ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Psychology: ಪ್ರಜಾಪ್ರಭುತ್ವದ ಅಪ್ಪಟ V/S ಕಪಟ ಮುಂದಾಳತ್ವ

By ಡಾ.ಎ.ಶ್ರೀಧರ, ಮನೋವಿಜ್ಞಾನಿ
|
Google Oneindia Kannada News

ಭಾರತದ ಸಾರ್ವತ್ರಿಕ ಚುನಾವಣೆಗಳು ಯಾವಾಗಲೂ ಅಚ್ಚರಿಯ ಫಲಿತಾಂಶಗಳನ್ನು ಹೊರತರುತ್ತವೆ. ಚುನಾವಣಾ ಪ್ರಚಾರ ಸಭೆಗಳಲ್ಲಿ ಹಾಜರಾಗಿ ಚಪ್ಪಾಳೆ, ಮೆಚ್ಚುಗೆ ವ್ಯಕ್ತಪಡಿಸುವ ಜನಸ್ತೋಮದ ಮನಸು ಮತಚೀಟಿಯನ್ನು ಕೈಲಿ ಹಿಡಿದ ತಕ್ಷಣ ಬದಲಾಗಿಬಿಡುತ್ತದೆ. ತಮ್ಮನ್ನು ಪ್ರತಿನಿಧಿಸುವ ವ್ಯಕ್ತಿ ಯಾರೆಂಬುದು ಮತಚೀಟಿಯ ಮೇಲೆ ಗುರುತು ಒತ್ತುವ ತನಕ ಅನಿಶ್ಚಿತ. ಆದುದರಿಂದಲೇ ಸಭಿಕರ ಸಂಖ್ಯೆಯೂ ವೋಟಿನ ಮೂಲಕವೂ ವ್ಯಕ್ತಗೊಳ್ಳುತ್ತದೆ ಎನ್ನುವುದನ್ನು ಒಪ್ಪಿಕೊಳ್ಳುವುದು ಕಷ್ಟ. ಹಾಗೆಯೇ ಪಕ್ಷದ ಮುಂದಾಳುವು ವೋಟು ಗಿಟ್ಟಿಸಿಕೊಳ್ಳುವುದಕ್ಕೆ ನೀಡುವ ಆಶ್ವಾಸನೆ, ಪ್ರತಿಜ್ಞೆ ಮತ್ತು ಜನಪರ ಕಾಳಜಿಯು ಮಾತು, ಭಾವನೆಗಳು ಸತ್ಯಕ್ಕೆ ಹತ್ತಿರವಿದ್ದರೂ ನಿರೀಕ್ಷಿತ ಮತ ಬೆಂಬಲವಾಗಿ ರೂಪುಗೊಳ್ಳುವುದಿಲ್ಲ. ಇದಕ್ಕೆ ಸಾಕ್ಷಿ ಎನ್ನುವಂತಿದೆ ಕಳೆದ ಎರಡು ಮೂರು ಸಾರ್ವತ್ರಿಕ ಚುನಾವಣೆಗಳ ಮತದಾರನ ಆಯ್ಕೆಯ ಪ್ರವೃತ್ತಿ.

ನಮ್ಮ ಪ್ರಜೆಗಳ ರಾಜಕೀಯ ಮಾನಸಿಕತೆ ಬಹುಸೂಕ್ಷ್ಮವಾಗಿದ್ದು ಪದರ ಪದರಗಳಲ್ಲಿ ಅಡಗಿರುವಂತಹದ್ದು. ಮತಗಟ್ಟೆ ಪವ್ರೇಶಿಸಿದಾಗ ಚುರುಕುಗೊಂಡು ಕ್ಷಣಮಾತ್ರಕ್ಕೆ ಹೊರಬರುವಂತೆ ಮಾಡುತ್ತದೆ ಈ ಪದರ ಪ್ರಕ್ರಿಯೆ. ಹೀಗಾಗಿ ಉತ್ತಮ ಮುಂದಾಳು, ಜನಪ್ರಿಯ ರಾಜಕೀಯ ಪಕ್ಷ ಎನ್ನುವಂತಹ ವಿಷಯಗಳು ಪ್ರತಿ ಮತದಾರನ ಅವಲೋಕನ, ವಿವೇಚನೆಯಿಂದ ಮೂಡಿರದಿರುವುದೇ ಸಾಮಾನ್ಯ. ಹೀಗೆ ಮೂಡದಿರುವಂತೆ ಮಾಡುವುದಕ್ಕೂ ಅವಕಾಶಗಳು ಹೇರಳ. ಮತದಾರನ ಆಯ್ಕೆಯ ಪ್ರವೃತ್ತಿಯನ್ನು ರೂಪಿಸಿ, ಬದಲಾಯಿಸುವುದಕ್ಕೂ ಸಾಧ್ಯ. ಮನೋಘರ್ಷಣೆ ಎನ್ನುವಂತಹ ಸ್ಥಿತಿಯ ಮೂಲಕ ಭಾವ ಕೆದುಕುವುದು ಬಲು ಸುಲಭ.

