ಅಂಬಿಯ 'ಬುಲ್ ಬುಲ್' ಆರತಿಗೆ ಆಮಂತ್ರಣ ಇಲ್ವಾ?

ಯಾಕಪ್ಪಾ ಆಕೆಯ ನೆನಪು ಈಗ ಎಂದು ಕೇಳುತ್ತಿದ್ದೀರೇನೂ? ಏನಿಲ್ಲ ಹಾಗೇ ಸುಮ್ಮನೆ... ಕನ್ನಡ ಚಿತ್ರೋದ್ಯಮವು ಹಿರಿಯಣ್ಣ ಅಂಬರೀಶ್ ಅವರಿಗೆ ಬೆಂಗಳೂರು ಅರಮನೆ ಮೈದಾನದಲ್ಲಿ ನಾಳೆಯಿಂದ 3 ದಿನಗಳ ಕಾಲ ಅಂಬಿ-60 ಸಂಭ್ರಮಾಚರಣೆಯಲ್ಲಿ ತೊಡಗಲಿದೆ.
ಎಲ್ಲರೂ ಹೇಳುವ ಹಾಗೆ ಅಂಬಿಯ ಮೊದಲ ಚಿತ್ರ 'ನಾಗರಹಾವು'. ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ 1971ರಲ್ಲಿ ತೆರೆಗೆ ಬಂದಾಗ ಜಲೀಲ್ ಪಾತ್ರಧಾರಿ ಸಂಭಾಷಣೆ ಮತ್ತು ನಟನೆಯನ್ನು ಯಾರು ತಾನೆ ಮರೆಯಲು ಸಾಧ್ಯ? - 'ಮೇರೆ ಸಪನೋಂಕೆ ರಾಣಿ ಕಬ್ ಆಯೇಗಿ ತೂ...' ಅಂತ ಸೈಕಲ್ ಮೇಲೆ ಬರುವ ಕಾಲೇಜು ಪಡ್ಡೆಯೊಂದು ಎದುರಿಗಿನ ನಟಿಯನ್ನು ಕಾಡಿಸುವ, ಛೇಡಿಸುವ ದೃಶ್ಯ ಕಾವ್ಯ ತುಂಬಾ ಸುಂದರವಾಗಿ ಮೂಡಿ ಬಂದಿದೆ ಎಂದು ಹೇಳಿದರೆ ಅದು ಕ್ಷೀಷೆಯಾದೀತು. ಅಷ್ಟೊಂದು ಅಚ್ಚಳಿಯದೆ ಆ ದೃಶ್ಯದಲ್ಲಿನ ನಟ, ನಟಿಯ ನಟನೆ ಮನದಲ್ಲಿ ಸ್ಥಾಪಿತವಾಗಿ ಬಿಟ್ಟಿದೆ.
ಆ ಸನ್ನಿವೇಶಕ್ಕೆ ಅಷ್ಟೊಂದು ಮಹತ್ವ ಬಂದಿರುವುದಕ್ಕೆ ಅಲ್ಲಿರುವ ಸಹ ನಟಿ ಸಹ ಕಾರಣ ಎಂಬುದನ್ನು ಯಾರು ತಾನೇ ಅಲ್ಲಗಳೆಯುತ್ತಾರೆ. ಆದರೆ ಈಗ ನಡೆಯುತ್ತಿರುವ ಅಂಬಿ-ಸಂಭ್ರಮಕ್ಕೆ ಆ ನಟಿಯನ್ನು ಮರೆತಿರುವುದು ಮಾತ್ರ ಅತಿ ದೊಡ್ಡ ದುರಂತ ಎನ್ನದೇ ಬೇರೆ ದಾರಿಯಿಲ್ಲ.
ಅಂಬಿ ಇಷ್ಟೊಂದು ಫೇಮಸ್ ಆಗುವುದಕ್ಕೆ 'ನಾಗರಹಾವು' ಚಿತ್ರದ ಆ ಪಾತ್ರಕ್ಕೆ, ಅಲ್ಲಿರುವ ನೆಗಟೀವ್ ಶೇಡ್ ಇರುವ ಜಲೀಲ್ ಪಾತ್ರಕ್ಕೆ ಆ ಸಹ ನಟಿಯೂ ಕಾರಣವಾಗುತ್ತಾರೆ. ಇದನ್ನು ಅಲ್ಲಗಳೆಯುವಿರಾದರೆ ಒಂದೇ ಕೈಯಲ್ಲಿ ಚಪ್ಪಾಳೆ ತಟ್ಟುತ್ತೀರೇನು? ಎದುರಿಗೆ ಆ ರತಿಯೇ ಇಲ್ಲ ಅಂದರೆ ಅಂಬಿ ಯಾರಿಗೆ ಅಂತ ಆ ಸೂಪರ್ ಸುಪ್ರೀಂ ಡೈಲಾಗ್ ಹೊಡೆಯುತ್ತಿದ್ದರು? ಹಾಗಾಗಿ, ಇಲ್ಲಿ ಮುಖ್ಯವಾಗಿ ಹೆಸರಿಸಬೇಕಾಗಿರುವುದು ನಮ್ಮ ಕನ್ನಡ ಚಿತ್ರರಂಗದ ಹೆಮ್ಮೆಯ ನಾಯಕಿ 'ರಂಗನಾಯಕಿ' ಆರತಿಯವರನ್ನು. ಅವರನ್ನೇ ಇಲ್ಲಿ ಮರೆತಿರುವುದು ಅತ್ಯಂತ ವಿಷಾದಕರ.
ಒಂದು ಮಾತು ನಟನೆಯಿಂದ 27 ವರ್ಷಗಳಿಂದ ದೂರ ಉಳಿದಿರುವ ನಮ್ಮ ಆರತಿ ಒಂದು ವೇಳೆ ಅಂಬಿ ಕಾರ್ಯಕ್ರಮದಲ್ಲಿ ಭಾಗಿಯಾದರೆ ಅಲ್ಲಿ ಸಂಭ್ರಮ ಇಮ್ಮಡಿಗೊಳ್ಳುವುದರಲ್ಲಿ ಎರಡು ಮಾತಿಲ್ಲ. ಇನ್ನೂ ಕಾಲ ಮಿಂಚಿಲ್ಲ, ಏನಂತೀರಿ? (ನಿಲೇಶ್ ಬೇನಾಳ, ಆಲಮಟ್ಟಿ)












Click it and Unblock the Notifications