ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತು ಆರೋಗ್ಯ ಸಚಿವ ಸುಧಾಕರ್ ನಡುವೆ ಶೀತಲ ಸಮರ
ಬೆಂಗಳೂರು, ಆ. 30: ಪಕ್ಷಾಂತರಿ ಶಾಸಕರನ್ನು ಅನರ್ಹತೆ ಮಾಡಿ ನೀಡಿದ್ದ ತೀರ್ಪಿನಿಂದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತು ಹಾಲಿ ಆರೋಗ್ಯ ಸಚಿವ ಕೆ. ಸುಧಾಕರ್ ನಡುವೆ ಉಂಟಾಗಿದ್ದ ಶೀತಲ ಸಮರ ಇದೀಗ ತಾರಕ್ಕೇರಿದೆ. ಶ್ರೀನಿವಾಸಪುರ ತಾಲೂಕಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ ಕಾರ್ಯಕ್ರಮವನ್ನು ಮುಂದೂಡಿ ಆರೋಗ್ಯ ಸಚಿವರು ತನ್ನ ಪವರ್ ತೋರಿಸಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ ಕಾರ್ಯಕ್ರಮ ರದ್ದು ಮಾಡಿದರೂ, ಅದಕ್ಕೆ ಕ್ಯಾರೆ ಎನ್ನದೇ ಉದ್ಘಾಟಿಸುವ ಮೂಲಕ ಮಾಜಿ ಸ್ಪೀಕರ್ ರಮೇಶ್ ಕುಮಾರ್ ತನ್ನ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಹಾಲಿ ಆರೋಗ್ಯ ಸಚಿವರ ಹಾಗೂ ಮಾಜಿ ಸ್ಪೀಕರ್ ಅವರ ಮುಸುಕಿನ ಗುದ್ದಾಟಕ್ಕೆ ಕೋಲಾರ ಜಿಲ್ಲಾ ಆರೋಗ್ಯ ಅಧಿಕಾರಿಗಳ ಪರಿಸ್ಥಿತಿ ಬಿಸಿ ತುಪ್ಪ ನುಂಗಿದಂತಾಗಿದೆ.
ಆ. 26 ರಂದು ನಡೆದ ಸ್ಪೀಕರ್ ಉದ್ಘಾಟನೆ:
ಶ್ರೀನಿವಾಸಪುರ ತಾಲೂಕಿನ ಮುದುವಾಡಿ, ಲಕ್ಷ್ಮೀಸಾಗರ, ಬೈರಗಾನಹಳ್ಳಿಯಲ್ಲಿ ಆ. 26 ರಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉದ್ಘಾಟನಾ ಕಾರ್ಯಕ್ರಮವನ್ನು ನಿಗದಿ ಮಾಡಲಾಗಿತ್ತು. ಇದಕ್ಕಾಗಿ ಪೂರ್ವ ಸಿದ್ಧತೆಯೂ ನಡೆದಿತ್ತು. ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉದ್ಘಾಟನಾ ಸಮಾರಂಭವನ್ನು ಕಾರಣಾಂತರಗಳಿಂದ ರದ್ದು ಮಾಡಿದೆ ಎಂಬ ಆದೇಶವನ್ನು ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಹೊರಡಿಸಿದ್ದರು. ಸದರಿ ಆದೇಶವನ್ನು ಆರೋಗ್ಯ ಸಚಿವರಿಗೂ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೂ ರವಾನಿಸಲಾಗಿತ್ತು. ಇದಕ್ಕೆ ಸೊಪ್ಪು ಹಾಕದ ರಮೇಶ್ ಕುಮಾರ್ ಪೂರ್ವ ನಿಗದಿಯಂತೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ್ದಾರೆ. ಅಂತಿಮವಾಗಿ ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಉದ್ಘಾಟನೆ ಮಾಡುವ ಮೂಲಕ ಮಾಜಿ ಸ್ಪೀಕರ್ ರಮೇಶ್ ಕುಮಾರ್ " ನಿನ್ನ ಅಧಿಕಾರದಿಂದ ನನ್ನನ್ನು ತಡೆಯುವ ಶಕ್ತಿ ಇದೆಯೇ ?" ಎಂಬ ಸಂದೇಶ ರವಾನಿಸಿದ್ದಾರೆ. ಇದನ್ನು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿರುವ ಆರೋಗ್ಯ ಸಚಿವ ಸುಧಾಕರ್ ಎರಡನೇ ಸಲ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ ಮಾಡಲು ವೇದಿಕೆ ಸಿದ್ಧಪಡಿಸಿದ್ದಾರೆ.
