ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಫ್‌.ಎಂ ರೇಡಿಯೋದಿಂದ ಕನ್ನಡ ಸಂಸ್ಕೃತಿಗೆ ಎಳ್ಳುನೀರು!

By Staff
|
Google Oneindia Kannada News


ಎಫ್‌.ಎಂ.ರೇಡಿಯೋವನ್ನು ಕಿವಿಗೆ ಕಚ್ಚಿಸಿಕೊಂಡು ಸುತ್ತಾಡುವುದು ಈಗ ಫ್ಯಾಷನ್‌. ಕಿವಿ ಕಚ್ಚಿದ ಈ ಎಫ್‌.ಎಂ.ರೇಡಿಯೋ ವಾಹಿನಿಗಳು ಕನ್ನಡ ಸಂಸ್ಕೃತಿಯ ಮೇಲೆ ಸದ್ದಿಲ್ಲದೆ ದಾಳಿ ಮಾಡುತ್ತಿವೆ. ಅದರ ಅರಿವು ನಮಗಿದೆಯೆ? ರಾಜ್‌ ನಿಧನದ ಸಂದರ್ಭದಲ್ಲಿ ಈ ವಿಷಯ ಸ್ಪಷ್ಟವಾಗಿದೆ.

ಮಾನ್ಯರೆ,

ಸುಮಾರು 5 ವರ್ಷಗಳ ಹಿಂದೆ, ಬೆಂಗಳೂರು ನಗರದಲ್ಲಿ ಎಫ್‌. ಎಂ. ಯುಗ ಶುರುವಾಗುತ್ತಿದೆ ಎಂದು ತಿಳಿದು ಬಹಳ ಸಂತೋಷವಾಗಿತ್ತು. ಆದರೆ ಆ ಸಂತೋಷ ಬಹಳ ದಿನ ಉಳಿಯಲಿಲ್ಲ. ಅದಕ್ಕೆ ಕಾರಣ, ಇಲ್ಲಿಗೆ ಬಂದವರು ನಮ್ಮ ನೆಲ, ಜಲ, ಸಂಪನ್ಮೂಲಗಳನ್ನು ಬಳಸಿದರೂ, ಇಲ್ಲಿನ ಭಾಷೆಗಾಗಲಿ, ಸಂಸ್ಕೃತಿಗಾಗಲಿ ಗೌರವ ಕೊಡದೆ, ಪರ ಭಾಷೆಯಲ್ಲಿ ಪ್ರಸಾರ ಶುರುಮಾಡಿದ್ದು.

ಈ ಹಿಂದೆ ಹಲವಾರು ಬಾರಿ, ಬೆಂಗಳೂರಿನಲ್ಲಿ ರಾಜಾರೋಷವಾಗಿ ತಲೆಯೆತ್ತಿ ಕಾರ್ಯ ನಿರ್ವಹಿಸುತ್ತಿರುವ ರೇಡಿಯೋ ಸಿಟಿ ಬಾನುಲಿ ಕೇಂದ್ರಕ್ಕೆ ತೆರಳಿ, ಅವರ ಕಾರ್ಯಕ್ರಮದಲ್ಲಿ ಕನ್ನಡಕ್ಕೆ ಆದ್ಯತೆ ಕೊಡಬೇಕೆಂದು ಗೆಳೆಯರೊಂದುಗೂಡಿ ಮನವಿ ಸಲ್ಲಿಸಿದ್ದೆವು. ಆದರೆ ಅವರು ನಮ್ಮನ್ನು ತಾತ್ಸಾರದಿಂದ ಕಂಡು, ನಮ್ಮ ಮನವಿಯನ್ನು ಪರಿಗಣಿಸದೆ, ಈಗಾಗಲೆ ಸಾಕಷ್ಟು ಕನ್ನಡ ಕಾರ್ಯಕ್ರಮಗಳನ್ನ ಪ್ರಸಾರಮಾಡುತ್ತಿರುವುದಾಗಿ ಹೇಳಿ ನುಣುಚಿಕೂಂಡರು. ಅದರ ಜೊತೆಗೆ, ಕನ್ನಡದ ಧ್ವನಿಸುರಳಿ ಸಂಸ್ಥೆಯವರು ತಮಗೆ ಧ್ವನಿಸುರಳಿ ಕೊಡಲು ಮುಂದೆ ಬರುತ್ತಿಲ್ಲವೆಂಬ ಕುಂಟು ನೆಪ ಬೇರೆ! ಇದಿಷ್ಟೇ ಸಾಲದಂತೆ, ತಮ್ಮ ವ್ಯಾಪಾರಿ ಮನೋಧರ್ಮಕ್ಕೆ ಅನುಗುಣವಾಗಿ ಹಿಂದಿ, ಇಂಗ್ಲೀಷ್‌ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿರುವುದಾಗಿ ತಿಳಿಸಿದರು.

