
Psychology: ಪ್ರೇಮಿಗಳ ದಿನಕ್ಕೆ ಸೈಕಾಲಜಿ: ಪ್ರೀತಿ ಇಲ್ಲದ ಮೇಲೆ....
ಫೆಬ್ರವರಿ ತಿಂಗಳು ಬಂತೆಂದರೆ ಎಲ್ಲೆಡೆ ಗುಲಾಬಿಗಳು, ಹೃದಯಗಳು, ಬಲೂನಿನ ಮೇಲಿನ ಹುಡುಗ ಹುಡುಗಿಯ ಚಿತ್ರಗಳು, ಗ್ರೀಟಿಂಗ್ ಕಾರ್ಡುಗಳು, ಹೃದಯದ ಆಕಾರದ ಚಾಕೊಲೇಟ್ ಡಬ್ಬಿಗಳು, ಕೇಕ್‌ಗಳು ರಾರಾಜಿಸುತ್ತವೆ. ಕಾರಣ ವ್ಯಾಲೆಂಟೈನ್ಸ್ ಡೇ. ಈ ದಿನ ಅದೇನೋ ಪುಳಕ ಹುಟ್ಟಿಸುವುದಂತೂ ನಿಜ. ಹುಡುಗ ಹುಡುಗಿಯರು, ಸಂಗಾತಿಗಳು ಈ ದಿನವನ್ನು ಆಚರಿಸುವುದು ಹೌದು,
Valentine's Day 2022 Wishes: ಪ್ರೇಮಿಗಳ ದಿನದ ರೋಮ್ಯಾಂಟಿಕ್ ಶುಭಾಶಯಗಳು ಮತ್ತು ಸಂದೇಶಗಳು
ಆದರೆ,
* ವ್ಯಾಲೆಂಟೈನ್ಸ್ ಡೇ ಕೇವಲ ಹುಡುಗ ಹುಡುಗಿ, ಸಂಗಾತಿಗಳಿಗೆ ಸೀಮಿತವಾಗಿರಬೇಕೆ?
*ಎಲ್ಲರಿಗೂ, ಎಲ್ಲಾ ವಯೋಮಾನಕ್ಕೂ ಇದರ ಆಚರಣೆ ಇಲ್ಲವೇ?
* ಕೆಂಪು ಗಲಾಬಿ , ಹೃದಯದ ಆಕಾರದ ಬಲೂನು ಹಾಗೂ ಚಾಕೊಲೇಟ್‌ಗಳು ಮಾತ್ರ ಪ್ರೀತಿಯ ಸಂಕೇತವೇ?
*ಪ್ರೀತಿ ವ್ಯಕ್ತಪಡಿಸುವ ರೀತಿ ಹೀಗೆಯೇ ಇರಬೇಕೆ?
Psychology: ಮಾನಸಿಕ ದೈಹಿಕ ಅಸ್ವಸ್ಥತೆಗಳು ಹಾಗೂ ಪರಿಹಾರ
ವ್ಯಾಲೆಂಟೈನ್ಸ್ ಡೇ, ಪ್ರೀತಿಯನ್ನು ವ್ಯಕ್ತಪಡಿಸುವ, ನೆನಪಿಸುವ, ಸಂಭ್ರಮಿಸುವ, ಆಚರಿಸುವ ದಿನ. ಇದು ಕೇವಲ ಗಂಡು ಹೆಣ್ಣಿನ(ಅಥವಾ ಸಲಿಂಗ ಸಂಗಾತಿಗಳ) ನಡುವಿನ ಪ್ರೀತಿ- ಪ್ರಣಯ (romantic) ಭಾವನೆಗಳನ್ನು ವ್ಯಕ್ತಪಡಿಸುವ ದಿನವಾಗಿ ಸೀಮಿತವಾಗಿಲ್ಲ. ಇದು ಪ್ರತಿಯೊಬ್ಬರೂ ಎಲ್ಲಾ ವಯೋಮಾನದವರೂ ಸಹ ತಮ್ಮ ಪ್ರೀತಿ ಪಾತ್ರರ ಕಡೆಗೆ ಪ್ರೀತಿ (love) ಕಾಳಜಿ (care)ಮತ್ತು ಕೃತಜ್ಞತೆಯನ್ನು (gratitude) ವ್ಯಕ್ತಪಡಿಸುವ ದಿನವಾಗಿ ಗ್ರಹಿಸಬಹುದು.

ಪ್ರೀತಿ ಎಂದರೇನು?
"ಪ್ರೀತಿ "ಯ ಅರ್ಥ ಹಾಗು ವ್ಯಾಪ್ತಿ ಸಂಕುಚಿತವಾಗಿಲ್ಲ. ಅದು ಅಪಾರವಾದುದು. ನಮ್ಮ ಊಹೆಗೂ ಮೀರಿದ್ದು.
