• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಹಿತ್ಯ ವಯಲದ ಸುತ್ತ ಜಾಗತೀಕರಣದ ಹುತ್ತ !

By Super
|

‘ಸಾಹಿತ್ಯದ ಮೇಲೆ ಜಾಗತೀಕರಣದ ಪರಿಣಾಮ'ವನ್ನು ಬಿಂಬಿಸುವ ಸುದರ್ಶನ ಪಾಟೀಲ ಕುಲಕರ್ಣಿ ಅವರ ಲೇಖನ, ಆರೋಗ್ಯಕರ ಚರ್ಚೆಗೆ ನಾಂದಿಯಾಡಿದೆ. ತಮ್ಮ ವಿಚಾರ ಮಂಡಿಸುವ ಭರದಲ್ಲಿ ಲೇಖಕರು ಅನಗತ್ಯವಾಗಿ ವಸುಧೇಂದ್ರ ಅವರ ಮೇಲೆ ದಾಳಿ ಮಾಡಿದ್ದಾರೆ ಎಂದು ಸುಮಂಗಲಾ, ಈ ಲೇಖನದ ವ್ಯಾಪ್ತಿ, ವಿಸ್ತಾರ, ಹಿರಿದು ಎಂಬ ಅಂಶವನ್ನು ಶಿವಕುಮಾರ್‌ ಇಲ್ಲಿ ವಿವರಿಸಿದ್ದಾರೆ.

ಮಾನ್ಯ ಸುದರ್ಶನ ಪಾಟೀಲರೇ,

ಅಮಿತ್‌ ಚೌಧರಿ ಭಾರತೀಯ ಆಂಗ್ಲ ಬರಹ ಇಂದು ಎಲ್ಲಿ ನಿಂತಿದೆ ಎಂಬುದನ್ನು ಬಹಳ ಸೊಗಸಾಗಿ ವ್ಯಾಖ್ಯಾನಿಸಿದ್ದರ ಕುರಿತು ತಾವು ದಟ್ಸ್‌ಕನ್ನಡದಲ್ಲಿ ಬರೆದ ಲೇಖನವನ್ನು ಓದಿದ ನಂತರ ಅನ್ನಿಸಿದ್ದು...

ಇಂಗ್ಲಿಷ್‌ ಸಾಹಿತ್ಯವನ್ನು ಶಾಲಾ ಕಾಲೇಜಿನ ಪಠ್ಯ ಪುಸ್ತಕದಲ್ಲಿ ಓದಿ, ಉಳಿದಂತೆ ರಷ್ದಿಯವರನ್ನೂ ಸೇರಿದಂತೆ ಇಂಗ್ಲಿಷ್‌ ಸಾಹಿತ್ಯದ ಕುರಿತು ಕನ್ನಡದಲ್ಲಿ ಚೂರು ಪಾರು ಓದಿಕೊಂಡಿರುವುದನ್ನು ಬಿಟ್ಟರೆ ಆಂಗ್ಲಶಿಕ್ಷಣ, ತಾಂತ್ರಿಕ, ವೈದ್ಯಕೀಯದಂಥ ಬೇಡಿಕೆಯ ವೃತ್ತಿಪರ ಶಿಕ್ಷಣವನ್ನೂ ಪಡೆಯದ ನನ್ನಂಥವರಲ್ಲಿ ತಾವು ಹೇಳುವ ಆಕರ್ಷಣೆಯ ಪ್ರಶ್ನೆಯೇ ಇಲ್ಲವೇನೋ ಅನ್ನಿಸುತ್ತೆ.

ನೀವು ಹೇಳುವ ಕೆಲವು ಸಂಗತಿಗಳು ಸತ್ಯವಿರಲೂ ಬಹುದು, ಅಲ್ಲಗೆಳೆಯಲಾರೆ.