FM Radio insults Kannada Culture!ಇದೇ ಜಾಡಿನಲ್ಲಿ ಈಗ ಮತೊಂದು ಖಾಸಗಿ ಎಫ್‌. ಎಮ್‌ ವಾಹಿನಿ ‘ರೇಡಿಯೋ ಮಿರ್ಚಿ’ ಶುರುವಾಗಿದೆ. ವಿಪರ್ಯಾಸವೆಂದರೆ, ಇದೇ ಸಂಸ್ಥೆಯವರು ಚೆನ್ನೈ ನಗರದಲ್ಲಿ ನಡೆಸುತ್ತಿರುವ ಕೇಂದ್ರದಲ್ಲಿ ಶೇಕಡ 90ಕ್ಕು ಅಧಿಕ, ಸ್ಥಳೀಯ ಭಾಷೆಯಾದ ತಮಿಳಿನಲ್ಲಿ ಕಾರ್ಯಕ್ರಮಗಳನ್ನು ಪ್ರಸಾರಮಾಡುತ್ತಿದ್ದಾರೆ.

ನಮ್ಮ ನಾಡಿಗೆ ಬಂದು, ನಮ್ಮದೆ ನೆಲದಲ್ಲಿ ನಿಂತು, ನಮ್ಮ ನಾಡು, ಸಂಸ್ಕೃತಿ, ನುಡಿಯನ್ನು ಕಡೆಗಣಿಸಿ, ಅನ್ಯಭಾಷಿಕರನ್ನು ಓಲೈಸುತ್ತಿರುವ ಇಂತಹ ಒಂದು ಸೇವೆ ನಮಗೆ ಬೇಕೆ? ಈಗಾಗಲೆ ಬೆಂಗಳೂರು ನಗರಕ್ಕೆ ಇನ್ನು 6 ಖಾಸಗಿ ಎಫ್‌. ಎಂ. ರೇಡಿಯೊ ವಾಹಿನಿಗಳು ಮಂಜೂರಾಗಿದ್ದು, ಸದ್ಯದಲ್ಲೆ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ. ಅವರೆಲ್ಲರು ರೇಡಿಯೊ ಸಿಟಿ ಹಾಕಿ ಕೊಟ್ಟಿರುವ ಮಾರ್ಗದಲ್ಲೇ ಮುಂದುವರೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಹಿಂದಿ, ಇಂಗ್ಲೀಷ್‌ ಅಲ್ಲದೆ, ಇತರೆ ಪ್ರಾದೇಶಿಕ ಭಾಷೆಗಳ ಪ್ರಸಾರ ಮಾಡುವ ಅಪಾಯವಂತೂ ತಪ್ಪಿದ್ದಲ್ಲ. ರೇಡಿಯೋ ಸಿಟಿ ವಾಹಿನಿಯು ಈಗಾಗಲೇ ಸ್ವಲ್ಪ ಸ್ವಲ್ಪವಾಗಿ ತೆಲಗು, ತೆಮಿಳು ಹಾಡುಗಳನ್ನು ಪ್ರಸಾರಮಾಡುತ್ತಿದ್ದು, ಇದು ನಿಜಕ್ಕೂ ನುಂಗಲಾರದ ತುತ್ತಾಗಿದೆ. ಈ ಎಲ್ಲಾ ಚಟುವಟಿಕೆಗಳನ್ನು ನೋಡಿದಾಗ, ಪಟ್ಟ ಭದ್ರ ಹಿತಾಸಕ್ತಿಗಳು, ಬೆಂಗಳೂರನ್ನು ಕನ್ನಡಿಗರಿಂದ ಕಸಿಯುವ, ವ್ಯವಸ್ಥಿತವಾದ ಹುನ್ನಾರವನ್ನು ರೂಪಿಸಿದಂತಿದೆ.

