• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಹಿತ್ಯ ವಲಯದಲ್ಲಿ ಜಾಗತೀಕರಣದ ಕರಿನೆರಳು!

By Staff
|

ಜಾಗತೀಕರಣದ ಪರಿಣಾಮಗಳು ಸಾಹಿತ್ಯರಂಗದಲ್ಲೂ ಕಂಡುಬಂದಿವೆ. ಭಾರತೀಯರ ಮನಸ್ಥಿತಿ, ಅದರಲ್ಲೂ ಭಾರತೀಯಾಂಗ್ಲ ಲೇಖಕರ ಬರಹಗಳು ಯಾವ ನೆಲೆಯಲ್ಲಿ ರೂಪುಗೊಳ್ಳುತ್ತಿವೆ ಎಂಬ ಮಹತ್ವದ ಪ್ರಶ್ನೆಯನ್ನು ಸುದರ್ಶನ ಪಾಟೀಲ ತಮ್ಮ ಲೇಖನದಲ್ಲಿ ಪ್ರತಿಬಿಂಬಿಸಿದ್ದರು. ಅದರ ಮುಂದುವರಿದ ಭಾಗ ಮತ್ತು ಲೇಖನಕ್ಕೆ ಸಂಬಂಧಿಸಿದಂತೆ ವಸುಧೇಂದ್ರ ಕಳುಹಿಸಿರುವ ಸ್ಪಷ್ಟೀಕರಣ ಇಲ್ಲಿದೆ. ಈ ಆರೋಗ್ಯಕರ ಚರ್ಚೆಯಲ್ಲಿ ನೀವೂ ಪಾಲ್ಗೊಳ್ಳಬಹುದು.

ಮಾನ್ಯ ಸುದರ್ಶನ ಪಾಟೀಲರೆ,

ವಸುಧೇಂದ್ರ ಮಾಡುವ ನಮಸ್ಕಾರಗಳು. ದಟ್ಸ್‌ ಕನ್ನಡದಲ್ಲಿ ನೀವು ಬರೆದ ಲೇಖನ ಓದಿ ಖುಷಿಯಾಯ್ತುು. ಹೊಸದಾಗಿ ಬರೆಯುತ್ತಿರುವ ನನ್ನಂತಹ ಯುವ ಲೇಖಕರ ಪುಸ್ತಕವನ್ನು ಮತ್ತೊಬ್ಬ ಹೊಸ ಲೇಖಕ ಇಷ್ಟೊಂದು ಆಸಕ್ತಿಯಿಂದ ಚರ್ಚಿಸಿರುವುದು ಸಂತಸದ ಸಂಗತಿ. ಸಹಲೇಖಕನಾಗಿ ನಿಮ್ಮ ವಿಚಾರದ ಸ್ವಾತಂತ್ರವನ್ನು ಸಂಪೂರ್ಣವಾಗಿ ಗೌರವಿಸುತ್ತೇನೆ. ಆದರೆ ಲೇಖನದಲ್ಲಿ ನನ್ನ ಬರವಣಿಗೆಯ ಬಗ್ಗೆ ಮತ್ತು ನನ್ನ ವೈಯುಕ್ತಿಕ ಜೀವನದ ಬಗ್ಗೆ ನಿಮಗೆ ಕೆಲವು ತಪ್ಪು ಗ್ರಹಿಕೆಗಳಿವೆಯೆಂದು ನನ್ನ ಭಾವನೆ. ಆ ಕಾರಣಕ್ಕಾಗಿ ಈ ಪತ್ರವನ್ನು ಬರೆಯುತ್ತಿದ್ದೇನೆ.

ಅಮೆರಿಕೆಯಲ್ಲಿ ನೆಲೆಸಿರುವ ಭಾರತೀಯ ಮಾನವೀಯ ಸಂಬಂಧಗಳಲ್ಲಿ ಸಾಂಸ್ಕೃತಿಕ ಬೇರುಗಳ ಗಾಢತನ ಅನುಭವಿಸಿದ್ದಲ್ಲಿ ಇರಲೇಬೇಕಾದ ತಲ್ಲಣ, ಆತಂಕಗಳು ಈ ಕೃತಿಯಲ್ಲಿ ಕಂಡು ಬರುವುದಿಲ್ಲ.

