ಸಿಎಂ ಇಳಿದರೆ, ಪರ್ಯಾಯ ನಾಯಕತ್ವ ಜಾರಿ

ಅಸಮಾಧಾನಗೊಂಡಿರುವ ಬಹುತೇಕ ಸಚಿವರು ಹಾಗೂ ಶಾಸಕರು, ಮುಖ್ಯಮಂತ್ರಿಯವರ ನಿರ್ಧಾರಕ್ಕೆ ಅನುಮತಿ ನೀಡಬಾರದೆಂದು ವರಿಷ್ಠರ ದುಂಬಾಲು ಬಿದ್ದಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವ ಸನ್ನಿವೇಶ ಎದುರಾದರೆ ಪರ್ಯಾಯ ನಾಯಕತ್ವಕ್ಕೆ ಅವಕಾಶ ಮಾಡಬೇಕೇ ಹೊರತು, ವಿಧಾನಸಭೆ ವಿಸರ್ಜನೆ ಅದಕ್ಕೆ ಮಾರ್ಗವಲ್ಲವೆಂದು ವರಿಷರಿಗೆ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ ಬಿಜೆಪಿಯೇ ಮೇಲುಗೈ ಸಾಧಿಸಿದರೂ ಪಕ್ಷದ ಯಾವುದೇ ಶಾಸಕರಿಗೂ ಚುನಾವಣೆ ಎದುರಿಸುವ ನೈತಿಕಸ್ಥೈರ್ಯ ಇಲ್ಲವೇ ಧೈರ್ಯವಿಲ್ಲ . ಉಳಿದ ಎರಡೂವರೆ ವರ್ಷಗಳ ಅಧಿಕಾರ ಅವಧಿಯನ್ನು ಕಳೆದುಕೊಳ್ಳಲು ಯಾವುದೇ ಶಾಸಕರು ಉತ್ಸಾಹ ತೋರುತ್ತಿಲ್ಲ. ಕೆಲವರಂತೂ ಈ ಅವಧಿ ಪೂರ್ಣಗೊಳಿಸಿ ಮುಂದಿನ ಅವಧಿಗೆ ಪಕ್ಷ ತಮಗೆ ಟಿಕೆಟ್ ನೀಡದಿದ್ದರೂ ಪರವಾಗಿಲ್ಲ, ತಾವು ಚುನಾವಣಾ ಕಣಕ್ಕೇ ಇಳಿಯುವುದಿಲ್ಲ ಎಂಬ ಮಾತನ್ನು ತಮ್ಮ ನಾಯಕರ ಬಳಿ ಹೇಳಿಕೊಂಡಿದ್ದಾರೆ.
ಸಿಎಂ ವಿರುದ್ಧ ಎಫ್ ಐಆರ್ ದಾಖಲಾದರೆ?: ಜಸ್ಟೀಸ್ ಫಾರ್ ಲಾಯರ್ ಫೋರಂ ವಿಶೇಷ ನ್ಯಾಯಾಲಯ ಮುಂದೆ ದಾಖಲಿಸಿರುವ ಮೊಕದ್ದಮೆಯ ವಿಚಾರಣೆ ನಡೆಯುತ್ತಿದೆ. ಒಂದು ವೇಳೆ ನ್ಯಾಯಾಲಯ ಲೋಕಾಯುಕ್ತರ ಮೂಲಕ ತನಿಖೆ ನಡೆಸಲು ಸೂಚಿಸಿದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಈ ರೀತಿಯ ಪರಿಸ್ಥಿತಿ ಎದುರಾದಾಗ ತನಿಖೆ ನಡೆಸಲು ಮುಂದಾಗುವ ಲೋಕಾಯುಕ್ತ ಪ್ರಮುಖ ಆರೋಪಿ ಯಡಿಯೂರಪ್ಪ ಅವರ ವಿರುದ್ಧ ಎಫ್ ಐಆರ್ ದಾಖಲಿಸಲೇಬೇಕಾಗುತ್ತದೆ. ಆಗ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ಅನಿವಾರ್ಯವಾಗಿ ರಾಜೀನಾಮೆ ನೀಡಲೇಬೇಕಾದ ಪರಿಸ್ಥಿತಿ ಸೃಷ್ಟಿಯಾಗುತ್ತದೆ.
