• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ರೋಮ’ ವುರಿವಾಗಲೂ ಪಿಟೀಲು ಬಾರಿಸುವೆ ಎನ್‌ ‘ನಿರೊ’...?

By Staff
|

.?

ಪ್ರತಿ ಮಂಗಳವಾರ ದಟ್ಸ್‌ಕನ್ನಡದಲ್ಲಿ ಮೂಡುವ ವಿಚಿತ್ರಾನ್ನ ಅಂಕಣದ ರುಚಿ ಬಣ್ಣಿಸಿ, ಓಲೆಗಳ ಪ್ರವಾಹವೇ ಹರಿದು ಬರುತ್ತದೆ. ಮೆಚ್ಚುಗೆಯನ್ನು ಪ್ರಕಟಿಸಿದಷ್ಟೇ ಪ್ರೀತಿಯಿಂದ ಬಿಚ್ಚು ನುಡಿಯ ಟೀಕೆಗಳನ್ನು ನಾವು ಪ್ರಕಟಿಸುತ್ತೇವೆ. ಈ ಮಾತಿಗೆ ಇಲ್ಲಿನ ಪತ್ರವೇ ಸಾಕ್ಷಿ. ವಿಚಿತ್ರಾನ್ನದಲ್ಲಿ ರುಚಿಯಿದೆ, ಪುಷ್ಟಿ ಇಲ್ಲ ! ಬರಹಕ್ಕೆ ಯಾವುದು ಮುಖ್ಯ? ಅಂತ ಕೇಳುತ್ತಿದ್ದಾರೆ , ಸದಾಶಯಗಳೊಂದಿಗೆ, ಸದಾಶಿವ.

ಶ್ರೀವತ್ಸ ಜೋಶಿಯವರೆ,

ಇದು ನಿಮಗೆ ನನ್ನ ಮೊದಲ ಪತ್ರ. ಸ್ವಲ್ಪ ಕಹಿ ಸ್ವಲ್ಪ ಸಿಹಿ ಎರಡನ್ನೂ ಬೆರೆಸಿ ಬೇವು-ಬೆಲ್ಲದಂತೆ ಕೊಡೋಣವೆಂದುಕೊಂಡಿದ್ದೇನೆ. ಬೇಸರವಿಲ್ಲ ಎಂದು ತಿಳಿಯುವೆ.

ನೀವು ಕನ್ನಡದಲ್ಲಿ ಲೇಖನಗಳನ್ನು ಬರೆಯುತ್ತಿರುವುದಕ್ಕೆ ಧನ್ಯವಾದಗಳು. ನಿಮ್ಮ ಅಂತರ್ಜಾಲದ ಪುಟಗಳು ‘ಫೈರ್‌ಫಾಕ್ಸ್‌’ ಬ್ರೌಸರ್‌ನಲ್ಲಿಯೂ ಸರಿಯಾಗಿ ಮೂಡುತ್ತವೆ, ಇದು ಒಳ್ಳೆಯ ಪ್ರಯತ್ನ. ಬೇರೆ ಕೆಲವು ಕನ್ನಡ ಜಾಲಪುಟಗಳು (ಉದಾಹರಣೆಗೆ, ಪ್ರಜಾವಾಣಿಯ ಪುಟಗಳು), ‘ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌’ಅನ್ನೇ ಬೇಡುತ್ತವೆ.

ಆದರೆ ನಾನು ತಿಳಿಸಬಯಸುವ ಕಹಿ ಅಂಶ ಏನೆಂದರೆ ನಿಮ್ಮ ಬರಹಗಳಲ್ಲಿ, ಅಂತಹ ಮುಖ್ಯವಾದ ವಿಚಾರ ಏನೂ ಕಾಣುವುದಿಲ್ಲ. ಅಂದರೆ ನಿಮ್ಮ ಬರಹಗಳು ಯಾವ ವಿಚಾರವನ್ನೂ ಸಂಪೂರ್ಣವಾಗಿ ಹೇಳುವುದಿಲ್ಲವೆಂದು ಅನಿಸುತ್ತದೆ. ಎಲ್ಲವೂ ಸ್ವಲ್ಪಸ್ವಲ್ಪವಾಗಿ ತುಣುಕುಗಳಂತೆ ಕಾಣಿಸುತ್ತವೆ. ಈವಾರದ ಸಂಚಿಕೆಯನ್ನೇ ತೆಗೆದುಕೊಳ್ಳಿ, ವಿಜಯ್‌ ಮಲ್ಯರ ಬಗ್ಗೆ ಬರೆಯುವುದಕ್ಕೇನಿದೆ? ಹಾಗೆಯೇ ‘ಆಡು ಮುಟ್ಟದ...’ ಎಂದು ಏನನ್ನೋ ಬರೆದು ತೇಲಿಸಿದಂತಿದೆ. ಇಲ್ಲಿ ನೀವು ಏನು ಹೇಳುತ್ತಿದ್ದೀರೆಂದು ಸ್ಪಷ್ಟವಾಗುವುದಿಲ್ಲ. ಬಹುಶಃ ನಿಮ್ಮ ಅಂಕಣದ ಶೀರ್ಷಿಕೆ ‘ವಿಚಿತ್ರಾನ್ನ’ ಎಂದಿರುವುದರಿಂದ ಇದರ ಬಗ್ಗೆ ಹೆಚ್ಚು ಹೇಳಲಾರೆವೇನೋ!

ಆದರೆ ಜ್ವಲಂತ ವಿಚಾರಗಳ ಬಗ್ಗೆ ಬರೆದರೆ ಮತ್ತು ನಮ್ಮ ನಾಡಿನ ಕವಿವರ್ಯರಾದ ಕುವೆಂಪು, ಬೇಂದ್ರೆ ಮತ್ತು ಸಮಕಾಲೀನ ಸಾಹಿತಿಗಳ, ವೈಜ್ಞಾನಿಕ ಬರಹಗಾರರ ಬಗ್ಗೆಯೋ ಅಥವಾ ಕನ್ನಡದಲ್ಲಿ ಹೆಚ್ಚು ಇಲ್ಲದ ವಿಜ್ಞಾನ ಸಾಹಿತ್ಯವನ್ನೋ ಹೆಚ್ಚಿಸುವುದರ ಬಗ್ಗೆಯೋ ಬರೆದರೆ ಹೆಚ್ಚು ಸಾರ್ಥಕವೆಂದು ತೋರುತ್ತದೆ. ನಿಮ್ಮ ಹೆಚ್ಚು ಸತ್ವಪೂರ್ಣ ಲೇಖನಗಳು ಕನ್ನಡವನ್ನು ಮುನ್ನಡೆಸಲು ನೆರವಾಗಲಿ. ‘ವಿಚಿತ್ರಾನ್ನ’ ಕೆಲವೊಮ್ಮೆ ಅಸಂಬದ್ಧವಾಗಿದೆಯೆಂದೆನ್ನಿಸಿ ‘ಹಳಸಲನ್ನ’ ವಾಗದಂತೆ ಸೂಕ್ಷ್ಮತೆ ವಹಿಸುತ್ತೀರೆಂದು ಹಾರೈಸುತ್ತೇನೆ. ಸ್ವಲ್ಪ ಕಹಿಯಿರುವುದಕ್ಕೆ ಕ್ಷಮೆ ಇರಲಿ.

ಇತಿ,

ಸದಾಶಿವ ; ಬೆಂಗಳೂರು

* * *

ಸದಾಶಿವ ಅವರಿಗೆ ಆತ್ಮೀಯ ನಮಸ್ಕಾರಗಳು! ಚೆನ್ನಾಗಿದ್ದೀರಾ?