ಸೆ. 1 ರಿಂದ ಆರೋಗ್ಯ ಸಚಿವರಿಂದ ಉದ್ಘಾಟನೆ:
ಸೆ. 1 ರಂದು ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಶ್ರೀನಿವಾಸಪುರ ತಾಲೂಕಿನ ಮುದುವಾಡಿ, ಲಕ್ಷ್ಮೀಸಾಗರ, ಬೈರಗಾನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗಿದೆ. ರಮೇಶ್ ಕುಮಾರ್ ಪೂಜೆ ಮಾಡುವ ಮೂಲಕ ಈಗಾಗಲೇ ಉದ್ಘಾಟನೆ ಮಾಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಉದ್ಘಾಟನೆ ಮಾಡಲು ಆರೋಗ್ಯ ಸಚಿವರು ಹೋಗುತ್ತಿದ್ದಾರೆ. ಈ ಕುರಿತು ಒನ್ಇಂಡಿಯಾ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ "ಮೂರು ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ ಕಾರ್ಯಕ್ರಮವನ್ನು ಸೆ. 1 ರಂದು ಜಿಲ್ಲಾಡಳಿತದಿಂದ ಪ್ರಾಥಮಿಕ ಅರೋಗ್ಯ ಕೇಂದ್ರಗಳ ಅಧಿಕೃತ ಉದ್ಘಾಟನೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಚಿವರು, ಸಂಸದರು ಪಾಲ್ಗೊಳ್ಳಲಿದ್ದಾರೆ'' ಎಂದು ಸ್ಪಷ್ಟಪಡಿಸಿದರು. ಆ. 26 ರಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಉದ್ಘಾಟನೆ ಮಾಡಿದ್ದು ಏನು ಎಂದು ಪ್ರಶ್ನಿಸಿದಾಗ ಅವರು " ಅವರು ಕೇವಲ ಪೂಜೆ ಮಾಡಿಕೊಂಡು ಹೋಗಿದ್ದಾರೆ. ಜಿಲ್ಲಾಡಳಿತದಿಂದ ನಡೆದ ಅಧಿಕೃತ ಉದ್ಘಾಟನೆ ಕಾರ್ಯಕ್ರಮವಲ್ಲ'' ಎಂದು ಸ್ಪಷ್ಟನೆ ನೀಡಿದ್ದಾರೆ.

ರಮೇಶ್ ಕುಮಾರ್ ಕಾರ್ಯಕ್ರಮಕ್ಕೆ ಅಧಿಕಾರಿಗಳ ಗೈರು: ಇನ್ನು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಪೂರ್ವ ನಿಗದಿಯಂತೆ ಆ. 26 ರಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ತಾಲೂಕು ಮಟ್ಟದ ಹಾಗೂ ಜಿಲ್ಲಾ ಮಟ್ಟದ ಆರೋಗ್ಯ ಅಧಿಕಾರಿಗಳು ಪಾಲ್ಗೊಂಡಿರಲಿಲ್ಲ. ತಾಲೂಕು ಮಟ್ಟದ ಆರೋಗ್ಯ ಅಧಿಕಾರಿ ವಿಜಯ ಅವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉದ್ಘಾಟನಾ ಆಹ್ವಾನ ಪತ್ರಿಕೆ ಸಚಿವರಿಗೆ ಮತ್ತು ಸಂಸದ ಮುನಿಸ್ವಾಮಿಗೆ ತಲುಪಿಸುವಂತೆ ಸೂಚಿಸಿದರು. ಮಾರ್ಗ ಮಧ್ಯೆಯೇ ಮೊಬೈಲ್ ನಲ್ಲಿ ಸಂಸದರನ್ನು ಸಂಪರ್ಕಿಸಿದಾಗ, ಸಚಿವರು, ಸಂಸದರು ಇಲ್ಲದೇ ಕಾರ್ಯಕ್ರಮ ಏಕೆ ನಿಗದಿ ಮಾಡಿದ್ದೀರಿ? ಕಾರ್ಯಕ್ರಮ ರದ್ದು ಪಡಿಸಿ. ಕಾರ್ಯಕ್ರಮ ಮಂದುವರೆಸಿದರೆ ಅಮಾನತಿನಂತಹ ಶಿಸ್ತು ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಸಂಸದ ಮುನಿಸ್ವಾಮಿ ಅಧಿಕಾರಿಗೆ ತರಾಟೆಗೆ ತೆಗದುಕೊಂಡಿದ್ದಾರೆ.

