ನಿತ್ಯ ಸುಮಂಗಲಿಯರ ಜಗತ್ತಿನಲ್ಲಿ ಏಡ್ಸ್‌ ಇದೆ!


Beware!ಪಾಪದ ಹೂವುಗಳ ಕತೆಗೆ ಕೊನೆಯೇ ಇಲ್ಲ. ಅದರಲ್ಲೂ ಏಡ್ಸ್‌ ಮಾರಿಯ ದೆಸೆಯಿಂದ ಪಾಪದ ಹೂವುಗಳ ಅಂತ್ಯ ನಿಜಕ್ಕೂ ಘೋರ, ಭಯಾನಕ! ಮತ್ತೊಂದು ಗಮನಾರ್ಹ ಸಂಗತಿಯೆಂದರೆ; ಪಾಪದ ಹೂವಿಗೆ ಮಾತ್ರವಲ್ಲ, ಮಧುವರಸಿ ಬರುವ ದುಂಬಿಗೂ ಏಡ್ಸ್‌ ಅಪಾಯ ತಪ್ಪಿದ್ದಲ್ಲ. ‘ವಿಶ್ವ ಏಡ್ಸ್‌ ದಿನಾಚರಣೆ’ ಬೆನ್ನಲ್ಲಿ, ಎಲ್ಲರಿಗೂ ಒಳ್ಳೆ ಬುದ್ಧಿ ಬರಲಿ ಎಂದು ಹಾರೈಸುತ್ತ, ಪಾಪದ ಹೂವುಗಳ ಮೇಲೆ ಬೆಳಕು ಚೆಲ್ಲುವ ಪದ್ಯ ಸರಣಿಗೆ ಸಿಕ್ಕಿದ ಎರಡು ಪ್ರತಿಕ್ರಿಯೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ -ಸಂಪಾದಕ.

ನಿತ್ಯ ಸುಮಂಗಲಿಯರ ಬಗ್ಗೆ ದಟ್ಸ್‌ ಕನ್ನಡದಲ್ಲಿ ಪ್ರಕಟವಾದ ಕವನಗಳೆಲ್ಲಾ ಮನ ಮುಟ್ಟುವಂತಿದೆ. ಸರಳ ಪದಗಳಲ್ಲಿ ಅವರ ಬದುಕಿನ ಸಂಕಟಗಳನ್ನು ಹೃದಯಂಗಮವಾಗಿ ಚಿತ್ರಿಸಿದ್ದೀರ . ಕಣವಿಯವರ ಒಂದು ಪದ್ಯ ನೆನಪಾಗುತ್ತಿದೆ...

‘‘ಎಷ್ಟು ಹಣತೆಗಳಿಂದ ಕತ್ತಲೆಯು ಕರಗುವುದು
ಎಷ್ಟು ಕವಿತೆಗೆ ಜನರ ಕಣ್ಣು ತೆರೆಯುವುದು ’’

ನಿಮ್ಮ ಕವಿತೆಗಳಿಗಂತೂ ಜನರ ಕಣ್ಣು ತೆರೆಸುವ ಸಾಮರ್ಥ್ಯ ಖಂಡಿತ ಇದೆ, ಅಭಿನಂದನೆಗಳು.

ಕತ್ತಲೆಯ ಬೆತ್ತಲೆ ಜಗತ್ತಿಗೆ
ಸ್ಪಂದಿಸಿ ಬರೆದಿರಿ
ಕಾಡುವ ಕವಿತೆ,
ನಿಟ್ಟುಸಿರ ವ್ಯಥೆಯ ಕತೆ.

ಯಾರದೋ ನೋವಿಗೆ
ಯಾವುದೋ ಶಾಪಕೆ
ಮರುಗುವ, ಕರಗುವ
ಅಂತಃಕರಣ, ಕಕ್ಕುಲತೆ.

ಬಾಡಿದ ಬಳ್ಳಿಗೆ,
ಬಳಲಿದ ಬಾಲೆಗೆ
ಬರಡಾದ ಬಾಳಿಗೆ
ಬೇಕಿಂಥ ಭರವಸೆಯ ಬೆಳಕು .

