ಗಣ್ಯರ ಲೇಖನಗಳಲ್ಲಿ ಅಆಇಈ ಬಗ್ಗೆ ಭಾರೀ ಕಾಳಜಿ!
- ನಳಿನಿ ಮೈಯ, ಡೇರಿಯನ್, ಚಿಕಾಗೋ
[email protected]
‘ಕನ್ನಡ ಉಳಿಯುವುದೆ? ಬೆಳೆಯುವುದೆ?’ ಲೇಖನದಲ್ಲಿ ಸುದರ್ಶನ ಅವರು ಕನ್ನಡಿಗರು ಕನ್ನಡದ ಓದು ಬರಹ ನಿಲ್ಲಿಸಿ ಪ್ರಾಥಮಿಕ ಶಾಲೆಯಿಂದಲೂ ಎಲ್ಲ ವಿಷಯಗಳನ್ನೂ ಆಂಗ್ಲ ಭಾಷೆಯಲ್ಲಿ ಕಲಿಯಹೊರಟಿರುವುದು ಸರಿಯೆ? ಎಂದು ಪ್ರಶ್ನಿಸುತ್ತಾ ‘ಕನ್ನಡ ಬೆಳೆಯುತ್ತದೆಯೆ?’ ಎಂಬ ಪ್ರಶ್ನೆಗೆ ‘ಹೌದು’ ಎಂದು ಉತ್ತರಿಸಲು ಮನಸ್ಸು ಹಿಂದೆಗೆಯುತ್ತದೆ ಎನ್ನುತ್ತಾರೆ.
ಎಚ್.ಆರ್. ರಂಗನಾಥ್ ಅವರು ಕನ್ನಡವನ್ನು ಆಡಳಿತ ಭಾಷೆಯಾಗಿಸುವುದರ ವಿಫಲ ಪ್ರಯತ್ನದ ಬಗ್ಗೆ ಬರೆದರೆ ಪ್ರೊ. ಜಿ. ಅಶ್ವತ್ಥ್ ನಾರಾಯಣ ಅವರು ಕನ್ನಡ ಹಾಸ್ಯ ಬ್ರಹ್ಮರ ಅಪ್ರಸಿದ್ಧ ಹಾಸ್ಯದ ಬಗ್ಗೆ ಬರೆದಿದ್ದಾರೆ. ದೇ. ಜವರೇ ಗೌಡರು ‘ಶಾಸ್ತ್ರೀಯ ಭಾಷೆ’ ಎಂಬ ಪಟ್ಟ ಪಡೆದ ತಮಿಳಿನಲ್ಲೇ ಪ್ರಾಚೀನ ಕಾಲದಿಂದ ಕನ್ನಡ ಮಿಳಿತವಾಗಿದ್ದನ್ನು ಎತ್ತಿ ತೋರಿಸಿ ‘‘ಕನ್ನಡಿಗರಿಗೇಕೆ ತಮ್ಮ ಭಾಷೆಯ ಸರಸ್ವತೀ ಶಕ್ತಿಯಲ್ಲಿ ಗೌರವ ಭಾವವಿಲ್ಲ?’’ ಎಂದು ಪ್ರಶ್ನಿಸುತ್ತಾರೆ.