ಭಯ, ಆತಂಕ ಎನ್ನುವಂತಹ ಸ್ಥಿತಿಗಳು ಪ್ರತಿಯೊಬ್ಬರಲ್ಲಿಯೂ ಇರುತ್ತವೆ. ನಂಬಿಕೆ-ಅಪನಂಬಿಕೆಯನ್ನು ಬಲಪಡಿಸುವುದರಲ್ಲಿಯೂ ಈ ಎರಡು ಸ್ಥಿತಿಗಳ ಬೆಂಬಲವಿದ್ದೇ ಇರುವುದು. ಒಂದು ಆತಂಕದದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಹೊಸದೊಂದು ಆತಂಕ ಹುಟ್ಟಿಸುವುದು ಕಷ್ಟಕರವಲ್ಲ. ಮನೋವಿಜ್ಞಾನದ ಕಲಿಕೆಯ ತತ್ವಗಳನೇಕದರಲ್ಲಿ ಈ ಸೂತ್ರವೇ ಮಾದರಿ. ಕೆಟ್ಟ ಅಭ್ಯಾಸವೊಂದನ್ನು ಯಶಸ್ವಿಯಾಗಿ ಬಿಡಿಸುವ ಮತ್ತೊಂದು ಅಭ್ಯಾಸ ಇದ್ದಹಾಗೆ.

Psychology: True Democratic leadership vs fake Leadership ದುರಿನ್ಗ್

ಮುಂದಾಳತ್ವದ ಪರಿ
ಜನರ ನಿರಾಸಕ್ತಿ, ಹತಾಶೆಗಳಿಗಿಂತಲೂ ಮುಂದಾಳುವಿನ ನಯವಾದ ಮಾತು, ಭರವಸೆಗಳು ಮನವಲಿಸಿಕೊಳ್ಳುವುದಕ್ಕೆ ಅತಿ ಪರಿಣಾಮಕಾರಿ ಅಸ್ತ್ರ. ಉದಾಹರಣೆಗೆ ಬೆಲೆ ಏರಿಕೆಯಿಂದ ಜನಸಾಮಾನ್ಯರೆಲ್ಲರ ಬದುಕು ಮೂರಾಬಟ್ಟೆಯಾಗಿದ್ದರೂ ಅದರ ಕಡೆ ಗಮನ ಹರಿಸದೆ ಭಾವೋದ್ರೇಕಿಸುವ ವಿಷಯದತ್ತ ಮನಸನ್ನು ಹರಿಯುತ್ತಿದೆ ಎನ್ನುವುದು ಜನತೆಗೂ ತಿಳಿಯುತ್ತದೆ.

ಆದರೂ ಇವುಗಳಲ್ಲಿ (ಹುಸಿ ಮಾತು) ವಿಭ್ರಮೆ ಮೂಡಿಸುವಂತಹ ಬಲ ತುಂಬಿರುತ್ತವೆ. ಗಾದೆಯ ಮಾತು ''ಕನ್ನಡಿಯೊಳಿಗಿನ ಗಂಟು'' ಎನ್ನುವ ರೀತಿಯಲ್ಲಿ. ಸತ್ಯವನ್ನು ಗ್ರಹಿಸುವ ಮನೋಬಲವಿದ್ದರೂ ಕೂಡ ಮುಂದಾಳುವಿನ ಹಾವಭಾವಗಳು, ಮಾತಿನ ವೇಗ, ವರಸೆಗಳು ಆ ಕ್ಷಣದಲ್ಲಿ ಮಿದುಳಿನಲೆಗಳಲ್ಲಿ ಕಂಪನ ಮೂಡಿಸುವುಂತಾಹದ್ದಾಗಿರುತ್ತವೆ. ಹೀಗಾಗಿ ತಮ್ಮ ತಕ್ಷಣದ ಸಮಸ್ಯೆಗಳನ್ನು ಬದಿಗಿರಿಸಿ ಅಥವಾ ಅದುಮಿರಿಸಿಕೊಂಡು ಮುಂದಾಳುವಿನ ಭಾವೋದ್ರೇಕದ ಸ್ಥಿತಿಯನ್ನು ತನ್ನದೇ ಸ್ವಂತ ಸ್ಥಿತಿ ಎಂದು ನಂಬುವುದು ತೀರಾ ಸಾಮಾನ್ಯ. ವಶೀಕರಣ, ಮೋಡಿಗೆ ಒಳಗಾಗುವುದು ಎನ್ನುವಂತಹ ಪದಗಳು ಈ ಸನ್ನಿವೇಶವನ್ನು ಉತ್ತಮವಾಗಿ ನಿರೂಪಿಸುತ್ತವೆ.

