ಲೈಂಗಿಕ ಕ್ರೌರ್ಯಕ್ಕೆ ಕೊನೆ ಎಂದು?

ಡಿ.23 ರಂದು ಬೆಳಗ್ಗೆ ಪಶ್ಚಿಮ ದಿಲ್ಲಿಯಲ್ಲಿ 23ರ ಹರೆಯದ ಬಿಪಿಒ ಉದ್ಯೋಗಸ್ಥ ತರುಣಿ ಒಬ್ಬಳು ಫ್ಲೈ ಓವರ್ ಒಂದರಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳಿ ಹೃದಯ ಕರಗುವಂತಾಯಿತು. ಆಕೆ ಹೆಸರು ದೀಪ್ತಿ. ದಿಲ್ಲಿಯ ಪಶ್ಚಿಮ ವಿಹಾರದ ನಿವಾಸಿ. ಬೆಳಗ್ಗೆ 7.15ರ ಸುಮಾರಿಗೆ ಸ್ವತಃ ಕಾರನ್ನು ಚಲಾಯಿಸಿಕೊಂಡ ಬಂದ ಆಕೆ ಮೋತಿ ನಗರದ ಮೇಲ್ಸೇತುವೆಯಿಂದ ಕೆಳಕ್ಕೆ ಜಿಗಿದು ಗಂಭೀರ ಗಾಯಗೊಂಡು ಬಳಿಕ ಮೃತಪಟ್ಟಳು. ಆಕೆ ಏಕಾಂಗಿ ಆತ್ಮಹತ್ಯೆ ಮಾಡಿಕೊಂಡಳೆಂಬುದು ಇನ್ನಷ್ಟೇ ಗೊತ್ತಾಗಬೇಕಾಗಿದೆ. ಅಥವಾ ಆ ಕುರಿತ ಸತ್ಯ ಬಹುತೇಕ ಎಂದಿಗೂ ಯಾರಿಗೂ ಗೊತ್ತಾಗದೇ ಉಳಿಯಬಹುದು. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಆಕೆ ತನ್ನ ಅಣ್ಣನಿಗೆ ಕೆಲವೊಂದು ಎಸ್ಎಂಎಸ್ ಕಳುಹಿಸಿ ತನ್ನನ್ನು ಕ್ಷಮಿಸಬೇಕೆಂದು ಕೋರಿದ್ದಳು.
ದೀಪ್ತಿಯಂತಹ ಸಣ್ಣ ವಯಸ್ಸಿನ ಉದ್ಯೋಗಸ್ಥ ಹೆಣ್ಣು ಮಕ್ಕಳು ಇಂದು ಈ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದು ಎಲ್ಲೆಡೆ ಸಾಮಾನ್ಯವಾಗುತ್ತಿದೆ. ಪ್ರೀತೊ, ಪ್ರಣಯ, ಕಾಮ, ಬಿಂದಾಸ್ ಜೀವನ ಶೈಲಿ, ಪ್ರಿಯಕರನ ಮೇಲೆ ಪೂರ್ಣ ನಂಬಿಕೆ ಇಟ್ಟು ಮೈಮನಸ್ಸನ್ನು ಒಪ್ಪಿಸಿ ಆನಂತರ ಭ್ರಮ ನಿರಸರನಗೊಳ್ಳುವುದು ಮುಂತಾಗಿ ಹತ್ತಾರು ಕಾರಣಗಳೀಗೆ ಇಂದು ಹೆಣ್ಣು ಮಕ್ಕಳಿ ಬಲಿಯಾಗುತ್ತಿದ್ದಾರೆ.
