ನವಿ ಮುಂಬೈ ಏರ್‌ಪೋರ್ಟ್‌ನಲ್ಲಿ ದಿನಕ್ಕೆ 15,000 ಊಟ ತಯಾರಿ; TajSATS ಫ್ಲೈಟ್ ಕಿಚನ್ ಸೇವೆ
ಮುಂಬೈ: ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಡುಗೆ ಸಾಮರ್ಥ್ಯ ಹೆಚ್ಚಿಸಲು TajSATS ಏರ್ ಕ್ಯಾಟರಿಂಗ್ ಕಂಪನಿಯು ಕೈ ಜೋಡಿಸಿದ್ದು, ಶೀಘ್ರವೇ ಉತ್ಪಾದನೆ ಹೆಚ್ಚಾಗಲಿದೆ. 2026-27ರ ಚಳಿಗಾಲದ ವೇಳಾಪಟ್ಟಿಗೂ ಮೊದಲೇ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳಿಗೆ ಆಹಾರ ಸೇವೆ ವಿಸ್ತರಣೆ ಆಗಲಿದೆ.
ಏರ್ ಪೋರ್ಟ್ ಅಡುಗೆ ಕೋಣೆಯಿಂದ ನಿತ್ಯ ಸುಮಾರು 40 ವಿಮಾನಗಳಿಗೆ ಆಹಾರ ಪೂರೈಸಲಾಗುತ್ತಿತ್ತು. ದಿನಕ್ಕೆ 7,500 ರಷ್ಟು ಊಟಗಳನ್ನು ಸಿದ್ದಪಡಿಸುತ್ತಿತ್ತು. ಇದೀಗ TajSATS ಪಾಲುದಾರಿಕೆಯೊಂದಿಗೆ ಸಾಮರ್ಥ್ಯ ಹೆಚ್ಚಾಗಿದ್ದು, ನಿತ್ಯ 15,000 ಊಟ ಒದಗಿಸಲು ಮುಂದಾಗಿದೆ. ಅಡುಗೆಯಲ್ಲಿ ಸುರಕ್ಷತೆ, ಗುಣಮಟ್ಟ ಮತ್ತು ವಿಮಾನಗಳಿಗೆ ಸಮರ್ಪಕ ಊಟ ವಿತರಣೆ ಮಾಡುತ್ತಾ ಬರಲಾಗುತ್ತಿದೆ.

ದೈನಂದಿನ ಪ್ರಯಾಣಿಕರ ದಟ್ಟಣೆಯು ಹೆಚ್ಚಾಗುತ್ತಿದ್ದಂತೆ ವಿಮಾನಯಾನ ಕಾರ್ಯಾಚರಣೆಗಳು ಹೆಚ್ಚಾಗುತ್ತಿವೆ. ಹೀಗಾಗಿ ನಿತ್ಯದ ಊಟ ಪೂರೈಕೆ ಸಂಖ್ಯೆಯನ್ನು 15,000 ಹೆಚ್ಚಿಸುವ ಗುರಿ ಹೊಂದಲಾಗಿದೆ. ಇದು 2026 ಅಕ್ಟೋಬರ್ 25 ರಿಂದ ಮಾರ್ಚ್ 27, 2027 ರವರೆಗೆ ಜಾರಿಯಲ್ಲಿರುತ್ತದೆ ಎಂದು ಏರ್ ಪೋರ್ಟ್ ಮುಖ್ಯಸ್ಥರು ತಿಳಿಸಿದ್ದಾರೆ.
ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಕಾರ, ನಿಲ್ದಾಣದಿಂದ ನಿರ್ಗಮಿಸುವ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳ ಬೆಳೆಯುತ್ತಿರುವ ಅವಶ್ಯಕತೆಗಳನ್ನು ಪೂರೈಸಲು TajSATS ಸೌಲಭ್ಯ ವಿನ್ಯಾಸಗೊಳಿಸಲಾಗಿದೆ.
ಬದಲಾವಣೆ, ಅಗತ್ಯತೆಗೆ ತಕ್ಕಂತೆ ಸೇವೆ ಪೂರೈಕೆ
ಉತ್ಪಾದನಾ ಮೂಲಸೌಕರ್ಯದೊಂದಿಗೆ ಆಧುನಿಕ ಶೈತ್ಯೀಕರಣ ವ್ಯವಸ್ಥೆ, ಸುವ್ಯವಸ್ಥಿತ ಕಾರ್ಯಾಚರಣಾ ಪ್ರಕ್ರಿಯೆಗಳೊಂದಿಗೆ ವಿಮಾನಯಾನ ವೇಳಾಪಟ್ಟಿಗಳಲ್ಲಿನ ಬದಲಾವಣೆಗೆ ಅನುಗುಣವಾಗಿ ಹಾಗೂ ತ್ತು ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಸೇವೆ ಮುಂದುವರಿಸಲಾಗುತ್ತದೆ. ಏರ್ ಪೋರ್ಟ್ ವಿಸ್ತರಿಸುತ್ತಿರುವ ವಿಮಾನಯಾನ ನೆಟ್‌ವರ್ಕ್ ಜೊತೆಗೆ ಅದರ ಜತೆ ಜತೆಯಲ್ಲೇ ಇತರ ಮೂಲಸೌಕರ್ಯಗಳು ಬೆಳೆಯಬೇಕಿದೆ ಎಂದು ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯ ವಿಮಾನ ನಿಲ್ದಾಣ ಅಧಿಕಾರಿ ಸುಭಾಷ್ ಮುರಿಕೆಂಚೇರಿ ಅವರು ಹೇಳಿದರು.