Psychology: True Democratic leadership vs fake Leadership

ಇಂತಹ ಭ್ರಮೆಗಳನ್ನು ಹುಟ್ಟಿಸುವುದಕ್ಕೆ ಬೇಕಾಗಿರುವ ವಿಶಿಷ್ಠ ಸಾಮರ್ಥ್ಯಗಳೇನಾದರೂ ಇದ್ದಲ್ಲಿ ಅದು ಚಾಕಚಕ್ಯತೆಯಷ್ಟೇ. ಕಪಟ ಮುಂದಾಳುವಿನ ಮನಸಿಗೆ ಇಂತಹ ವಿಷಯಗಳು ಅತಿ ವೇಗವಾಗಿ ಹೊಳೆಯುತ್ತವೆ. ಹೀಗೆ ಆಲೋಚಿಸುವ ರೀತಿಯೂ ಕೂಡ ಸಮಯೋಚಿತವೆನ್ನುವಂತಹ ಭಾವದಿಂದ ಬೆಂಬಲ ಪಡೆದಿರುತ್ತದೆ. ದುರಂತದ ಸಂಗತಿಯೆಂದರೇ ಬಹುಮಾನ್ಯತೆ ಪಡೆದ ಪ್ರಬಲ ಮುಂದಾಳುಗಳನೇಕರಲ್ಲಿ ಇಂತಹದೊಂದು ನಾಯಕತ್ವದ ಕೌಶಲ್ಯ ಸದಾ ಸಮೃದ್ಧ.

ಕಪಟ ಮುಂದಾಳತ್ವದ ತತ್ವ
ಕೂಡಿ ಬಾಳುವುದೇ ಉತ್ತಮ ಸುಖ ಎನ್ನುವುದು ಅಪ್ಪಟ ಮುಂದಾಳುವಿನ ನೀತಿಯಾಗಿದ್ದರೇ ಕಪಟ ಮುಂದಾಳುವಿನ ನೀತಿ, ಒಡೆದು ಆಳುವುದು. ಜನತೆಯ ಮನಸನ್ನು ಕೂಡಿಸುವುದು ಕಷ್ಟ, ಕೆಡಿಸುವುದು ಬಹು ಸುಲಭ. ವಿಭಿನ್ನತೆಯನ್ನು ಭಿನ್ನಗೊಳಿಸುವುದರ ಮೂಲಕ ಏಕತೆ ಸಾಧಿಸುವ ಹಂಬಲ ಪ್ರಬಲವಾಗಿರುತ್ತದೆ ಕಪಟ ಮುಂದಾಳುವಿನಲ್ಲಿ. ಅವರು ನಮ್ಮವರಲ್ಲ ಎನ್ನುವ ಮನಸ್ಥಿತಿಯನ್ನು ಸೃಷ್ಟಿಸುವುದಕ್ಕೆ ನಿರಂತರ ಪ್ರಯೋಗಗಳನ್ನು ಮಾಡುವ ಛಲ ಕಪಟ ಮುಂದಾಳತ್ವದ ತತ್ವವಾಗಿರುತ್ತದೆ.

Psychology: True Democratic leadership vs fake Leadership

ಅಪ್ಪಟ ಮುಂದಾಳುವಿನ ಹಂಬಲ ಒಬ್ಬರಂತೆ ಇನ್ನೊಬ್ಬರು ಇರದಿದ್ದರೂ ಒಬ್ಬರನ್ನೊಬ್ಬರು ಬಿಟ್ಟುಕೊಡಬೇಕಿಲ್ಲವೆನ್ನುವ ತತ್ವದ ಪರಿಪಾಲನೆಯೇ ನಿರಂತರವಾಗಿರುತ್ತದೆ. ಜನತೆಯ ಒಂದು ಗುಂಪಿನಲ್ಲಿ ಇವರು ನಮ್ಮವರಲ್ಲವೆನ್ನುವ ಭಾವನೆಯು ಭಾವೋದ್ರಿಕ್ತ ವಾತಾವರಣವನ್ನು ಸೃಷ್ಟಿಸುತ್ತದೆ. ಇದರಿಂದ ಕಪಟ ಮುಂದಾಳುವಿಗೇ ಅಧಿಕ ಲಾಭ. ಆದರೇ ಇದರ ನಷ್ಟ ತಟ್ಟುವುದು ಬೆಂಬಲ ನೀಡಿದ ಮುಗ್ಧ ಜನತೆಗೆ.

