ಸೂರ್ಯಗ್ರಹಣ ಹಾಗೂ ಬೌದ್ಧಿಕ ದಿವಾಳಿತನ
ಈ ಬ್ರಹ್ಮಾಂಡ ಸೃಷ್ಟಿಯಾದಾಗಿನಿಂದ ಚಂದ್ರ ಮತ್ತು ಸೂರ್ಯ ಗ್ರಹಣ ನಡೆಯುತ್ತಲೇ ಇದೆ. ಬ್ರಹ್ಮಾಂಡದಲ್ಲಿನ ಗ್ರಹಗಳ ಕಾರ್ಯ ಕರಾರುವಕ್ಕಾಗಿ ನಡೆದುಕೊಂಡು ಬರುತ್ತಿದೆ. ಇದರಲ್ಲಿ ಯಾವುದು ಕೆಟ್ಟದು, ಯಾವುದು ಒಳ್ಳೆಯದು ಎಂಬುದೇನಿಲ್ಲ. ದುರದೃಷ್ಟ ಎಂದರೆ ಬ್ರಹ್ಮಾಂಡದಲ್ಲಿ ನಡೆಯುವ ಈ ನೈಸರ್ಗಿಕ ಕ್ರಿಯೆಯನ್ನು ಜ್ಯೋತಿಷಿಗಳು ದುರುಪಯೋಗ ಮಾಡಿಕೊಂಡು ಜನರಲ್ಲಿ ಮೌಢ್ಯ ಮತ್ತು ಭಯ ಉಂಟು ಮಾಡುತ್ತಿರುವುದು.
ಈಗಂತೂ ಖಾಸಗಿ ಟಿವಿ ಚಾನೆಲ್‌ಗಳು ಜನರಲ್ಲಿ ಮೌಢ್ಯವನ್ನು ಗಟ್ಟಿಗೊಳಿಸಲು ದಿನಬೆಳಗಾದರೆ ಜ್ಯೋತಿಷಿಗಳಿಂದ ಕಾರ್ಯಕ್ರಮ ನಡೆಸುತ್ತಿವೆ. ಶುಕ್ರವಾರ ಸಂಭವಿಸಿದ ಗ್ರಹಣಕ್ಕೆ ಸಂಬಂಧಿಸಿದಂತೆ ಟಿವಿಗಳ ಮೂಲಕ ಈ ಜ್ಯೋತಿಷಿಗಳು ಇಂತಿಂತಹ ನಕ್ಷತ್ರದವರಿಗೆ ಇಂತಿಂತಹ ರಾಶಿಯರಿಗೆ ಕೆಟ್ಟದಾಗುತ್ತ್ತದೆ ಎಂದು ಭೀತಿ ಉಂಟು ಮಾಡಿದರು. ಹೀಗೆ ಭಯ ಉಂಟು ಮಾಡುವುದರಲ್ಲಿ ಒಬ್ಬರಿಗಿಂತ ಇನ್ನೊಬ್ಬರು ಪೈಪೋಟಿ ನಡೆಸಿದಂತಿತ್ತು.
ಆದರೆ ರಾಜ್ಯದಲ್ಲಿ ವಿಜ್ಞಾನ ಪರಿಷತ್ತು ಇದೆ. ಇದರ ಶಾಖೆಗಳು ಕೆಲವು ಜಿಲ್ಲೆಗಳಲ್ಲಿವೆ. ಅಪರೂಪಕ್ಕೆ ಸಂಭವಿಸುವ ಗ್ರಹಣದ ಬಗೆಗೆ ಜನರಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ತಿಳಿವಳಿಕೆ ಮೂಡಿಸಲು ಈ ಅಪೂರ್ವ ಅವಕಾಶವನ್ನು ಬಳಸಿಕೊಂಡು ಅಲ್ಲಲ್ಲಿ ಸೂರ್ಯಗ್ರಹಣ ವೀಕ್ಷಿಸುವ ಕಾರ್ಯಕ್ರಮವನ್ನು ಹಾಕಿಕೊಳ್ಳಬೇಕಿತ್ತು. ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕಾದ ಈ ಸಂಸ್ಥೆಗಳಾಗಲಿ. ವಿಜ್ಞಾನ ಕಾಲೇಜುಗಳಾಗಲಿ ಈ ಬಗೆಗೆ ಮೌನವಹಿಸಿದ್ದು ನೋವಿನ ಸಂಗತಿ. ವಿಜ್ಞಾನ ಬಲ್ಲವರು ಮನೆಯೊಳಗೆ ಪೂಜಾರಿಗಳಾಗಿರುವುದೇ ಈ ದೇಶದ ದುರಂತ.
-ಎಂ.ಎಸ್.ಋತ್ವಿಕ್, ಬೆಂಗಳೂರು












Click it and Unblock the Notifications