ಪ್ರೀತಿ ಎಂದರೆ ವಾತ್ಸಲ್ಯ, ಒಲವು, ಆತ್ಮೀಯತೆ, ಕಾಳಜಿ, ಸ್ನೇಹಪರತೆ, ಪ್ರಣಯ, ಮಾನವೀಯತೆ, ಬಾಂಧವ್ಯ, ಭಕ್ತಿ, ಆರಾಧನೆ, ಕರುಣೆ, ಸಹಾನುಭೂತಿ, ಪ್ರೋತ್ಸಾಹ, ಸಧ್ಭಾವನೆ ಹೀಗೆ
* ತಾಯಿಯ ವಾತ್ಸಲ್ಯ
* ತಂದೆಯ ಕಾಳಜಿ
* ದುಡಿದು ಬಂದ ತಂದೆಗೆ, ಮಕ್ಕಳು ತಂದು ಕೊಡುವ ಒಂದು ಲೋಟ ನೀರಿನಲ್ಲಿ ಪ್ರೀತಿ ಇದೆ.
* ಮೊಮ್ಮಕ್ಕಳು ಇಷ್ಟು ಹೊತ್ತಿಗೆ ಕಾಲೇಜಿನಿಂದ ಮನೆಗೆ ಬರಬೇಕಿತ್ತು ಏಕೋ ತಡವಾಯಿತಲ್ಲಾ ಎಂದು ಘಳಿಗೆ ಘಳಿಗೆಗೂ ಗಡಿಯಾರ ನೋಡುತ್ತಾ ಹೊರ ಬಂದು ಕಾಯುವ ಅಜ್ಜಿ ತಾತರ ಆತಂಕ.
* ಮನೆಕೆಲಸ (home work) ಮಾಡದಿದ್ದರೆ, ಶಿಕ್ಷೆಗೆ ಗುರಿಯಾಗುತ್ತಾನಲ್ಲಾ / ಗುರಿಯಾಗುತ್ತಾಳಲ್ಲಾ ಎಂದು, ತಾನೇ ತನ್ನ/ ತಂಗಿ, ತಮ್ಮನ ಮನೆಕೆಲಸ ಮಾಡುವಲ್ಲಿ ಸಹೋದರ/ ಸಹೋದರಿಯ ಅಕ್ಕರೆ ಇದೆ.
* ಊರಿಗೆ ಬರುವ ಸ್ನೇಹಿತನೊಬ್ಬನನ್ನು ಕರೆತರಲು ಬಸ್ ಸ್ಟಾಂಡ್‌ನಲ್ಲಿ ಗಂಟೆಗಟ್ಟಲೆ ಕಾಯುವ ಗೆಳೆಯರ ಗುಂಪು....
* ಪ್ರವಾಸದಲ್ಲಿ ದಾರಿತಪ್ಪಿದಾಗ, ರಾತ್ರಿ ತಂಗಲು ಅವಕಾಶ ಮಾಡಿಕೊಟ್ಟು ಸಹಾನುಭೂತಿ ಮೆರೆದ ಅಪರಿಚಿತ ಕುಟುಂಬ ....
* ಸಂಗಾತಿ ಮೇಲಿನ ಒಲವು/ ಪ್ರಣಯ
* ಅನೇಕ ವರ್ಷಗಳ ನಂತರ ಸಿಕ್ಕರೂ ಮೊದಲಿನ ವಿಶ್ವಾಸದಲ್ಲೇ ಆತ್ಮೀಯವಾಗಿ ಮಾತನಾಡುವ ಹಳೆಯ ಸಹೋದ್ಯೋಗಿ.
* ಲೆಕ್ಕ ತಪ್ಪು ಮಾಡಿದಾಗ, ಶಿಕ್ಷಕರು ಕೊಡುವ ಪೆಟ್ಟಿನಲ್ಲಿ ಪ್ರೀತಿ ಇದೆ.
* ತನ್ನ ಸ್ನೇಹಿತ/ ಸ್ನೇಹಿತೆ ಜೊತೆ ದಿನದ ಆಗುಹೋಗುಗಳ ಬಗ್ಗೆ ಆಡುವ ನಿರರ್ಗಳ ಮುಕ್ತ ಮಾತುಕತೆ ಹಾಗು ಸಣ್ಣ ಸಲುಗೆಯಲ್ಲಿ ಪ್ರೀತಿ ಹಾಗು ಕಾಳಜಿ ಇದೆ
* ಗುರುತು ಪರಿಚಯವೇ ಇಲ್ಲದಿದ್ದರೂ, ಮಾನವೀಯತೆ ಇಂದ ಕೊಟ್ಟ ರಕ್ತ, ಒಬ್ಬರ ಜೀವ ಉಳಿಸಿರುತ್ತದೆ.