ಕ್ಷಮಿಸಿ. ನನಗೆ ಅಮೆರಿಕ ಖಂಡಿತಾ ಗೊತ್ತಿಲ್ಲ. ಹೋದ ವರ್ಷವಷ್ಟೇ ಮೊದಲ ಬಾರಿಗೆ ಅಲ್ಲಿಗೆ ನಾಲ್ಕು ವಾರಗಳ ಭೇಟಿ ಕೊಟ್ಟೆ. ಆಗ ನನಗೆ ಕಾರು ನಡೆಸಲು ಬರುತ್ತಿರಲಿಲ್ಲವಾದ್ದರಿಂದ ಆಫೀಸಿನಿಂದ ಬಂದ ಮೇಲೆ ಹೋಟೆಲಿನ ರೂಮು ಬಿಟ್ಟು ಹೊರಗೆ ಹೋಗಲು ಸಾಧ್ಯವೇ ಆಗಲಿಲ್ಲ. ಅಡಿಗೆ ಮಾಡುವ ಸೌಕರ್ಯ ನನ್ನ ಹೋಟಲಿನಲ್ಲಿ ಇಲ್ಲದಿದ್ದರಿಂದ, ಮಾಂಸಾಹಾರದ ಅಭ್ಯಾಸವೂ ನನಗಿಲ್ಲವಾದ್ದರಿಂದ, ಒಂದು ರೀತಿಯಲ್ಲಿ ಉಪವಾಸವಿದ್ದು ಊರಿಗೆ ವಾಪಸಾಗಿ, ವಿಮಾನ ಇಳಿದ ತಕ್ಷಣ ಹತ್ತಿರದ ಹೋಟೆಲಿಗೆ ಹೋಗಿ ಗಬಗಬನೆ ಇಡ್ಲಿ-ವಡೆ ತಿಂದಿದ್ದೇನೆ. ಇದಕ್ಕಿಂತಲೂ ಹೆಚ್ಚಿನ ಅನುಭವ ಅಮೆರಿಕಾ ದೇಶದ ಬಗ್ಗೆ ನನಗಿಲ್ಲ. ಆ ದೇಶದ ಬಗ್ಗೆ, ಅಲ್ಲಿಯ ಭಾರತೀಯರ ಬಗ್ಗೆ ಗುರುಪ್ರಸಾದ್‌ ಕಾಗಿನೆಲೆ ಬರೆಯುವ ಲೇಖನ/ಕತೆಗಳನ್ನು ಕುತೂಹಲದಿಂದ ಓದಿ, ಅಚ್ಚರಿ ಪಡುತ್ತಿರುತ್ತೇನೆ.

ನಾನು ಹತ್ತು ವರ್ಷದಿಂದ ಕೆಲಸ ಮಾಡುತ್ತಿರುವ ಬೆಂಗಳೂರಿನ ಕಂಪನಿಯ ಮುಖ್ಯ ಕಚೇರಿ ಇಂಗ್ಲೆಂಡಿನಲ್ಲಿರುವುದರಿಂದ ಆಗಾಗ ಅಲ್ಲಿಗೆ ಹೋಗುತ್ತಿರುತ್ತೇನೆ. ಬರೀ ಆಫೀಸಿನ ಕೆಲಸಗಳೇ ತುಂಬಿರುವ ಈ ಒಂದೆರಡು ತಿಂಗಳುಗಳ ಪ್ರವಾಸಗಳಲ್ಲಿ ಇಂಗ್ಲೆಂಡನ್ನು ಅರ್ಥ ಮಾಡಿಕೊಳ್ಳುವದಾಗಲಿ, ಅಲ್ಲಿಯ ಜನರ ತಲ್ಲಣ, ಆತಂಕಗಳನ್ನು ಕಂಡುಕೊಳ್ಳುವದಾಗಲಿ ನನಗಂತೂ ಊಹೆಗೂ ನಿಲುಕದ ಸಂಗತಿ.

ನೊಸ್ಟಲ್ಜಿಯಾದಲ್ಲಿ ಅನ್ಯ ದೇಸೀ ಪ್ರಪಂಚವನ್ನು (ಭಾರತ, ಅದರಲ್ಲೂ ಬಳ್ಳಾರಿ ಜಿಲ್ಲೆ) ನೋಡುವ ದೃಷ್ಟಿ ಇಲ್ಲಿದೆ.