ಆದರೆ ಇತ್ತೀಚಿನ ಕನ್ನಡದ ಬರವಣಿಗೆಯಲ್ಲೂ ಪ್ರಜಾಪ್ರಭುತ್ವದ ಬೇರುಗಳನ್ನು ಬಲಪಡಿಸುವ ಕಾಳಜಿಗಿಂತ ಹೆಚ್ಚಾಗಿ ಭದ್ರತಾ ಮಂಡಳಿಯ ಸದಸ್ಯತ್ವದ ಆಕಾಂಕ್ಷೆ ಕೊಡುವ ‘ಆತ್ಮವಿಶ್ವಾಸ' ಕಾಣತೊಡಗಿದೆ ಎಂಬ ತಮ್ಮ ಈ ವಾದವನ್ನು ಮಂಡಿಸಲು ತಾವು ಇತ್ತೀಚಿನ ಇಡೀ ಕನ್ನಡದ ಬರವಣಿಗೆಯ ಪ್ರಾತಿನಿಧಿಕವೆಂಬಂತೆ ವಸುಧೇಂದ್ರ ಅವರ ‘ಕೋತಿಗಳು ಸಾರ್‌ ಕೋತಿಗಳು' ಸಂಕಲನವನ್ನು ಆಯ್ದುಕೊಂಡಿರುವುದು ಮಾತ್ರ ಯಾಕೋ ಕೊಂಚ ಪೂರ್ವಾಗ್ರಹ ಪೀಡಿತ, ಅವೈಜ್ಞಾನಿಕವೆಂದೇ ತೋರುತ್ತದೆ.

ಅಲ್ಲಾರೀ... ಮೊದಲನೆಯದಾಗಿ ಅದು ಲಲಿತ ಪ್ರಬಂಧಗಳ ಸಂಕಲನ. ಅಲ್ಲಿಯ ಬರಹಗಳಲ್ಲಿ ತುಸು ತಮಾಷೆ, ಚಿಕ್ಕಪುಟ್ಟ ನೋವು - ನಲಿವು, ಬದುಕಿನ ಹಗುರ ಕ್ಷಣಗಳನ್ನು ಲವಲವಿಕೆಯಿಂದ ಹಂಚಿಕೊಳ್ಳುವ ಚಿತ್ರಣ ಇದೆ. ನಾನಂದುಕೊಂಡ ಹಾಗೆ ಲಲಿತ ಪ್ರಬಂಧಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ಗುಣಲಕ್ಷಣ ವಸುಧೇಂದ್ರರ ಸಂಕಲನದಲ್ಲಿಯೂ ತುಂಬ ಧನಾತ್ಮಕವಾದ ರೀತಿಯಲ್ಲಿಯೇ ಇದೆ. ಕಥೆ ಕಾದಂಬರಿ, ಕವನಗಳಲ್ಲಿ ಅನುಭವ ಹರಳುಗಟ್ಟುವುದಕ್ಕೂ ಹಾಗೂ ಲಲಿತ ಪ್ರಬಂಧಗಳಲ್ಲಿ ಅನುಭವ ಹರಳುಗಟ್ಟುವುದಕ್ಕೂ ಮೂಲಭೂತವಾಗಿ ಕೆಲವು ವ್ಯತ್ಯಾಸಗಳಿವೆ ಎಂದು ನನ್ನ ಭಾವನೆ. ಹಾಗಿರುವಾಗ ನೀವು ನಿಮ್ಮ ಘನಗಂಭೀರ ವಾದವನ್ನು ಈ ಲಲಿತ ಪ್ರಬಂಧಗಳಿಗೆ ಆರೋಪಿಸಿ ಹೇಗೆ ಸಮರ್ಥಿಸಿಕೊಳ್ಳುವಿರಿ ಎನ್ನುವುದು ನನಗರ್ಥವಾಗಲಿಲ್ಲ.