ಹೃದಯದ ಮಿಡಿತ
* ಕೊರೆವ ಹಿಮದಲ್ಲಿ ದೇಶದ ಗಡಿ ಕಾಯುವ ಯೋಧನ ದೇಶಭಕ್ತಿ
* ಹದಿ ಹರೆಯದ ಹುಡುಗ ಹುಡುಗಿಯರ ಹೃದಯದ ಮಿಡಿತ
* ಬಹಳ ಇಷ್ಟಪಟ್ಟು ಆಯ್ಕೆ ಮಾಡಿಕೊಂಡ ವೃತ್ತಿಯ ಮೇಲಿನ ಪ್ರೀತಿ ಇಂದ ದಿನ ರಾತ್ರಿ ಲೆಕ್ಕಿಸದೆ ಮಾಡುವ ಕೆಲಸ
* ಸೋತು ಕುಳಿತಾಗ, ಧೈರ್ಯ ತುಂಬಿ, ನಿನ್ನ ಪಯಣದಲ್ಲಿ ತಾನು ಕೂಡ ಜೊತೆಗಾರ, ನಾನಿದ್ದೇನೆ ಎಂದು ಮತ್ತೊಮ್ಮೆ ಪ್ರಯತ್ನ ಮಾಡಲು ಹುರಿದುಂಬುವ ಸೋದರ ಮಾವನಾಗಿರಬಹುದು
* ನೆರೆ ಹೊರೆಯವರ ಕಲೆಗೆ ನೀಡುವ ಪ್ರೋತ್ಸಾಹ, ಏಳ್ಗೆ ಬಯಸುವ ಹಿರಿಯ ಜೀವವಿರಬಹುದು
* ಮಗುವೊಂದು ತನಗೆ ಕೊಟ್ಟ ಬಿಸ್ಕೆಟ್ ಅನ್ನು ತಿನ್ನದೆ, ಕದ್ದು ಮುಚ್ಚಿ ಬೀದಿ ತುದಿಯಲ್ಲಿ ಮಲಗಿದ ನಾಯಿಗಾಗಿ ಎತ್ತಿಡುವುದಲ್ಲಿ ಪ್ರೀತಿ ಕರುಣೆ ಇದೆ
* ತನ್ನ ಮಾಲೀಕನ ಬರುವಿಕೆಗಾಗಿ ಸಂಜೆ ಬಾಗಿಲಲ್ಲಿ ಕಾಯುವ ಸಾಕುಪ್ರಾಣಿ
* ಗುರುಗಳ ಮೇಲಿನ ಭಕ್ತಿ.
* ತನ್ನ ನೆಚ್ಚಿನ ಸಾಹಿತಿ, ಕವಿ, ವೈದ್ಯ, ವಾರ್ತಾವಾಚಕರು, ನಿರೂಪಕರು,ವಿವಿಧ ಕ್ಷೇತ್ರದ ಸಾಧಕರನ್ನು ಆರಾಧಿಸುವುದು.
ಮೇಲಿನ ಉದಾಹರಣೆಗೆಳಲ್ಲಿ ಪ್ರೀತಿಯ ಹಲವಾರು ರೂಪಗಳನ್ನು ಕಾಣಬಹುದು. ಹೀಗೆ ಪ್ರೇಮ, ಕಾಳಜಿ, ಕೃತಜ್ಞತೆ, ಸಣ್ಣ ಸಲುಗೆ, ಕ್ಷಣಕಾಲದ ಸಿಟ್ಟು ಮತ್ತು ಆತಂಕ, ಪ್ರೇರಣೆ, ಪ್ರೋತ್ಸಾಹ, ದೇಶಭಕ್ತಿ ಎಲ್ಲವೂ ಪ್ರೀತಿಯ ವಿವಿಧ ರೂಪಗಳೇ ಆಗಿವೆ.
ಹೀಗೆ ಪ್ರೀತಿಯನ್ನು ಪರಸ್ಪರ ವ್ಯಕ್ತಿಗಳು, ಸಂಗಾತಿಗಳು, ಕುಟುಂಬದವರು, ಶಿಕ್ಷಕರು, ಸ್ನೇಹಿತರು, ನೆರೆಹೊರೆಯವರು, ಪ್ರಾಣಿ ಪಕ್ಷಿಗಳು, ಪ್ರೇರಣೆ ಪ್ರೋತ್ಸಾಹ ನೀಡಿದವರ ಬಳಿಯೂ ವ್ಯಕ್ತಪಡಿಸಬಹುದು.

ಮನಸ್ಸಿನ ಭಾವನೆಗಳನ್ನು ಏಕೆ ಹೊರತರಲು ಕಷ್ಟ
ಆದರೆ
* ಅಷ್ಟೇ ಸರಳವಾಗಿ ಇತರರು -ಕುಟುಂಬದವರ, ಸ್ನೇಹಿತರ, ಹಿತೈಷಿಗಳ, ಮೇಲೆ ಸರಳವಾಗಿ ಹಾಗು ನೈಸರ್ಗಿಕವಾಗಿ ವ್ಯಕ್ತಪಡಿಸುತ್ತೇವೆಯೇ?