ಬೆಂಗಳೂರಿನಲ್ಲಿ ಸುಮಾರು ಹದಿನೈದು ವರ್ಷದಿಂದ ಬದುಕು ಮಾಡುತ್ತಿದ್ದೇನೆ. ಇಂಗ್ಲೆಂಡಿಗೆ ಹೋದ ಹೊತ್ತಿನಲ್ಲಿ ಗೊಣಗುತ್ತಾ ಮನೆ ಬಾಡಿಗೆ ತೆತ್ತಿದ್ದೇನೆ. ಟ್ರಾಫಿಕ್‌ ಜಾಮಿನಲ್ಲಿ ಬೆವರಿಳಿಸಿಕೊಂಡು ಗೊಣಗುತ್ತಾ, ರಸ್ತೆಯ ತಗ್ಗುದಿನ್ನೆಗಳಲ್ಲಿ ಚಾಕುಚಕ್ಯತೆಯಿಂದ ಕಾರನ್ನೋಡಿಸುತ್ತಾ, ವಾರಕ್ಕೊಮ್ಮೆ ಅಂಕಿತ ಪುಸ್ತಕಕ್ಕೆ ಭೇಟಿ ನೀಡಿ ಕನ್ನಡ ಪುಸ್ತಕಗಳನ್ನು ಖರೀದಿಸುತ್ತಾ, ಯಾವುದೇ ಪುಸ್ತಕ ಬಿಡುಗಡೆ ಸಮಾರಂಭವಾದರೂ ಸರಿ - ಅವರು ಕರೆಯಲಿ ಬಿಡಲಿ - ಸಂತಸದಿಂದ ಹೋಗಿ ಅಲ್ಲಿಯ ಭಾಷಣವನ್ನು ಕೇಳಿ, ಕಡಿಮೆ ಬೆಲೆಗೆ ಕೊಟ್ಟ ಪುಸ್ತಕವನ್ನು ಖರೀದಿಸಿಕೊಂಡು ಬರುತ್ತೇನೆ. ಭಾನುವಾರದಂದು ಅಡಿಗಾಸ್‌ ಹೋಟಲಿನಲ್ಲಿ ‘ಓಪನ್‌ ದೋಸೆ’ ತಿನ್ನದಿದ್ದರೆ ನನಗೆ ಮುಂದಿನ ಕೆಲಸಗಳೇನೂ ತೋಚುವದಿಲ್ಲ.

ಸಂಡೂರಿನಲ್ಲಿ ನನ್ನ ಸ್ವಂತ ಮನೆಯಿದೆ. ಇಷ್ಟು ದಿನ ನನ್ನ ತಂದೆ-ತಾಯಿ, ಅವರು ತೀರಿಕೊಂಡ ನಂತರ ಈಗ ನನ್ನಕ್ಕ ಅಲ್ಲಿ ವಾಸವಾಗಿದ್ದಾರೆ. ಬಳ್ಳಾರಿಯಲ್ಲಿ ನನ್ನ ಮತ್ತೊಬ್ಬ ಅಕ್ಕನ ವಾಸವಿದೆ. ಪ್ರತಿ ತಿಂಗಳಿಗೊಮ್ಮೆ ತಪ್ಪದೆ ಬಳ್ಳಾರಿ-ಸಂಡೂರುಗಳಿಗೆ ಭೇಟಿ ಕೊಡುತ್ತಿರುತ್ತೇನೆ. ಕೊಳಾಯಿ ಕುಣಿಯಿಂದ ನೀರು ಹಿಡಿಯುವದು, ಪಂಚೆ ಉಟ್ಟು ಸಂತೆಗೆ ಹೋಗುವುದು, ಕೋತಿಗಳ ಜೊತೆ ಆಟ ಆಡುವುದು, ಸಂಜೆಯವರೆಗೆ ಬಿಸಿಲಿನಲ್ಲಿ ಬೆವರಿಳಿಸಿ ರಾತ್ರಿ ಬೆಳದಿಂಗಳೂಟ ಮಾಡುವುದು ಅಲ್ಲಿಯ ದಿನಚರಿ. ಈ ತಿಂಗಳ 18, 19, 20 ಮತ್ತು ಮುಂದಿನ ತಿಂಗಳಿನ 16ರಿಂದ 25ರವರೆಗೆ ಅಲ್ಲಿ ಇರಬೇಕಾದ್ದರಿಂದ ಆಗಲೇ ರೈಲ್ವೇ ಟಿಕೇಟುಗಳನ್ನು ಖರೀದಿಸಿದ್ದೇನೆ. ನೀವು ಅಲ್ಲಿಗೆ ಬರುವ ಆಲೋಚನೆಗಳಿದ್ದರೆ ಹಂಪಿ ಮತ್ತು ಇತರ ಪ್ರವಾಸ ಕೇಂದ್ರಗಳಿಗೆ ನಿಮ್ಮನ್ನು ಖುಷಿಯಿಂದ ಕರೆದುಕೊಂಡು ಹೋಗುತ್ತೇನೆ.