ಇನ್ನು ಎರಡನೆಯದಾಗಿ - ಕೇವಲ ಒಂದೇ ಒಂದು ಲಲಿತ ಪ್ರಬಂಧಗಳ ಸಂಕಲನವನ್ನು ಉದಾಹರಿಸಿ -ಇತ್ತೀಚಿನ ಕನ್ನಡದ ಬರವಣಿಗೆಯಲ್ಲೂ ಪ್ರಜಾಪ್ರಭುತ್ವದ ಬೇರುಗಳನ್ನು ಬಲಪಡಿಸುವ ಕಾಳಜಿಗಿಂತ ಹೆಚ್ಚಾಗಿ ಭದ್ರತಾ ಮಂಡಳಿಯ ಸದಸ್ಯತ್ವದ ಆಕಾಂಕ್ಷೆ ಕೊಡುವ ‘ಆತ್ಮವಿಶ್ವಾಸ' ಕಾಣತೊಡಗಿದೆ ಎಂಬ ವಾದವನ್ನು ಇತ್ತೀಚಿನ ಕನ್ನಡದ ಬರವಣಿಗೆಗೆ ಪೂರ್ತಿಯಾಗಿ ಅನ್ವಯವಾಗುವಂತೆ ಹೇಗೆ ಮಂಡಿಸುವಿರಿ.... ಈ ಬಗೆಯಲ್ಲಿ ವಾದ ಮಾಡುವುದು ಅವೈಜ್ಞಾನಿಕ ಹಾಗೂ ಕೊಂಚ ಮೂರ್ಖತನ ಮತ್ತು ಅದಕ್ಕಿಂತ ಹೆಚ್ಚಾಗಿ ಕೊಂಚ ಅಪಾಯಕಾರಿಯಾದ, ಅನಾರೋಗ್ಯಕರ ನಿಲವು ಕೂಡ.

ವಸುಧೇಂದ್ರರ ‘ಕೋತಿಗಳು ಸಾರ್‌...' ಸಂಕಲನ ಲಲಿತ ಪ್ರಬಂಧಗಳ ಸಾಲಿಗೆ ಒಂದು ಉತ್ತಮ ಸೇರ್ಪಡೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ ಅದೊಂದನ್ನೆ ಇತ್ತೀಚಿನ ಕನ್ನಡದ ಬರವಣಿಗೆಯ ಪ್ರಾತಿನಿಧಿಕ ಬರಹವೆಂಬತೆ ಭಾವಿಸಿ ನೀವು ವಾದ ಮಂಡಿಸಿರುವುದು ಅನಾರೋಗ್ಯಕರ. ಇತ್ತೀಚಿನ ಕನ್ನಡದ ಬರವಣಿಗೆ ಎಂದು ನೀವು ಹೇಳುವಾಗ ಹತ್ತಿಪ್ಪತ್ತು ಲೇಖಕರ ಬರಹಗಳನ್ನಾದ್ರೂ ಗಮನಿಸಿ ಹೇಳಬೇಕಾಗುತ್ತದೆ. ಸುಮ್ಮನೆ ಒಂದು ಲಲಿತ ಪ್ರಬಂಧದ ಸಂಕಲನದ ಮೇಲೆ ಆರೋಪಿಸಿ ಬರೆದರೆ ಪೂರ್ವಾಗ್ರಹಪೀಡಿತವೆಂಬಂತೆ ಭಾಸವಾಗುತ್ತದೆ ಅಷ್ಟೆ.

‘ಇಲ್ಲಿಯ ಬರಹಗಳು ಪ್ರಸ್ತುತ ಸಂದರ್ಭದ ಒಂದು ತುಣುಕನ್ನು, ಒಂದು ಮನಸ್ಸನ್ನು ಇದು ಪ್ರತಿನಿಸುತ್ತದೆ ಎಂದಷ್ಟೇ ಹೇಳಬಹುದು' ಎಂಬ ನಿಮ್ಮ ಮಾತನ್ನು ನಾನೂ ಒಪ್ಪುತ್ತೇನೆ. ಅದು ಬಹುಶಃ ಲಲಿತ ಪ್ರಬಂಧದ ಉದ್ದೇಶ ಹಾಗೂ ಮಿತಿ ಕೂಡ ಆಗಿರಬಹುದು ಎಂದು ನಾನಂದುಕೊಂಡಿರುವೆ.