ಇನ್ನೊಂದೆಡೆ ಮಾನಭಂಗ ಮುಂತಾದ ಲೈಂಗಿಕ ಕ್ರೌರ್ಯಕ್ಕೆ ಗುರಿಯಾಗಿ ಸಾವಿಗೆ ಶರಣಾಗುವ ಹೆಣ್ಣುಮಕ್ಕಳ ಸಂಖ್ಯೆಯೂ ಏರುತ್ತಿದೆ. ಬೆಂಗಳೂರಿನಲ್ಲಿ ಕೆಲ ದಿನಗಳ ಹಿಂದೆ ಪೊಲೀಸ್ ಎನ್ ಕೌಂಟರ್ ನಲ್ಲಿ ಹತನಾದ ಲಂಪಟ ತರುಣನೊಬ್ಬ ತನ್ನ ಸ್ನೇಹಿತನ ಜತೆಗೂಡಿ ಅದೆಷ್ಟೋ ತರುಣಿಯರ ಮಾನಭಂಗ ಮಾಡಿ ಬಳಿಕ ಅವರನ್ನು ಬೆದರಿಸುತ್ತಿದ್ದುದು ಬಹಿರಂಗವಾಯಿತು.
ತಾನು ಕಿಡ್ನಾಪ್ ಮಾಡಿದ ಹುಡುಗಿಯರನ್ನು ನಿರ್ಜನ ಪ್ರದೇಶಕ್ಕೆ ಒಯ್ದು ಅಲ್ಲಿ ರೇಪ್ ಮಾಡುವಾಗ ಆತನ ಸ್ನೇಹಿತ ಅದನ್ನು ತನ್ನ ಮೊಬೈಲಿನಲ್ಲಿ ಸೆರೆ ಹಿಡಿಯುತ್ತಿದ್ದನಂತೆ. ರೇಪ್ ಗೆ ಬಲಿಯಾದ ಹುಡುಗಿಗೆ ಆ ವಿಡಿಯೋ ಚಿತ್ರ ತೋರಿಸಿ "ನೀನೇನಾದರೂ ಪೊಲೀಸರಿಗೆ ದೂರು ಕೊಟ್ಟರೆ ಈ ವಿಡಿಯೋ ಚಿತ್ರಿಕೆಯನ್ನು ಇಂಟರ್ ನೆಟ್ ನಲ್ಲಿ ಹಾಕುತ್ತೇನೆ, ಮೊಬೈಲ್ ಮೂಲಕ ಎಲ್ಲರಿಗೂ ಎಂಎಂಎಸ್ ಕಳಿಸುತ್ತೇನೆ" ಎಂದು ಬೆದರಿಕೆ ಹಾಕಿ ಹುಡುಗಿಯರ ಬಾಯಿ ಮುಚ್ಚಿಸುತ್ತಿದ್ದನಂತೆ.
ಇಂದಿನ ಅನೇಕ ಸಾಮಾಜಿಕ ಪಿಡುಗುಗಳಿಗೆ ಹೆಣ್ಣು ಮಕ್ಕಳು ಬಲಿಯಾಗುತ್ತಿರುವುದು ದುಃಖಕರ. ಇದಕ್ಕೆ ಸ್ವಲ್ಪಾಂಶ ಹುಡುಗಿಯರೂ ಕಾರಣರಿರಬಹುದು. ಟೆಕ್ಕಿಗಳಾಗಿಯೋ, ಬಿಪಿಒ ಉದ್ಯೋಗಿಗಳಾಗಿಯೋ ಕೈ ತುಂಬ ಸಂಬಳ ಪದೆಯುವ ಅನೇಕ ಹುಡುಗಿಯರು ಟಿವಿ, ಸಿನಿಮಾ ಪ್ರಭಾವದಲ್ಲಿ ಬಿಂದಾಸ್ ಜೀವನ ಶೈಲಿ ನಡೆಸುತ್ತಿರುವುದು ಇದಕ್ಕೆ ಆಸ್ಪದವಾಗಿರಬಹುದು.
ಇದನ್ನೆಲ್ಲ ತಡೆಯಲು ನಮಗೆ ಸಾಧ್ಯವಿಲ್ಲವೇ? ಹುಡುಗಿಯರು ಹೊಣೆಯರಿತು ಜೀವಿಸಲು ಮನಸ್ಸು ಮಾಡಬಾರದೇ? ಧೈರ್ಯದಿಂದ ಶಿಷ್ಟ ರೀತಿಯಲ್ಲಿ ಸಮಾಜವನ್ನು ಎದುರಿಸುವ ಛಾತಿ ಹೊಂದಬೇಡವೇ? [ಲೈಂಗಿಕ ಕಿರುಕುಳ]












Click it and Unblock the Notifications