ಕಾಲದಲ್ಲಿ ಹಿಂದಕ್ಕೆ ಬರೆದಿರಬಹುದಾದ ವಸುಧೇಂದ್ರ ಅವರ ಎರಡು ಕಥೆಗಳು ಇಲ್ಲಿ ನೆನಪಿಗೆ ಬರ್ತಿವೆ. ‘ಚೇಳು’ ಸಂಪೂರ್ಣ ಸಂಸ್ಕೃತಿಯ ಒಳಗಿನಿಂದಲೇ ಬರೆದಂತಿರುವ ಕಥೆ.

ಚೇಳು ಕತೆ ಓದಿದ್ದಕ್ಕೆ ಧನ್ಯವಾದಗಳು. ಇದು ನನ್ನ ಇತ್ತೀಚಿನ ಕತೆ. ಈ ವರ್ಷದ ಸುಧಾ ಯುಗಾದಿ ವಿಶೇಷಾಂಕಕ್ಕಾಗಿ ವಿಶೇಷವಾಗಿ ಬರೆದದ್ದು. ಹಳ್ಳಿಯ ಪರಿಸರದಲ್ಲಿ ಕತೆ ನಡೆಯುತ್ತದೆಂಬ ಕಾರಣಕ್ಕೆ ನಿಮಗೆ ‘ಕಾಲದಲ್ಲಿ ಹಿಂದಕ್ಕೆ ಬರೆದಿರಬಹುದು’ ಮತ್ತು ‘ಸಂಸ್ಕೃತಿಯ ಒಳಗಿನಿಂದಲೇ ಬರೆದಿರುವಂತಿದೆ’ ಎನ್ನಿಸಿದೆಯೇನೋ ಎಂದು ನನ್ನ ಅನುಮಾನ.

ಬಹಳಷ್ಟು ಆಂಗ್ಲಪ್ರಿಯರಿಗೆ ಕಥನವೆಂದರೆ ಮೊದಲು (ಪಶ್ಚಿಮದ) ಅಕರ್ಷಣೆ, ಆಮಿಷ, ಮುಗ್ಧತೆಯ ಪೊರೆ ಕಳಚುವಿಕೆ......

ವಿಚಿತ್ರ ಸಂಗತಿಯೆಂದರೆ ಆಂಗ್ಲವೆಂದರೆ ಈಗಲೂ ನನಗೆ ಕಬ್ಬಿಣದ ಕಡಲೆ. ಹಳ್ಳಿಯ ಪರಿಸರದಲ್ಲಿ ಬೆಳೆದು ಬಂದಿರುವದರಿಂದ ಮತ್ತು ಕನ್ನಡ ಮಾಧ್ಯಮದಲ್ಲಿ ಓದಿರುವದರಿಂದ ಈಗಲೂ ನಾನು ಇಂಗ್ಲಿಷ್‌ ಪುಸ್ತಕ ಓದಲು ತಿಣಕಾಡುತ್ತೇನೆ. ವೃತ್ತಿಪರ ಶಿಕ್ಷಣ ಪಡೆದಿರುವದರಿಂದ ಕಚೇರಿಯ ಕೆಲಸಕ್ಕೆ ಬೇಕಾದ ಇಂಗ್ಲಿಷ್‌ ನನಗೆ ಗೊತ್ತು.

ಅತ್ಯಂತ ಸರಳ ಇಂಗ್ಲಿಷಿನಲ್ಲಿ ಬರೆಯುವ ಆರ್‌.ಕೆ. ನಾರಾಯಣ್‌ರವರ ಪುಸ್ತಕಗಳನ್ನು ಹೊರತು ಪಡಿಸಿದರೆ ನನ್ನ ಇಂಗ್ಲಿಷ್‌ ಓದು ಸೊನ್ನೆ! ನೀವು ಇಲ್ಲಿ ಹೇಳಿರುವ ಸಲ್ಮಾನ್‌ ರಷ್ದೀಯವರ ಹೆಸರನ್ನು ಕೇಳಿದ್ದೇನಾದರೂ ಅವರ ಯಾವುದೇ ಪುಸ್ತಕವನ್ನು ಓದಿಲ್ಲ. ಯಾರದೋ ಒತ್ತಾಯಕ್ಕೆ ಓದಲು ಶುರುವಿಟ್ಟೆನಾದರೂ ಪ್ರತಿಯೊಂದು ಪುಟದಲ್ಲಿ ಹತ್ತಾರು ಅರ್ಥ ತಿಳಿಯದ ಪದಗಳಿದ್ದರಿಂದ ಪಕ್ಕದಲ್ಲಿ ಶಬ್ದಕೋಶವನ್ನು ಇಟ್ಟುಕೊಂಡಿದ್ದೆ. ಆದರೂ ನಲವತ್ತು ಪುಟಗಳಿಗಿಂತಾ ಹೆಚ್ಚು ಓದಲು ಆಗಲಿಲ್ಲ.