ಈ ಬೆಳವಣಿಗೆಯಿಂದ ಹೆದರಿರುವ ಅಧಿಕಾರಿಗಳು ರಮೇಶ್ ಕುಮಾರ್ ಅವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಚಿವರ ಮಾತು ಮೀರಿದರೆ ಶಿಕ್ಷೆ, ಸಣ್ಣ ತಪ್ಪನ್ನು ಕ್ಷಮಿಸದ ಮುತ್ಸದ್ಧಿ ಶಾಸಕರ ಮಾತು ಮೀರಿದರೆ ಪರಿಸ್ಥಿತಿ ಏನಾಗುತ್ತದೋ ಎನ್ನುವ ಭಯದಲ್ಲಿ ಕೋಲಾರ ಜಿಲ್ಲಾ ಅಧಿಕಾರಿಗಳು ಬದುಕುವಂತಾಗಿದೆ. ಜನ ಪ್ರತಿನಿಧಿಗಳ ಜಿದ್ದಾ ಜಿದ್ದಿನ ಆಟಕ್ಕೆ ಸಿಲುಕಿ ಅಧಿಕಾರಿಗಳ ಪರಿಸ್ಥಿತಿ ಹೇಳತೀರದಾಗಿದೆ. ಇನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿದ್ದ ಕಿರಿಯ ಸಿಬ್ಬಂದಿ ಸಮ್ಮುಖದಲ್ಲಿ ಪೂಜೆ ಮಾಡುವ ಮೂಲಕ ಉದ್ಘಾಟಿಸಿರುವ ರಮೆಶ್ ಕುಮಾರ್, ಕೊರೊನಾ ಇರುವ ಕಾರಣದಿಂದ ಹೆಚ್ಚು ಜನರನ್ನು ಸೇರಿಸುವ ಅಗತ್ಯವಿಲ್ಲ. ಜನರಿಗೆ ಆರೋಗ್ಯ ಸೇವೆ ಕಲ್ಪಿಸುವುದು ಮುಖ್ಯ ಎಂದು ತಣ್ಣನೆ ಸಂದೇಶ ರವಾನಿಸಿದ್ದಾರೆ.
ಅನರ್ಹತೆಯ ಜಿದ್ದಾ ಜಿದ್ದು:
ಆರೋಗ್ಯ ಸಚಿವ ಕೆ. ಸುಧಾಕರ್ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಡುವಿನ ಜಿದ್ದಿಗೆ ಕಾರಣವಾಗಿದ್ದು ಆಪರೇಷನ್ ಕಮಲದ ಅನರ್ಹ ಶಾಸಕರ ಮೇಲೆ ಬಿಟ್ಟ ಅರ್ಹತೆ ಅಸ್ತ್ರ. ಸಮ್ಮಿಶ್ರ ಸರ್ಕಾರವನ್ನು ಬೀಳಿಸಿದ ಬಾಂಬೆ ಟೀಮ್ ಸದಸ್ಯರನ್ನು ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಸ್ಪೀಕರ್ ಆಗಿ ರಮೇಶ್ ಕುಮಾರ್ ತೀರ್ಪು ನೀಡಿದ್ದರು. ಈ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಎದುರಾದ ಉಪ ಚುನವಣೆ ಕಣದಲ್ಲಿ ಗೆಲುವು ಸಾಧಿಸಿ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಅವಿಭಜಿತ ಕೋಲಾರ ಜಿಲ್ಲೆಯ ಒಂದು ಭಾಗವಾಗಿದ್ದ ಚಿಕ್ಕಬಳ್ಳಾಪುರ ಇದೀಗ ಜಿಲ್ಲೆಯಾಗಿದೆ. ಆದರೆ ಬಾಂಧವ್ಯದಲ್ಲಿ ಅದು ಈಗಲೂ ಅವಿಭಜಿತ ಕೋಲಾರ ಜಿಲ್ಲೆಯೇ. ಇನ್ನು ಜಿದ್ದಾಜಿದ್ದಿನ ರಾಜಕಾರಣದ ವಿಚಾರಕ್ಕೆ ಬಂದರೆ ರಮೇಶ್ ಕುಮಾರ್ ಮುಂದೆ ನಿಲ್ಲಲು ಅಸಾಧ್ಯ!