ಇನ್ನು ನೀವು ಉದಾಹರಿಸಿದ ‘ಚೇಳು' ಹಾಗೂ ‘ನಮ್ಮ ವಾಜೀನ್ನ ಆಟಕ್ಕೆ ಸೇರಿಸಿಕೊಳ್ರೋ' ಕಥೆಗಳು. ನೀವು ಮೊದಲು ಉದಾಹರಿಸಿರುವುದು ಲಲಿತ ಪ್ರಬಂಧಗಳು. ಕಥೆಗೂ ಲಲಿತ ಪ್ರಬಂಧಗಳಿಗೂ ಇರುವ ಮೂಲ ವ್ಯತ್ಯಾಸವನ್ನು ನೀವು ಗಮನದಲ್ಲಿಟ್ಟುಕೊಂಡು ಲೇಖನವನ್ನು ಬರೆದಿದ್ರೆ ಹಾಗೂ ಇತ್ತೀಚಿಗೆ ಕನ್ನಡದಲ್ಲಿ ಬರುತ್ತಿರುವ ಬರಹಗಳನ್ನು ಸಾಧ್ಯವಾದಷ್ಟೂ ಸಮಗ್ರ ರೀತಿಯಲ್ಲಿ ಅವಲೋಕಿಸುತ್ತ ನಿಮ್ಮ ವಾದವನ್ನು ಮಂಡಿಸಿದ್ದರೆ ಒಳ್ಳೆದಿತ್ತು ಅನ್ನಿಸುತ್ತದೆ.

- ಸುಮಂಗಲಾ

sumangalagm@yahoo.com

*

ಮಾನ್ಯರೇ,

ಉದಯೋನ್ಮುಖ ಬರಹಗಾರರಾದ ಸುದರ್ಶನರ ಪತ್ರ ಮತ್ತು ವಸುಧೇಂದ್ರರ ಪ್ರತಿಕ್ರಿಯೆ ಒಂದು ಸಾಧ್ಯತೆಯನ್ನು ತನ್ನೊಡಲಲ್ಲಿರಿಸಿಕೊಂಡಿರುವುದರಿಂದ ನನಗೆ ಆಸಕ್ತಿಕರವೆನಿಸಿದೆ.

ಸುದರ್ಶನರ ಬರಹದಲ್ಲಿ ಎರಡು ಭಾಗಗಳಿವೆ. ಮೊದಲನೇಯದ್ದು, ರಷ್ಡೀ ಕುರಿತು ಅಮಿತ್‌ ಚೌಧರಿ ಮತ್ತು ಸ್ವತಃ ಸುದರ್ಶನರದ್ದೇ ಎನ್ನಬಹುದಾದ ಅಭಿಪ್ರಾಯಗಳು ಮತ್ತು ಎರಡನೇಯದ್ದು, ಆ ಹಿನ್ನೆಲೆಯ ಕೆಲ ಅಂಶಗಳಿಂದ ವಸುಧೇಂದ್ರರ ಒಂದು ಕೃತಿಯ ಕುರಿತು ಕೆಲ ಅಭಿಪ್ರಾಯಗಳು ಮತ್ತು ಆ ಮೂಲಕ ಕನ್ನಡ ಸಾಹಿತ್ಯ ಮತ್ತು ಬರಹಗಾರರ ಕುರಿತಾದ ಚಿಂತನೆ. ಈ ನನ್ನ ಪ್ರತಿಕ್ರಿಯೆ ತುಂಬಾ ಸಹಜವಾಗಿಯೇ ಎರಡನೇಯ ಅಂಶದ ಕುರಿತಾಗಿದೆ.

ಸುದರ್ಶನ್‌ ಅವರ ಮಾತುಗಳನ್ನು ವಸುಧೇಂದ್ರ ಒಬ್ಬ ಲೇಖಕನಾಗಿ ಮತ್ತು ವ್ಯಕ್ತಿಯಾಗಿ ಸ್ವೀಕರಿಸಿ ಪ್ರತಿಕ್ರಿಯಿಸಿದ್ದಾರೆ. ಆದರೆ ಈ ಸಂವಾದಕ್ಕೆ ಇನ್ನಿತರ ಸಾಧ್ಯತೆ ಮತ್ತು ಆಯಾಮಗಳಿವೆ, ನಮ್ಮ ಗಮನ ಆದಷ್ಟು ಅತ್ತ ಹರಿಯಬೇಕಾದುದು ಸದ್ಯದ ಅಗತ್ಯ ಎನ್ನುವುದು ನನ್ನ ಕಳಕಳಿ.

