ಪಂಜಾಬ್ ವಿಧಾನಸಭೆಯಲ್ಲಿ ಬಿಎಸ್ಎಫ್ ವ್ಯಾಪ್ತಿ ವಿಸ್ತರಣೆ ವಿರುದ್ಧ ನಿರ್ಣಯ ಅಂಗೀಕಾರ
ಚಂಡೀಗಢ, ನವೆಂಬರ್ 11: ಭಾರತದ ಗಡಿ ಭದ್ರತಾ ಪಡೆಯ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸುವ ಕೇಂದ್ರ ಸರ್ಕಾರದ ಆದೇಶದ ವಿರುದ್ಧ ಪಂಜಾಬ್ ವಿಧಾನಸಭೆಯು ಗುರುವಾರ ನಿರ್ಣಯವನ್ನು ಅಂಗೀಕರಿಸಿದೆ. ರಾಜ್ಯದ ಪೊಲೀಸರಿಗೆ ಇದರಿಂದ ಅವಮಾನವಾಗಲಿದೆ ಎಂದಿರುವ ಪಂಜಾಬ್, ಕೇಂದ್ರವು ಈ ಅಧಿಸೂಚನೆಯನ್ನು ವಾಪಸ್ ತೆಗೆದುಕೊಳ್ಳುವಂತೆ ಒತ್ತಾಯಿಸಿದೆ.
ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ಕೇವಲ ಇಬ್ಬರು ಬಿಜೆಪಿ ಸದಸ್ಯರ ಅನುಪಸ್ಥಿತಿಯಲ್ಲಿ ಬಿಎಸ್ಎಫ್ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸುವ ಕೇಂದ್ರದ ಆದೇಶವನ್ನು ತಿರಸ್ಕರಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಕಳೆದ ತಿಂಗಳಷ್ಟೇ ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ ಅಂತರಾಷ್ಟ್ರೀಯ ಗಡಿಯಲ್ಲಿ ಬಿಎಸ್ಎಫ್ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಬಿಎಸ್‌ಎಫ್ ಕಾಯ್ದೆಗೆ ತಿದ್ದುಪಡಿಯ ಪ್ರಕಾರ, ಗಡಿಯಿಂದ 15 ಕಿಲೋಮೀಟರ್ ವ್ಯಾಪ್ತಿ ಬದಲಿಗೆ ಸುಮಾರು 50 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬಿಎಸ್ಎಫ್ ಯೋಧರು, ಶೋಧ, ವಶಪಡಿಸಿಕೊಳ್ಳುವಿಕೆ ಮತ್ತು ಬಂಧನ ಮಾಡುವ ಅಧಿಕಾರವನ್ನು ಗಡಿ ಭದ್ರತಾ ಪಡೆಗೆ ನೀಡಲಾಗಿತ್ತು.

ಪಂಜಾಬ್ ಸದನದಲ್ಲಿ ನಿರ್ಣಯ ಮಂಡಿಸಿದ ಡಿಸಿಎಂ
ಪಂಜಾಬ್ ವಿಧಾನಸಭೆ ಕಲಾಪದಲ್ಲಿ ಉಪಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಾಂಧವಾ ಬಿಎಸ್ಎಫ್ ಅಧಿಕಾರ ವ್ಯಾಪ್ತಿ ವಿಸ್ತರಣೆಗೆ ವಿರುದ್ಧದ ನಿರ್ಣಯ ಮಂಡಿಸಿದರು. "ಪಂಜಾಬ್ ಹುತಾತ್ಮರ ನಾಡು", "ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಹಲವರು ತ್ಯಾಗ ಮಾಡಿದ್ದಾರೆ. "ಪಂಜಾಬ್ ಪೊಲೀಸರು ಒಂದು ಅನನ್ಯ ದೇಶಭಕ್ತಿಯ ಶಕ್ತಿಯಾಗಿದ್ದು, ದೇಶದ ಏಕತೆ ಮತ್ತು ಸಮಗ್ರತೆ ಕಾಪಾಡುವಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಭಾರತದ ಸಂವಿಧಾನದ ಪ್ರಕಾರ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಈ ಉದ್ದೇಶಕ್ಕಾಗಿ ಪಂಜಾಬ್ ಸರ್ಕಾರವು ಸಂಪೂರ್ಣ ಸಮರ್ಥವಾಗಿದೆ," ಎಂದು ರಾಂಧವಾ ಹೇಳಿದರು.