ರಮೇಶ್ ಕುಮಾರ್ ಜಿದ್ದಾ ಜಿದ್ದಿನ ಪಾಲಿಟಿಕ್ಸ್:
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರ ಹಾಗೂ ತಮಿಳುನಾಡಿನ ರಾಜಕಾರಣಕ್ಕು ಏನೂ ವ್ಯತ್ಯಾಸವಿಲ್ಲ. ತಮಿಳುನಾಡಿನಲ್ಲಿ ಹೇಗೆ ಒಂದೊಂದು ಅವಧಿಗೆ ಒಂದೊಂದು ಪಕ್ಷ ಗೆಲ್ಲುತ್ತಿತ್ತೋ, ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದಲ್ಲೂ ಅದೇ ರೀತಿಯ ಬೆಳವಣಿಗೆ. ಒಮ್ಮೆ ವೆಂಕಟಶಿವಾರೆಡ್ಡಿ ಗೆದ್ದರೆ, ಇನ್ನೊಮ್ಮೆ ರಮೇಶ್ ಕುಮಾರ್ ಗೆಲುವು. ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರಕ್ಕೆ ನಡೆದಿರುವ ಚುನಾವಣೆಯಲ್ಲಿ ಒಬ್ಬೊಬ್ಬರು ಒಂದೊಂದು ಸಲ ಗೆಲ್ಲುತ್ತಿದ್ದರು. ಇದೇ ಮೊದಲ ಬಾರಿಗೆ ರಮೇಶ್ ಕುಮಾರ್ ಎರಡನೇ ಬಾರಿ ಗೆದ್ದಿದ್ದು ಎದುರಾಳಿ ವೆಂಕಟಶಿವಾರೆಡ್ಡಿ ಶ್ರೀನಿವಾಸಪುರವನ್ನೇ ತೊರೆದಿದ್ದಾರೆ. ಇನ್ನೂ ಶ್ರೀನಿವಾಸಪುರ ಚುನಾವಣೆ ಎಂದರೆ ಜಿದ್ದಾಜಿದ್ದಿನ ರಾಜಕಾರಣ. ಅಲ್ಲಿ ರಮೇಶ್ ಕುಮರ್ ಹಾಗೂ ವೆಂಕಟಶಿವಾರೆಡ್ಡಿ ನಡುವಿನ ಯುದ್ಧ ಎಂಬುದು ಬಿಟ್ಟರೆ ಪಾರ್ಟಿಗಳ ನಡುವಿನ ಫೈಟ್ ಅಲ್ಲವೇ ಅಲ್ಲ. ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ರಮೇಶ್ ಕುಮಾರ್‌ಗೆ ಜಾತಿಯ ಬಲ ಇಲ್ಲವೇ ಇಲ್ಲ. ಅವರ ಸಮುದಾಯಕ್ಕೆ ಸೇರಿದ ಶೇ. 05 ರಷ್ಟು ಮಂದಿಯೂ ಇಲ್ಲ. ಆದರೂ ಅವರನ್ನೇ ಶ್ರೀನಿವಾಸಪುರ ಜನ ಆಯ್ಕೆ ಮಾಡುವ ಹಿಂದೆ ರೋಚಕ ಸತ್ಯಗಳಿವೆ. ರೈತ ಸಮುದಾಯವೇ ಹೆಚ್ಚಿರುವ ಶ್ರೀನಿವಾಸಪುರದಲ್ಲಿ ಹಳ್ಳಿ ಹಳ್ಳಿಗೂ ಸುತ್ತುವ ಏಕೈಕ ರಾಜಕಾರಣಿ ರಮೇಶ್ ಕುಮಾರ್. ಗ್ರಾಮಸಭೆಯನ್ನು ಶಿಸ್ತುಬದ್ಧವಾಗಿ ನಡೆಸಿ ಜನರ ಸಮಸ್ಯೆಗಳನ್ನು ಅಲ್ಲಿಯೇ ಸ್ಥಳದಲ್ಲಿಯೇ ಪರಿಹರಿಸುತ್ತಾರೆ. ತಪ್ಪು ಮಾಡಿರುವ ಅಧಿಕಾರಿಗಳಿಗೆ ಅಲ್ಲಿಯೇ ಉಗಿದು ಸರಿ ಪಡಿಸುತ್ತಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಒಂದೂವರೆ ವರ್ಷ ಎಲ್ಲಾ ಹಳ್ಳಿಗಳೂ ಭೇಟಿ ಮಾಡುತ್ತಾರೆ. ಹೀಗಾಗಿ ರಮೇಶ್ ಕುಮಾರ್ ಅವರಿಗೆ ಪರ್ಯಾಯ ನಾಯಕ ಹುಟ್ಟು ಕೂಡ ಅಲ್ಲಿ ಸಾಧ್ಯವಿಲ್ಲ ಎಂಬ ಪರಿಸ್ಥಿತಿಯಿದೆ. ಇನ್ನು ಜಿದ್ದಾ ಜಿದ್ದಿನ ರಾಜಕಾರಣಕ್ಕೆ ಬಿದ್ದರೆ, ಸಚಿವರಾಗಿದ್ದರೂ ಸುಧಾಕರ್ ಶ್ರೀನಿವಾಸಪುರದಲ್ಲಿ ಹುಲ್ಲು ಕಡ್ಡಿ ಅಲ್ಲಾಡಿಸಲು ಸಾಧ್ಯವಿಲ್ಲ ಎನ್ನುತ್ತಾರೆ ರಮೇಶ್ ಕುಮಾರ್ ನಿಕಟವರ್ತಿಗಳು.

ಶ್ರೀನಿವಾಸಪುರದಲ್ಲಿ ಸಚಿವರಿಗೆ ವಿರೋಧ?: ರಮೇಶ್ ಕುಮಾರ್ ಉದ್ಘಾಟನೆ ಮಾಡಿದರೂ ಮರು ಉದ್ಘಾಟನೆಗೆ ಆರೋಗ್ಯ ಸಚಿವ ಕೆ. ಸುಧಾಕರ್ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಈ ಮೂಲಕ ರಮೇಶ್ ಕುಮಾರ್ ಅವರಿಗೆ ಟಾಂಗ್ ನೀಡಲು ಹೊರಟಿದ್ದಾರೆ. ಆದರೆ, ಸುಧಾಕರ್ ಅವರ ಈ ನಡೆಯಿಂದ ರಮೇಶ್ ಕುಮಾರ್ ಅವರಿಗೆ ಅವಮಾನ ಆಗಿದ್ದೇ ಆದಲ್ಲಿ, ಶ್ರೀನಿವಾಸಪುರದ ಜನ ಬೀದಿಗೆ ಇಳಿದರೂ ಅಚ್ಚರಿ ಪಡಬೇಕಿಲ್ಲ. ರಮೇಶ್ ಕುಮಾರ್ ಸಾಮಾನ್ಯವಾಗಿ ಯಾರನ್ನೂ ಕೆಣಕಲು ಹೋಗಲ್ಲ. ಒಮ್ಮೆ ಕೆಣಕಿಸಿಕೊಂಡರೆ, ನಂತರ ಆಗುವ ಬೆಳವಣಿಗೆಗಳು ಬೇರೆಯದ್ದೇ ಆಗಿರುತ್ತದೆ. ಸೆ. 1 ರಂದು ಶ್ರೀನಿವಾಸಪುರ ತಾಲೂಕಿನಲ್ಲಿ ಈಗಾಗಲೇ ಉದ್ಘಾಟನೆ ಮಾಡಿರುವ ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಸಚಿವರು ಉದ್ಘಾಟನೆ ಮಾಡುವುದೇ ಅನುಮಾನ ಎಂದೇ ಹೇಳಲಾಗುತ್ತಿದೆ.












Click it and Unblock the Notifications