* ಮನಸ್ಸಿನ ಭಾವನೆಗಳನ್ನು ಏಕೆ ಹೊರತರಲು ಕಷ್ಟವಾಗುತ್ತದೆ?
* ಏಕೆ ವ್ಯಕ್ತಪಡಿಸುವುದಿಲ್ಲ?
ಒಮ್ಮೆ ಯೋಚಿಸಿ..
ಪ್ರೀತಿ, ಕೃತಜ್ಞತಾ ಭಾವ ಒಂದು ಮಾನಸಿನ ಸ್ಥಿತಿ. ದೈಹಿಕವಾಗಿ, ಬೌಧಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ, ಭಾವನಾತ್ಮಕವಾಗಿ ನಾವು ಇತರರಿಂದ ಸ್ವೀಕರಿಸಿದ ವಿವಿಧ ರೀತಿಯ ಪ್ರೀತಿ, ಬೆಂಬಲಕ್ಕೆ , ಸ್ಪಂದನಕ್ಕೆ ಪ್ರತಿಯಾಗಿ ನಾವು ಅವರೆಡೆ ತೋರುವ ಗೌರವ , ಮೆಚ್ಚುಗೆ , ಧನ್ಯವಾದ.
ಇದರಿಂದ ಬಾಂಧವ್ಯ ಹೆಚ್ಚು ಬಲಗೊಳ್ಳುತ್ತಾ ಹೋಗುತ್ತದೆ. ಪಕ್ವಗೊಳ್ಳುತ್ತವೆ.
ಕೆಲವರು ಪ್ರೀತಿಯನ್ನು ಸರಳವಾಗಿ ಸುಲಭವಾಗಿ ವ್ಯಕ್ತಪಡಿಸುತ್ತಾರೆ. ಮತ್ತೆ ಕೆಲವರಿಗೆ ಕೃತಜ್ಞತೆ ಮತ್ತು ಮೆಚ್ಚುಗೆ ವ್ಯಕ್ತಪಡಿಸುವುದು ಸ್ವಲ್ಪ ಕಷ್ಟ ಎನಿಸುತ್ತದೆ.
ಸಂಭವನೀಯ ಕಾರಣಗಳು ಹಾಗು ವ್ಯಕ್ತಪಡಿಸುವ ಪ್ರಾಮುಖ್ಯತೆ

ನಮ್ಮ ಪ್ರೀತಿಪಾತ್ರರನ್ನು ಲಘುವಾಗಿ ತೆಗೆದುಕೊಳ್ಳದಿರೋಣ.
* ನಮ್ಮ ಪ್ರೀತಿಪಾತ್ರರನ್ನು ಲಘುವಾಗಿ ತೆಗೆದುಕೊಳ್ಳದಿರೋಣ.
(let us not take people for granted)
ಅನೇಕರು ತಮ್ಮ ಸಂಗಾತಿಗಳಲ್ಲಿಯೂ ಸಹ ಕೃತಜ್ಞತೆ ವ್ಯಕ್ತಪಡಿಸುವುದನ್ನು ಮಾಡುವುದಿಲ್ಲ. ಒಂದೇ ಮನೆಯಲ್ಲಿದ್ದೇವೆ, ಅದೆಷ್ಟು ವರುಷಗಳಿಂದ ಜೊತೆಗಿದ್ದೇವೆ, ಮದುವೆಯಾಗಿದೆ, ಮಕ್ಕಳಾಗಿದ್ದಾರೆ, ನಮಗೆ ಮನೆಯವರಿಗೆ ಏನಿಷ್ಟ, ಏನು ಇಷ್ಟ ಇಲ್ಲ, ಎಂದು ತಿಳಿದಿದೆ. ಹೀಗಿರುವಾಗ ಮತ್ತಿನ್ನೇನಿದೆ ಹೇಳಿ ಕೇಳಿ ಮಾಡಲು ಎಂಬ ಯಾಂತ್ರಿಕ ಯೋಚನಾ ಜೀವನ ನಡೆಸುತ್ತಿರಬಹುದು.
ಪ್ರತಿನಿತ್ಯ ತಮ್ಮ ಜೊತೆಗಿರುವವರ ಭಾವನಾತ್ಮಕ ವಾತಾವರಣವನ್ನು (emotional climate) ಸೌಮ್ಯವಾಗಿ ಇಟ್ಟುಕೊಳ್ಳಲು ಸಂಗಾತಿಗಳು ಅನೇಕ ವಿಷಯಗಳಲ್ಲಿ ರಾಜಿ (compromise) ಮಾಡಿಕೊಂಡಿರುತ್ತಾರೆ.