ನಾಯಕತ್ವದ ವೈಫಲ್ಯ, ಇತ್ಯಾದಿ
ಚುನಾವಣೆಯಲ್ಲಿ ಎದುರಾಗುವ ಸತತ ಸೋಲು ಅಥವಾ ಗೆಲವು ಶಾಶ್ವತ ಎಂದುಕೊಳ್ಳಲಾಗದು. ಆದರೂ ಸೋತ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಸೋಲಿನ ವಿಮರ್ಶೆ ಅಥವಾ ಆತ್ಮಾವಲೋಕನಕ್ಕೆ ಇಳಿದಾಗ ಬಳಸುವ ತರ್ಕ, ಅವಲೋಕನದ ಮಾದರಿಗಳು ಮತದಾರನ ಮನಸನ್ನು ಸೆಳೆಯುವ ತಂತ್ರಗಳ ವೈಫಲ್ಯತೆಯತ್ತವೇ ಹೆಚ್ಚು ಗಮನವಿರಿಸಿರುತ್ತದೆ. ಮತದಾರನ ಕ್ಷಣ ಮಾತ್ರದ ನಿರ್ಧಾರಗಳು ರಾಜಕೀಯ ಭವಿಷ್ಯವನ್ನು ಬದಲಾಯಿಸಿಬಿಡುವುದೇ ಇದಕ್ಕೆ ಪ್ರಮುಖ ಕಾರಣ. ಪ್ರಜಾಪ್ರಭುತ್ವದ ಚುನಾವಣಾ ಸಂದರ್ಭದಲ್ಲಿ ಅಪ್ಪಟ ರಾಜಕೀಯ ಮುಖಂಡನ ವರ್ಚಸ್ಸು, ತೇಜಸ್ಸು ಎಷ್ಟೇ ಪ್ರಬುದ್ಧವಾಗಿದ್ದರೂ ಮತದಾರನ ಮನದ ಪದರಗಳನ್ನು ಸೇರದಿರುವುದು ಸಾಮಾನ್ಯ.

Psychology: True Democratic leadership vs fake Leadership

ವ್ಯಕ್ತಿತ್ವದ ಮಿತಿ
ಪ್ರಿಯಾಂಕ ಗಾಂಧಿ, ಮಾಯಾವತಿ(ಕಡಿಮೆ), ಮುಂತಾದ ಜನನಾಯಕರು ತಿಂಗಳುಗಟ್ಟಲೆ ಜನತೆಯೊಂದಿಗಿದ್ದು ಬೆರೆಯುವ ಸಾಹಸ ಮಾಡಿದ್ದರೂ ವೋಟಿನ ಮೂಲಕ ಅವರಿಗೆ ಸಿಕ್ಕ ಬೆಂಬಲ ತೀರಾ ಕಡಿಮೆ. ಈ ಮಾದರಿಯ ಸೋಲಿಗೆ ನಾಯಕರ ವರ್ಚಸ್ಸು, ವ್ಯಕ್ತಿತ್ವದ ಮಿತಿ ಅಥವಾ ಮಾನಸಿಕ ವೈಫಲ್ಯತೆ ಕಾರಣವೆನ್ನುವುದನ್ನು ಬಹಳ ಸುಲಭವಾಗಿ ಮನಸಿಗೆ ಹೊಳೆಯುತ್ತದೆ.

ಆದರೆ, ನಾಯಕತ್ವದ ಬಗ್ಗೆಯ ಮನೋವೈಜ್ಞಾನಿಕ ಸಮೀಕ್ಷೆಗಳಿವನ್ನು ತಿರಿಸ್ಕರಿಸಿರುವುದೇ ಹೆಚ್ಚು. ಮತದಾರನ ಮನಸಿನ ಪದರಗಳಲ್ಲಿ ಅಪ್ಪಟ ಮುಂದಾಳುವಿನ ಮನೋಬಲಗಳೆದುರಿಗೆ ಕಪಟ ಮುಂದಾಳತ್ವದ ತಂತ್ರಗಾರಿಕೆಯೇ ಹೆಚ್ಚು ಬಲಿಷ್ಠ. ಹೀಗಾಗಿ ವ್ಯಕ್ತಿಯು ಭಾವುಕತೆ, ಭಾವನೆಗಳು ಉದ್ರೇಗಕ್ಕೆ ಒಳಗಾಗಿ ಪ್ರತಿಕ್ರಿಯಿಸುವುದು ಸಾಮಾನ್ಯ.