ಈ ಎಲ್ಲಾ ಸಂಗತಿಯನ್ನು ಮುಂಚಿತವಾಗಿ ಊಹಿಸಿರುವ ಯಡಿಯೂರಪ್ಪ ವಿಧಾನಸಭೆಯನ್ನು ವಿಸರ್ಜಿಸಿ ಮಧ್ಯಂತರ ಚುನಾವಣೆಗೆ ಹೋಗಲು ಅಣಿಯಾಗುತ್ತಿರುವುದು ಇದೀಗ ರಹಸ್ಯವೇನಲ್ಲ. ಇದಕ್ಕೆಂದೇ ರೈತರ ಮನವೊಲಿಸಲು ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿ ಕೃಷಿ ಬಜೆಟ್ ಮಂಡಿಸುವುದಾಗಿ ಘೋಷಿಸಿರುವ ಯಡಿಯೂರಪ್ಪ, ಅದೇ ಕಾಲಕ್ಕೆ ಮುಂಬರುವ ಸಾಲಿನ ಬಜೆಟ್‌ನಲ್ಲಿ ಸರಕಾರಿ ನೌಕರರು, ಮಹಿಳೆಯರು ಸೇರಿದಂತೆ ವಿವಿಧ ವರ್ಗಗಳಿಗೆ ಬಂಪರ್ ಕೊಡುಗೆ ನೀಡಲು ತಯಾರಿ ನಡೆಸಿದ್ದಾರೆ.
ಕೇಂದ್ರ ಸರಕಾರದ ಬಜೆಟ್‌ಗಿಂತ ಮುಂಚಿತವಾಗಿಯೇ ಇಂತಹದೊಂದು ಬಜೆಟ್ ಅನ್ನು ಮಂಡಿಸುವ ಮೂಲಕ ಮಧ್ಯಂತರ ಚುನಾವಣೆಗೆ ಯಡಿಯೂರಪ್ಪ ಅಣಿಯಾಗುತ್ತಿದ್ದಾರೆ. ತಾವು ವಿಶೇಷ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವ ಅನಿವಾರ್ಯತೆ ಎದುರಾದರೆ
ವಿಧಾನಸಭೆಯನ್ನು ವಿಸರ್ಜಿಸಿ ಮಧ್ಯಂತರ ಚುನಾವಣೆಗೆ ಹೋಗಲು ಅನುಮತಿ ನೀಡಿದರೆ ಕನಿಷ್ಟ 150 ಸೀಟುಗಳನ್ನು ಗೆಲಿಸಿಕೊಂಡು ಬರುತ್ತೇನೆ ಎಂದು ಯಡಿಯೂರಪ್ಪ ವರಿಷ್ಠರಿಗೆ ಭರವಸೆ ನೀಡುತ್ತಿದ್ದಾರಂತೆ.
ಈ ವಾದಕ್ಕೆ ಈಗ ವೆಂಕಯ್ಯ ನಾಯ್ಡು, ಅರುಣ್ ಜೇಟ್ಲಿ ಸೇರಿ ಇನ್ನಿತರೇ ನಾಯಕರೂ ಬೆಂಬಲ ನೀಡತೊಡಗಿರುವುದು ರಾಜ್ಯ ಬಿಜೆಪಿಯ ಸಚಿವರು, ಶಾಸಕರ ತಲೆನೋವಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸಚಿವರು ಶಾಸಕರು, ವರಿಷ್ಠರ ಮನವೊಲಿಸಿ ಪಕ್ಷ ಅವಧಿಯನ್ನು ಪೂರ್ಣಗೊಳಿಸಲು ಹಿಂಬದಿಯ ಹೋರಾಟ ನಡೆಸಿದ್ದಾರೆ.












Click it and Unblock the Notifications