ಜೊತೆಗಿರುವವರು ಇತರರ ಒಳಿತಿಗಾಗಿ, ಖುಷಿಗಾಗಿ ಮಾಡುವ ಅನೇಕ ಪ್ರಯತ್ನಗಳಿಗೆ ಆಗಾಗ್ಗೆ ಕೃತಜ್ನತೆ ವ್ಯಕ್ತಪಡಿಸುವುದು ಮುಖ್ಯ.
ಆಯ್ಕೆಯ ಸ್ವಾತಂತ್ರ್ಯ ವೂ ಇರಬೇಕು. ಇದೂ ಸಹ ಪ್ರೀತಿ ತೋರುವ ರೀತಿಯೇ ಆಗಿದೆ. ಇದು ನಿಮ್ಮ ಜೀವನದಲ್ಲಿ ಅವರಿಗಿರುವ ಪ್ರಾಮುಖ್ಯತೆಯನ್ನು ತಿಳಿಸುವುದಲ್ಲದೆ, ಸಂಗಾತಿಗಳಲ್ಲಿ ಒಂದು ಸಾರ್ಥಕ ಮನೋಭಾವನೆ ಬೆಳೆಯುತ್ತದೆ.

ನಮ್ಮ ಪ್ರೀತಿಪಾತ್ರರ ಅಸ್ತಿತ್ವ, ತ್ಯಾಗ, ಬದುಕಿನ ಹೋರಾಟಗಳನ್ನು ಗುರುತಿಸಿ.
* ನಮ್ಮ ಪ್ರೀತಿಪಾತ್ರರ ಅಸ್ತಿತ್ವ, ತ್ಯಾಗ, ಬದುಕಿನ ಹೋರಾಟಗಳನ್ನು ಗುರುತಿಸಿ.
Acknowledge the actions of our loved ones
ನಾವು, ತಾಯಿಯಾಗಿ, ತಂದೆಯಾಗಿ, ಮಗನಾಗಿ, ಸೊಸೆಯಾಗಿ, ಸಹೋದರರಾಗಿ ಅಥವಾ ಇತರ ಸ್ಥಾನ ಮಾನದ ಕಾರಣ, ಜವಾಬ್ದಾರಿ ತೆಗೆದುಕೊಳ್ಳುವುದು, ಇತರರ ಇಷ್ಟ ಕಷ್ಟ ಕುಂದು ಕೊರತೆಗಳನ್ನು ನೋಡಿಕೊಳ್ಳುವುದು ಅವರ ಕರ್ತವ್ಯವೇ ಆಗಿದೆ ಎಂದೇ ಭಾವಿಸುತ್ತೇವೆ. ಅದನ್ನು ನಿಭಾಯಿಸುವುದರಲ್ಲಿ ಹೊಸತೇನಿದೆ? ಶತಮಾನಗಳಿಂದಲೂ ಹೀಗೆಯೇ ನಡೆದುಕೊಂಡು ಬಂದಿದೆ, ಇದರಲ್ಲಿ ಪ್ರೀತಿ ಅಥವಾ ಮೆಚ್ಚುಗೆ ವ್ಯಕ್ತಪಡಿಸುವುದು ಬಹಳ ನಾಟಕೀಯವಾಗುತ್ತದೆ ಎಂದು ಅನಿಸಬಹುದು.
ಇದು ನಮ್ಮ ನಮ್ಮ ಮನಸ್ಥಿತಿಗೆ ಸಂಬಂಧಿಸಿದ್ದು.
ಆದರೆ ಬಂದ ಜವಾಬ್ದಾರಿಯನ್ನು ಕೇವಲ ಮಾಡಲೇಬೇಕಾದ ಕರ್ತವ್ಯ ಎಂದು ಭಾವಿಸದೆ ಪರಿಸ್ಥಿತಿಯನ್ನು ಅರಿತು, ಮನಸ್ಸಿನಿಂದ ಒಪ್ಪಿಕೊಂಡು ( acceptance) ಪ್ರೀತಿಯ ಲೇಪದೊಂದಿಗೆ ಜವಾಬ್ದಾರಿಯೂ ನಿಭಾಯಿಸುತ್ತಾ, ತಮ್ಮ ಸ್ಥಾನಕ್ಕೆ ಅನುಗುಣವಾಗಿ ಕೆಲಸ ಮಾಡುತ್ತಾ, ಒಂದು ಉತ್ತಮ ಗುಣಮಟ್ಟದ ಜೀವನ ನಡೆಸಲು ಸದಾ ಹೆಚ್ಚುವರಿ ಪ್ರಯತ್ನ ಮಾಡುತ್ತಿರಬಹುದು.