ನಿಮ್ಮ ಪತ್ರಕ್ಕಾಗಿ ತುಂಬಾ ಧನ್ಯವಾದಗಳು. ಅದರಲ್ಲಿ ‘ಕಹಿ’ಯ ಮಾತೇ ಇಲ್ಲ. ಯಾಕೆಂದರೆ ನೀವು ನಿಮ್ಮ ವೈಯಕ್ತಿಕ ಅಭಿಪ್ರಾಯವನ್ನು ‘ಪೊದೆಯ ಸುತ್ತ ಕೋಲು ಬಡಿಯದೆ’ ಸ್ಪಷ್ಟವಾಗಿ ಮತ್ತು ನೇರವಾಗಿ ವಿವರಿಸಿ ತಿಳಿಸಿದ್ದೀರಿ. ಆ ಪ್ರಕ್ರಿಯೆಯನ್ನು ನಾನು ‘ಸಿಹಿ’ ಎಂದೇ ಪರಿಗಣಿಸುತ್ತೇನೆ!

ಇನ್ನು ವಿಚಿತ್ರಾನ್ನ ಅಂಕಣದಲ್ಲಿ ‘ಲಘು’ (ಸತ್ವರಹಿತ?) ಬರಹಗಳೇ ಏಕೆ ಇರುತ್ತವೆ, ಜ್ವಲಂತ ಸಮಸ್ಯೆಗಳ ಬಗ್ಗೆ ಏಕೆ ಬರೆಯುವುದಿಲ್ಲ ಅಂತ ನಿಮ್ಮ ಪ್ರಶ್ನೆ. ಇದಕ್ಕೆ ನಾನು ಉತ್ತರ ಅಥವಾ ವಿವರಣೆ ಕೊಟ್ಟರೆ, ‘ಓಹೋ, ಈತ ಆಪಾದನೆಯಿಂದ ಜಾರಿಕೊಳ್ಳಲು ಸಮರ್ಥನೆಯ ದಾರಿ ಬಳಸಿದ್ದಾನೆ...’ ಎಂದು ಅನಿಸಬಹುದಾದರೂ ಇರುವ ವಿಷಯ ತಿಳಿಸುತ್ತೇನೆ.

ವಿಚಿತ್ರಾನ್ನ ಅಂಕಣದ ಮೂಲವ್ಯಾಖ್ಯೆ (ಅದರ ಯು.ಎಸ್‌.ಪಿ - Unique Selling Proposition ಕೂಡ ಹೌದು) ‘ಲೈಟಾಗಿರೊದನ್ನು ಬಯಸುವವರ ವಾರಾನ್ನ!’ ಎಂದು. ಅಂಕಣದ ಪರಿವಿಡಿ ಪುಟದಲ್ಲಿನ ಪರಿಚಯ-ವಿವರಣೆಯನ್ನು ಓದಿದರೆ ನಿಮಗಿದು ಗೊತ್ತಾಗುತ್ತದೆ. ಅಂಕಣದ ಮೊಟ್ಟಮೊದಲ ಸಂಚಿಕೆ ವಿಚಿತ್ರಾನ್ನ ಎಂಬ ಹೆಸರು ಮತ್ತು ಈ ಅಂಕಣದ ವ್ಯಾಪ್ತಿಯನ್ನು ವಿವರಿಸುತ್ತದೆ. ದಟ್ಸ್‌ಕನ್ನಡ ಪತ್ರಿಕೆಯ ಸಂಪಾದಕರು ಈ ಅಂಕಣದಿಂದ ಏನನ್ನು ನಿರೀಕ್ಷಿಸಿದ್ದರು, ನಿರೀಕ್ಷಿಸುತ್ತಾರೆ ಅನ್ನುವುದೂ, ಅಂಕಣ ಶುರುಗೊಳ್ಳುವ ಮೊದಲು ಅವರು ಕಳಿಸಿದ್ದ ಈಮೈಲ್‌ ಸಂದೇಶವಿರುವ ಸಂಚಿಕೆಯಲ್ಲಿ ನಿಮಗೆ ತಿಳಿಯುತ್ತದೆ.

