುತ್ತಾರೆ. ಅವರ ಸರಳತೆಯನ್ನು ಮೆಚ್ಚುತ್ತಾರೆ. ಮೈಬಗ್ಸಿ ಕ್ಯಾಮೆ ಮಾಡೋಗ್ಲಾ ಎಂದು ಖದರಿಸಿದರೆ ಸುಗ್ರೀವಾಜ್ಞೆ ಎಂದು ಪಾಲಿಸುತ್ತಾರೆ. ಇಂಥ ನಾಯಕರ ಸಂತತಿ ಎಲ್ಲೆಡೆ ಈಗ ಬೇಕಾಗಿದೆ.
ಕಾವೇರಿ ನೀರು ಕುಡಿಯುವ ಎಲ್ಲಾ ನಗರವಾಸಿಗಳು ಕೊನೆ ಪಕ್ಷ ವಾರಾಂತ್ಯದಲ್ಲಾದರೂ ಈ ಹಿರಿ ಜೀವದ ನಿರಂತರ ಹೋರಾಟಕ್ಕೆ ಕೈ ಜೋಡಿಸಿ ಮೈಸೂರು ಕಡೆ ಹೋಗುವಾಗ ಒಮ್ಮೆ ಭೇಟಿ ನೀಡಿ ಅಜ್ಜ ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿದರೆ ಮುಂದಿನ ಕತೆಯೇ ಬೇರೆಯಾಗುತ್ತೆ.












Click it and Unblock the Notifications