ದೇಹಕ್ಕೆ ಪೌಷ್ಟಿಕ ಆಹಾರ ಮುಖ್ಯವಾಗುವಂತೆ, ಉತ್ತಮ ಬಾಂಧವ್ಯ ಪ್ರೀತಿ ವಿಶ್ವಾಸ ಮಾನಸಿಕ ಆರೋಗ್ಯ ಕಾಪಾಡುವ ಪೌಷ್ಟಿಕಾಂಶಗಳಾಗಿವೆ.
"ಯಾವುದೇ ಸಮಸ್ಯೆಗೂ ಅಮ್ಮನ ಹತ್ತಿರ ಪರಿಹಾರವಿದೆ" ಎಂದು ನಂಬಿರುವ ಮಗುವಿಗೆ, ತಾಯಿಯೂ ಸಹ ವಿವಿಧ ಪ್ರಯತ್ನಗಳು ಮಾಡಿದ ನಂತರವೇ ಸಮಸ್ಯೆಗೆ ಪರಿಹಾರ ಸೂಚಿಸುವಳು ಎಂದು ಅರಿಯುವಂತೆ ಮಾಡುವುದು ಮುಖ್ಯ. ಪ್ರೀತಿ ಉಳಿಸಲು, ಬೆಳೆಸಲು ಪ್ರತಿಯೊಬ್ಬರೂ ಮಾಡುವ ಪ್ರಯತ್ನ, ಶ್ರಮವು ಖಂಡಿತವಾಗಿ ಶ್ಲಾಘನೀಯ.

ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ
* ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ
Appreciate the effort of people
ಮೆಚ್ಚುಗೆ, ಪ್ರೋತ್ಸಾಹದ ಇನ್ನೊಂದು ಮುಖ ಎಂದರೆ ತಪ್ಪಾಗಲಾರದು.
ಅನೇಕ ಬಾರಿ ಯಾರಾದರೂ ನಮ್ಮ ಬಗ್ಗೆ ಮೆಚ್ಚುಗೆಯ ಮಾತನಾಡಿದರೆ ನಮಗೆ ಅದನ್ನು ಧನಾತ್ಮಕವಾಗಿ ತೆಗೆದುಕೊಳ್ಳಲು ಕಷ್ಟವಾಗುತ್ತದೆ. ಕಾರಣ ತಮ್ಮ ಬಗ್ಗೆ ತಮಗೇ ಇರುವ ಅಪನಂಬಿಕೆ (self doubt). ಆದ ಕಾರಣ ಅವರು ಮೆಚ್ಚುಗೆಯ ಮಾತು ಬೇರೊಬ್ಬರಿಗೆ ಹೇಳುವುದಾಗಲೀ, ಬೇರೊಬ್ಬರು ತಮ್ಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದಾಗಲೀ ಆಗಿರುವುದಿಲ್ಲ. ಅಥವಾ ಮೆಚ್ಚುಗೆ ಕೇವಲ ದೈಹಿಕ ಅಂದಕ್ಕ ಸಂಕುಚಿತವಾಗಿಬಿಟ್ಟಿದೆ ಎಂಬ ಭಾವನೆ.
ಮೊದಲು ನಮ್ಮ ಬಗ್ಗೆ ನಾವು ಮೆಚ್ಚುಗೆ ಬೆಳೆಸಿಕೊಳ್ಳಬೇಕು.
ನಮ್ಮ ಬಲಗಳು (strengths) ನಮ್ಮ ದರ್ಬಲಗಳು (weaknesses) ಆಸಕ್ತಿ ಹಾಗು ಇತರ ವಿಷಯಗಳ ಬಗ್ಗೆ ಅರಿವು (self awareness) ಅಗತ್ಯವಾಗುತ್ತದೆ. ಆಗ ಯಾವುದೇ ಮೆಚ್ಚುಗೆಯನ್ನು ಉತ್ತಮ ರೀತಿಯಲ್ಲಿ ತೆಗೆದುಕೊಳ್ಳಲು ಸಹಾಯಕವಾಗುತ್ತದೆ
ನಮ್ಮ ಪ್ರೀತಿಪಾತ್ರರ ಬಗ್ಗೆ ಹಾಗು ಅವರ ಸಣ್ಣ ಪ್ರಯತ್ನಗಳ ಬಗ್ಗೆ, ಯಾವುದೋ ಒಂದು ಸಮಯದಲ್ಲಿ ಮಾಡಿದ ಸಹಾಯದ ಬಗ್ಗೆ, ಜೀವನದ ಅನೇಕ ಸವಾಲುಗಳನ್ನು ಎದುರಿಸಿದ ಅಥವಾ ಎದುರಿಸುತ್ತಿರುವ ಬಗ್ಗೆ, ವ್ಯಕ್ತಿ ತ್ವದ ಬಗ್ಗೆ, ಸಾಧನೆಗಳ ಬಗ್ಗೆ ಒಂದು ಮೆಚ್ಚುಗೆ ವ್ಯಕ್ತಪಡಿಸುವುದೂ ಸಹ ನಿಮಗೆ ಅವರ ಬಗೆಗಿರುವ ಪ್ರೀತಿ ಕಾಳಜಿ ಹಾಗು ಕೃತಜ್ಞತೆ ಯನ್ನು ವ್ಯಕ್ತಪಡಿಸಬಹುದು. ಇದರಿಂದ ಮನಸು ಪುರಸ್ಕೃತ ವಾಗುವುದಲ್ಲದೇ ಆತ್ಮವಿಶ್ವಾಸ ಹೆಚ್ಚುತ್ತದೆ, ಸಹಾನುಭೂತಿ ಇಮ್ಮಡಿಗೊಳ್ಳುತ್ತದೆ.