ಕೊನೆಯದಾಗಿ ವಿಶ್ವೇಶ್ವರ ಭಟ್ ಅವರ ‘ಉಳಿದ ಆ ಗಂಟನ್ನೂ ಕಟ್ಟಿಕೊಳ್ಳದಿದ್ದರೆ?’ ಲೇಖನ ಓದಿದಾಗ ಕರುಳು ಹಿಂಡಿದಂತಾಯಿತು ನನಗೆ. ಜಾಗತೀಕರಣದ ಪ್ರವಾಹದಲ್ಲಿ ಕನ್ನಡ ಕೊಚ್ಚಿ ಹೋಗುತ್ತಿರುವುದನ್ನು ಮನ ಮುಟ್ಟುವಂತೆ ವರ್ಣಿಸುತ್ತಾ ಅವರು ಪ್ರವಾಹದ ನೀರು ಒಳಮನೆಗೆ ನುಗ್ಗಿದಾಗ ತಮಗೆ ಅಮೂಲ್ಯವಾದದ್ದನ್ನು ಹಳೆಯ ಸೀರೆಯ ಗಂಟಿನಲ್ಲಿ ಕಟ್ಟಿಕೊಂಡಂತೆ ನಮಗೆ ಅಮೂಲ್ಯವಾದ ಭಾಷೆ, ಸಂಸ್ಕೃತಿ, ಪರಂಪರೆ, ಆಹಾರ, ಕುಟುಂಬ ಕ್ರಮ ಎಲ್ಲವನ್ನೂ ಕಟ್ಟಿಕೊಳ್ಳೋಣ ಎನ್ನುತ್ತಿದ್ದಾರೆ ಅವರು. ಆದರೆ ಸುತ್ತಮುತ್ತ ನೋಡುವಾಗ ಆ ಗಂಟು ಕಟ್ಟಿಕೊಳ್ಳುವ ಕೆಲಸವನ್ನು ಯಾರೂ ಮಾಡುತ್ತಿಲ್ಲ! ದಿವ್ಯ ನಿರ್ಲಕ್ಷ್ಯವೇ ಎಲ್ಲೆಲ್ಲೂ. ಹೀಗಾದರೆ ನಮಗೆ ಆಪ್ತವಾದ, ನಮ್ಮತನದ ಒಂದಂಶವಾದ, ನಮ್ಮ ವ್ಯಕ್ತಿತ್ವದಲ್ಲಿ ಒಂದಾಗಿ ಹೋದ ಕನ್ನಡಕ್ಕೆ ಭವಿಷ್ಯವಿಲ್ಲ ಎಂದು ಒಮ್ಮೆಲೆ ಮನದಟ್ಟಾಗಿ ಕಣ್ಣು ತೇವಗೊಳ್ಳುತ್ತದೆ.
ಕನ್ನಡದ ಬಗ್ಗೆ ಗಣ್ಯರು ಬರೆದ ಆಹ್ವಾನಿತ ಲೇಖನಗಳಲ್ಲಿ ಬಹುಪಾಲು ಕನ್ನಡದ ಉಳಿವು, ಬೆಳವಣಿಗೆಯ ಬಗ್ಗೆ ಆತಂಕ ವ್ಯಕ್ತ ಪಡಿಸುವ ಲೇಖನಗಳೇ ಆಗಿವೆ!
ಇಂಗ್ಲಿಷ್ ವಿಭಾಗದಲ್ಲಿ ನನಗೆ ಬಹಳ ಹಿಡಿಸಿದ ಲೇಖನ ಸೀತಾರಾಮಯ್ಯ ಅವರ ‘‘ಗಿವಿಂಗ್ ಸಮ್ ಥಿಂಗ್ ಬ್ಯಾಕ್’’. ಒಬ್ಬ ಎನ್ ಆರ್ ಐ ‘‘ನನ್ನೊಬ್ಬನಿಂದ ಏನು ಸಾಧ್ಯ?’’ ಎಂದು ಕೈ ಚೆಲ್ಲಿ ಕೂರದೆ ತಾಯ್ನಾಡ ಸೇವೆಗಾಗಿ ಏನೆಲ್ಲ ಮಾಡಬಹುದು! ಎಂಬ ಸ್ವಾನುಭವದ ಸುಂದರ ವರ್ಣನೆ ಇಲ್ಲಿದೆ. ಮೈಸೂರು ನಟರಾಜ್ ಅವರು ‘‘ಕಿಂಗ್ಸ್ ಆಫ್ ಮೈಸೂರ್ ಅಂಡ್ ಕರ್ನಾಟಿಕ್ ಮ್ಯೂಸಿಕ್’’ ಎಂಬ ಲೇಖನವನ್ನು ಇಂಗ್ಲಿಷ್‌ನಲ್ಲಿ ಬರೆದಿದ್ದು ಕನ್ನಡೇತರರಿಗೆ ನಮ್ಮ ರಾಜ ಮನೆತನಕ್ಕೂ ಸಂಗೀತ ಪರಂಪರೆಗೂ ಇರುವ ನಿಕಟ ಸಂಬಂಧವನ್ನು ತಿಳಿಸುವ ದಿಸೆಯಲ್ಲಿ ಇಟ್ಟ ಒಂದು ಸ್ವಾಗತಾರ್ಹ ಹೆಜ್ಜೆ.