ಹೀಗೆಯೇ ಬರೆಯುತ್ತಿರಿ ಕವಿತೆ,
ನಿಟ್ಟುಸಿರಾದರೂ ಈಚೆ ಬರಲಿ.
ಹೀಗೆಯೇ ಹಚ್ಚುತ್ತಿರಿ ಹಣತೆ,
ಕತ್ತಲೆಯೂ ಚೂರು ಕರಗಲಿ.

ಧನ್ಯವಾದಗಳು.

- ಪೂರ್ಣಿಮ ಸುಬ್ರಹ್ಮಣ್ಯ

*

ಮಾನ್ಯರೇ,

ನಿತ್ಯ ಸುಮಂಗಲಿ ಸರಣಿಯ ಪದ್ಯಗಳನ್ನು ನೋಡಿದಾಗ ಪು. ತಿ. ನ. ಅವರ ಒಂದು ಪದ್ಯ ನೆನಪಾಯಿತು. ಅದು ಹೀಗಿದೆ :

ಬಡ ಸೂಳೆಗೆ ಅವಳ ಗೆಳತಿ
(ಸೊರಗಿರುವ ಅವಳ ನಾಲ್ಕು ಮಕ್ಕಳನ್ನು ನೋಡಿ)

ಮಡಿಮಡಿಹಾರುವ ಗುಡಿಯಲ್ಲಿ
ತೋಪಿನ ಗುಡಿಯಲ್ಲಿ
ಮುಟ್ಟಿಕೊಂಡು ಮೈಲಿಗೆಯಾದನು ಹುಡಿಯಲ್ಲಿ
ಮೂಲೆಯ ಹುಡಿಯಲ್ಲಿ.

ನಿಡುನೀಟು ಸರದಾರ ನಸುಕಿನೊಳಗೆ
ಸಂಜೆಯ ನಸುಕಿನೊಳಗೆ
ಕಟ್ಟಿಕೊಂಡು ಸೊಟ್ಟಗಾದ ಬೇಲಿಮರೆಗೆ
ಬಂಗ್ಲೆಯ ಬೇಲಿಮರೆಗೆ.

ಸೆಟ್ಟರ ಹುಡುಗ ತಕ್ಕಡಿಯೆಸೆದು ಅಂಗಡಿಯಲ್ಲೆ
ತಾತನಂಗಡಿಯಲ್ಲೆ
ನಕ್ಕು ನುಡಿದು ತೆಪ್ಪಗಾದ ಸಂಗಡದಲ್ಲೆ
ನಿನ್ನ ಸಂಗಡದಲ್ಲೆ.

ಕುಕ್ಕೆತುಂಬ ಮಲ್ಲಿಗೆಹೂವ ನಿನಗೆ ತೆತ್ತು
ಮಾಲಿ ನಿನಗೆ ತೆತ್ತು
ಕಣ್ಣ ಕಣ್ಣ ತಿರುವುತಿದ್ದ ನಿನ್ನ ಸುತ್ತು
ವಹವಾ - ನಿನ್ನ ಸುತ್ತು.

ಜಾತಿಯೆಲ್ಲ ಕೂಡಿತವ್ವ ಉಸಿರಿನೊಳಗೆ
ನಿನ್ನ ಉಸಿರಿನೊಳಗೆ
ಕಾಮನಪ್ಪ ತೂರಿಬಂದ ಬಸಿರಿನೊಳಗೆ
ನಿನ್ನ ಬಸಿರಿನೊಳಗೆ.

ತಲೆ ತೋಳು ತೊಡೆ ಕಾಲು ಪೂರ್ಣನಾಗಿ
ಸಂಪೂರ್ಣನಾಗಿ
ಬಿದ್ದಿಹನವ್ವ ಪರಮಪುರುಷ ಋಣವಾಗಿ
ನಿನ್ನ ಋಣವಾಗಿ.

ಹತೋಂ ಹತೋಂ ಧಿಮ್ಮಿತ್ತೋಂ ಧಿಮ್ಮಿತ್ತೋಂ
ಧಿಕಿಟ ದ್ಧಿಕಿಟಿತ್ತೋಂ.

- ಕೃಷ್ಣಪ್ರಿಯ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+