ಮೇಲ್ನೋಟಕ್ಕೆ ಸುದರ್ಶನ್‌ ಒಂದು ಕೃತಿ ಮತ್ತು ಒಬ್ಬ ಬರಹಗಾರರ ಕುರಿತಾದ ಮಾತುಗಳ ಮೂಲಕ ಇಡಿಯ ಸಮಕಾಲೀನ ಕನ್ನಡಸಾಹಿತ್ಯದ ಕುರಿತಾದ ಮಾತುಗಳಾಡಿದ್ದಾರೆನ್ನಿಸಬಹುದು. ವಸುಧೇಂದ್ರರು ಮುಂಚೂಣಿಗೆ ಬರುತ್ತಿರುವವರೂ ಸಮಕಾಲೀನರೂ ಆಗಿರುವುದರಿಂದ ಅವರ ಬರಹವನ್ನು ಪ್ರಮುಖವಾಗಿ ಗಮನಿಸುವುದು ಸಹಜವೇ.

ಆದರೆ ಸುದರ್ಶನ ಎತ್ತಿರುವ ಅಂಶಗಳು ಕೇವಲ ಒಬ್ಬ ವ್ಯಕ್ತಿಯ ಕುರಿತಾದ್ದಲ್ಲ ಮತ್ತು ಒಂದು ಕೃತಿಯ ಕುರಿತಾದ್ದೂ ಅಲ್ಲ, ಅದು ಕೇವಲ ಇವತ್ತಿನ ಚರ್ಚೆಯಷ್ಟೇ ಅಲ್ಲದೇ ನಾಳಿನ ಕುರಿತಾದ ಚರ್ಚೆಯೂ ಆಗಬಹುದಾಗಿದೆ ಎಂದು ಗಮನಿಸುವುದರಿಂದ ನಮಗೆ ಹೆಚ್ಚಿನ ಪ್ರಯೋಜನವಿದೆ. ನಮ್ಮ ನಮ್ಮ ವೈಯಕ್ತಿಕ ಹಿನ್ನೆಲೆಯನ್ನು ಮೀರಿ, ಕಾಲದ ಶಕ್ತಿಕೇಂದ್ರಗಳು ರೂಪಿಸುವ ಅದೆಷ್ಟೋ ಸಂವೇದನೆಗಳು ನೇರವಾಗಿ ಬರಹಗಾರರಿಗೆ ಒಪ್ಪಿಗೆಯಿಲ್ಲದಿದ್ದರೂ, ಅಪ್ರಜ್ಞಾಪೂರ್ವಕವಾಗಿ (ಹಿಂಬಾಗಿಲಿನಿಂದ) ಸಾಹಿತ್ಯ ಕೃತಿಗಳಲ್ಲಿ ನುಸುಳುವ ಸಾಧ್ಯತೆ ಇದೆಯೇ ಎನ್ನುವ ಪ್ರಶ್ನೆ ನಮ್ಮೆಲ್ಲರನ್ನೂ ಕಾಡಬೇಕಿದೆ.