ನನ್ನ ಓದು ಏನಿದ್ದರೂ ನಮ್ಮ ಮಾಸ್ತಿ, ಕಾರಂತ, ಕುವೆಂಪು, ಅನಂತಮೂರ್ತಿ, ತೇಜಸ್ವಿ, ಭೈರಪ್ಪ, ಜಯಂತ ಕಾಯ್ಕಿಣಿಯವರದ್ದು. ಕನ್ನಡಕ್ಕೆ ಅನುವಾದವಾಗಿ ಬಂದ ಪುಸ್ತಕಗಳನ್ನು ಓದಿದ್ದೇನೆ.

ಉದಾಹರಣೆಗೆಂದು ನಾನು ಆಯ್ದುಕೊಂಡಿರುವುದು; ವಸುಧೇಂದ್ರ ಅವರ ‘ಕೋತಿಗಳು ಸಾರ್‌ ಕೋತಿಗಳು’

ಇದು ಲಲಿತ ಪ್ರಬಂಧಗಳ ಸಂಕಲನ. ಒಂದಿಷ್ಟು ತಮಾಷೆ, ನೋವು, ನಲಿವು, ಬದುಕುಗಳನ್ನು ಪ್ರೀತಿಯಿಂದ ಹಂಚಿಕೊಳ್ಳುವ ಉದ್ದೇಶದಿಂದ ಬರೆದಂತಹವು. ವಿಚಾರ ಸಾಹಿತ್ಯ ನನಗೆ ಬರೆಯಲು ಬರುವದಿಲ್ಲ, ಓದುವುದೂ ಕಡಿಮೆ. ವೈಚಾರಿಕ ಸಾಹಿತ್ಯ ಮತ್ತು ಸೃಜನಶೀಲ ಸಾಹಿತ್ಯಗಳು ಎಣ್ಣೆ-ಸೀಗೆಕಾಯಿ ಸಂಬಂಧ ಹೊಂದಿರುವಂತಹವು ಎನ್ನುವುದು ನನ್ನ ಬಲವಾದ ನಂಬಿಕೆ. ಸಾಫ್ಟ್‌ವೇರ್‌ ವೃತ್ತಿಯಲ್ಲಿ ಹದಿನೈದು ವರ್ಷಗಳಿಂದ ತೊಡಗಿಕೊಂಡಿರುವದರಿಂದ ಮತ್ತು ಕಾಲ್‌ಸೆಂಟರಿನೊಡನೆ ಐದು ವರ್ಷಗಳ ನಿಕಟ ಸಂಬಂಧ ಹೊಂದಿರುವದರಿಂದ, ನನ್ನ ಅನುಭವಗಳನ್ನು ಪಟ್ಟಿ ಮಾಡಿ ಲೇಖನವನ್ನು ಬರೆದದ್ದು. ಈ ಪುಸ್ತಕಕ್ಕೆ ಹೊಂದಿಕೆಯಾಗದಂತಹ ಈ ಎರಡು ಲೇಖನಗಳು ಹೇಗೋ ಸೇರಿಕೊಂಡು ಬಿಟ್ಟವು.

‘ನಾವು ಭರವಸೆಯಿಡಬಹುದಾದ ವಿದೇಶದಲ್ಲಿ ನೆಲೆಸಿರುವ ನಮ್ಮ ಮನೆಯ ಯಶಸ್ವೀ ಅಳಿಯ’