Psychology: True Democratic leadership vs fake Leadership

ಇಂತಹದೊಂದು ಕಪಟಗಾರಿಕೆಯ ತಂತ್ರಗಳಿಗೆ ಒಳಗಾಗದವರೂ ಇದ್ದೇ ಇರುವುದಾದರೂ ಅಂತಹವರ ಸಂಖ್ಯೆ ಸಾಮಾನ್ಯವಾಗಿಯೇ ಕಡಿಮೆ. ವಿಚಾರ ಮಾಡುವುದು, ಪೂರ್ವಗ್ರಹಗಳಿಗೆ ಒಳಗಾಗದಿರುವುದು ಮತ್ತು ನಿರಾತಂಕದ ಮನೋಭಾವ ಪೋಷಿಸಿಕೊಂಡು ಬಂದಿರುವವರು ಅಪ್ಪಟ ಮುಂದಾಳುವನ್ನು ಬಯಸುತ್ತಾರೆ.

ಪಕ್ಷದ ಮುಖಂಡರೇ ಹೊಣೆ

ಹೆಚ್ಚಿನ ಸಮಯದಲ್ಲಿ ಗೆಲುವಿಗೆ ಪಕ್ಷದ ಮುಖ್ಯಸ್ಥರು ಕಾರಣ ಎನ್ನುವಂತೆ ಸೋಲಿಗೂ ಪಕ್ಷದ ಮುಖಂಡರೇ ಹೊಣೆಯಾಗುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೇ ಪಕ್ಷದ ಪ್ರಮುಖ ಮುಖಂಡನ ಅಸಾಧಾರಣ ನಾಯಕತ್ವದ ಕೌಶಲ್ಯಗಳೇ ಪ್ರಾಧಾನ್ಯತೆ ಪಡೆಯುತ್ತದೆ. ಹಾಗೆಯೇ ಸೋತ ಪಕ್ಷವು ನಾಯಕ, ನಾಯಕರತ್ತ ಬೊಟ್ಟು ಮಾಡಿ ಚುನಾವಣಾ ತಂತ್ರಗಾರಿಕೆ ಮತ್ತು ನಾಯಕತ್ವದ ವೈಫಲ್ಯವನ್ನೇ ವಿಶ್ಲೇಷಣೆಯ ಕೇಂದ್ರ ವಸ್ತುವಾಗಿರಿಸಿಕೊಂಡಿರುತ್ತದೆ.

ಬದಲಾದ ಕಾಲಮಾನ, ಹೊಸ ಪೀಳಿಗೆಯ ರಾಜಕೀಯ ನಿಲುವು ಮತ್ತು ಮುಂದಾಳುವನ್ನು ಅನುಸರಿಸುವ ಮಾದರಿಗಳತ್ತ ಗಮನ ಹರಿಸುವುದು ಕಡಿಮೆ. ಹಳೆ ಅಥವಾ ಹಿರಿಯ ಪೀಳಿಗೆಯ ಬಿಗಿಮುಷ್ಠಿಯಲ್ಲಿ ಪಕ್ಷದ ನಿಲುವು, ನಿಯತ್ತು ಇದ್ದಾಗ ಯಾಂತ್ರಿಕ, ತಾಂತ್ರಿಕ ಪ್ರಭಾವಗಳನ್ನು ಅರಿತ ಯುವ ಪೀಳಿಗೆಯೊಂದಿಗೆ ಗೊಂದಲ, ಘರ್ಷಣೆಗಳು ಹೆಚ್ಚಾಗುವುದು ಸಹಜ. ಈ ಸ್ಥಿತಿಯನ್ನು ಚೆನ್ನಾಗಿ ಬಲ್ಲ ಮುಂದಾಳುವು ಬಹುವೇಗವಾಗಿ ರಾಜಕೀಯ ಮುಂಚೂಣಿ ಮುಟ್ಟುತ್ತಾನೆ.

English summary
Psychology: Know more about True Democratic leadership vs fake Leadership in context with Elections in India, a write up by Dr A Sridhara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X