"NMIA ತನ್ನ ವಿಮಾನಯಾನ ಜಾಲವನ್ನು ವಿಸ್ತರಿಸುತ್ತಿದ್ದಂತೆ, ನಮ್ಮ ಪೋಷಕ ಮೂಲ ಸೌಕರ್ಯವು ಅದರೊಂದಿಗೆ ಬೆಳೆಯುವುದು ಮುಖ್ಯ. TajSATS ವಿಮಾನ ಅಡುಗೆಮನೆಯು ವಿಮಾನಯಾನ ಸಂಸ್ಥೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ನಮ್ಯತೆಯನ್ನು ನೀಡುತ್ತದೆ ಮತ್ತು ಪ್ರಯಾಣಿಕರಿಗೆ ಪಾಕಶಾಲೆಯ ಅನುಭವವನ್ನು ಹೆಚ್ಚಿಸುತ್ತದೆ" ಎಂದು ಅವರು ಹೇಳಿದರು.
ದೇಶಿ, ವಿದೇಶಿ ವಿಮಾನಯಾನ ಸಂಸ್ಥೆಗಳಿಗೂ ಸೇವೆ
ವಿಮಾನ ನಿಲ್ದಾಣ ಆವರಣದ ಈ ಅಡುಗೆ ಮನೆಯು ದೇಶೀಯ, ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳಿಗೆ ಅಡುಗೆ ಪೂರೈಕೆ ಮಾಡುವ ಜೊತೆಗೆ ವಾಹಕಗಳಿಗೂ ಅಡುಗೆ ಉಣಬಡಿಸುತ್ತದೆ. ಭಾರತಕ್ಕೆ ಮತ್ತು ಅಲ್ಲಿಂದ ಕಾರ್ಯನಿರ್ವಹಿಸುವ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳ ಅಗತ್ಯ ಪೂರೈಕೆಗೂ ವ್ಯವಸ್ಥೆಗಳು ಇವೆ.
ದೇಶದಿಂದ ಕಾರ್ಯ ನಿರ್ವಹಿಸುತ್ತಿರುವ ಶೇ.40ರಷ್ಟು ವಿದೇಶಿ ಏರ್‌ಲೈನ್ಸ್‌ಗಳು ತಮ್ಮದೇ ಆದ ವಿಮಾನ ಅಡುಗೆಮನೆಗಳ ಬ್ಯಾಕ್ ಕ್ಯಾಟರಿಂಗ್ ಅವಲಂಬಿಸಿವೆ. ಇನ್ನು ದೇಶಿಯ ವಿಮಾನಯಾನ ಸಂಸ್ಥೆಗಳ ಅಗತ್ಯ ಪೂರೈಕೆಗೆ NMIA ಯ ಇನ್‌ಫ್ಲೈಟ್ ಅಡುಗೆ ಮೂಲಸೌಕರ್ಯ ಅಭಿವೃದ್ಧಿಗೊಳಿಸಲಾಗಿದೆ. ಇದರಲ್ಲಿ ವಿಶೇಷ ಊಟಗಳು, ಬೇರೆ ಬೇರೆ ವರ್ಗದವರಿಗಾಗಿ ವಿಶೇಷ ಮೆನುಗಳು ಹಾಗೂ ಹಲಾಲ್ ಊಟಗಳು ಒಳಗೊಂಡಿವೆ.
ಆಹಾರ ಸುರಕ್ಷತೆ, ಗುಣಮಟ್ಟಕ್ಕೆ ಆದ್ಯತೆ
ನವಿ ಮುಂಬೈ ವಿಮಾನ ನಿಲ್ದಾಣದ ಅಡುಗೆ ಮನೆಯೊಂದಿಗೆ TajSATS ಕಂಪನಿಯು HACCP, ISO 22000 ಹಾಗೂ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಸೂಚಿಸಿದಂತೆ ಆಹಾರದಲ್ಲಿ ಗುಣಮಟ್ಟ, ಸುರಕ್ಷತಾ ನಿಯಮ ಅನುಸರಿಸುತ್ತಿದೆ. ಗುಣಮಟ್ಟ ನಿಯಂತ್ರಣ ಪ್ರಕ್ರಿಯೆಗಳು ಆಹಾರ ತಯಾರಿಕೆ, ನಿರ್ವಹಣೆ, ಸಂಗ್ರಹಣೆ ಹಾಗೂ ರವಾನೆ ಒಳಗೊಂಡಿದೆ. ನೈರ್ಮಲ್ಯ ಕಾಯ್ದುಕೊಳ್ಳುವ ಜೊತೆಗೆ ತಾಜಾತನಕ್ಕು ಒತ್ತು ನೀಡಲಾಗುತ್ತಿದೆ.
ವಾಯುಯಾನ ಅಡುಗೆಯಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಅನುಭವ ಹೊಂದಿರುವ ಕಂಪನಿಯು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (CSMIA) ವಿಮಾನ ಅಡುಗೆಮನೆ ನಿರ್ವಹಣೆ ಜವಾಬ್ದಾರಿಯನ್ನೂ ನಿಭಾಯಿಸುತ್ತಿದೆ. ಈಗಾಗಲೇ ಅಲ್ಲಿ ಕಾರ್ಯ ನಿರ್ವಹಣೆ ಇದೆ. ಅಲ್ಲಿಯೂ ಉತ್ಪಾದನಾ ಸಾಮರ್ಥ್ಯ ಅಗತ್ಯತೆ ಆಧಾರದಲ್ಲಿ ಇನ್ನಷ್ಟು ವಿಸ್ತರಿಸಲು ತೀರ್ಮಾನಿಸಲಾಗಿದೆ.


Click it and Unblock the Notifications