ಪೊಲೀಸರಿಗೆ ಅವಮಾನ ಮಾಡುವ ಆದೇಶ ಎಂದು ಉಲ್ಲೇಖ
"ಕೇಂದ್ರ ಸರ್ಕಾರವು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ವ್ಯಾಪ್ತಿಯನ್ನು 15 ಕಿ.ಮೀ ನಿಂದ 50 ಕಿ.ಮೀ ವರೆಗೆ ವಿಸ್ತರಿಸುವ ನಿರ್ಧಾರವು ರಾಜ್ಯ ಪೊಲೀಸರು ಮತ್ತು ಪಂಜಾಬ್‌ನ ಜನರ ಮೇಲಿನ ಅಪನಂಬಿಕೆ ಸಂಕೇತವಾಗಿದೆ. ಇದರಿಂದ ರಾಜ್ಯದ ಪೊಲೀಸರಿಗೆ ಮತ್ತು ಜನರಿಗೆ ಅವಮಾನ ಮಾಡಿದಂತೆ ಆಗುತ್ತದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ. ಇಂತಹ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಕೇಂದ್ರ ಸರ್ಕಾರವು ರಾಜ್ಯದೊಂದಿಗೆ ಸಮಾಲೋಚನೆ ನಡೆಸಬೇಕಿತ್ತು. ಪಂಜಾಬ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ನಿಯಂತ್ರಣದಲ್ಲಿದೆ. ಬಿಎಸ್‌ಎಫ್ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸುವ ಅಗತ್ಯವಿಲ್ಲ ಎಂದು ಹೇಳಲಾಗಿದೆ.

ಬಿಎಸ್ಎಫ್ ಅಧಿಕಾರ ವಿಸ್ತರಣೆ ಆದೇಶ ವಾಪಸ್ ಪಡೆಯಿರಿ
ಪಂಜಾಬ್‌ನ ಎಲ್ಲಾ ರಾಜಕೀಯ ಪಕ್ಷಗಳು ಕೇಂದ್ರ ಸರ್ಕಾರದ ನಿರ್ಧಾರವನ್ನು ಸರ್ವಾನುಮತದಿಂದ ಖಂಡಿಸಿವೆ. ಕಳೆದ ಅಕ್ಟೋಬರ್ 11ರಂದು ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯವು ಹೊರಡಿಸಿದ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಲಾಗಿದೆ. "ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಅಧಿಸೂಚನೆ ತಿರಸ್ಕರಿಸುವ ನಿರ್ಣಯವನ್ನು ಅಂಗೀಕರಿಸಬಹುದು ಎಂದು ಪಂಜಾಬ್ ವಿಧಾನ ಸಭೆಯು ಸರ್ವಾನುಮತದಿಂದ ನಿರ್ಧರಿಸುತ್ತದೆ" ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