ವಿಷಾದನೀಯ ವಿಚಾರವೆಂದರೆ ಬ್ರಹ್ಮಚರ್ಯ ಜೀವನವನ್ನು ನಡೆಸುತ್ತಿರುವ ನಾನು ಒಂಟಿ ಜೀವಿ. ನನ್ನ ಮನೆಯಲ್ಲಿ ಏಕಾಂಗಿಯಾಗಿ ಬದುಕುತ್ತಿದ್ದೇನಾದ್ದರಿಂದ ರಾತ್ರಿ ಹತ್ತು ಗಂಟೆಗೆ ಆಫೀಸಿನಿಂದ ವಾಪಾಸಾಗಿ ಅನ್ನ ಮಾಡಲು ಕುಕ್ಕರನ್ನೇರಿಸುತ್ತೇನೆ. ಆದ್ದರಿಂದ ನಾನು ಯಾರ ಮನೆಯ ಯಶಸ್ವೀ ಅಳಿಯನೂ ಅಲ್ಲ. ವಿದೇಶದಲ್ಲಿ ನೆಲಸಿರುವವನಂತೂ ಖಂಡಿತಾ ಅಲ್ಲ. ನನ್ನ ಸಾಕಷ್ಟು ಸೂಕ್ಷ್ಮ ಓದುಗರು ನನ್ನ ಕತೆ/ಪ್ರಬಂಧಗಳಿಂದ ಇದನ್ನಾಗಲೇ ಅರ್ಥ ಮಾಡಿಕೊಂಡಿದ್ದಾರೆ.

ಧನ್ಯವಾದಗಳು,

-ವಸುಧೇಂದ್ರ, ಬೆಂಗಳೂರು.

vas123u@rocketmail.com

***

ಪ್ರಿಯ ವಸುಧೇಂದ್ರ,

ನಿಮ್ಮ (ಕೊಂಚ ಹೆಚ್ಚು ತೀಕ್ಷ್ಣವೇ ಆದ) ಪ್ರತಿಕ್ರಿಯೆಗೆ ಮತ್ತು ನನ್ನ ಹಲವಾರು ತಪ್ಪುಗ್ರಹಿಕೆಗಳನ್ನು ನಿವಾರಿಸಿದ್ದಕ್ಕೆ ಧನ್ಯವಾದ. ಉದ್ಯೋಗದಲ್ಲಿ ಯಶಸ್ವಿಯಾಗಿದ್ದರೂ, ನೀವು ಅನುಸರಿಸುತ್ತಿರುವ ಜೀವನಕ್ರಮದ ವಿವರಗಳನ್ನು ಓದಿ ಗೌರವ ಉಂಟಾಗುತ್ತದೆ. ಈ ನನ್ನ ಮಾತಿನಲ್ಲಿ ಯಾವುದೇ ವ್ಯಂಗ್ಯವಿಲ್ಲ. (ಆಧುನಿಕ ಬದುಕಿನತ್ತ ಹೆಚ್ಚು ಒಲವು, ದೌರ್ಬಲ್ಯಗಳಿರುವ ನನ್ನಿಂದ ಬಹುಶಃ ಅವೆಲ್ಲಾ ಅಸಾಧ್ಯ.) ಆದರೆ ಅಷ್ಟೊಂದು ವಿವರಗಳು ಅಗತ್ಯವಿರಲಿಲ್ಲವೇನೋ.

ನನಗೆ ಬಹುಶಃ ಅತಿ ಹೆಚ್ಚು ಕಿರಿಕಿರಿ ಉಂಟುಮಾಡಿದ್ದು ಮತ್ತು ನನ್ನ ಲೇಖನವನ್ನು ಉತ್ತೇಜಿಸಿದ್ದು ನಿಮ್ಮ ಕಾಲ್‌ ಸೆಂಟರಿನ ಕುರಿತ ಲೇಖನ. ಕೃತಕ ವಿನಯವನ್ನು ಪ್ರದರ್ಶಿಸುವ ಅಪಾಯದ ಸಾಧ್ಯತೆಗೆ ಒಡ್ಡಿಕೊಳ್ಳುತ್ತಾ ನನ್ನ ಕೆಲವು ವೈಯಕ್ತಿಕ ವಿವರಗಳನ್ನೂ ಇಲ್ಲಿ ಹೇಳಬಯಸುತ್ತೇನೆ.

1999ರಿಂದ 2004ರ ಅವಧಿಯಲ್ಲಿ ನಾನು ಅಮೆರಿಕೆಯಲ್ಲಿ ವಿದ್ಯಾರ್ಥಿಯಾಗಿ ಇದ್ದವನು. ಆ ಸಮಯದಲ್ಲಿ ಕರ್ನಾಟಕವೂ ಸೇರಿದಂತೆ ಭಾರತದ ಅನೇಕ ಸಣ್ಣ-ಪಟ್ಟಣಗಳಿಂದ ನೀವು ನಿಮ್ಮ ಲೇಖನದಲ್ಲಿ ಉಲ್ಲೇಖಿಸಿದಂತೆ ಕಂಪ್ಯೂಟರ್‌ ಸೈನ್ಸ್‌ ಮತ್ತು ಇತರ ಬೇಡಿಕೆಯ ಉನ್ನತ ಶಿಕ್ಷಣ ಪಡೆಯಲು, ಹೆಚ್ಚಿನವರು ಸಾಲ-ಸೋಲ ಮಾಡಿ ಬಂದಿದ್ದರು.

