ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಜನಾ ಸಾವು:ಗುತ್ತಿಗೆದಾರನಿಗೆ ಸಿಕ್ಕಿದೆ ಶ್ರೀರಕ್ಷೆ?

By * ಎಂ.ವಿ. ಭಟ್, ಬೆಂಗಳೂರು
|
Google Oneindia Kannada News

Sanjana Singh
ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನ ಕಾಂಪೌಂಡ್ ಗೋಡೆ ಕುಸಿದು ಸಂಜನಾ ಸಿಂಗ್ ಎಂಬ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಳು. ಈ ದುರಂತ ಸಂಭವಿಸಲು ತಳಪಾಯವಿಲ್ಲದೆ ನೆಲದ ಮೇಲೆಯೇ ಗೋಡೆ ಕಟ್ಟಿದ್ದೇ ಕಾರಣ. ಆದರೆ, ವಿದ್ಯಾರ್ಥಿನಿಯ ಅಕಾಲ ಮರಣಕ್ಕೆ ಕಾರಣರಾದ ಗುತ್ತಿಗೆದಾರರ ಬಗ್ಗೆ ಮಾತ್ರ ಯಾರೂ ಆಕ್ರೋಶ ವ್ಯಕ್ತ ಪಡಿಸಲಿಲ್ಲ.

ಯಾಕೆಂದರೆ ಇದೆಲ್ಲಾ ನಮ್ಮ ದೇಶದಲ್ಲಿ ಮಾಮೂಲಿ ದಿನನಿತ್ಯದ ಆಗುಹೋಗುಗಳು. ಕಟ್ಟಿದ ಆರೇ ತಿಂಗಳಲ್ಲಿ ಸೇತುವೆಗಳು, ಮೋರಿಗಳು ತುಂಡಾಗಿ ಬೀಳುವುದು. ಡಾಂಬರೀಕರಣ ಮಾಡಿದ ಮೂರೇ ದಿನಗಳಲ್ಲಿ ರಸ್ತೆಗಳು ಕೆರೆಗಳಾಗಿ ಮಾರ್ಪಡುತ್ತವೆ.

ಅಪಾಟ್ ಮೆಂಟುಗಳು, ಕಟ್ಟಡಗಳು ಕುಸಿದು ಬಿದ್ದು ನೂರಾರು ಜನರು ಕಟ್ಟಡದಡಿ ಸಿಲುಕಿ ಪ್ರಾಣ ಕಳೆದುಕೊಳ್ಳುವುದು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ಘಟನಾ ಸ್ಥಳಕ್ಕೆ ಮಂತ್ರಿಗಳು, ಅಧಿಕಾರಿಗಳು ಭೇಟಿ ನೀಡಿ ಮೊಸಳೆ ಕಣ್ಣೀರು ಸುರಿಸಿ ಪ್ರಾಣ ಕಳೆದುಕೊಂಡವರ ಬಂಧುಗಳಿಗೆ ಒಂದೆರಡು ಲಕ್ಷ ಪರಿಹಾರ ಘೋಷಿಸಿ ಜಾಗ ಖಾಲಿ ಮಾಡುವುದು ಇದನ್ನೆಲ್ಲಾ ನೋಡಿ ನಮ್ಮ ಮನಸ್ಸು ಜಡಗಟ್ಟಿ ಹೋಗಿದೆ.

ಈ ರೀತಿ ಅವಘಡಗಳು ವಿಶೇಷ ಅನಿಸುವುದೇ ಇಲ್ಲ. ಆದರೆ, ನನ್ನದು ಒಂದೇ ಪ್ರಶ್ನೆ. ಕಳಪೆ ಕಾಮಗಾರಿ ಮಾಡಿ, ಕೋಟಿ, ಕೋಟಿ ಹಣ ನುಂಗಿ ಅಪಾರ ಕಷ್ಟನಷ್ಟಗಳಿಗೆ, ಸಾವು-ನೋವುಗಳಿಗೆ ಕಾರಣರಾದ ಗುತ್ತಿಗೆದಾರರಿಂದ, ಅಧಿಕಾರಿಗಳಿಂದ ಸರ್ಕಾರ ಪರಿಹಾರದ ಹಣವನ್ನು ಯಾಕೆ ಕಕ್ಕಿಸುವುದಿಲ್ಲ ? ಅವರು ಮಾಡಿದ ಅಪರಾಧಕ್ಕೆ ಸರ್ಕಾರ
ತೆರಿಗೆ ಹಣವನ್ನು ಕೊಡಬೇಕೆ ?

ಭಾರತ ಬಿಟ್ಟು ಇನ್ನು ಯಾವ ದೇಶದಲ್ಲೂ ಇಂತಹ ಅಪರಾಧಿಗಳಿಗೆ ಮರಣ ಶಿಕ್ಷೆಯಲ್ಲದೆ ಬೇರೆ ಶಿಕ್ಷೆ ಇಲ್ಲ. ನಮ್ಮಲ್ಲಿ ಎಫ್‌ಐಆರ್ ದಾಖಲಾಗುತ್ತದಷ್ಟೆ. ಅಪರಾಧಿ ಜಾಮೀನಿನಲ್ಲಿ ಹೊರಬರುತ್ತಾನೆ. ಮತ್ತೇನಾಗುತ್ತದೋ ಯಾರಿಗೂ ಗೊತ್ತಾಗುವುದಿಲ್ಲ.

ಜನರೂ ಮರೆತು ಬಿಡುತ್ತಾರೆ. ಈ ಕಾಲ ಘಟ್ಟದಲ್ಲೇ ಅಪರಾಧಿ ಚಮತ್ಕಾರಗಳನ್ನು ನಡೆಸಿ ಮೋಕ್ಷ ಪಡೆದು ಬಿಡುತ್ತಾನೆ. ಅವನ ಬಳಿ ಹಣ, ಪ್ರಭಾವ ಇರುತ್ತದೆ. ಪ್ರಸ್ತುತ ಕೇಸ್ ನ ಆರೋಪಿ ಬಿಬಿಎಂಪಿ ಕಾರ್ಪೊರೇಟರ್ ಕಮ್ ಕಂಟ್ರಾಕ್ಟರ್ ಮುನಿರತ್ನ ಕೂಡಾ ಹಾಲಿ ಸಚಿವರೊಬ್ಬರ ಅಶ್ರಯ ಪಡೆದು ಕೇಸ್ ನಿಂದ ಬಚಾವಾಗಲು ಯತ್ನಿಸುತ್ತಿದ್ದಾನೆ ಎಂಬ ಸುದ್ದಿ ಹೊರಬಿದ್ದಿದೆ.

ಇನ್ನು ಇಂತಹ ದುರಂತಗಳಲ್ಲಿ ಸತ್ತು ಹೋಗುವವರು ಹೆಚ್ಚಾಗಿ ಬಡ ಕೂಲಿ ಕಾರ್ಮಿಕರು. ಅವರ ಜೀವಕ್ಕೆ ಬೆಲೆಯೇ ಇಲ್ಲವೇ ? ಸಂಜನಾ ಸಿಂಗ್ ಪೋಷಕರಿಗೆ ಲೋಕಾಯುಕ್ತರಿಂದಲಾದರೂ ನ್ಯಾಯ ಸಿಗುವಂತಾಗಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X