ಉತ್ತಮ ಸಂವಹನ ನಮ್ಮ ಪ್ರೀತಿ ಪಾತ್ರರ ಬಗ್ಗೆ
* ಉತ್ತಮ ಸಂವಹನ
(Good communication)
ಉತ್ತಮ ಸಂವಹನ (communication) ಸಂಬಂಧಗಳನ್ನು, ಬೆಸೆಯಲು, ಬೆಳೆಸಲು ಹಾಗು ನಿಭಾಯಿಸಲು ಬಹಳ ಮುಖ್ಯ.
ನಾವು ಅನೇಕರೊಂದಿಗೆ ಮಾತನಾಡಿದರೂ ಸಹ, ಕೆಲವರೊಂದಿಗೆ ಮಾತ್ರ ಭಾವನಾತ್ಮಕವಾಗಿ ಸ್ಪಂದಿಸುತ್ತೇವೆ. ಮನಬಿಚ್ಚಿ ಮಾತನಾಡುತ್ತೇವೆ. ಆ ವ್ಯಕ್ತಿಗಳಿಗೆ ವಿಶೆಷ ಸ್ಥಾನ ನೀಡುತ್ತೇವೆ. ಇವರೊಂದಿಗೆ ದಿನನಿತ್ಯ ಸಂಪರ್ಕದಲ್ಲಿ ಇರುತ್ತೇವೆ. ಇದು ಮಾನಸಿಕ ಸಂತೋಷ ನೀಡುತ್ತದೆ. ಬೆಂಬಲ ಸಿಗುತ್ತದೆ. ಗೊಂದಲಗಳಿಗೆ ಪರಿಹಾರ ಸಿಗುತ್ತದೆ. ಮಾನಸಿಕ ಭದ್ರತೆ ನೀಡುತ್ತದೆ. ಇದು ಸಂವಹನದಿಂದ ಸಾಧ್ಯ.
ಉತ್ತಮ ಸಂವಹನ ನಮ್ಮ ಪ್ರೀತಿ ಪಾತ್ರರ ಬಗ್ಗೆ ಅನಗತ್ಯ ತಪ್ಪು ತಿಳುವಳಿಕೆಗಳು(misunderstanding) ಕಡಿಮೆ ಮಾಡಿ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ.
ಪ್ರೀತಿ ಒಬ್ಬರ ಪಾಲಿನ ಶಕ್ತಿಯಾಗಿರುತ್ತದೆ, ಮತ್ತೊಬ್ಬರಿಗೆ ಪ್ರೇರಣೆ ಒದಗಿಸುತ್ತದೆ. ಪ್ರತಿಯೊಂದು ವ್ಯಕ್ತಿಯೂ ಸಮಯದಿಂದ ಸಮಯಕ್ಕೆ ಬದಲಾವಣೆ ಹೊಂದುತ್ತಿರುತ್ತಾನೆ. ಮೂಲ ವ್ಯಕ್ತಿತ್ವದಲ್ಲಿ ಅಂತಹ ಬದಲಾವಣೆಗಳು ಆಗದಿದ್ದರೂ... ಆಸೆ, ಆಸಕ್ತಿ, ಅನಿಸಿಕೆಗಳಲ್ಲಿ ಹಾಗು ಇತರ ವಿಷಯಗಳಲ್ಲಿ ಬದಲಾವಣೆಗಳು ಆಗಬಹುದು. ಜೀವನದ ಆಗುಹೋಗುಗಳು, ಪರಿಸರ, ವ್ಯಕ್ತಿಗಳು, ಕಾಲಾನಂತರದಲ್ಲಿನ ಪ್ರಬುದ್ದತೆ ಕೂಡಾ ಇದಕ್ಕೆ ಕಾರಣ. ಇದು ಪ್ರಕೃತಿ ಸಹಜ ಕೂಡ. ಹೀಗಿರುವಾಗ ಉತ್ತಮ ಸಂವಹನ ಹಾಗು ಮುಕ್ತ ಮಾತುಕತೆ ಬಹಳ ಅವಶ್ಯಕ.