ಸಾಕಷ್ಟು ಪೂರ್ವ ಸಿದ್ಧತೆಯಿಲ್ಲದೆ, ಶಿಕ್ಷಣ, ಭಾಷೆ, ಸಂಸ್ಕೃತಿಯ ತಿಳುವಳಿಕೆ ಇವ್ಯಾವೂ ಇಲ್ಲದೇ ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದುವರೆಯಲು(ನಿತ್ಯದ ಹೊಟ್ಟೆಪಾಡು, ಆರೋಗ್ಯ ವಿಮೆ, ಓಡಾಟಕ್ಕೆ ಸೆಕಂಡೋ-ಥರ್ಡೋ ಅಂತೂ ಒಂದು ಕಾರು ಕೊಳ್ಳಲು ಬೇಕಾಗುವ ಹಣ, ಕೊಂಡ ಮೇಲೆ ಬಂಡವಾಳಶಾಹಿಯ ದುರಾಸೆಯಲ್ಲಿ ಒಬ್ಬ ಇನ್ನೊಬ್ಬನಿಂದ ಸುಲಿಯುವುದೇ ನಿಯಮವಾಗಿರುವ ಸ್ಥಿತಿಯಲ್ಲಿ, ವಿಮೆ, ಗರಾಜ್‌ ಇತ್ಯಾದಿಗಳ ಜೊತೆ ಸೆಣಸಾಡಿ, ಇದೆಲ್ಲವನ್ನೂ ವಿದ್ಯಾರ್ಥಿಯ ಆದಾಯದಲ್ಲಿ ನಿಭಾಯಿಸಲು) ವಿಫಲರಾಗಿ, ಉತ್ಸಾಹಹೀನರಾಗಿ, ಕಾನೂನುಗಳನ್ನು ಉಲ್ಲಂಘಿಸಿ, ಇನ್ನೆಲ್ಲೋ ದುಡಿದು ತನ್ನವರ ಸ್ನೇಹ, ಪ್ರೇಮ, ಆಸರೆಗಳಿಲ್ಲದೇ ಬರಡು ಜೀವನ ನಡೆಸಬೇಕಾಗಿ ಬಂದ ಎಷ್ಟೋ ವಿದ್ಯಾರ್ಥಿಗಳ ಬದುಕನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ.

ಅಲ್ಲಿ ಹಲವಾರು ವರ್ಷಗಳಿಂದ ನೆಲೆಸಿರುವ ಅನಿವಾಸಿ-ಭಾರತೀಯರು ವಿದ್ಯಾರ್ಥಿಗಳನ್ನು ಅಷ್ಟೇನೂ ವಿಶ್ವಾಸದಿಂದ ಕಾಣುವುದಿಲ್ಲ ಎಂಬುದು ಎಲ್ಲರಿಗೂ ವಿದಿತ ಸಂಗತಿ. ಅವರ ಅಭದ್ರತೆಯನ್ನೂ, ಬಿಕ್ಕಟ್ಟುಗಳನ್ನೂ ಅರ್ಥಮಾಡಿಕೊಳ್ಳಬಲ್ಲೆನಾದ್ದರಿಂದ ಅವರನ್ನು ಟೀಕಿಸುವ ಉದ್ದೇಶ ನನಗಿಲ್ಲ. ಪರಿಸ್ಥಿತಿಯ ಸಂಕೀರ್ಣತೆಯನ್ನು ಚಿತ್ರಿಸುವುದಷ್ಟೇ ನನ್ನ ಉದ್ದೇಶ.