ಈ ದೃಷ್ಟಿಯಿಂದ ಸುದರ್ಶನರ ಮಾತುಗಳನ್ನು ಗಮನಿಸುತ್ತಾ ಯುವಬರಹಗಾರರೆಲ್ಲಾ ಒಂದಿಷ್ಟು ಮರುಪರಿಶೀಲನೆ ಮಾಡಿಕೊಳ್ಳುವುದಕ್ಕೆ, ತಮ್ಮನ್ನು ತಾವೇ ಎಚ್ಚರಿಸಿಕೊಳ್ಳುವುದಕ್ಕೆ ಈ ಸಂವಾದವನ್ನು ಒಂದು ಅವಕಾಶವನ್ನಾಗಿ ಬಳಸಿಕೊಳ್ಳಬಹುದಾಗಿದೆ. ಅಂತಹ ಇನ್ನಿತರ ಮುಖ್ಯ ಮತ್ತು ಪ್ರಸ್ತುತವಾದ ಅಂಶಗಳನ್ನು ಈ ಮಧ್ಯಕ್ಕೆಳೆತಂದು ಸಂವಾದಕ್ಕೆ ಬೇರೆಯ ಆಯಾಮಗಳನ್ನು ಕೊಡಬಹುದಾಗಿದೆ. ಇವುಗಳನ್ನು ಬರಹಗಾರರು ಚಿಂತಕರು ಹೇಗೆ ಎದುರಿಸುತ್ತಾರೆ ಮತ್ತೆ ಇಂತಹ ಅಪಾಯಗಳಿಂದ ಪಾರಾಗುವ ಉಪಾಯಗಳೇನು ಎನ್ನುವುದು ಈ ಸದ್ಯಕ್ಕೆ ನಮಗೆ ಅತ್ಯಂತ ಪ್ರಸ್ತುತ ಮತ್ತು ಅಗತ್ಯ.

ಮೇಲಿನ ಧ್ವನಿ ಸುದರ್ಶನರ ಪತ್ರದಲ್ಲಿದೆ ಎಂದೇ ನಾನು ಆಶಿಸಿದ್ದೇನೆ. ಸಮಕಾಲೀನ ಲೇಖಕರಲ್ಲದೇ ತಮ್ಮನ್ನೂ ಸಹ ಒಳಗೊಂಡಂತೆ, ತಮಗೆ ತಾವೇ ಹೇಳಿಕೊಳ್ಳುವಂತೆ ಈ ಸಂವಾದನ್ನು ಸುದರ್ಶನ್‌ ರೂಪಿಸಬಯಸುವವರಾಗಿದ್ದಾರೆ ಎಂದು ನಾನು ಆಶಾವಾದಿಯಾಗಿದ್ದೇನೆ. ಒಂದು ಕೃತಿಯ ಕುರಿತಾದ ತಮ್ಮ ಪ್ರತಿಕ್ರಿಯೆಯನ್ನು ಕಾಡುವ ಪ್ರತಿಮೆಗಳ ಮೂಲಕ ಸುದರ್ಶನ್‌ ರೂಪಿಸಿದ್ದಾರಾದ್ದರಿಂದ, ಅವುಗಳು ಪ್ರಸ್ತುತ ಸಮಾಜವನ್ನು ಸುಮಾರಾಗಿ ಪ್ರತಿಫಲಿಸುತ್ತಾದ್ದರಿಂದ ನನಗೆ ಹೀಗೆನ್ನಿಸಿದೆ.

ವಸುಧೇಂದ್ರ ಮತ್ತು ರಷ್ಡೀ ಪ್ರಜ್ಞೆಗಳು ಒಂದೇ ಎನ್ನುವುದು ಖಂಡಿತಾ ಸಮಂಜಸವಲ್ಲ. ರಷ್ಡೀಯಲ್ಲಿ ಅಮಿತ್‌ ಚೌಧರಿ ವಿವರಿಸಿರುವ ಅಂಶಗಳು ಪ್ರಜ್ಞಾಪೂರ್ವಕವಾಗಿ ಇರುವಂತಹವು. ಅವೇನಾದರೂ ವಸುಧೇಂದ್ರರ ಬರಹದಲ್ಲಿ ಅಪ್ರಜ್ಞಾಪೂರ್ವಕವಾಗಿ ಬಂದುಬಿಟ್ಟಿದೆಯೇ ಎನ್ನುವುದು ಇತರರಿಗೂ ಎಚ್ಚರಿಕೆಯ ಘಂಟೆಯಾಗಬಹುದು, ಇಂತಹ ಎಚ್ಚರಿಕೆಗಳು ಎಷ್ಟು ಬೇಗನೆ ಬರುತ್ತವೆಯೋ ಅಷ್ಟು ಉಪಯುಕ್ತ.