ಬಿಎಸ್ಎಫ್ ಅಧಿಕಾರ ವ್ಯಾಪ್ತಿ ವಿಸ್ತರಣೆಗೆ ಸಿಎಂ ಚನ್ನಿ ವಿರೋಧ
ಭಾರತ ಗಡಿ ಭದ್ರತಾ ಪಡೆಯ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಿರುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಕ್ರಮವನ್ನು ಹಲವು ರಾಜಕೀಯ ನಾಯಕರು ಪ್ರಶ್ನೆ ಮಾಡಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ, ಉಪ ಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಾಂಧಾವ ಬಿಜೆಪಿ ಸರ್ಕಾರವನ್ನು ಈ ಹಿಂದೆಯೇ ಟೀಕಿಸಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 'ಈ ನಿರ್ಧಾರವನ್ನು ತಕ್ಷಣವೇ ಹಿಂದಕ್ಕೆ ಪಡೆಯಿರಿ' ಎಂದು ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಟ್ವೀಟ್ ಮಾಡಿದ್ದರು. ಅಂತಾರಾಷ್ಟ್ರೀಯ ಗಡಿಗಳಲ್ಲಿ 50 ಕಿ.ಮೀ ವ್ಯಾಪ್ತಿಯಲ್ಲಿ ಬಿಎಸ್ಎಫ್ ಹೆಚ್ಚುವರಿ ಅಧಿಕಾರವನ್ನು ನೀಡುವ ಕೇಂದ್ರ ಸರ್ಕಾರದ ಏಕಪಕ್ಷೀಯ ನಿರ್ಧಾರವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಇದು ಒಕ್ಕೂಟ ವ್ಯವಸ್ಥೆ ಮೇಲಿನ ನೇರ ದಾಳಿಯಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ತಕ್ಷಣವೇ ಈ ನಿರ್ಧಾರವನ್ನು ಹಿಂಪಡೆಯುವಂತೆ ನಾನು ಒತ್ತಾಯಿಸುತ್ತೇನೆ," ಎಂದು ಒತ್ತಾಯಿಸಿದ್ದರು.

ಗಡಿಯಲ್ಲಿ ಬಿಎಸ್ಎಫ್ ಅಧಿಕಾರ ವ್ಯಾಪ್ತಿ ವಿಸ್ತರಣೆ
ಗುಜರಾತ್‌ನಲ್ಲಿ ಬಿಎಸ್‌ಎಫ್ ಅಧಿಕಾರ ವ್ಯಾಪ್ತಿಯ ಪ್ರದೇಶವನ್ನು 80 ಕಿಮೀ ಪ್ರದೇಶದಿಂದ 50 ಕಿಮೀಗೆ ತಗ್ಗಿಸಲಾಗಿದೆ. ರಾಜಸ್ಥಾನದಲ್ಲಿ 50 ಕಿಮೀ ದೂರದಲ್ಲಿ ಹಾಗೆಯೇ ಉಳಿದಿದ್ದು, ಮೇಘಾಲಯ, ನಾಗಾಲ್ಯಾಂಡ್, ಮಿಜೋರಾಂ, ತ್ರಿಪುರಾ, ಮಣಿಪುರ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಈ ಹಿಂದಿನಂತೆ ಯಾವುದೇ ಮಿತಿಯನ್ನು ನಿಗದಿಪಡಿಸಲಾಗಿಲ್ಲ. ಗಡಿ ಭದ್ರತಾ ಪಡೆ ಕಾಯಿದೆ, 1968ರ ಸೆಕ್ಷನ್ 139, ಭದ್ರತಾ ಪಡೆಯ ಅಧಿಕಾರ ವ್ಯಾಪ್ತಿಯನ್ನು ಸೂಚಿಸಲು ಕೇಂದ್ರಕ್ಕೆ ಅಧಿಕಾರ ನೀಡುತ್ತದೆ. ಅಂತಹ ಯಾವುದೇ ಆದೇಶವನ್ನು ಸಂಸತ್ ಪ್ರತಿ ಸದನದ ಮುಂದೆ ಇಡಲಿದ್ದು, ಅದನ್ನು ಮಾರ್ಪಾಡು ಮಾಡುವ ಅಥವಾ ರದ್ದುಗೊಳಿಸುವ ಅಧಿಕಾರವನ್ನು ಸಂಸತ್ ಹೊಂದಿರುತ್ತದೆ.











Click it and Unblock the Notifications