ಇವಿಷ್ಟೇ ಸಾಲದಂತೆ 9/11, ಇರಾಕ್‌ ಯುದ್ಧದಿಂದ ಮನುಷ್ಯ-ಮನುಷ್ಯರಲ್ಲಿ, ಸಂಸ್ಕೃತಿ, ನಾಗರಿಕತೆಗಳಲ್ಲಿ ಉಂಟಾಗಿರುವ ನಂಬಿಕೆ, ವಿಶ್ವಾಸಗಳಲ್ಲಿನ ಬಿರುಕು ಅಲ್ಲಿನ ವಿದ್ಯಾರ್ಥಿಗಳ ಗಾಯದ ಮೇಲೆ ಉಪ್ಪು ಸುರಿದಂತೆ ಇದೆ. ವೈಯಕ್ತಿಕವಾಗಿ ನನಗೆ ಆರ್ಥಿಕ ಸಹಾಯದ ಹಲವು ಸಾಧ್ಯತೆಗಳಿದ್ದರೂ ಅಲ್ಲಿರುವ ತನಕ ಇತರ ವಿದ್ಯಾರ್ಥಿಗಳಂತೆ ಬದುಕಲು ಪ್ರಯತ್ನಿಸಿದ್ದೇನೆ.

ಕಾಲ್‌ ಸೆಂಟರಿನ ಯುವ ಸಮಾಜದ ಬದುಕು ಇದಕ್ಕಿಂತ ಭಿನ್ನವೇನೂ ಇಲ್ಲ. ಒಮ್ಮೆ ಮನೆಯಿಂದ ಸ್ವಾವಲಂಬಿತ ಬದುಕು ಬದುಕಲು ನಿರ್ಧರಿಸಿ ಹೊರಬಿದ್ದ ಮೇಲೆ, ಯಶಸ್ಸು ಪಡೆಯದೇ ಮರಳಿಹೋಗಲಾರೆ ಅಂದುಕೊಳ್ಳುತ್ತಾರೆ. ಆದರೆ ತಮ್ಮ ಇತಿಮಿತಿ, ಸಾಮರ್ಥ್ಯಗಳಿಗನುಸಾರವಾದ ಸೂಕ್ತ ಯಶಸ್ಸನ್ನು ವ್ಯಾಖ್ಯಾನಿಸಿಕೊಳ್ಳುವಲ್ಲಿ ವಿಫಲರಾಗಿ ಆಧುನಿಕ ಪ್ರಪಂಚದಲ್ಲಿ ಎಲ್ಲೂ ನೆಲೆ ಕಾಣದೇ ಕಳೆದುಹೋಗುತ್ತಾರೆ. ಇನ್ನು ಇತರ ಕೌಟುಂಬಿಕ, ಸಾಂಸ್ಕೃತಿಕ ವಿಘಟನೆಯ ದುಷ್ಪರಿಣಾಮಗಳನ್ನಂತೂ ಮೂರ್ತವಾಗಿ ಸೆರೆಹಿಡಿಯಲಾಗದ ಸ್ಥಿತಿಯಲ್ಲಿ ನಾವಿದ್ದೇವೆ. ಇದು ನನ್ನ ಗಮನಕ್ಕೆ ಅನುಭವದಿಂದ ಬಂದಿರುವ ವಿನ್ಯಾಸ.

ಆದ್ದರಿಂದ ಇಂಥ ಘನ-ಗಂಭೀರ ಸಂಗತಿಯನ್ನು ನೀವು ನಿರ್ವಹಿಸಿದ ರೀತಿ ತೀರಾ ಸಲೀಸು ಎಂದು ನನಗನ್ನಿಸಿರಬೇಕು. ‘ವಿಚಾರ ಸಾಹಿತ್ಯ ನನಗೆ ಬರೆಯಲು ಬರುವುದಿಲ್ಲ’ ಎಂದು ಹೇಳುತ್ತಲೇ ನೀವೊಂದು ಲೇಖನ ಬರೆದು ವೈಚಾರಿಕ ಸಂವಾದವೊಂದನ್ನು ಹುಟ್ಟುಹಾಕಿರುವುದರಿಂದ, ಈಗ ಹಿಂಜರಿಯದೇ ಭಾಗವಹಿಸಿ ಸಂವಾದವನ್ನು ಅರ್ಥಪೂರ್ಣವಾಗಿ ಬೆಳೆಸುವುದು ಸೂಕ್ತ ಎಂದು ನನ್ನ ನಂಬಿಕೆ.

-ಸುದರ್ಶನ ಪಾಟೀಲ ಕುಲಕರ್ಣಿ, ಮುಂಬಯಿ.

sudarshan_pk@hotmail.com

ಪೂರಕ ಓದಿಗೆ :

ಇತ್ತೀಚಿನ ಆಂಗ್ಲ ಮತ್ತು ಕನ್ನಡ ಬರಹ : ಒಂದು ನೋಟ

ಮುಖಪುಟ / ಓದುಗರ ಓಲೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more