ಹೀಗಿದ್ದರೂ ಕೆಲವೊಮ್ಮೆ ‘ಲೈಟ್‌ ಆಗಿರೋದು’ ಎನ್ನುವ ವ್ಯಾಖ್ಯೆಯನ್ನು ಮೀರಿ ತುಸು ಗಂಭೀರ ಲೇಖನಗಳನ್ನು ಈ ಅಂಕಣದಲ್ಲಿ ಬರೆಯುವ ಪ್ರಯತ್ನವನ್ನೂ ನಾನು ಮಾಡಿದ್ದುಂಟು. ಉದಾಹರಣೆಗೆ ಕುವೆಂಪು ಬಗ್ಗೆ, ಅವರ ವಿಶ್ವಮಾನವ ಸಂದೇಶದ ಬಗ್ಗೆ ಒಂದು ಲೇಖನ. (ಅದನ್ನು ನಾನು ಬೇರೆ ಸಂದರ್ಭದಲ್ಲಿ ಬರೆದದ್ದು, ಆದರೂ ಈ ಅಂಕಣದಲ್ಲಿ ತುರುಕಿಸಿದೆ, ಜನರನ್ನು ತಲುಪಲಿ ಎಂದು).

ಆದರೆ, ‘ಲೈಟ್‌ ಆಗಿ ಇರದ’ (= ಹ್ಯೂಮರ್‌, ಫನ್‌, ಪನ್‌ ಅಂಶವಿಲ್ಲದ) ಲೇಖನಗಳನ್ನು ಬರೆದಾಗೆಲ್ಲ ’ವಿಚಿತ್ರಾನ್ನದಲ್ಲಿ ಲಘುಹರಟೆರೂಪದ ಲೇಖನಗಳನ್ನೇ ಬಯಸುತ್ತೇವೆ...’ ಎಂದು ಜನ ಇಷ್ಟಪಡುತ್ತಾರೆ. ವಿಚಿತ್ರಾನ್ನವೆಂದರೆ ಹಾಸ್ಯಲೇಖನಗಳ ಸರಣಿಯೋ ಎಂಬ (ತಪ್ಪು) ಕಲ್ಪನೆಯೂ ಕೆಲವರಲ್ಲಿದೆ. ಹಾಸ್ಯದ ಲವಲೇಶವಿಲ್ಲದ, ಚಿಂತನೆಯ, ಮಾಹಿತಿಯ ವಿಷಯವುಳ್ಳ ಲೇಖನಗಳು ಬರತೊಡಗಿದಾಗ ಒಬ್ಬರಂತೂ ‘ವಿಚಿತ್ರಾನ್ನ ಫೊಕಸ್‌ ಕಳಕೊಂಡಿದೆ...’ ಎಂದು ದೂರಿದ್ದರು; ಆ ಬಗ್ಗೆ ಒಂದು ಚರ್ಚೆಯೇ ನಡೆದಿತ್ತು! ವಿಪರ್ಯಾಸವೆಂದರೆ ವೈಜ್ಞಾನಿಕ ವಿಷಯವನ್ನು ಕನ್ನಡದಲ್ಲಿ ವಿವರಿಸಿದ ಲೇಖನವೇ ಫೋಕಸ್‌ ಶಿಫ್ಟ್‌ ಆರೋಪಕ್ಕೆ ಗುರಿಯಾದದ್ದು!

ಮೊನ್ನೆಮೊನ್ನೆ ತ್ಸುನಾಮಿ ವಿಕೋಪದ ವೇಳೆ ವಿಚಿತ್ರಾನ್ನ ಸಹ ಸ್ವಲ್ಪ ಶ್ರೀಮದ್ಗಾಂಭೀರ್ಯವನ್ನು ಪಡೆದಾಗ ‘ಛೇ ಇದು ಆಸ್ಪತ್ರೆ ಊಟ ಇದ್ದಂತಿದೆ... ಮತ್ತೆ ವಿಚಿತ್ರಾನ್ನವನ್ನೇ ಬಡಿಸಿ...’ ಎಂದು ಓದುಗರು ಪತ್ರ ಬರೆದಿದ್ದಾರೆ. - ಹೀಗೆ ಅಂಕಣದ ಚೌಕಟ್ಟನ್ನು ನಾನು ರೂಪಿಸಿಕೊಂಡಿರುವುದಕ್ಕಿಂತಲೂ ಕೆಲವು ಓದುಗರು ಚೆನ್ನಾಗಿ ರೂಪಿಸಿಕೊಂಡಿದ್ದಾರೆ. ಚೌಕವನ್ನು ಮೀರಿದಾಗ ಎಚ್ಚರಿಸುತ್ತಾರೆ.