ಡಾ।। ರಾಜ್‌ಕುಮಾರ್‌ ಅವರು ನಿಧನರಾದ ದಿನ ಹಾಗು ಮಾರನೆಯ ದಿನ ಕನ್ನಡದ ಎಲ್ಲಾ ದೂರದರ್ಶನ ವಾಹಿನಿಗಳು, ನಗರದ ಸಿಟಿ ಕೇಬಲ್‌ನವರು ಎಲ್ಲಾ ರೀತಿಯ ಮನರಂಜನಾ ವಾಹಿನಿಗಳನ್ನು ತಡೆಗಟ್ಟಿದ್ದರೂ, ರೇಡಿಯೊ ಸಿಟಿ ವಾಹಿನಿ ರಾಜ್ಯ ಸರ್ಕಾರದ ಶೋಕಾಚರಣೆ ಕರೆಯನ್ನೂ ಆಲಕ್ಷ್ಯ ಮಾಡಿತ್ತು. ನಡುವೆ ಒಮ್ಮೊಮ್ಮೆ ರಾಜ್‌ ಕುರಿತಾದ ಸುದ್ದಿಗಳನ್ನು ವಾಚಿಸಿ, ಒಂದೆರಡು ಹಾಡುಗಳನ್ನು ಹಾಕಿದಂತೆ ಮಾಡಿತು. ಅವಿರತವಾಗಿ ಹಿಂದಿ ಹಾಡು, ಮತ್ತು ಜಾಹಿರಾತುಗಳು ಪ್ರಸಾರಗೊಂಡವು. ಇದು ಅಣ್ಣನವರಿಗೆ ಮಾತ್ರವಲ್ಲದೆ, ರಾಜ್ಯ ಸರ್ಕಾರಕ್ಕೆ, ರಾಜ್ಯದ ಜನತೆಗೆ ಮಾಡಿದ ಅಪಮಾನ ಎಂದು ನಮ್ಮ ಭಾವನೆ.

ಈ ವಿಚಾರವು ಬುದ್ಧಿಜೀವಿಗಳ ಗಮನಕ್ಕೆ ಬರದಿರುವುದು ಆಶ್ಚರ್ಯಕರ ಸಂಗತಿಯೆ ಸರಿ! ಕನ್ನಡವೆ ತಮ್ಮ ಉಸಿರು ಎಂದು ಬಹಿರಂಗವಾಗಿ ಹೇಳಿಕೊಳ್ಳುವ ಕನ್ನಡ ಪರ ಸಂಸ್ಥೆಗಳು ನಿದ್ರೆ ಮಾಡುತ್ತಿವೆಯೆ? ಕನ್ನಡ ಪರ ಕಾಳಜಿ ತೋರುತ್ತಿರುವ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಇದರ ಕಡೆ ಇನ್ನಾದರೂ ಗಮನ ಹರಿಸಿಯಾರೆ?

ಸುವರ್ಣ ಸಂಭ್ರಮ ಆಚರಿಸುತ್ತಿರುವ ಈ ಸಂದರ್ಭದಲ್ಲಾದರೂ, ಬೆಂಗಳೂರಿನಲ್ಲಿ ಈಗಾಗಲೆ ಕಾಲೂರಿರುವ, ಮುಂದೆ ಕಾಲೂರುವ ಎಲ್ಲಾ ವಾಹಿನಿಗಳು ಕನ್ನಡ ಕಾರ್ಯಕ್ರಮಗಳನ್ನು ಆದ್ಯತೆಯ ಮೇರೆಗೆ ಪ್ರಸಾರ ಮಾಡುವಂತೆ ಮಂತ್ರಿ ಮಹೋದಯರು ನಿಯಮ ಜಾರಿಗೊಳಿಸಬೇಕಾಗಿದೆ. ‘ಟ್ರಾಯ್‌ು’ ನ ನಿಯಮಗಳು ಸಹ ಪ್ರಾದೇಶಿಕ ಕಾರ್ಯಕ್ರಮಗಳನ್ನು ಆದ್ಯತೆಯ ಮೇರೆಗೆ ಪ್ರಸಾರಮಾಡಬೇಕೆಂಬುದಾಗಿ ಹೇಳುತ್ತದೆ.

ಈ ರೀತಿಯ ನಿಯಮಗಳನ್ನು ಗಾಳಿಗೆ ತೂರಿ ತಮ್ಮಿಷ್ಟಕ್ಕೆ ತಕ್ಕಂತೆ ವರ್ತಿಸುತ್ತಿರುವುದು ನಿಯಮ ಬಾಹಿರ ಕೆಲಸ. ಈ ಖಾಸಗಿ ಸಂಸ್ಥೆಗಳ ಕಾರ್ಯ ವೈಖರಿಗೆ ಕಡಿವಾಣ ಹಾಕುವುದು ಈ ಸಮಯದ ಆವಶ್ಯಕತೆಯಾಗಿದೆ. ಇದರೊಂದಿಗೆ ಹಿರಿಯಣ್ಣನ ನಿಜವಾದ ಆದರ್ಶಗಳನ್ನು ಪಾಲಿಸಿದಂತಾಗುತ್ತದೆ. ಅವರಿಗೆ ನಾವು ಸಲ್ಲಿಸುವ ನಿಜವಾದ ನಮನ ಇದಾಗಿರುತ್ತದೆ.

ಮುಖಪುಟ / ಓದುಗರ ಓಲೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X