ಉಡುಗೊರೆ ಕೊಟ್ಟು ತೆಗೆದುಕೊಂಡೂ ಸಹ ಪ್ರೀತಿ ಕೃತಜ್ಞತೆಯನ್ನು ವ್ಯಕ್ತಪಡಿಸಬಹುದು. ಆದರೆ ಪ್ರೀತಿ ವ್ಯಕ್ತಪಡಿಸಲು ಉಡುಗೊರೆಯೇ ಮಾರ್ಗವಲ್ಲ ಅಥವಾ ಹೃದಯದಾಕಾರದ, ಬಲೂನು, ಕೆಂಪು ಗುಲಾಬಿ, ಚಾಕಲೇಟ್ ಗಳಷ್ಟೇ ಸಂಕೇತವಲ್ಲ.

ಪ್ರೀತಿ ಕೃತಜ್ಞತೆ ತಿಳಿಸಬಹುದು
ಹಾಗಾದರೆ ಮತ್ತಿನ್ನಾವ ರೀತಿಯಲ್ಲಿ ಪ್ರೀತಿ ಕೃತಜ್ಞತೆ ತಿಳಿಸಬಹುದು.
* ಈ ವ್ಯಾಲೆಂಟೈನ್ಸ್ ಡೇ ನಿಮ್ಮ ಜೀವನದಲ್ಲಿ ವಿಶೇಷ ಸ್ಥಾನ ಪಡೆದಿರುವ ಆ ವ್ಯಕ್ತಿಗಳಿಗೆ ನಿಮ್ಮ ಪ್ರೀತಿಯನ್ನು ತಿಳಿಸಿ
* ಕಾಳಜಿ ವ್ಯಕ್ತಪಡಿಸಿ
* ನಿಮ್ಮ ಜೀವನದಲ್ಲಿ ಅವರಿಗಿರುವ ಪ್ರಾಮುಖ್ಯತೆಯನ್ನು ತಿಳಿಸಿ
* ಒಂದು ಮೆಸೇಜು ಕಳುಹಿಸಬಹುದು
* ಒಂದು ಫೋನ್ ಕಾಲ್ ಮಾಡಿ
* ಹಳೆಯ ನೆನಪುಗಳನ್ನು ಮೆಲುಕುಹಾಕಬಹುದು,
* ಅವರ ಕೆಲಸದ ಬಗ್ಗೆ ಒಂದು ಮೆಚ್ಚುಗೆಯ ಮಾತಾಡಬಹುದು
* ಅವರ ಜೀವನದ ಆಗು ಹೋಗುಗಳಿಗೆ ಸ್ಪಂದಿಸಿ
* ಸಹಾಯ ಮಾಡಿದವರಿಗೆ ಕೃತಜ್ಞತೆ ತಿಳಿಸಿ
* ಕಾಗದ ಬರೆಯಿರಿ.
* ಜೊತೆಗಿರುವ ಒಂದು ಫೋಟೋ, ದಿನಾಂಕದೊಂದಿಗೆ ಕಳುಹಿಸಿ
* ಹಳೆಯ ಫೋಟೋಗಳನ್ನು ನೋಡಿ
* ಅವರಿಗಿಷ್ಟವಾದ ಪುಸ್ತಕ ಒಂದನ್ನು ಕಳುಹಿಸಿ
* ಜೊತೆಯಾಗಿ ಒಂದು ಆಟ ಆಡಿ
* ಭೇಟಿ ಮಾಡಿ
* ಒಟ್ಟಿಗೆ ಪ್ರವಾಸ ಕೈಗೊಳ್ಳಿ.
* ಸಂಪರ್ಕ ದಲ್ಲಿರಿ...
ಪ್ರೀತಿಯನ್ನು ಮೌಖಿಕವಾಗಿಯೂ ವ್ಯಕ್ತಪಡಿಸಬಹುದು (verbal) ಅಮೌಖಿಕ ವಾಗಿಯೂ ವ್ಯಕ್ತಪಡಿಸಬಹುದು(non verbal) ಇದು ನಮ್ಮ ನಮ್ಮ ರೀತಿಗೆ ಅನುಗುಣವಾಗುವುದು.
ತಂಗಾಳಿ ಕೆನ್ನೆ ಸೋಕಿದಾಗಲೇ, ಗಾಳಿಯ ಇರುವಿಕೆ ಅನುಭವಕ್ಕೆ ಬರುವುದು. ಅಂತೆಯೇ ಪ್ರೀತಿ ಮನಸ್ಸಿನಲ್ಲಿ ಇರಬಹುದು, ಆದರೆ ವ್ಯಕ್ತಪಡಿಸಿದರೆ ಅರ್ಥ ಪೂರ್ಣವಾಗುವುದು.
ಹಾಗಿದ್ದರೆ ಈ ವ್ಯಾಲೆಂಟೈನ್ ಡೇ ನೀವು ಹೇಗೆ ಆಚರಿಸುತ್ತೀರಿ....