ಈಗ ಹೇಳಿ ಲೈಟಾದ ಲೇಖನಗಳು ಬೇಕೇ? ಟೈಟಾದ ಲೇಖನಗಳು ಬೇಕೇ? ಫೈಟಾಡುವ ಲೇಖನಗಳು ಬೇಕೆ?

ಇದಿಷ್ಟು ವಿಚಿತ್ರಾನ್ನ ವ್ಯಾಖ್ಯಾನ. ಇನ್ನು ನಿಮ್ಮ ಪತ್ರದಲ್ಲಿ ಬರೆದ ವಿಷಯದ ಮೇಲೆ, ಜ್ವಲಂತ ಸಮಸ್ಯೆಗಳ ಬಗ್ಗೆ ಬೆಳಕುಚೆಲ್ಲುವ ಲೇಖನಗಳಿರಬೇಕು ಎಂಬ ವಿಚಾರದ ಮೇಲೆ ನನಗೆ ಪೂರ್ಣ ಗೌರವವಿವೆ. ಆ ತರಹದ ಲೇಖನಗಳನ್ನು ಬಿಡಿಯಾಗಿ ಬರೆಯುವ (ವಿಚಿತ್ರಾನ್ನ ಅಂಕಣದಲ್ಲಿ ಅಲ್ಲ) ಪ್ರಯತ್ನವನ್ನು ಮಾಡುತ್ತೇನೆ. ಬರೆದು ಪ್ರಕಟಿಸಿದಾಗ ನಿಮಗೂ ತಿಳಿಸುತ್ತೇನೆ. ಯಾಕಂದರೆ, ರೋಮ್‌ ಉರಿಯುತ್ತಿರುವಾಗ ಪಿಟೀಲು ಬಾರಿಸುತ್ತಿದ್ದನೆನ್ನಲಾದ ನಿರೋನಂತೆ ಆಗಬಾರದಲ್ಲ ನಾವು-ನೀವು ಯಾರೂ ಸಹ?

ಕೊನೆಯಲ್ಲಿ, ನಿಮ್ಮ ಹೆಸರಿನ ಮೇಲೆಯೇ ಒಂದು ಪನ್‌ ಮಾಡಲು ಅನುಮತಿಕೊಡುತ್ತೀರಾದರೆ, ‘ಸದಾಶಿವನಿಗೆ ಅದೇ ಧ್ಯಾನ...’ ಎನ್ನುವ ಗಾದೆಯನ್ನು ‘ಸದಾಶಿವನಿಗೆ ಜ್ವಲಂತಸಮಸ್ಯೆಗಳೇ ಧ್ಯಾನ...’ ಎಂದು ಬದಲಾಯಿಸಿ ಅದರ ಪರಿಹಾರಾರ್ಥವಾದರೂ ಒಂದು ಬರ್ನಿಂಗ್‌ ಟಾಪಿಕ್‌ಗೆ ಬರ್ನಾಲ್‌ ಹಚ್ಚುವ ಲೇಖನವನ್ನು ಬರೆದು ಪ್ರಕಟಿಸುತ್ತೇನೆ, ಒಂದಲ್ಲ ಒಂದುದಿನ... ಎನ್ನಲೇ?

ಇತಿ,

ಶ್ರೀವತ್ಸ ಜೋಶಿ; ವಾಷಿಂಗ್‌ಟನ್‌ ಡಿಸಿ

ಮುಖಪುಟ / ಓದುಗರ ಓಲೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more