ಆದ್ದರಿಂದ, ಈ ಚರ್ಚೆಯಲ್ಲಿ, ವಸುಧೇಂದ್ರರ ಬರಹದಲ್ಲಿ ರಷ್ಡೀ ಅಂಶಗಳು ಇದೆಯೋ ಇಲ್ಲವೋ (ಕಡಿಮೆ ಪ್ರಮಾಣದಲ್ಲಾಗಲೀ, ಭಿನ್ನ ರೂಪಗಳಲ್ಲಾಗಲೀ) ಎನ್ನುವುದು ಚರ್ಚೆಯ ಒಂದು ಮಟ್ಟವಾಗಿ ಮುಖ್ಯವೇ ಸರಿ. ಅದು ಚರ್ಚೆಗೊಳಗಾಗಬೇಕಾದ್ದೇ. ಚರ್ಚೆಯಲ್ಲಿ, ವಸುಧೇಂದ್ರರ ಬರಹದಲ್ಲಿ ಅವಿಲ್ಲ ಎಂದೂ ಆಗಬಹುದು, ಸಾಹಿತ್ಯಕ ಚರ್ಚೆಯಿಂದಲೇ ಅದು ಹೊರಬಂದರೆ ಒಳ್ಳೆಯದೇ. ಆದರೆ, ಅದನ್ನು ಮೀರಿದ ನಾವೆಲ್ಲರೂ ಎದುರಿಸುತ್ತಿರುವ ಇಂತಹವೇ ಅಪಾಯಗಳು ಮತ್ತು ಸಮಕಾಲೀನ ಕನ್ನಡ ಸಾಹಿತ್ಯ ಎನ್ನುವ ವಿಶಾಲ ಭೂಮಿಕೆಯನ್ನು ನಾವು ಮರೆಯದಿರೋಣ.

ಕಳೆದ ಒಂದೆರಡು ದಶಕಗಳಲ್ಲಿ ಭಾರತದ ಅನೇಕ ಸಂವೇದನಾಶೀಲವೆನಿಸಿದ್ದ ಮನಸ್ಸುಗಳು ಅತ್ಯಾಶ್ಚರ್ಯಕರ ರೀತಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಬದಲಾದುದನ್ನು ನೋಡಿದರೆ, ಯಾವ ಸೂಕ್ಷ್ಮ ಮನಸ್ಸೂ ಕಾಣದ (ಕಾಲದ) ಕೈಯ ಶಕ್ತಿಯನ್ನು ಮೀರಿ ತನ್ನ ಆತ್ಮವನ್ನು ರಕ್ಷಿಸಿಕೊಳ್ಳುತ್ತೇನೆ ಎಂದು ಆತ್ಮವಿಶ್ವಾಸದಿಂದ ಹೇಳಲಾಗದ ಸದ್ಯದಲ್ಲಿ ಇಂದು ನಾವಿದ್ದೇವೆ ಎನ್ನುವುದನ್ನೂ ಮರೆಯದಿರೋಣ. ನಮ್ಮ ವೈಯಕ್ತಿಕತೆಯ ಗಟ್ಟಿತನದ ಕುರಿತು ಅತೀವ ಆತ್ಮವಿಶ್ವಾಸ ಹೊಂದುವುದು ಕಷ್ಟಕರವಾಗಿದೆ ಎನ್ನುವುದನ್ನು ಮರೆಯದಿರೋಣ.

ನಿರಂತರವಾಗಿ ನಡೆಯಲಿ ಸಂವಾದ.

- ಶಿವಕುಮಾರ. ಜಿ.ವಿ.

shivoo@gmail.com

ಈ ಎರಡೂ ಪತ್ರ-ಪ್ರತಿಕ್ರಿಯೆ ಓದಿದ ಮೇಲೆ ನಿಮಗೇನನ್ನಿಸಿತು? ಎರಡು ಸಾಲು ಬರೆಯಿರಿ...

English summary
Effects of Globalizations on Literature : Sumagala and G.V.Shivakumar response to Sudarshan Patil kulakarnis Article.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more