ಮಕ್ಕಳಾದ ಅಜಯ್‌ು ಮಹೇಶ್, ಸೀಮಾ ರವಿಶಂಕರ್, ಸಿಂಧು ರವಿಶಂಕರ್, ಸುರಭಿ ರಾವ್, ಅತೀತ್ ಹಿರೇಮಠ್ ಎಲ್ಲರೂ ತಮ್ಮ ಸ್ವಂತ ಅನುಭವಗಳ ಬಗ್ಗೆ ಮನ ಮುಟ್ಟುವಂತೆ, ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ! ಎಲ್ಲಿಯೋ ಓದಿದ, ಕೇಳಿದ ಸಂಗತಿಗಳ ಬಗ್ಗೆ ಬರೆಯುವುದನ್ನು ಸೃಜನಶೀಲತೆ ಎಂದು ಕರೆಯಲಾಗುವುದಿಲ್ಲ. ಆದರೆ ಸ್ವಂತ ಅನುಭವಗಳನ್ನು ಅರಗಿಸಿಕೊಂಡು ಅದರ ಬಗ್ಗೆ ಸ್ವಾರಸ್ಯಪೂರ್ಣವಾಗಿ ಬರೆಯುವುದಿದೆಯಲ್ಲ ಅಲ್ಲಿದೆ ಸೃಜನಶೀಲತೆ. ಆ ಮಟ್ಟಿಗೆ ಈ ಎಲ್ಲ ಮಕ್ಕಳಿಗೂ ಹೈ ಮಾರ್ಕ್ ಕೊಡಬೇಕು!
ಅಂತೂ ಪ್ರಬಂಧವಾಹಿನಿ ಓದಿ ಮುಗಿಸಿದಾಗ ಏನೋ ತೃಪ್ತಿ ಎನ್ನಿಸಿತು. ಸಂಪಾದಕವರ್ಗದ ಪರಿಶ್ರಮವೆಲ್ಲ ಒಂದು ಸಾರ್ಥಕತೆಯನ್ನು ಪಡೆದಿದೆ ಇಲ್ಲಿ ಅನ್ನುವ ಭಾವ ಮೂಡಿ ಬಂದಿತ್ತು.
ಸುವರ್ಣವಾಹಿನಿಯ ಎರಡನೆಯ ವಿಭಾಗ ‘ಕವಿತಾವಾಹಿನಿ’. ಇದರ ಸಂಪಾದಕರು ರವಿ ಹರಪನಹಳ್ಳಿ ಮತ್ತು ಕೆ.ಎಲ್.ವಸಂತ್. ಸುಮಾರು ಎಪ್ಪತ್ತಕ್ಕೂ ಹೆಚ್ಚು ಕವನಗಳನ್ನೊಳಗೊಂಡ ಈ ವಿಭಾಗದ ಎಲ್ಲ ಕವನಗಳ ಬಗ್ಗೆ ಬರೆಯುವುದಂತೂ ಸಾಧ್ಯವಿಲ್ಲದ ಮಾತು! ನನಗೆ ಇಷ್ಟವಾದ ಕೆಲವು ಕವನಗಳ ಬಗ್ಗೆ ಮಾತ್ರ ಪ್ರಸ್ತಾಪಿಸುತ್ತೇನೆ.
