ಕುಕ್ಕೆ ಸುಬ್ರಮಣ್ಯ ದೇವಸ್ಥಾನ : ಕೆಲವು ಪತ್ರಗಳು

ಎಂಜಲು ಎಲೆಯ ಮೇಲೆ ಉರುಳುವ ದಯನೀಯ ಘಟನೆಯ ಬಗ್ಗೆ ಓದಿ ವಿಷಾದವಾಯಿತು. ನಾನು ಹುಟ್ಟಿದ ಊರು ಕುಕ್ಕೆ ಸುಬ್ರಹ್ಮಣ್ಯದ ಹತ್ತಿರದ ಪಂಜ ಎಂಬ ಹಳ್ಳಿ, ಓದಿದ್ದು ಸುಬ್ರಹ್ಮಣ್ಯದಲ್ಲಿ. ನಾನು ಚಿಕ್ಕವನಿದ್ದಾಗ ವಾಂತಿ ಮಾಡಿದೆ ಅಂತ ನನ್ನ ಅಮ್ಮ ಸುಬ್ರಹ್ಮಣ್ಯದಲ್ಲಿ ಎಂಜಲು ಎಲೆಯ ಮೇಲೆ ಉರುಳುವ ಹರಕೆ ಹೇಳಿಕೊಂಡಿದ್ದರಂತೆ. ನಾನು ದೊಡ್ಡವನಾದಾಗ ಅಮ್ಮ ಅದನ್ನು ನೆನಪಿಸಿ ಸುಬ್ರಹ್ಮಣ್ಯದಲ್ಲಿ ಬ್ರಾಹ್ಮಣರು ಉಂಡೆಸೆದ ಎಂಜಲು ಎಲೆಯಲ್ಲಿ ಉರುಳಲು ಒತ್ತಾಯಿಸುತ್ತಿದ್ದರು.
ನಾನು ಮೌನವಾಗಿ ಆದರೆ ದಿಟ್ಟವಾಗಿ ನಿರಾಕರಿಸಿದೆ. ನನ್ನ ಮೌನ ಮತ್ತು ಪ್ರತಿಭಟನೆ ಅಮ್ಮನ ಆತಂಕವನ್ನು ತೀವ್ರವಾಗಿ ಹೆಚ್ಚಿಸುತ್ತಿತ್ತು. ಕೊನೆಗೊಮ್ಮೆ ಅದು ತೀರ ಅತಿರೇಕಕ್ಕೆ ಹೋದಾಗ ನಾನು ಅಮ್ಮನಿಗೆ 'ಮಗ ಮತ್ತು ಬ್ರಾಹ್ಮಣರ ಎಂಜಲು ಎಲೆಯಲ್ಲಿ ಒಂದನ್ನು ಆಯ್ದುಕೊ' ಎಂದೆ. ಅಮ್ಮ ಕೊನೆಗೂ ಮಗನನ್ನು ಆರಿಸಿಕೊಂಡರು. ಅಮ್ಮನ ಆಯ್ಕೆಯ ಮೂಲಕ ನಾನು ಬದುಕಿಕೊಂಡೆ. ಈಗ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವೇ ಎಂಜಲು ಸೇವೆಯನ್ನು ಬಹಿಷ್ಕರಿಸಿ ಮಾನವನ ಘನತೆಯನ್ನು ಎತ್ತಿ ಹಿಡಿಯಬೇಕು.
* ಪುರುಷೋತ್ತಮ ಬಿಳಿಮಲೆ, ನವದೆಹಲಿ
ಮಾನ್ಯರೆ,
ಉರುಳು ಸೇವೆಯ ಬಗೆಗೆ ಅನೇಕರಲ್ಲಿ ತಪ್ಪು ಕಲ್ಪನೆ ಇದೆ. ತಲತಲಾಂತರಗಳಿಂದ ಬ್ರಾಹ್ಮಣರು, ದಲಿತರು ಎಂಬ ಜಾತಿ ಬೇಧವಿಲ್ಲದೆ ಮಡೆಸ್ನಾನ ಇಲ್ಲಿ ನಡೆಯುತ್ತಾ ಬಂದಿದೆ. ಮೊನ್ನೆ ಷಷ್ಠಿ ತಿಥಿಯಂದು ಸುಮಾರು ಎರಡು ಸಾವಿರ ಭಕ್ತರು ಮಡೆಸ್ನಾನದಲ್ಲಿ ಪಾಲ್ಗೊಂಡಿದ್ದರು. ಉರುಳು ಸೇವೆ ಪದ್ದತಿಯನ್ನು ವಿರೋಧಿಸಿ ಷಷ್ಠಿಯ ಒಂದು ವಾರಕ್ಕೆ ಮುನ್ನ ಇಲ್ಲಿ ಪ್ರತಿಭಟನೆ ನಡೆಸಿದರು. ಆದರೆ, ಜಾತಿಬೇಧವಿಲ್ಲದೆ ಎಲ್ಲರೂ ತಮ್ಮ ಹರಕೆ ಸಲ್ಲಿಸುವುದನ್ನು ಕಣ್ಣಾರೆ ಕಂಡ ಪ್ರತಿಭಟನೆಕಾರರು ತಮ್ಮ ಚಳವಳಿಯನ್ನು ನಿಲ್ಲಿಸಿದರು. ಬಹುಶಃ ಅವರಿಗೆ ಸತ್ಯ ಸಂಗತಿ ಅರಿವಾಗಿರಬಹುದು.
