ಅಕ್ಕ ಮತ್ತು ಯು ಎಲ್ ಬಿ ನಡುವೆ ಒಪ್ಪಂದ
ಎಡಿಸನ್ (ಗುಬ್ಬಿ ವೀರಣ್ಣ ವೇದಿಕೆ): ಸೆಪ್ಟೆಂಬರ್ 6 : ವಿದೇಶಿ ಬಂಡವಾಳ ಆಕರ್ಷಣೆ ಮತ್ತು ಕನ್ನಡ ಕಲಾವಿದರ ಸಾಗರೋತ್ತರ ಪ್ರತಿಭಾ ಪ್ರದರ್ಶನಕ್ಕೆ ಏಕಕಾಲಕ್ಕೆ ಇಂಬು ಕೊಡುವ ಮಹತ್ವದ ಒಂದು ಒಪ್ಪಂದಕ್ಕೆ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ವೇದಿಕೆಯಲ್ಲಿ ಅಂಕಿತ ಹಾಕಲಾಯಿತು.
ಈ ಒಪ್ಪಂದ ಏರ್ಪಟ್ಟಿರುವುದು ಅಕ್ಕ ಹಾಗೂ ಯುನೈಟೆಡ್ ಲ್ಯಾಂಡ್ ಬ್ಯಾಂಕ್ ಸಂಸ್ಥೆಗಳ ನಡುವೆ. ಕರ್ನಾಟಕದ ಪ್ರಥಮ ದರ್ಜೆ ಕಲಾವಿದರನ್ನು ವಿದೇಶಗಳಿಗೆ ಕಳಿಸಿ ಆ ನೆಲದಲ್ಲಿ ಕನ್ನಡ ಸಂಸ್ಕೃತಿಯ ಸೌರಭವನ್ನು ಪಸರಿಸುವುದಕ್ಕೆ ಸೌಕರ್ಯ ಕಲ್ಪಿಸುವುದು, ಜತೆಗೆ ಅನಿವಾಸಿ ಕನ್ನಡಿಗರ ಬಂಡವಾಳ ಕರ್ನಾಟಕಕ್ಕೆ ಹರಿದು ಬರುವುದಕ್ಕೆ ಫಲದಾಯಕ ಮಾರ್ಗಗಳನ್ನು ಸೃಷ್ಟಿಸುವುದು, ಅನಿವಾಸಿ ಕನ್ನಡಿಗರು ಈಗಾಗಲೇ ಹೊಂದಿರುವ ಕರ್ನಾಟಕದ ಸ್ಥಿರಾಸ್ತಿಯ ಯೋಗಕ್ಷೇಮ ನಿರ್ವಹಣೆಗೆ ಒಂದು ವೃತ್ತಿಪರ ಸಂಸ್ಥೆಯನ್ನು ಹುಟ್ಟುಹಾಕುವುದು ಈ ಒಪ್ಪಂದದ ಉದ್ದಿಶ್ಯ.
ಒಡಂಬಡಿಕೆಯ ಮೂಲಕ ಯುನೈಟೆಡ್ ಲ್ಯಾಂಡ್ ಬ್ಯಾಂಕ್ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ತೊಡಗಿಸುತ್ತಿರುವ ಧನ ಸುಮಾರು ಎರಡು ದಶಲಕ್ಷ ಡಾಲರ್‌ಗಳು.
ಒಪ್ಪಂದದ ಒಟ್ಟಾರೆ ಪ್ರಯೋಜನಗಳನ್ನು ಉತ್ತರ ಅಮೆರಿಕ ಮಾತ್ರವಲ್ಲದೆ ಬ್ರಿಟನ್ ಹಾಗೂ ಕೆನಡಾದಲ್ಲಿ ನೆಲೆಸಿರುವ ಕನ್ನಡಿಗರು ಕೂಡ ಪಡೆಯುವಂತಾಗುತ್ತದೆ ಎಂದು ಯುನೈಟೆಡ್ ಲ್ಯಾಂಡ್ ಬ್ಯಾಂಕ್‌ನ ಅಧ್ಯಕ್ಷ ಎಸ್. ಪ್ರದೀಪ ಕುಮಾರ್ ತಿಳಿಸಿದರು. ದೂರಗಾಮಿ ದೃಷ್ಟಿಯಿಂದ ಅನಿವಾಸಿ ಕನ್ನಡಿಗರ ಕ್ಷೇಮಾಭಿವೃದ್ಧಿಗೆ ಸಹಕರಿಸುವ ಈ ಒಪ್ಪಂದದ ಇನ್ನಿತರ ವಿವರಗಳನ್ನು ಸದ್ಯದಲ್ಲೇ ಪ್ರಕಟಿಸಲಾಗುವುದೆಂದು ಪ್ರದೀಪ್ ಕುಮಾರ್ ಹೇಳಿದರು.
ಅಂತೆಯೇ, ವಿದೇಶೀ ನೆಲದಲ್ಲಿ ಕನ್ನಡದ ಮಲ್ಲಿಗೆಯ ಕಂಪನ್ನು ಚೆಲ್ಲುವ ಹಿರಿಯ ಶ್ರೇಣಿಯ ಕಲಾವಿದರ ಆಯ್ಕೆ ಮತ್ತು ಅವರ ಪ್ರವಾಸ ಕಾರ್ಯಕ್ರಮಗಳನ್ನು ಸಿದ್ಧಪಡಿಸುವುದಕ್ಕೆ ಪರಿಣಿತರ ಸಮಿತಿಯೊಂದನ್ನು ನೇಮಿಸಲಾಗುವುದೆಂದು ಅವರು ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ತಿಳಿಸಿದರು.












Click it and Unblock the Notifications