ಗುಬ್ಬಿ ರೇಣುಕಾ ಅವರ ವಚನಗಳಿಂದ ಹಿಡಿದು ಕಪ್ಪಿನಿಯ ಅವರ ‘ಒಂದು ಕೇಕಿನ ಪ್ರಕರಣ’ ಎಂಬ ಪ್ರಾಸದ ಜೊತೆ ಆಡುವಂಥ ಕವನದವರೆಗೆ ಎಲ್ಲ ತರಹದ ವೈವಿಧ್ಯವೂ ಇದೆ ಈ ಕವಿತಾವಾಹಿನಿಯಲ್ಲಿ. ವಿಶ್ವ ಕನ್ನಡ ಸಮ್ಮೇಳನ, ಅಕ್ಕ, ಮತ್ತು ಕಾವೇರಿಯ ಬಗ್ಗೆಯೇ ಶುರುವಿನಲ್ಲಿ ಐದು ಕವನಗಳಿದ್ದು ಎಲ್ಲವೂ ಸಾಂದರ್ಭಿಕವಾಗಿವೆ. ರವಿ ಹರಪನಹಳ್ಳಿಯವರ ಆಮಂತ್ರಣ ಗೀತೆಯಂತೂ ಸಂಗೀತಾ ಕಟ್ಟಿಯವರ ಧ್ವನಿಯಲ್ಲಿ ಸಮ್ಮೇಳನದ ಸ್ವಾಗತ ಗೀತೆಯಾಗಿ ವಿಜೃಂಭಿಸಿದ್ದು ಮರೆಯುವಂತೆಯೇ ಇಲ್ಲ!
ಅಲುಮೇಲು ಆಯ್ಯಂಗಾರ್ ಅವರ ‘ನಿದ್ದೆ ನೀನೆಲ್ಲಿದ್ದೆ?’ ನಿದ್ದೆ ಬಾರದ ನಿಶ್ಶಬ್ಧ ರಾತ್ರಿಯಲ್ಲಿ ತಲೆಯಲ್ಲಿ ಗುಂಯ್‌ು ಗುಡುವ ನೂರಾರು ಯೋಚನೆಗಳ ಯಥಾರ್ಥ ಚಿತ್ರಣವಿದೆ. ‘‘ಮನದೊಳೇಕೀ ಹಗಲು ಕೇಳಿದ ಅಪಸ್ವರಗಳ ಸಂಚಾರ? ಮೌನದ ಕೋಟೆಯ ಮೇಲೆ ಬೇಡದ ಯೋಚನೆಗಳ ದಾಳಿ, ಬಲಾತ್ಕಾರ?’’ ಎಂಬ ಈ ಸಾಲುಗಳಿಗೆ ಪ್ರತಿಸ್ಪಂದಿಸುವ ಮನಸ್ಸುಗಳೆಷ್ಟೊ!
ಇನ್ನಿತರ ಕವಿಗಳು ಮತ್ತು ಅವರ ಕವನಗಳ ಬಗ್ಗೆ ಗುರುವಾರ(ಸೆ.28) ಕಣ್ಣಾಡಿಸೋಣ.
ನುಡಿ ಹಬ್ಬದ ಚಿತ್ರಪಟಗಳು :
ಮತ್ತೆ ಸಿಗೋಣ - 3ನೇ ದಿನ
ಮೆರವಣಿಗೆಯ ನೋಟ- 2ನೇ ದಿನ
ಎಲ್ಲೆಲ್ಲೂ ಹಸನ್ಮುಖಿಗಳು - 1ನೇ ದಿನ
ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :
| ಪೂರ್ವ ಸಿದ್ಧತೆ | Be a patronate! Use .in e-mail | Post Your Views |











Click it and Unblock the Notifications