ಹದಿನೈದು ವರ್ಷಗಳು ಹಿಂದೆ ಈ ದೇವಸ್ಥಾನ ಈಗಿನಷ್ಟು ಜನಪ್ರಿಯವಾಗಿರಲಿಲ್ಲ. ಮಧ್ಯಾನ್ಹದ ಮಂಗಳಾರತಿಗೆ ಅಬ್ಬಬ್ಬಾ ಎಂದರೆ 50 ಜನ ಇರುತ್ತಿದ್ದರು. ಈಚೆಗೆ ಇಲ್ಲಿಗೆ ಈಗಮಿಸುವ ಭಕ್ತಾದಿಗಳ ಸಂಖ್ಯೆ ಅಪಾರ ಪ್ರಮಾಣದಲ್ಲಿ ವೃದ್ಧಿಯಾಗಿದೆ. ಸಿನಿಮಾ ತಾರೆಯರು, ರಾಜಕಾರಣಿಗಳು, ಕ್ರೀಡಾಪಟುಗಳು ಇಲ್ಲಿಗೆ ಬರಲು ಆರಂಭವಾದಾಗಿನಿಂದ ಭಕ್ತಗಣ ಹೆಚ್ಚಾಗಿದೆ. ಶನಿವಾರ ಮತ್ತು ಭಾನುವಾರಗಳಂದು ವಿಪರೀತ ರಷ್ ಇರುತ್ತದೆ. ಆಸ್ತಿಕ ಮಹಾಶಯರ ಸಂಖ್ಯೆ ದಿನೇದಿನೇ ಏರುತ್ತಿದೆ.
* ಶಿವಕುಮಾರ್, ಗುತ್ತಿಗಾರು
ಸಂಪಾದಕರೆ,
ಕುಕ್ಕು ಸುಬ್ರಮಣ್ಯದ ಮಡೆಸ್ನಾನವನ್ನು ಮಾತ್ರ ಗುರಿಯಾಗಿಟ್ಟುಕೊಂಡು ನನ್ನ ಮಾತನ್ನು ಮಂಡಿಸುತ್ತಿಲ್ಲ. ಇಂದಿನ ದಿನಗಳಲ್ಲಿ ಕೂಡ ನಾವು ಅನೇಕ ಆದರೆ ಅರ್ಥವಿಲ್ಲದ ಆಚರಣೆಗಳನ್ನು, ಪದ್ಧತಿಗಳನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಮಡೆಸ್ನಾನ 400 ವರ್ಷ ಹಳೆಯದಿರಬಹುದು. ಆದರೆ, ಎಂಜಲೆಲೆಯ ಮೇಲೆ ಉರುಳುವುದು ಎಂಥ ಆಚರಣೆ? ಇದರಿಂದ ರೋಗ ರುಜಿನಗಳು ಕಡಿಮೆಯಾಗುತ್ತವೆ ಎನ್ನುವುದು ಎಂಥ ನಂಬಿಕೆ? ಅನೇಕ ಕಡೆಗಳಲ್ಲಿ ಕುರಿ, ಕೋಳಿಗಳನ್ನು ಬಲಿ ಕೊಡುವುದನ್ನು ನಿಲ್ಲಿಸಲಾಗುತ್ತಿದೆ. ಮಡೆಸ್ನಾನದ ಬಗ್ಗೆ ತಿಳಿಹೇಳಿ ಈ ಆಚರಣೆಯನ್ನು ನಿಲ್ಲಿಸಲು ಸಾಧ್ಯವಿಲ್ಲವೆ?
ಮೂಢನಂಬಿಕೆಯನ್ನೇ ಸುತ್ತಿಕೊಂಡಿರುವ ಜನರ ನಂಬಿಕೆಯನ್ನು ಕೂಡಲೆ ಹೋಗಲಾಡಿಸುವುದು ಕಷ್ಟಸಾಧ್ಯವಾಗಿರಬಹುದು. ಅಸಾಧ್ಯವೇನೂ ಅಲ್ಲ. ಆದರೆ, ಆ ಕಾರ್ಯ ಯಾರಿಂದಲೂ ಆಗುತ್ತಿಲ್ಲ. ಅಷ್ಟೊಂದು ಭಕ್ತರನ್ನು ಎದುರು ಹಾಕಿಕೊಳ್ಳುವ ಎದೆಗಾರಿಕೆ ಯಾರಲ್ಲೂ ಇಲ್ಲ. ಎಂಜಲೆಲೆಯ ಮೇಲೆ ಉರುಳಾಡಿದರೆ ಮೈಯೆಲ್ಲ ಎಂಜಲಾಗುತ್ತದೆಯೇ ಹೊರತು ಬೇರೇನೂ ಆಗುವುದಿಲ್ಲ. ಸೂರ್ಯಗ್ರಹಣವಿದ್ದಾಗ ಮಕ್ಕಳನ್ನು ಹೂಳುವುದನ್ನು ಗುಲಬರ್ಗಾ ಜಿಲ್ಲಾಡಳಿತವೇ ನಿಷೇಧಿಸಿರುವಾಗ ದಕ್ಷಿಣ ಕನ್ನಡ ಜಿಲ್ಲಾಡಳಿತ ಮಡೆಸ್ನಾನವನ್ನು ಏಕೆ ನಿಷೇಧಿಸಬಾರದು?
* ಶೇಷಗಿರಿ, ಶಿಕಾರಿಪುರ












Click it and Unblock the Notifications